Saturday, August 30, 2025

ಕೃಷ್ಣಕರ್ಣಾಮೃತ 75 ಎದುರಿಗೆ ಬಂದಿರುವ ಬಾಲಗೋಪಾಲನನ್ನು ಅವಲಂಬಿಸು.(Krishakarnamrta 75)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಶ್ರೀಕೃಷ್ಣನನ್ನು ಕಾಪಾಡೆಂದು ಪ್ರಾರ್ಥಿಸುವ ಈ ಶ್ಲೋಕ ಪ್ರಸಿದ್ಧವಾದದ್ದು. ಶ್ರೀಕೃಷ್ಣಕರ್ಣಾಮೃತದಲ್ಲಿರುವ ಈ ಶ್ಲೋಕವು ಕೆಲವೊಮ್ಮೆ ಬೇರೆ ಸ್ತೋತ್ರಗಳಲ್ಲೂ ಸೇರಿಕೊಂಡಿರುವುದುಂಟು. ಉದಾಹರಣೆಗೆ ಮುಕುಂದಮಾಲಾ-ಸ್ತೋತ್ರದಲ್ಲೂ ಇದು ಕಂಡುಬರುತ್ತದೆ. ಪ್ರಾಚೀನ-ಸ್ತೋತ್ರ-ಸಂಗ್ರಹಗಳಲ್ಲಿ ಕೆಲವೊಮ್ಮೆ ಒಂದೇ ಶ್ಲೋಕವು ಎರಡೋ ಮೂರೋ ಸ್ತೋತ್ರಗಳಲ್ಲಿ ಕಾಣಸಿಗುತ್ತದೆ. ಮತ್ತು ಅದಕ್ಕೆ ಕಾರಣವಾದರೂ, ಬಹಳಷ್ಟು ಸ್ತೋತ್ರಗಳು ಮೌಖಿಕವಾಗಿ ಪ್ರಚಾರದಲ್ಲಿದ್ದುದೇ. ಲಿಖಿತ-ರೂಪದಲ್ಲಿ ಹಸ್ತ-ಪ್ರತಿಗಳಲ್ಲಿ ಸೇರಿಕೊಂಡಾದ ಮೇಲೆ ಒಂದಿಷ್ಟು ಖಚಿತತೆ-ಸ್ಪಷ್ಟತೆಗಳು ಮೂಡುವುವು, ನಿಜವೇ. ಆದರೂ, ಇತಿಹಾಸದಲ್ಲಿ ಸುದೀರ್ಘ-ಕಾಲ ಮೌಖಿಕ-ಪರಂಪರೆಯಲ್ಲಿದ್ದ ಸ್ತೋತ್ರಗಳಲ್ಲಿ ಹೀಗಾಗುವುದಾದರೂ ಸಹಜವೇ ಸರಿ.

ಕೃಷ್ಣನೇ, ನಿನ್ನನ್ನು ಬಿಟ್ಟರೆ ಮತ್ತೊಬ್ಬನನ್ನು ನಾ ಕಾಣೆ - ಎಂದು ಈ ಶ್ಲೋಕದ ಕೊನೆಯ ಸಾಲಿನ ಅರ್ಥ. ಅದರ ಅರ್ಥವನ್ನು ಬೇರೆ ಬಗೆಯಲ್ಲಿಯೂ ಹೇಳಬಹುದು. ಕೃಷ್ಣನೇ, ನಿನಗಿಂತಲೂ ಶ್ರೇಷ್ಠನಾದ ಮತ್ತೊಬ್ಬನನ್ನು ನಾ ಕಾಣೆ - ಎಂದು. ಏಕೆ ಹೀಗೆ ಎರಡರ್ಥಗಳು? ಅದಕ್ಕೆ ಕಾರಣ, 'ಪರ' - ಎಂಬ ಪದಕ್ಕೆ ಇರುವ ಎರಡರ್ಥಗಳು. ಅದಕ್ಕಿರುವ ಎರಡು ವಿರುದ್ಧಾರ್ಥಕ-ಪದಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ಸ್ವ ಎಂದರೆ ತನ್ನ; ಪರ ಎಂದರೆ ಅನ್ಯ. ಅಪರ ಎಂದರೆ ಕೆಳಗಿನದು, ಪರ ಎಂದರೆ ಮೇಲಿನದು.

ಪರತತ್ತ್ವ-ಪರಬ್ರಹ್ಮ-ಪರಭಕ್ತಿ-ಪರಜ್ಞಾನ - ಎಂಬಲ್ಲೆಲ್ಲಾ 'ಪರ' ಎಂಬುದಕ್ಕೆ ಶ್ರೇಷ್ಠ ಎಂಬ ಅರ್ಥ. ಆದರೆ ಪರಪುರುಷ, ಪರಜನ, ಪರಗ್ರಾಮ, ಪರದೇಶ - ಎಂಬಲ್ಲೆಲ್ಲಾ 'ಪರ' ಎಂಬುದಕ್ಕೆ 'ಬೇರೆಯ' ಎಂಬರ್ಥ. ಈ ಶ್ಲೋಕದಲ್ಲಿ ಎರಡೂ ಅರ್ಥಗಳೂ ಸೊಗಯಿಸುತ್ತವೆ. ನಿನ್ನನ್ನಲ್ಲದೆ ಕಾಪಾಡುವವರೆಂಬುದಾಗಿ ಅನ್ಯರನ್ನು ನಾನರಿಯೆ - ಎನ್ನುವಾಗ, ಅನ್ಯನನ್ನು - ಎಂಬ ಅರ್ಥವು ಹೊಂದುತ್ತದೆ. ಹಾಗೆಯೇ, ನಿನಗಿಂತಲೂ ಶ್ರೇಷ್ಠ – ಎಂಬ ಅರ್ಥವೂ ಹೊಂದುವುದೇ. ಕೃಷ್ಣನು ಎಂತಹವನು? - ಎಂಬುದನ್ನು ಹತ್ತು ವಿಶೇಷಣಗಳಿಂದ ತಿಳಿಸಿದೆ. ಆ ಹತ್ತನ್ನೂ ಸಂಬೋಧನೆಯಾಗಿಯೇ ಬಳಸಿದೆ. ಎಂದೇ ಅವಷ್ಟೂ ಪದಗಳೂ ಹೇ ಎಂಬುದರೊಂದಿಗೇ ಬಂದಿವೆ. ಇವುಗಳಲ್ಲಿ ಬಹುತೇಕ ಪ್ರಸಿದ್ಧ-ಪದಗಳೇ. ಎಂದೇ, ಅವುಗಳ ಅರ್ಥದತ್ತ ಒಂದು ಸಂಕ್ಷಿಪ್ತವಾದ ನೋಟವಷ್ಟೇ ಸಾಕು. ಕೃಷ್ಣನು ಗೋ-ಪಾಲಕನೆಂಬುದು ಪ್ರಸಿದ್ಧವೇ. ಜಲನಿಧಿಯೆಂದರೆ ಸಮುದ್ರವಾದ್ದರಿಂದ ಕೃಪಾ-ಜಲನಿಧಿಯೆಂದರೆ ದಯಾ-ಸಾಗರ - ಎಂದರ್ಥ. ಸಮುದ್ರ-ಪುತ್ರಿಯಾದ ಲಕ್ಷ್ಮಿಯನ್ನೇ ಸಿಂಧು-ಕನ್ಯೆಯೆನ್ನುವುದರಿಂದ, ಮತ್ತು ವಿಷ್ಣುವನ್ನು ಅವಳು ವರಿಸಿದುದರಿಂದ, ಸಿಂಧುಕನ್ಯಾ-ಪತಿಯೆಂದರೆ ವಿಷ್ಣುವೇ.

ಅಂತಕನೆಂದರೆ ಯಮ, ಕೊನೆಗಾಣಿಸುವವನು. ಕೃಷ್ಣನನ್ನು ಕಂಸಾಂತಕ - ಎಂದಿದೆ. ಕಂಸನ ಪಾಲಿಗೆ ಯಮನಾದವನು ಕೃಷ್ಣ. ಕಂಸನು ದುರ್ಮಾರ್ಗ-ಚರ, ಅಸುರಾಂಶದಿಂದ ಜನಿಸಿದವನು. ದುಷ್ಟರು ರಾಜರಾದರೆ ಪ್ರಜೆಗಳಿಗೆ ಪಾಡೋ ಪಾಡು. ಎಂದೇ ಅಂತಹವನನ್ನು ಕೊಂದರಷ್ಟೇ ಪ್ರಜೆಗಳಿಗೆ ಕ್ಷೇಮ: ಆಗಲೇ ಧರ್ಮವು ಪ್ರತಿಷ್ಠಿತವಾಗುವುದು. ಕಂಸನ ವಿಷಯದಲ್ಲಿ ಕ್ರೌರ್ಯಕ್ಕೆ ಕಾರಣ ಆತನ ಅಧರ್ಮ-ಪರಾಯಣತೆ. ಆದರೆ ಪರಮ-ಕಾರುಣ್ಯವೇ ಭಗವಂತನಲ್ಲುಂಟು. ಕರುಣೆಯ ಕಡಲಿನ ಆಚೆಯ ದಡವನ್ನು ಮುಟ್ಟಿದವನು ಶ್ರೀಕೃಷ್ಣ. ಅದು ಎಲ್ಲಿ ಗೊತ್ತಾಗುವುದು? - ಎಂದರೆ ಗಜೇಂದ್ರಮೋಕ್ಷ-ಪ್ರಸಂಗದಲ್ಲಿ. "ಕರಿರಾಜ ಕಷ್ಟದಲಿ ಆದಿಮೂಲಾ ಎಂದು ಕರೆಯಲಾಕ್ಷಣ ಬಂದು" ಸಲಹಿದನಲ್ಲವೆ ಆತ?

ಇನ್ನು ಲಕ್ಷ್ಮೀ-ಪತಿಯಾದ್ದರಿಂದ ವಿಷ್ಣುವನ್ನು ಮಾ-ಧವ - ಎನ್ನುವುದುಂಟು. ಏಕೆಂದರೆ ಮಾ ಎಂದರೆ ಲಕ್ಷ್ಮಿ, ಧವನೆಂದರೆ ಗಂಡ. ಕೃಷ್ಣನು ರಾಮನ ತಮ್ಮನೆಂದಾಗ ಬಲರಾಮನ ತಮ್ಮನೆಂಬುದು ಸ್ಪಷ್ಟವೇ. ರಾಘವೇಂದ್ರ-ರಾಮಾನುಜ - ಎಂಬ ಹೆಸರಿನ ಐತಿಹಾಸಿಕ ವ್ಯಕ್ತಿಗಳು ಪ್ರಸಿದ್ಧರಾಗಿದ್ದರೂ ಅವರ ಹೆಸರಿನ ಅರ್ಥಗಳೆಂದರೆ ಮೂಲತಃ (ಕ್ರಮಶಃ) ರಾಮ-ಕೃಷ್ಣ ಎಂದೇ. ಮೂರುಲೋಕಗಳಿಗೂ ಗುರುವೆಂದರೆ ಕೃಷ್ಣನೇ - ಎಂದೇ ಆತನನ್ನೇ ಜಗದ್ಗುರುವೆನ್ನುವುದು. ಕಮಲಗಳನ್ನು ಹೋಲುವ ಕಣ್ಣುಳ್ಳವನು ಪುಂಡರೀಕಾಕ್ಷ . ಮತ್ತು ಕೊನೆಯದಾಗಿ, ಆತನು ವಿಹರಿಸಿದುದು ಗೋ-ಗೋಪ-ಗೋಪೀಜನರ ನಡುವೆ. ಗೋಪಿಯರ ಮನೋವಲ್ಲಭನೆಂದರೆ ಆತನೇ. ಹೀಗೆ ಗೋಪಾಲಕ ಎಂದು ಆರಂಭವಾಗಿ ಗೋಪೀಜನ-ನಾಥ ಎಂದು ಮುಗಿದಿರುವ ಈ ವಿಶೇಷಣಗಳು ಕೃಷ್ಣನ ನಾನಾಮುಖಗಳಿಗೆ ಕನ್ನಡಿ ಹಿಡಿಯುತ್ತವೆ. ಮಾಧವ-ಸಿಂಧುಕನ್ಯಾಪತಿಗಳು ಒಂದೇ ತತ್ತ್ವವನ್ನೇ ಸೂಚಿಸುತ್ತವೆ. ಕೃಪಾಜಲನಿಧಿಯೆಂಬುದರ ನಿರ್ದೇಶನವಾಗಿ ಗಜೇಂದ್ರ-ಪ್ರಸಂಗವಿದೆ. ಆತನ ಸೌಂದರ್ಯ-ಪಾರಮ್ಯ-ಕಾರುಣ್ಯ-ಸೌಲಭ್ಯ - ಮುಂತಾದ ಎಲ್ಲಾ ಕಲ್ಯಾಣ-ಗುಣಗಳನ್ನೂ ಸಂಬೋಧನೆಗಳ ಮೂಲಕವೇ ತಿಳಿಸುವ ಶ್ಲೋಕವಿದು.

ಹೇ ಗೋಪಾಲಕ! ಹೇ ಕೃಪಾ-ಜಲನಿಧೇ! ಹೇ ಸಿಂಧುಕನ್ಯಾ-ಪತೇ!

ಹೇ ಕಂಸಾಂತಕ! ಹೇ ಗಜೇಂದ್ರ-ಕರುಣಾ-ಪಾರೀಣ! ಹೇ ಮಾಧವ! |

ಹೇ ರಾಮಾನುಜ! ಹೇ ಜಗತ್ತ್ರಯ-ಗುರೋ! ಹೇ ಪುಂಡರೀಕಾಕ್ಷ! ಮಾಂ

ಹೇ ಗೋಪೀಜನ-ನಾಥ! ಪಾಲಯ, ಪರಂ ಜಾನಾಮಿ ನ ತ್ವಾಂ ವಿನಾ! ||


ಮತ್ತೊಂದು ಶ್ಲೋಕ:

ಬಾಲಗೋಪಾಲನನ್ನು ನಾನು ಸಂತತವಾಗಿಯೂ ಅವಲಂಬಿಸುವೆ - ಎನ್ನುತ್ತಾನೆ, ಲೀಲಾಶುಕ. ಹೇಗಿರುವ ಬಾಲಗೋಪಾಲ ಹೀಗೆ ಸದಾ ಅವಲಂಬ್ಯ? ಮೂರು ವಿಶೇಷಣಗಳು ಅದನ್ನು ಹೇಳುತ್ತವೆ. ಆತನ ತಲೆಯ ಮೇಲೆ ನವಿಲುಗರಿಯುಂಟು. ಎದ್ದು ಕಾಣುವ ಸುಂದರವಾದ ಆ ಗರಿಯಿರುವುದರಿಂದಲೇ, ದೂರದಿಂದಲೂ ನಾವು ಕೃಷ್ಣನನ್ನು ಗುರುತಿಸಬಲ್ಲೆವು. ಇನ್ನು, ಆತನತ್ತ ಸಾರುತ್ತಲೇ ಕಂಡುಬರುವುದು, ಆತನನ್ನು ಸುತ್ತಿರುವ ವಲ್ಲವೀ-ವಲಯ. ಹಾಗೆಂದರೆ ಗೋಪಿಕೆಯರ ಮಂಡಲ. ಅವರೂ ಎಂತಹವರು? ಸಂಚಿತ-ಸೌಜನ್ಯರು, ಎಂದರೆ ಸುಜನತೆಯನ್ನು ತುಂಬಿಕೊಂಡವರು. ಸುಜನತೆಯೆಂದರೆ ಒಳ್ಳೆಯ ನಡವಳಿಕೆ, ಮಧುರವಾದ ವರ್ತನೆ, ಯಾರೇ ಆದರೂ ಇಷ್ಟಪಡುವಂತಹ ನಡೆ. ಮತ್ತೂ ಹತ್ತಿರ ಸುಳಿಯುತ್ತಿದ್ದಂತೆ  ಗೋಚರವಾಗುವುದು ಆತನ ಕೆಂಪುತುಟಿ, ಮತ್ತು ಅದರ ಮೇಲಿಟ್ಟಿರುವ ಕೊಳಲು. ಆತನ ಕೆಳದುಟಿಯು ಕೆಂಪನೆಯ ಹವಳದ ಹಾಗೆ ಹೊಳೆಯುತ್ತದೆ. ಎಂದೇ ಅದನ್ನು ಅಧರ-ಮಣಿಯೆನ್ನುವುದು. ಹೀಗೆ, ತನ್ನ ಕೆಂದುಟಿಯ ಮೇಲೆ ಕೊಳಲಿಟ್ಟವನು ಬಾಲನವನು. ಇಂತಿರುವ ಗೋಪ-ಬಾಲನೇ ನನ್ನ ಜೀವಿತಕ್ಕೆ ಅವಲಂಬನ. ಅವಲಂಬನವೆಂದರೆ ಆಧಾರ, ಊರುಗೋಲು.

ಅಂಚಿತ-ಪಿಂಛಾ-ಚೂಡಂ/

ಸಂಚಿತಸೌಜನ್ಯ-ವಲ್ಲವೀ-ವಲಯಂ|

ಅಧರ-ಮಣಿ-ನಿಹಿತ-ವೇಣುಂ/

ಬಾಲಂ ಗೋಪಾಲಂ ಅನಿಶಂ ಅವಲಂಬೇ ||


ಮತ್ತೊಂದು ಶ್ಲೋಕ:

ಎಲೆ ಮನಸ್ಸೇ, ಎಚ್ಚರಗೊಳ್ಳು, ಎಚ್ಚರಗೊಳ್ಳು - ಎಂದು ತನ್ನ ಮನಸ್ಸನ್ನೇ ಎಬ್ಬಿಸುತ್ತಿದ್ದಾನೆ, ಲೀಲಾಶುಕ. ಏಕೆ? ಈಗೇನು ವಿಶೇಷ? ವಿಶೇಷವೇ? ಇದೋ, ಚಿರಕಾಲದ ಬಳಿಕ, ಎಂದರೆ ಬಹಳ ಕಾಲದ ಮೇಲೆ, ನಿನಗೆ ಕೃತಾರ್ಥತೆಯುಂಟಾಗುತ್ತಿದೆ. ಕೃತಾರ್ಥತೆಯೆಂದರೆ ಧನ್ಯತೆ. ಯಾವ ತೆರನು ಈ ಧನ್ಯತೆ? ಅದೆಂದರೆ, ಕೃಷ್ಣನ ರೂಪದಲ್ಲಿ ಎದುರಿಗೆ ನಿಂತಿರುವಂತಹುದು. ಯಾವುದದು? ಪೂರ್ಣ-ನಿರ್ವಾಣವೇ ಅದು. ನಿರ್ವಾಣವೆಂದರೆ ಸುಖ. ಪೂರ್ಣ-ನಿರ್ವಾಣವೆಂದರೆ ಪರಮ-ಸುಖವೆಂದರ್ಥ. ಅದು ಕೃಷ್ಣನ ರೂಪದಲ್ಲಿಎದುರಿಗೇ ನಿಂತಿದೆ. ನಿನ್ನ ಕೆಲಸ ಈಗೊಂದೇ, ಓ ಮನಸ್ಸೇ. ಯಾವುದಕ್ಕಾಗಿ ಬಹು-ದೀರ್ಘ-ಕಾಲ ಹಂಬಲಿಸುತ್ತಿದ್ದೆಯೋ, ಅದುವೇ ಇದೋ ಇದೋ ಎದುರಿಗೇ ಸಾಕ್ಷಾತ್ತಾಗಿ ಬಂದು ನಿಂತಿದೆ. ಕೈಗೆ ಸಿಕ್ಕದ್ದನ್ನು ಕಳೆದುಕೊಳ್ಳಬೇಡ. ಎದುರಿಗೇ ಬಂದು ನಿಂತಿರುವ, ಪೂರ್ಣಾನಂದವೇ ಮೈತಾಳಿರುವ ಪರವಸ್ತುವನ್ನು ಕಣ್ತುಂಬ ತುಂಬಿಕೋ, ಪೂರ್ಣವಾಗಿ ಅನುಭವಿಸು, ಚೆನ್ನಾಗಿ ಆಸ್ವಾದಿಸು.

ಜಾಗೃಹಿ ಜಾಗೃಹಿ ಚೇತಃ/

ಚಿರಾಯ ಚರಿತಾರ್ಥತಾ ಭವತಃ|

ಅನುಭೂಯತಾಂ ಇದಂ ಇದಂ/

ಪುರಃ ಸ್ಥಿತಂ ಪೂರ್ಣ-ನಿರ್ವಾಣಂ||

ಸೂಚನೆ : 30/08/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.