ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ನಾಲಿಗೆಯೇ ಕೇಶವನನ್ನು ಸ್ತುತಿಸು
ಆಧ್ಯಾತ್ಮಿಕಜೀವನಮಾಡುವುದೆಂದರೆ ಎಲ್ಲವನ್ನೂ ತೊರೆದು ಸಂನ್ಯಾಸಿಗಳ ಹಾಗಿರಬೇಕು – ಎಂದು ಕೆಲವರು ಎಣಿಸುತ್ತಾರೆ. ಅಂತಹ ಜೀವನವು ಶ್ರೇಷ್ಠವೆನಿಸಬಹುದಾದರೂ, ನಮ್ಮ ಪರಂಪರೆಯು ಅದೊಂದೇ ಮಾರ್ಗವೆಂದಿಲ್ಲ.
ಯಾವುದಾದರೂ ಸಣ್ಣ ಪ್ರಾಣಿಯೋ ಕೀಟವೋ ಬದುಕಿರುವುದೋ ಇಲ್ಲವೋ ಎಂಬ ಸಂಶಯ ಬಂದರೆ, ಅದನ್ನು ಕೈಯಿಂದಲೋ ಕಡ್ಡಿಯಿಂದಲೋ ಸ್ಪರ್ಶಿಸಿ ನೋಡುವುದುಂಟು. ಏಕೆ? ಹಾಗೆ ಮಾಡಿದೊಡನೆ ಅದು ಸ್ವರಕ್ಷಣೆಗಾಗಿ ಚಲಿಸಲಾರಂಭಿಸುತ್ತದೆ. ಚಲನವು ಕರ್ಮೇಂದ್ರಿಯದ ಕೆಲಸ.
ಕೈಕಾಲುಗಳು ಕರ್ಮೇಂದ್ರಿಯಗಳು. ಅವಾದರೂ ಏನಾದರೂ ಕೆಲಸವನ್ನು ಮಾಡುತ್ತಲೇ ಇರುತ್ತವೆ. ಕೈಕಾಲುಗಳನ್ನಾಡಿಸದಿರು - ಎನ್ನುವುದೇ ಮಕ್ಕಳಿಗೊಂದು ದೊಡ್ಡಶಿಕ್ಷೆಯಾದೀತು!
ಪಾಣಿ-ಪಾದಗಳಲ್ಲದೆ, ಮೂತ್ರದ್ವಾರ-ಮಲದ್ವಾರಗಳೂ ಕರ್ಮೇಂದ್ರಿಯಗಳೇ. ಮಾತನಾಡಲು ಬೇಕಾದ ನಾಲಿಗೆಯೂ ಕರ್ಮೇಂದ್ರಿಯವೇ. ಹೀಗೆ ಐದು ಕರ್ಮೇಂದ್ರಿಯಗಳು. ಪಂಚಕರ್ಮೇಂದ್ರಿಯಗಳಲ್ಲದೆ, ಪಂಚಜ್ಞಾನೇಂದ್ರಿಯಗಳೂ ಉಂಟು: ಕಣ್ಣು-ಕಿವಿ-ಮೂಗು-ಚರ್ಮ-ನಾಲಿಗೆಗಳು.
ಹೀಗೆ ನಾಲಿಗೆಯೆಂಬುದು ಜ್ಞಾನೇಂದ್ರಿಯವೂ ಹೌದು, ಕರ್ಮೇಂದ್ರಿಯವೂ ಹೌದು. ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳೆರಡಕ್ಕೂ ಮನಸ್ಸು ಒಡೆಯ. ಮನಸ್ಸೂ ಇತ್ತ ಜ್ಞಾನೇಂದ್ರಿಯವೆಂದೂ ಹೌದು, ಕರ್ಮೇಂದ್ರಿಯವೂ ಹೌದು. ಹೀಗಾಗಿ ನಾಲಿಗೆಯನ್ನೂ ಮನಸ್ಸನ್ನೂ ಉಭಯಾತ್ಮಕವೆಂದು ಚಿತ್ರಿಸಲಾಗಿದೆ.
ಎಂದೇ ನಾಲಿಗೆಯೇನನ್ನು ನುಡಿಯುತ್ತಿದೆ, ಅದರ ಹಿಂದಿದ್ದು ಅದನ್ನಾಡಿಸುವ ಮನಸ್ಸೇನನ್ನು ಚಿಂತಿಸುತ್ತಿದೆ - ಎಂಬುದರ ಬಗ್ಗೆ ಗಮನಕೊಡುವುದು ಮುಖ್ಯವಾಗುತ್ತದೆ.
ದುಷ್ಟಸಂಸ್ಕಾರಗಳನ್ನುಳ್ಳವರಿಗೆ ದುಷ್ಟವಾದ ಆಲೋಚನೆಗಳೂ ಅವನ್ನನುಸರಿಸಿದ ನುಡಿಗಳೂ ಬರತಕ್ಕವೇ. ಎಂದೇ ಮಾತನ್ನು ಕುರಿತಾದ ಎಚ್ಚರ, ಜೊತೆಗೇ ಮನಸ್ಸನ್ನು ಕುರಿತಾದ ಎಚ್ಚರ - ಇವು ಅವಶ್ಯವೆನಿಸುವುವು.
ಎಂದೇ ಕುಲಶೇಖರ ಆಳ್ವಾರರು, ಕೃಷ್ಣನನ್ನು ಕುರಿತಾದ ತಮ್ಮ ಪ್ರಸಿದ್ಧ-ಸ್ತೋತ್ರವಾದ ಮುಕುಂದಮಾಲೆಯ ಶ್ಲೋಕವೊಂದರಲ್ಲಿ, ಮೊದಲು ನಾಲಿಗೆಯನ್ನೂ, ಜೊತೆಗೇ ಮನಸ್ಸನ್ನೂ, ಸಂಬೋಧಿಸಿ ಹಿತವಚನಗಳನ್ನು ಹೇಳಿದ್ದಾರೆ.
ನಾಲಿಗೆಗೆ ಅವರು ಹೇಳಿರುವ ಮಾತೇ "ಜಿಹ್ವೇ ಕೀರ್ತಯ ಕೇಶವಂ": "ನಾಲಿಗೆಯೇ, ಕೇಶವನನ್ನು ಕೀರ್ತಿಸು" ಎಂದು; ಜೊತೆಗೇ ಮನಸ್ಸಿಗೆ "ಮನಸ್ಸೇ, ಶ್ರೀಧರನನ್ನು ಭಜಿಸು" ಎಂದು. ಇವುಗಳೊಂದಿಗೆ ಮಿಕ್ಕ ಇಂದ್ರಿಯಗಳೂ ಸಹಕರಿಸಿ, ಕ್ರಮೇಣ ಧ್ಯಾನದಲ್ಲಿ ನಿಲ್ಲುವಂತಾಗಬೇಕು.
ಧ್ಯಾನಾವಸ್ಥೆಯು ಒಂದರ್ಥದಲ್ಲಿ ನಿದ್ರಾವಸ್ಥೆಯಂತೆಯೇ. ಆಗಲೂ ಕಣ್ಣು ಮುಚ್ಚಿರುವುದರಿಂದ ಏನೂ ಕಾಣದು, ತನ್ಮಯತೆಯೇ ಇದ್ದರೆ ಏನೂ ಕೇಳಿಸದು ಕೂಡ. ಕಣ್ಣು-ಕಿವಿಗಳೇ ಕೆಲಸ ಮಾಡವೆಂದಮೇಲೆ ಇನ್ನು ಮಿಕ್ಕ ಇಂದ್ರಿಯಗಳ ಬಗ್ಗೆ ಹೇಳಲೇಬೇಕಿಲ್ಲ.
ನಿದ್ರೆಗೂ ಧ್ಯಾನಾವಸ್ಥೆಗೂ ವ್ಯತ್ಯಾಸವೇನು? ಎರಡರಲ್ಲೂ ಸುಖಾನುಭವವೇ ಆದರೂ ನಿದ್ರೆಯಲ್ಲಿ ದೊರಕುವ ಸುಖವು ಜಾಡ್ಯವುಳ್ಳದ್ದು. ಧ್ಯಾನಲಭ್ಯವಾದ ಸುಖವು ಸಾತ್ತ್ವಿಕಸುಖ. ನಿದ್ರಾಸುಖವು ಎಲ್ಲರಿಗೂ ನಿತ್ಯವೂ ಬೇಕಾದದ್ದೇ. ಧ್ಯಾನಸುಖವೂ ಆಸೆಪಡಬೇಕಾದದ್ದೇ.
ಧ್ಯಾನಕ್ಕೆಂದು ಕುಳಿತರೆ ಸಾಕು, ಎಲ್ಲ ಇಂದ್ರಿಯಗಳೂ ಪ್ರತಿಭಟಿಸುವುವು. ಏಕೆ? ಎಲ್ಲ ಇಂದ್ರಿಯಗಳಿಗೂ ಸದಾ ಬಹಿರ್ಮುಖವಾಗಿರುವುದೇ ಅಭ್ಯಾಸವಾಗಿರುವುದರಿಂದ. ಥಟ್ಟನೆ ಅಂತರ್ಮುಖವಾಗೆಂದರೆ ಅವಕ್ಕಾಗದು.
ಅದಕ್ಕೇನು ಮಾಡಬೇಕು? ಬಹಿರ್ಮುಖವಾಗಿ ಮಾಡುವ ಕೆಲಸಗಳಲ್ಲೇ ಏನನ್ನು ಮಾಡಿದರೆ ಧ್ಯಾನಕ್ಕೆ ಅನುಕೂಲಿಸುವಂತಾಗುವುದೋ ಅಂತಹ ಕೆಲಸಗಳನ್ನೇ ಅವಿಂದ ಮಾಡಿಸಬೇಕು.
ನಾಲಿಗೆಗೆ ಅಂತಹ ಒಂದು ಕೆಲಸವೇ ಹೀಗೆ ಭಗವಂತನನ್ನು ಕೀರ್ತಿಸುವುದು - ಎಂಬುದು. ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ "ನಾಲಿಗೆಯ ಸ್ವಭಾವವೇ ಲೊಟಗುಟ್ಟುವುದು. ಅದಕ್ಕೆ ಸುಮ್ಮನಿರಲಾಗುವುದಿಲ್ಲ. ಅದಕ್ಕೆ ಕೆಲಸ ಬೇಕು. ಆದ್ದರಿಂದ ಅದಕ್ಕೆ ಕೆಲಸವಿರಲಿ: ಏನೇನೋ ಮಾತನಾಡಬೇಡ, ಭಗವಂತನ ವಿಷಯವಾಗಿ ಮಾತನ್ನಾಡು. ಹಾಗೆ ಮಾಡಿದರೆ ಇಂದ್ರಿಯಕ್ಕೆ ಕೆಲಸವೂ ಆಯಿತು, ಜೀವನಿಗೆ ಲಕ್ಷ್ಯನಾದ ದೇವನ ನೆನಪೂ ಆಯಿತು."
ಇದು ಜಿಹ್ವೆಯ ಸಮಾಚಾರವಾಯಿತು. ಮನಸ್ಸಂತೂ ಮೇಲೆ ಹತ್ತಿಯೂ ಸುಲಭವಾಗಿ ಜಾರಿಬಿಡುವುದು! ಎಂದೇ ಎಂದೂ ಜಾರದವನನ್ನು, ಎಂದೂ ಚ್ಯುತಿಯಿಲ್ಲದವನಾದ ಅಚ್ಯುತನನ್ನು, ಭಜಿಸೆಂದು ಮನಸ್ಸಿಗೆ ಉಪದೇಶ.
ಹೀಗೆ ಉಳಿದ ಇಂದ್ರಿಯಗಳಿಗೂ ತಕ್ಕ ಕೆಲಸಗಳು. ಕೈಗಳಿಗೆ ಆತನ ಅರ್ಚನೆ. ಕಿವಿಗಳಿಗೆ ಆತನ ಕಥಾಶ್ರವಣ, ಕಣ್ಣುಗಳಿಗೆ ಆತನ ದರ್ಶನ. ಕಾಲ್ಗಳಿಗೆ ಆತನ ಆಲಯಕ್ಕೆ ನಡೆ. ಮೂಗಿಗೆ ಆತನ ಪಾದ-ತುಲಸಿಯ ಆಘ್ರಾಣನ. ಇವೆಲ್ಲದರಿಂದಾಗಿ, ಮತ್ತು ಇವೆಲ್ಲಕ್ಕೂ ಶಿಖರಪ್ರಾಯವಾಗಿ, ಸಹಜವಾಗಿ ಕೃಷ್ಣಪ್ರಭುವಿಗೆ ತಲೆಬಾಗುವುದಾಗುತ್ತದೆ.
ಹೀಗೆ ಎಲ್ಲ ಇಂದ್ರಿಯಗಳಿಗೂ ತಕ್ಕ ತಕ್ಕ ಕೆಲಸವಿತ್ತು ಭಗವಂತನತ್ತ ಅಭಿಮುಖತೆಯನ್ನು ವ್ಯವಸ್ಥೆಗೊಳಿಸಿದ್ದಾರೆ, ಜ್ಞಾನಿಗಳಾದ ನಮ್ಮ ಪೂರ್ವಜರು. ಇಂತಾದಾಗ ಕ್ರಮೇಣ ಅಂತರ್ಮುಖತೆಯು ಸಿದ್ಧಿಸಿ ಧ್ಯಾನವೇ ಸಾಧಿತವಾಗುವುದು.
ಧ್ಯಾನಯೋಗದಲ್ಲಿಯ ಪ್ರಗತಿಯೇ ಅಧ್ಯಾತ್ಮಕ್ಕೆ ಪೋಷಕವೆನಿಸುವುದಲ್ಲವೇ?
ಸೂಚನೆ: 16/8//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.