Sunday, November 24, 2024

ಸಮಚಿತ್ತದಿಂದ ಇರುವುದೆಂತು? (Samacittadinda iruvudentu ?)


ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)



ಮಾನವಸಹಜವಾದ ಭಾವನೆಗಳಲ್ಲಿ ಸಕಾರಾತ್ಮವೂ ನಕಾರಾತ್ಮಕವೂ ಆದದ್ದು ಇರುವುವಷ್ಟೆ. ಕೋಪ, ತಾತ್ಸಾರ, ಅಸೂಯೆ ಇತ್ಯಾದಿಗಳು ನಕಾರಾತ್ಮಕವಾದವುಗಳು ಹಾಗೂ ಅವು ಬಂದು ಹೋಗುವುದು ಸಹಜವೇ ಆದರೂ ಮನಸ್ಸಿನಲ್ಲಿ ಅವೇ ಆಡುತ್ತಿದ್ದರೆ, ಒಳಗಿನಿಂದ ಸುಟ್ಟುಹಾಕುವ ಬೆಂಕಿಯಿದ್ದಂತೆ. ಆರ್ಷಸಾಹಿತ್ಯದಿಂದ ಪ್ರಾರಂಭಿಸಿ ಹಲವಾರು ಕಾವ್ಯಗಳಲ್ಲಿ ಈ ಭಾವಗಳನ್ನು ಚಿತ್ರಿಸಿರುವುದುಂಟು. ಭಾರತೀಯ ಕಾವ್ಯಪರಂಪರೆಯು "ಕಾಂತಾಸಂಮಿತೆ". ಹಾಗೆಂದರೆ, ಪ್ರಿಯೆಯು ಒಳ್ಳೆಯ ಮಾತುಗಳಿಂದ ಮೆಲ್ಲನೆ ಸರಿಯಾದ ದಾರಿಗೆ ತರುವಂತೆ ಕಾವ್ಯಗಳೂ ತನ್ನ ಓದುಗರನ್ನು "ಈ ರೀತಿ ಮಾಡಬೇಕು, ಈ ರೀತಿ ಬಾರದು" ಇತ್ಯಾದಿಯಾಗಿ ತಿಳಿಹೇಳುವಂತಹವು. ಒಳ್ಳೆಯ ಕಾವ್ಯಗಳಲ್ಲಿ ಚಿತ್ರಿಸಿರುವ ನಕಾರಾತ್ಮಕಭಾವಗಳ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ, ಅವು ನಮ್ಮಲ್ಲಿ  ಊರದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ. ಇಲ್ಲೊಂದು ಉದಾಹರಣೆ ತೆಗೆದುಕೊಳ್ಳೋಣ.

ರಾಮಾಯಣದ ಕಥೆಯಲ್ಲಿ ಒಂದು ಬಹುಮುಖ್ಯ ತಿರುವೆಂದರೆ ಮಂಥರೆಯ ಪ್ರವೇಶ-ಆಕ್ರೋಶಗಳಿಂದಾಗಿ ಶ್ರೀರಾಮನ ರಾಜ್ಯಾಭಿಷೇಕಗಳು ತಪ್ಪಿ ಅವನು ಸೀತಾ-ಲಕ್ಷ್ಮಣರ ಸಮೇತ ಕಾಡಿಗೆ ಹೋಗುವಂತಾಗುವುದು.

ದಶರಥನು ರಾಮನಿಗೆ ಯೌವರಾಜ್ಯಾಭಿಷೇಕ ಮಾಡುವುದಾಗಿ ನಿಶ್ಚಯವಾಯಿತು. ಮಾರನೆಯ ದಿನವೇ ರಾಜ್ಯಾಭಿಷೇಕವಿದ್ದದ್ದರಿಂದ ಯಾರಾರಿಗೆ ತಿಳಿದಾಗಿತ್ತೋ ಅವರೆಲ್ಲರೂ ಸಡಗರದಿಂದ ತಯಾರಿ ನಡೆಸಿದ್ದರು. ಭರತ-ಶತ್ರುಘ್ನರು ಇದಕ್ಕೆ ಬಹು ಮುಂಚೆಯೇ ಭರತನ ಸೋದರಮಾವನ ಮನೆಗೆ ತೆರಳಾಗಿತ್ತು. ಅಂತಃಪುರದ ಮಹಡಿ ಹತ್ತಿದ್ದ ದಾಸಿ ಮಂಥರೆ ಅಕಸ್ಮಾತ್ತಾಗಿ ಈ ಎಲ್ಲಾ ಸಡಗರದ ತಯಾರಿಗಳನ್ನು ಕಂಡು ಬೇರೊಬ್ಬ ದಾಸಿಯಿಂದ ವಿಷಯವೇನೆಂದು ತಿಳಿದಳು. ಕೈಕೇಯಿಯ ತಾಯಿಯ ಮನೆಯಿಂದಲೂ ಜೊತೆಗಿದ್ದ ಮಂಥರೆಗೆ ಕೌಸಲ್ಯೆಯನ್ನು ಕಂಡರಾಗುತ್ತಿರಲಿಲ್ಲ ಎಂಬುದು ನಮಗೆ ಈ ಸಂದರ್ಭದಲ್ಲೇ ತಿಳಿಯುತ್ತದೆ. ಕೌಸಲ್ಯೆಯನ್ನು ಜಿಪುಣೆಯೆಂದು ಕರೆದು ಅವಳ ಸಂತೋಷಕ್ಕೆ ಕಾರಣವೇನೆಂದು ಕೇಳುತ್ತಾಳೆ. ಕಾರಣ ತಿಳಿದಾಗ ಅವಳ ಅಸೂಯೆ-ಕೋಪಗಳು ಅವಳಲ್ಲಿ ತಾಂಡವವಾಡುತ್ತವೆ.

ಆಗ ಅವಳು ಮಾಡುವ ಮೊದಲ ಕೆಲಸವೇ ಕೈಕೇಯಿಯ ಅಂತಃಪುರಕ್ಕೆ ಹೋಗಿ ಅವಳಿಗೆ ವಿಷಯ ತಿಳಿಸಿ, ಅವಳನ್ನು ಕೆರಳಿಸಲು ತೊಡಗುವುದು. ಅದಕ್ಕಾಗಿ ಮಂಥರೆಯು ದಶರಥನನ್ನು ಬೈದದ್ದಲ್ಲದೆ, ಕೈಕೇಯಿಯನ್ನು ಪದೇ ಪದೇ "ಬಾಲೆ", ಎಂದರೆ ತಿಳಿವಳಿಕೆಯಿಲ್ಲದ ಹುಡುಗಿ, ಎಂದೇ ಸಂಬೋಧಿಸುತ್ತಾಳೆ. ಅವಳು ಅಷ್ಟೆಲ್ಲಾ ಹೇಳಿದರೂ ಕೈಕೇಯಿಗೆ ಸುದ್ದಿ ಕೇಳಿ ಸಂತೋಷವೇ ಆಗುತ್ತದೆ, ಹಾಗೂ ಸಿಹಿಸುದ್ದಿ ಕೊಟ್ಟ ಮಂಥರೆಗೆ ತನ್ನ ಹಾರವನ್ನು ಬಹುಮಾನವಾಗಿ ಕೊಡುತ್ತಾಳೆ. ಆದರೆ, ಮಂಥರೆಯು ವಿಧವಿಧವಾಗಿ, ಮತ್ತು ಹಲವು ಬಾರಿ ದಶರಥನನ್ನು ನಿಂದಿಸಿ, ಕೌಸಲ್ಯೆಯನ್ನು ದೂಷಿಸಿ, ರಾಮನಿಗೆ ಯುವರಾಜಪದವಿ ಸಿಕ್ಕರೆ ಭರತನಿಗೆ ಏನಾಗಬಹುದು ಎಂದೆಲ್ಲಾ ವರ್ಣಿಸಿ ಹೇಳಿ, ಕೊನೆಗೂ ಕೈಕೇಯಿಯ ಮನಸ್ಸನ್ನು ಕೆಡಿಸಿಯೇ ಬಿಡುತ್ತಾಳೆ. ಕುಪಿತಳಾದ ಕೈಕೇಯಿ ಮುಂದೆ ಏನೇನು ಮಾಡುವಳೆಂದು ಎಲ್ಲರಿಗೂ ತಿಳಿದಿರುವುದೇ.

ಮಂಥರೆಯ ಅಸೂಯಾಪರತೆಗೆ ಕಾರಣ ಹೀಗಿರಬಹುದೇನೋ. ತಾನು ಕೈಕೇಯಿಯ ದಾಸಿ. ಭರತನಿಗೆ ರಾಜ್ಯಾಭಿಷೇಕವಾದರೆ, ರಾಜಮಾತೆಯಾದ ಕೈಕೇಯಿಯ ದಾಸಿ ತಾನೆಂದು ಬೇರೆ ದಾಸಿಯರ ಮೇಲೆ ಜೋರುಮಾಡಬಹುದು ಎಂದು ಇದ್ದಿತ್ತೇನೋ. "ತಾನು ದಿವಾನರ ಮನೆ ಜವಾನ" ಎಂದು ಹೇಳಿಕೊಳ್ಳುವ ಪರಿಯಂತೆಯೇ ಇದು. ಕೈಕೇಯಿಯೊಂದಿಗೇ ಅವಳ ತವರುಮನೆಯಿಂದ ಜೊತೆ ಬಂದಿದ್ದವಳಾದರೂ, ಮಂಥರೆಗೆ ಕೈಕೇಯಿಯ ಹಿತ ಬೇಕಾಗಿತ್ತೆಂದು ಅನಿಸುವುದಿಲ್ಲ. ರಾಮನು ಕೈಕೇಯಿಯ ಸವತಿಯ ಮಗನೆಂದೂ ಹಾಗಾಗಿ ಕೈಕೇಯಿಗೆ ಶತ್ರುಸಮಾನನೆಂದೂ ಅವಳು ಕಿವಿಯೂದಿದಳು.  ರಾಮನು ರಾಜನಾದ ನಂತರ ಕೈಕೇಯಿಗೂ ಭರತನಿಗೂ ಉಳಿಗಾಲವಿಲ್ಲವೆಂದೂ ಹೆದರಿಸಿದಳು. ಮೊದಮೊದಲಿಗೆ ಇದನ್ನೇನೂ ಕೈಕೇಯಿಯು ನಂಬಲಿಲ್ಲ. ರಾಮನ ವಿಷಯದಲ್ಲಿ ಆಕೆಗೆ ಅಪಾರವಾದ ಪ್ರೀತಿ-ನಂಬಿಕೆಗಳಿದ್ದವು. ಆದರೂ ಮಂಥರೆಯ ಈ ದುರ್ವಚನಗಳೂ ಕಾಲ್ಪನಿಕವಾದ ಭವಿಷ್ಯದ ಕಷ್ಟಗಳೂ ಪದೇ ಪದೇ ಕಿವಿಗೆ ಬಿದ್ದು ಕೈಕೇಯಿಗೂ ದುಷ್ಟಪ್ರವೃತ್ತಿಯುಂಟಾಯಿತು. ಮಾತು ಬಹಳ ಪ್ರಭಾವಶಾಲಿಯೆನ್ನುವುದಕ್ಕೆ ಇದೇ ನಿದರ್ಶನ - ಒಳ್ಳೆಯ ಮಾತಿನಿಂದ ಹೇಗೆ ಪ್ರಭಾವ ಬೀರಬಹುದೋ, ದುರ್ವಚನದಿಂದ ದುರಾಲೋಚನೆ ಅಂಕುರಿಸುವಂತೆಯೂ ಮಾಡಬಹುದು.

ಕೈಕೇಯಿಗೆ ಸ್ವಲ್ಪವಾದರೂ ವಿವೇಕ ಕೆಲಸಮಾಡಿದ್ದರೆ, ರಾಮನ ಗುಣಸಂಪನ್ನತೆಯ ಬಗ್ಗೆಯಾಗಲೀ, ರಾಮ-ಭರತರ ಮಧ್ಯೆಯಿರುವ ಪ್ರೀತಿ-ನಿಷ್ಠೆಗಳ ಬಗ್ಗೆಯಾಗಲೀ ಸಂದೇಹ ತಲೆಯೆತ್ತುತ್ತಲೇ ಇರಲಿಲ್ಲ. ರಾಮ ಹಿರಿಯ ಮಗ, ಸದ್ಗುಣಸಂಪನ್ನ, ಪ್ರಜೆಗಳಿಗೆಲ್ಲ ಪ್ರೀತಿಪಾತ್ರನಾಗಿದ್ದವನು. ಇದರಲ್ಲಿ ಯಾವುದೇ ಒಂದು ವಾಸ್ತವವಾಗಿಲ್ಲದಿದ್ದರೂ, ಭರತನಿಗಾಗಿ ಕೈಕೇಯಿ ಮಾಡಿದ ಸಿಂಹಾಸನದ ವರಾತ ಸಮ್ಮತವಾಗಬಹುದಿತ್ತು. ಮಂಥರೆ ಅವಳಿಗೆ ಹತ್ತಿರದವಳಾಗಿದ್ದರಿಂದ, ಮಂಥರೆಯ ಬಾಯಿಂದ ಬಂದ ದುಷ್ಟವಚನಗಳನ್ನೂ ಅವಳು ಅಲಕ್ಷಿಸುತ್ತಲೇ ಬಂದಿದ್ದಳು. ಅಂತಹ ಮಾತುಗಳಿಗೆ ಖಂಡನೆ-ದಂಡನೆಯೇನೂ ಆಗಲಿಲ್ಲ. ಆದ್ದರಿಂದ ಪುನಃಪುನಃ ಆ ಮಾತುಗಳನ್ನವಳು ಕೇಳುವಂತಾಯಿತು. ಅವೇ ಕೆಟ್ಟಯೋಚನೆ-ಯೋಜನೆಗಳಿಗೆ ಕಾರಣೀಭೂತವಾದವು. ಮಂಥರೆಯು ತನಗೂ ತನ್ನ ಮಗನಿಗೂ ಹಿತವಾದದ್ದನ್ನು ಹೇಳುತ್ತಿದ್ದಾಳೋ, ಅಥವಾ ಅವಳದೇ ಹೆಚ್ಚುಗಾರಿಕೆಗಾಗಿ ಅಸೂಯೆಯಿಂದ ಹೇಳುತ್ತಿದ್ದಾಳೋ ಕೈಕೇಯಿಯು ವಿವೇಚಿಸಲಿಲ್ಲ.

ಅಸೂಯೆಯ ವಿಷಯದಲ್ಲಿ ಶ್ರೀರಂಗಮಹಾಗುರುಗಳು ಹೇಳಿರುವ ಮಾತುಗಳು ಈ ಸಂದರ್ಭದಲ್ಲಿ ಬಹಳ ಸಮಂಜಸ. "ಲಕ್ಷಣವನ್ನು ಸರಿಯಾಗಿ ಅರಿತಾಗ ನಾವು ಅವಲಕ್ಷಣವಾಗಿದ್ದರೂ ದುಃಖಪಡಬೇಕಾಗಿಲ್ಲ. ಲಕ್ಷಣಜ್ಞನು ದುಃಖಪಡುವುದೂ ಇಲ್ಲ. ಲಕ್ಷಣವಾಗಿರುವ ಪದಾರ್ಥವನ್ನು ನೋಡಿ ಆನಂದಿಸಬಹುದು. ಹೀಗೆ ಸಮಚಿತ್ತತೆಗೆ ಲಕ್ಷಣಜ್ಞತೆ ಒಂದು ಹಾದಿ." ಎಂದು ಹೇಳಿರುವರು.

ಕೈಕೇಯಿಯು ಶ್ರೀರಾಮನ ರಾಜ್ಯಾಭಿಷೇಕದ ಬಗ್ಗೆ ಹಲುಬದೇ, ಅವನ ಯೋಗ್ಯತೆಯ ಬಗ್ಗೆ ಒಂದು ವಿವೇಚನೆ ಮಾಡಿದ್ದರೆ, ಮಂಥರೆಯ ಮಾತಿನಿಂದ ಪ್ರಭಾವಿತಳೂ ಆಗುತ್ತಿರಲಿಲ್ಲ, ತನಗೂ ತನ್ನ ಸಪತ್ನಿಯರಿಗೂ ಮಕ್ಕಳಿಗೂ ರಾಜ್ಯಕ್ಕೂ ಕಂಟಕಪ್ರಾಯಳಾಗುತ್ತಲೂ ಇರಲಿಲ್ಲ. ತನಗೆ ಸಿಕ್ಕದೇಹೋದದ್ದು ಮತ್ತೊಬ್ಬಳಿಗೆ, ಎಂದರೆ ಕೌಸಲ್ಯೆಗೆ, ದೊರೆತಿದೆ ಎಂದಾಗ, ತನಗೆ ವಿಧಿಯಿತ್ತದ್ದು ಇಷ್ಟು, ಕೌಸಲ್ಯೆಯ ಅದೃಷ್ಟದಲ್ಲೇ ತಾನು ಸಂತಸವನ್ನು ಕಂಡುಕೊಳ್ಳುತ್ತೇನೆ ಎಂದು ಅವಳು ತಿಳಿಯಬಹುದಿತ್ತು. ಅವಳು ಸಮಚಿತ್ತಳಾಗಿದ್ದು ಸರಿಯಾಗಿ ವರ್ತಿಸಿದ್ದರೆ ರಾಮಾಯಣವೇ ಆಗುತ್ತಿರಲಿಲ್ಲವೆಂಬುದಿದ್ದರೂ, ನಮಗೆ ಇಲ್ಲಿರುವ ಪಾಠವನ್ನು ನಾವು ಸರಿಯಾಗಿ ಗುರುತಿಸಬೇಕು.

ಹಾಗಾದರೆ, ನಾವು ಹೇಗಿರಬೇಕು? ಅದಕ್ಕೆ ರಾಮಾಯಣದ ಮತ್ತೊಂದು ಪ್ರಸಂಗ ನೋಡೋಣ. ಪುಟ್ಟ ಬಾಲಕರಾದ ಲವಕುಶರು ಆದಿಕಾವ್ಯದ ಗಾನವನ್ನು ಮಾಡಿದಾಗ, "ಸಾಧು! ಸಾಧು!" ಎಂದು ಅವರನ್ನು ಹೊಗಳಿದವರು ಇಂದ್ರಿಯಜಯಿಗಳಾದ ಋಷಿಗಳು. ಸಾಧಾರಣ ಸಂಗೀತಗಾರರೇನಾದರೂ ಆ ಗಾನವನ್ನು ಕೇಳಿದ್ದರೆ, ಶ್ರೀರಂಗಮಹಾಗುರುಗಳು ಹೇಳಿದಂತೆ, "ಹೇಗಿತ್ತು? ಎಂದರೆ ಅಸೂಯೆಯಿಂದ, 'ಇತ್ತು' ಎನ್ನುತ್ತಾರೆ. ಆದರೆ ಋಷಿಗಳು ಹಾಗಲ್ಲ, ಮುಕ್ತಕಂಠದಿಂದ ಹೊಗಳುತ್ತಾರೆ." ಒಂದು ಪದಾರ್ಥ ಅಥವಾ ವ್ಯಕ್ತಿ ಅಥವಾ ಸಂನಿವೇಶದ ಗುಣವನ್ನು ಗುರುತಿಸಿ ಅದು ನಮ್ಮಲ್ಲಿಲ್ಲದಿದ್ದರೂ ಬೇರೊಂದೆಡೆ ಇದೆಯಲ್ಲಾ ಎಂದು ಸಂತೋಷಪಡುವಂತಹವರು ನಾವಾಗಬೇಕು, ಅಲ್ಲವೇ?

ಸೂಚನೆ: 2೨ /೧ ೧ /2024 ರಂದು ಈ ಲೇಖನ ವಿಶ್ವವಾಣಿ ಯಲ್ಲಿ ಪ್ರಕಟವಾಗಿದೆ.