Sunday, November 24, 2024

ಧರ್ಮಾತ್ಮರ ಜೀವನದ ನಡೆಯೇ ಎಲ್ಲರ ಆದರ್ಶ (Dharmatmara Jivanada nadeye Ellara Adarsa)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)





ಅತ್ಯಂತ ಹಿಂದಿನ ಕಾಲದಲ್ಲಿ ಇಬ್ಬರು ಸೋದರರು, ಧರ್ಮ ಶಾಸ್ತ್ರಕಾರರು, ತಪಸ್ವಿಗಳು, ಜ್ಞಾನಿಗಳು. ಇದ್ದರು. ಅಣ್ಣ-ಶಂಖ, ತಮ್ಮ ಲಿಖಿತ. ನಿರಂತರ ಅಧ್ಯಯನ, ತಪಸ್ಸಿನಿಂದ ತೇಜಸ್ವಿಗಳೂ ಶುದ್ಧಾತ್ಮರೂ ಆಗಿದ್ದವರು. ಧರ್ಮವನ್ನು ಬಿಟ್ಟು ಅವರ ಜೀವನವಿರಲಿಲ್ಲ. ಇಬ್ಬರೂ ಪರಸ್ಪರ ವಿಶ್ವಾಸದಿನ್ದಿದ್ದರೂ ಬೇರೆ ಬೇರೆ ಮನೆಗಳಲ್ಲಿದ್ದರು.

ಹಣ್ಣು ತಿಂದು ತಪೋಬಲ ಕುಗ್ಗಿದ್ದು?

ಒಮ್ಮೆ ಲಿಖಿತ ಅಣ್ಣನನ್ನು ನೋಡಲು ಶಂಖನ ಮನೆಗೆ ಬರುತ್ತಾನೆ. ಆಗ ಶಂಖ ಮನೆಯಲ್ಲಿ ಇರುವುದಿಲ್ಲ. ಲಿಖಿತನು ಅಣ್ಣನ ತೋಟದಲ್ಲಿ ಸುತ್ತಾಡುತ್ತಾನೆ. ಅಣ್ಣನ ತೋಟದಲ್ಲಿ ಎಲ್ಲಾ ವೃಕ್ಷಗಳು ಫಲಭರಿತವಾಗಿದ್ದವು. ಹಸಿವೂ ಆಗಿದ್ದರಿಂದ ಅವನ ತೋಟದ ಒಂದು ಮರದಿಂದ ಮಾವಿನ ಹಣ್ಣನ್ನು ಕಿತ್ತು ತಿನ್ನುತ್ತಾನೆ. ಶಂಖ ಮನೆಗೆ ಬರುತ್ತಾನೆ. ತಮ್ಮನನ್ನು ಕಂಡು ಸಂತೋಷವಾದರೂ ಅವನ ಮುಖವು ಕಳೆಗುಂದಿರುವುದನ್ನು ಗಮನಿಸುತ್ತಾನೆ. ತಕ್ಷಣವೇ ಇವನಿಂದ ಯಾವುದೋ ಅಧರ್ಮದ ಕಾರ್ಯ ನಡೆದಿದೆ. ಅದರಿಂದ ಇವನ ತಪೋಬಲ ಕುಂದಿದೆ ಎಂಬುದನ್ನು ಗಮನಿಸುತ್ತಾನೆ. ತಮ್ಮನ ದೇಹ-ಮನೋಧರ್ಮಗಳ ಸಹಜಾವಸ್ಥೆ ಕೆಡುವುದು ಶಂಖನಿಗೆ ಸಹ್ಯವಾಗಲಿಲ್ಲ.

ಅನುಮತಿ ಇಲ್ಲದೇ ಒಬ್ಬರ ವಸ್ತುವನ್ನು ಉಪಯೋಗಿಸುವುದು ಕಳ್ಳತನ

ತಮ್ಮನನ್ನು ಕೇಳುತ್ತಾನೆ- ನೀನು ಇಲ್ಲಿಗೆ ಬಂದಮೇಲೆ ಏನು ಮಾಡಿದೆ ಎಂದು. ಅವನು ಪ್ರಾಮಾಣಿಕವಾಗಿ ಹಣ್ಣು ತಿಂದುದನ್ನು ಹೇಳುತ್ತಾನೆ. ಹೌದು. ಇದೇ ಅವನಿಂದಾದ ಅಧರ್ಮ. ಅಣ್ಣನ ಸುಪರ್ದಿನ ತೋಟದ ಹಣ್ಣನ್ನು ಅಣ್ಣನ ಅನುಮತಿ ಇಲ್ಲದೇ ತಿನ್ನುವುದು ಅಪರಾಧ. ಆ ಅಪರಾಧವೇ ಲಿಖಿತನ ತಪೊಬಲವನ್ನೂ, ತೇಜಸ್ಸನ್ನೂ ಅವನಿಗೆ ಅರಿವಿಲ್ಲದೇ ಕಡಿಮೆ ಮಾಡಿದೆ. ದೇಹಧರ್ಮ ಮನೋಧರ್ಮ ಹಾಳಾಗಬಾರದು

ಶಂಖನಿಗೆ ತಮ್ಮನ ಮೇಲೆ ಪ್ರೀತಿ, ಕರುಣೆ. ಅವನ ದೇಹಧರ್ಮ, ಮನೋಧರ್ಮಗಳು ಹಾಳಾಗುವುದನ್ನು ಅವನು ಸಹಿಸದಾದನು. ತಮ್ಮನ ತಪ್ಪಿನ ಬಗ್ಗೆ ತಿಳಿಸಿ, ಆ ರಾಜ್ಯದ ರಾಜನ ಹತ್ತಿರ ಹೋಗಿ ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಿ, ಪಾಪ ಪರಿಹಾರ ಮಾಡಿಕೊಳ್ಳಬೇಕು ಎಂದು ಸಲಹೆ ಕೊಟ್ಟನು. ಲಿಖಿತನಿಗೂ ಸಹ ತಾನು ಮಾಡಿದ್ದು ಧರ್ಮಹಾನಿಯ ಕೆಲಸ ಎಂದು ಅರಿವಾಯಿತು. ಒಡನೆಯೇ ಅವನು ರಾಜಾಸ್ಥಾನಕ್ಕೆ ಹೋಗಿ ತನ್ನ ತಪ್ಪನ್ನು ರಾಜನಿಗೆ ಅರುಹಿದನು.

ತಪ್ಪಿಗೆ ಶಿಕ್ಷೆ ಎಲ್ಲರಿಗೂ..

ರಾಜನು ಅವನನ್ನು ಪರಮ ಗೌರವದಿಂದ ಕಂಡು- ತಮ್ಮ ತಪ್ಪನ್ನು ತಾವು ಒಪ್ಪಿಕೊಂಡು, ಪಶ್ಚಾತ್ತಾಪ ಪಟ್ಟದ್ದಾಗಿದೆ. ಅದೇ ಒಂದು ಬಗೆಯಲ್ಲಿ ಶಿಕ್ಷೆ ಎಂದನು. ಆದರೆ ಲಿಖಿತನು ಅದಕ್ಕೊಪ್ಪದೇ ಸಾಮಾನ್ಯರಿಗೆ ಈ ಬಗೆಯ ಕಳ್ಳತನದ ತಪ್ಪಿಗೆ ಏನು ಶಿಕ್ಷೆಯೋ ಅದನ್ನೇ ತನಗೂ ನೀಡಬೇಕು ಎಂದು ಆಗ್ರಹಿಸುತ್ತಾನೆ. ಆಗ ಅನಿವಾರ್ಯವಾಗಿ ರಾಜನು ಅವನ ಕೈಗಳೆರಡನ್ನು ಕತ್ತರಿಸಬೇಕಾಗುತ್ತದೆ.

ಸರಿ. ಪಾಪಕ್ಕೆ ಶಿಕ್ಷೆ ಆಗಿದೆ ಎಂದು ಲಿಖಿತನಿಗೆ ಸಮಾಧಾನವಾಗುತ್ತದೆ. ಆದರೆ ಅಣ್ಣ ಶಂಖನಿಗೆ ತಮ್ಮನ ದುಸ್ಥಿತಿ ಸಹಿಸಲಾಗುವುದಿಲ್ಲ. ಅಲ್ಲೇ ಒಂದು ಪವಿತ್ರವಾದ ಸರೋವರದಲ್ಲಿ ಸ್ನಾನ ಮಾಡಲು ನಿರ್ದೇಶಿಸುತ್ತಾನೆ. ನಂತರ ಅವನ ತಪೋಬಲದಿಂದ, ಧರ್ಮದ ನಡೆಯಿಂದ ಅವನ  ಕೈಗಳು ಪುನಃ ಬರುತ್ತವೆ ಎಂಬುದು ಮುಂದಿನ ಕಥೆ.

ಮಹರ್ಷಿಗಳ ಧರ್ಮ ಸೂಕ್ಷ್ಮತೆ

ಭಾರತೀಯ ಮಹರ್ಷಿಗಳ ಧರ್ಮದ ಸೂಕ್ಷ್ಮತೆ ಎಷ್ಟು ಆಳದ್ದು ಎಂದು ಈ ಕಥೆಯಿಂದ ನಮ್ಮ ಮನಸ್ಸಿಗೆ ಬರುತ್ತದೆ. ಧರ್ಮ ಯಾವುದೋ ಪುಸ್ತಕದ ಕಥೆಯಲ್ಲ. ನಿಸರ್ಗದ ನಡೆ. ಅದನ್ನು ಅರಿತು ನಡೆದಾಗ ಬಾಳು ಸುಂದರ. ಅದನ್ನು ಅರಿಯುವ ಇಂದ್ರಿಯ ಪಾಟವ, ಸಮಗ್ರ ಚಿಂತನೆ ಎಲ್ಲರೂ ಬೆಳೆಸಿಕೊಳ್ಳಬೇಕೆಂದೇ ನಮ್ಮ ದೇಶದಲ್ಲಿ ಇಷ್ಟು ಆಚಾರ ಪರಂಪರೆ ಬಂದಿರುವುದು.ತಮ್ಮನ ಮುಖವನ್ನು ನೋಡಿಯೇ ಅಣ್ಣನಿಗೆ ಅವನಿಂದ ಅಧರ್ಮ ನಡೆದಿದೆ ಎಂದು ಗೊತ್ತಾಗುತ್ತದೆ. ಅವನು ಅದೆಷ್ಟು ಸೂಕ್ಷ್ಮಗ್ರಾಹಿಯಾಗಿರಬೇಡ! ಅಣ್ಣ ಹೇಳಿದೊಡನೆ ಇವನಿಗೂ ತನ್ನ ತಪ್ಪಿನ ಅರಿವಾಗಿ ಅದನ್ನು ಶಿಕ್ಷೆಯಿಂದ ಸರಿಮಾಡಿಕೊಳ್ಳುವ ಮನಸ್ಸು ಎಷ್ಟು ಶ್ರೇಷ್ಠ!

ಶ್ರೇಷ್ಠರ ನಡೆಯೇ ಸಮಾಜದ ಆದರ್ಶ

ಶ್ರೇಷ್ಠರಾದವರು ಆಚರಿಸುವ ನಡೆಯನ್ನೇ ಸಾಮಾನ್ಯರೆಲ್ಲ ಅನುಸರಿಸುವುದು ಎಂಬ ಗೀತಾಚಾರ್ಯನ ಮಾತು ಸ್ಮರಣೀಯ. ಅವರಿಬ್ಬರೂ ಧರ್ಮಿಷ್ಠರು. ಸಮಾಜದಲ್ಲಿ ಅವರೇ ಆದರ್ಶವನ್ನು ನಿಯಮನ ಮಾಡಬೇಕಾದವರು. ಎಂದೇ ತಮ್ಮದೇ ಮೇಲ್ಪಂಕ್ತಿಯನ್ನು ಮೆರೆದರು.   

ಶಿಕ್ಷೆ ಕೊಡಬೇಕಾದವನು ರಾಜನೇ. ಅವನಿಂದಲೇ ಶಿಕ್ಷೆ ಪಡೆಯುವ ಧರ್ಮದ ನೀತಿಯನ್ನೇ ಅನುಸರಿಸಿದ್ದಾರೆ. ತಮ್ಮನ ಮೇಲಿನ ಕರುಣೆ ಮತ್ತು ಎಂದೆಂದಿಗೂ ಧರ್ಮವೇ ಉಳಿಯಬೇಕಾದುದು ಎಂಬ ಧರ್ಮಪ್ರಜ್ಞೆ ಶಂಖನದು. ಎಂದೇ ಅವರಿಬ್ಬರೂ ನಮ್ಮ ದೇಶದ ಬಹು ವಿಖ್ಯಾತ ಧರ್ಮಶಾಸ್ತ್ರಜ್ಞರಾಗಿದ್ದರು..

ಸತ್ಪುರುಷರ ಧರ್ಮ

" ಸತ್ಪುರುಷರ ಧರ್ಮವೆಂಬುದು ಅತಿ ಸೂಕ್ಷ್ಮ,ಮತ್ತು  ಅರಿಯಲು ಅತ್ಯಂತ ಕಷ್ಟಸಾಧ್ಯ" ಎಂದು ಶ್ರೀರಾಮನು ವಾಲಿಗೆ ಹೇಳುವ ಮಾತು. ವಾಲಿಯನ್ನು ಪ್ಲವಂಗಮ ಎಂದಿದ್ದಾನೆ. ಪ್ಲವಂಗಮ ಎಂದರೆ ಮರದಿಂದ ಮರಕ್ಕೆ ಹಾರುವವನು ಎಂಬ ಅಭಿಪ್ರಾಯ, ವೃಕ್ಷ ಮೂಲಕ್ಕೆ ಬಂದು ವೃಕ್ಷವನ್ನು- ಜೀವನವೃಕ್ಷವನ್ನು ಅರ್ಥಮಾಡಿಕೊಂಡಿರಲಿಲ್ಲ ವಾಲೀ. ಅವನಿಗೆ ಧರ್ಮಸೂಕ್ಷ್ಮದ  ಪರಿಚಯವಿಲ್ಲವೆಂಬುದು ಶ್ರೀರಾಮನ ಅಭಿಪ್ರಾಯವಾಗಿತ್ತಪ್ಪಾ ಎಂದು ಇದನ್ನು ಶ್ರೀ ರಾಮಭದ್ರಾಚಾರ್ಯರು  ಮಾರ್ಮಿಕವಾಗಿ ತಿಳಿಸಿದ್ದರು. ಇಲ್ಲೂ ಹಾಗೆಯೇ. ನಮಗೆ ಒಂದು ಹಣ್ಣು ತಿಂದರೆ ಏನಾಗಿಬಿಡುತ್ತೆ ಎಂದೇ ಅನ್ನಿಸುವುದು. ಒಂದು ಕ್ರಿಯೆಯ ಸುಕ್ಷ್ಮಾತಿಸೂಕ್ಷ್ಮ ಪರಿಣಾಮ ಏನೆಂಬ ಅರಿವು ನಮಗಿರುವುದಿಲ್ಲ. ಅಂತಹ ಪರಿಷ್ಕೃತವಾದ ಜೀವನ ನಾವು ಮಾಡಿರುವುದಿಲ್ಲ. ಆದರೆ ಒಳಗೂ ಹೊರಗೂ ನಿರ್ಮಲವಾದ ಜೀವನ ನಡೆಸುವ ಮಹಾತ್ಮರ ನಡೆಯೇ ಬೇರೆ.  ಹೃದಯಗುಹೆಯಲ್ಲಿರುವ ಧರ್ಮವನ್ನು ಅರಿತು ತಿಳಿಸಬಲ್ಲ ಮಹಾಜನರು ಯಾವ ಮಾರ್ಗವನ್ನು ಅನುಸರಿಸುತ್ತಾರೆಯೋ  ಅದು ಸರಿಯಾದ ಹಾದಿ. ಅದು ಬಿಟ್ಟು ಮೆಜಾರಿಟಿ ಮೇಲೆ ತೀರ್ಮಾನಕ್ಕೆ ಹೊರಟರೆವಿಷಯ ನಿಲ್ಲುವುದಿಲ್ಲ ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.

ಇಂದು ಸತ್ಯ-ಅಸತ್ಯ,ಧರ್ಮ-ಅಧರ್ಮ ಎಲ್ಲವನ್ನೂ ನಿಸರ್ಗಸಹಜವಾಗಿ ಅರಿಯುವ ಪ್ರಜ್ಞೆಯಿಂದ ನಾವು ಬಹಳ ದೂರ ಸರಿದಿದ್ದೇವೆ. ಎಲ್ಲವನ್ನೂ ಮೆಜಾರಿಟಿಯ ಮೇಲೆ, ನಮ್ಮ ಅನುಕೂಲ-ಪ್ರತಿಕೂಲತೆಗಳ ಮೇಲೆ ಅಳೆಯುವುದಾಗಿದೆ. ಆದರೆ ನಿಜಾರ್ಥದಲ್ಲಿ ನಾವು ನಮ್ಮ ಪೂಜ್ಯ ಪೂರ್ವಜರ ಅನುವಂಶೀಯರಾಗುವುದಾದರೆ ಅವರು ಹಾಕಿಕೊಟ್ಟ ಧರ್ಮಮಾರ್ಗದಲ್ಲಿ ಹೆಜ್ಜೆಯಿಡುವುದು ಸಾರ್ವಕಾಲಿಕವಾಗಿ ಶ್ರೇಯಸ್ಕರ.ಈ ಕಥೆ ನಮಗೆ ಅದನ್ನೇ ಸಾರುತ್ತಿದೆ.

ಸೂಚನೆ : 23/11/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.