ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ರಾಜ್ಯಭಾರವನ್ನು ಕುರಿತಾಗಿ ಕುಶಲಪ್ರಶ್ನೆಗಳನ್ನು ಮಾಡುತ್ತಾ, ನಾರದರು ತಮ್ಮ ಮಾತನ್ನು ಮುಂದುವರಿಸಿದರು.
ಶತ್ರುಪಕ್ಷದ ಈ ಹದಿನೆಂಟು ಮಂದಿಯನ್ನೂ ರಾಜನು ಸದಾ ಗಮನಿಸುತ್ತಿರಬೇಕು. ಅವರೆಂದರೆ, ಮಂತ್ರಿ, ಪುರೋಹಿತ, ಯುವರಾಜ; ಸೇನಾಪತಿ, ದ್ವಾರಪಾಲಕ, ಅಂತಃಪುರದ ಒಡೆಯ; ಕಾರಾಗೃಹದ ಅಧ್ಯಕ್ಷ, ಕೋಷಾಧ್ಯಕ್ಷ, ಆರ್ಥಿಕ-ವ್ಯಯಗಳನ್ನು, ಎಂದರೆ ಖರ್ಚುಗಳನ್ನು, ನೋಡಿಕೊಳ್ಳುವ ಸಚಿವ; ಪಹರೆಯವರ ಮೇಲ್ವಿಚಾರಕ, ನಗರಾಧ್ಯಕ್ಷ (ಕೊತ್ವಾಲ), ಶಿಲ್ಪಿಗಳ ಪರಿಚಾಲಕ; ಧರ್ಮಾಧ್ಯಕ್ಷ, ಸಭಾಧ್ಯಕ್ಷ, ದಂಡಪಾಲ; ದುರ್ಗಪಾಲ, ರಾಷ್ಟ್ರಸೀಮಾಪಾಲ, ಮತ್ತು ವನರಕ್ಷಕ.
ಹಾಗೆಯೇ ಸ್ವಪಕ್ಷದ ಹದಿನೈದು ಮಂದಿಯನ್ನೂ ಸದಾ ಗಮನಿಸಿಕೊಳ್ಳುತ್ತಿರಬೇಕು. (ಅವರೆಂದರೆ ರಿಪುಪಕ್ಷದಲ್ಲಿಯ ೧೮ರಲ್ಲಿ ಮೊದಲ ಮೂವರನ್ನು ಬಿಟ್ಟು ಉಳಿದ ಹದಿನೈದು).
ಮೂವರು ಮೂವರು ಗೂಢಚಾರರನ್ನು ನೇಮಿಸಿಕೊಂಡು ಇವರನ್ನೆಲ್ಲಾ ಗಮನಿಸಿಕೊಳ್ಳುತ್ತಿರಬೇಕು. ನೀನು ಹಾಗೆ ತಾನೆ ಮಾಡುತ್ತಿರುವೆ, ಯುಧಿಷ್ಠಿರ?
ಶತ್ರುವಿಗೇ ತಿಳಿಯದ ರೀತಿಯಲ್ಲಿ ಶತ್ರುಗಳ ಮೇಲೆ ಕಣ್ಣಿಟ್ಟಿರಬೇಕು. ಸರ್ವದಾ ಇದಕ್ಕಾಗಿ ಸಾವಧಾನನಾಗಿರಬೇಕು. ಸಾವಧಾನನೆಂದರೆ ಎಚ್ಚರಿಕೆಯಿಂದಿರುವವನು. ಮತ್ತು ಇದಕ್ಕೆಲ್ಲಾ ಸತತ-ಪ್ರಯತ್ನವೇ ಬೇಕು. ಅಂತಹ ನಿರಂತರ-ಪ್ರಯತ್ನ ನಿನ್ನಲ್ಲಿದೆಯಲ್ಲವೇ?
ರಾಜಪುರೋಹಿತನೆಂದರೆ ಹೇಗಿರಬೇಕು? ಆತನು ವಿನಯ-ಸಂಪನ್ನನಾಗಿರಬೇಕು, ಸದ್ವಂಶ-ಜಾತನಾಗಿರಬೇಕು, ವಿದ್ವಾಂಸನಾಗಿರಬೇಕು, ಅಸೂಯಾಪರನಾಗಿರಬಾರದು, ಹಾಗೂ ಶಾಸ್ತ್ರವಿಷಯಕ-ಚರ್ಚೆಗಳಲ್ಲಿ ಕುಶಲನಾಗಿರಬೇಕು. ಅಂತಹವನನ್ನು ರಾಜನೂ ಆದರಿಸಬೇಕು. ಅಂತಹ ಪುರೋಹಿತರನ್ನು ನೇಮಿಸಿಕೊಂಡು ಅವರನ್ನು ಆದರಿಸುತ್ತಿರುವೆ ತಾನೆ?
ರಾಜನ ಅಗ್ನಿಹೋತ್ರ-ಕಾರ್ಯಕ್ಕೆಂದು ನಿಯುಕ್ತನಾದವನು ವಿಧಿಜ್ಞನಾಗಿರಬೇಕು - ಎಂದರೆ ಕ್ರಿಯೆಯನ್ನು ಹೇಗೆ ಮಾಡಬೇಕೆಂದು ಅರಿತವನಾಗಿರಬೇಕು. ಆತನು ಧೀಮಂತನೂ ಸರಳ-ಸ್ವಭಾವದವನೂ ಆಗಿರಬೇಕು. ಈಗಾಗಲೇ ಹೋಮ ಮಾಡಿರುವುದನ್ನಾಗಲಿ ಮುಂದೆ ಮಾಡಬೇಕಾದ ಹೋಮವನ್ನಾಗಲಿ ಕಾಲಕಾಲಕ್ಕೆ ತಿಳಿಸುತ್ತಿರಬೇಕು. ಅಂತಹವರು ನಿನ್ನೊಂದಿಗಿದ್ದಾರಷ್ಟೆ? ನಿನ್ನಲ್ಲಿರುವ ದೈವಜ್ಞರು, ಎಂದರೆ ಜ್ಯೋತಿಷ್ಕರು, ವೇದಾಂಗಗಳಲ್ಲಿ ಪಳಗಿರುವರಲ್ಲವೆ?
ಯಾರಿಗೆ ಯಾವ ಕೆಲಸ ತಕ್ಕುದೋ ಅವರಿಗೆ ಅದನ್ನು ವಿನಿಯೋಜಿಸಬೇಕು. ಮುಖ್ಯರಾದವರನ್ನು ಮಹಾಕಾರ್ಯಗಳಲ್ಲಿ ತೊಡಗಿಸಬೇಕು; ಮಧ್ಯಮರಾದವರನ್ನು ಮಧ್ಯಮ-ಕಾರ್ಯಗಳಲ್ಲಿ; ಸಾಧಾರಣರನ್ನು ಸಾಧಾರಣ-ಕಾರ್ಯಗಳಲ್ಲಿ ತೊಡಗಿಸಬೇಕು. ನೀನು ಹಾಗೆ ಮಾಡುತ್ತಿದ್ದೀಯೆ ತಾನೆ?
ಅಮಾತ್ಯರೆಂದರೆ ಹೇಗಿರಬೇಕು? ರಾಜನೊಂದಿಗೆ ಕಪಟವಿಲ್ಲದೆ ವರ್ತಿಸುವವರಾಗಿರಬೇಕು. ವಂಶ-ಪಾರಂಪರ್ಯದಲ್ಲಿ ಬಂದವರಾಗಿರಬೇಕು. ಶುದ್ಧವಾದ ನಡೆಯುಳ್ಳವರಾಗಿರಬೇಕು. ಮತ್ತು ಅಂತಹವರನ್ನು ಶ್ರೇಷ್ಠ-ಕಾರ್ಯಗಳಲ್ಲೇ ನಿಯೋಜಿಸಬೇಕು. ಹಾಗೆ ತಾನೆ ನೀನು ಮಾಡುತ್ತಿರುವುದು?
ರಾಜನು ಉಗ್ರ-ದಂಡನಾಗಬಾರದು. ಎಂದರೆ ಸಣ್ಣಸಣ್ಣ ತಪ್ಪಿಗೂ ದೊಡ್ಡದೊಡ್ಡ ಶಿಕ್ಷೆಗಳನ್ನು ಕೊಡುವವನಾಗಬಾರದು. ಹಾಗೇನಾದರೂ ಉಗ್ರ-ದಂಡನಾದರೆ ಪ್ರಜೆಗಳು ಬಹಳವೇ ಉದ್ವೇಗವನ್ನು ಹೊಂದುವರು, ಭೀತರಾಗುವರು. ಹಾಗಾಗದ ರೀತಿಯಲ್ಲಿ ಮಂತ್ರಿಗಳು ಶಾಸನ ಮಾಡಬೇಕು. ನಿನ್ನ ರಾಜ್ಯದಲ್ಲಿ ಅದು ಹಾಗೆಯೇ ಇರುವುದಷ್ಟೆ?
ರಾಜನು ಕರವನ್ನು ವಸೂಲಿ ಮಾಡುವುದರಲ್ಲಿ ನ್ಯಾಯ-ಬದ್ಧನಾಗಿರಬೇಕು, ತೀಕ್ಷ್ಣನಾಗಬಾರದು. ಹಾಗೇನಾದರೂ ಆದಲ್ಲಿ ಪ್ರಜೆಗಳು ರಾಜನ ವಿಷಯದಲ್ಲಿ ಅವಜ್ಞೆಯನ್ನು ತಾಳುತ್ತಾರೆ - ಎಂದರೆ ತಿರಸ್ಕಾರವುಳ್ಳವರಾಗುತ್ತಾರೆ.
ಯಜ್ಞವನ್ನು ಮಾಡುವವನು ಯಜಮಾನ; ಮಾಡಿಸುವವನು ಯಾಜಕ. ಯಜಮಾನನು ಭ್ರಷ್ಟನಾಗಿದ್ದರೆ ಯಾಜಕನಿಗೆ ಅವನ ಬಗ್ಗೆ ತಿರಸ್ಕಾರ ಮೂಡುವುದು. ಹಾಗೆಯೇ ಕಾಮವಶನಾಗಿ ಲಂಪಟನಾದ ಪತಿಯ ಬಗ್ಗೆ ಆತನ ಪತ್ನಿಗೂ ತಿರಸ್ಕಾರವಿರುವುದು. ಹಾಗೆ ರಾಜನು ತಿರಸ್ಕಾರಕ್ಕೆ ಪಾತ್ರನಾಗಬಾರದಲ್ಲವೆ? ಆ ಎಚ್ಚರದಲ್ಲಿ ನೀನು ಇರುವೆಯಷ್ಟೆ?
ಸೇನಾಪತಿಯಾದವನು ಹರ್ಷೋತ್ಸಾಹಗಳಿಂದ ಕೂಡಿರಬೇಕು. ಶೂರನೂ ಧೀಮಂತನೂ ಆಗಿರಬೇಕು. ಧೈರ್ಯಶಾಲಿಯೂ ಶುದ್ಧನೂ ಆಗಿರಬೇಕು.
ಸೂಚನೆ : 2/08/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಸೂಚನೆ : 17/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.