ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ನಖ-ನಿಯಮಿತ-ಕಂಡೂನ್
ಕೃಷ್ಣನೆಮ್ಮನು ಕಾಪಾಡಲಿ - ಎನ್ನುತ್ತಾನೆ, ಲೀಲಾಶುಕ. ಎಂತಹವನು ನಮ್ಮ ಕೃಷ್ಣ? ಅರ್ಜುನನ ರಥಕ್ಕೆ ಸಾರಥ್ಯದ ಕೆಲಸವನ್ನು ಮಾಡಿದನಲ್ಲವೇ ಅತ? ಆ ಸಾರಥಿಯ ಕೆಲಸವನ್ನು ಮಾಡುವಲ್ಲೂ ಉತ್ಕಟ ನಿಷ್ಠೆ ಆತನದು. ಏನು ಆತನ ನಿಷ್ಠೆ? ರಥವೋಡಿಸುವುದಷ್ಟೇ ಅಲ್ಲ; ಭಕ್ತನಾದ ಅರ್ಜುನನ ಕುದುರೆಗೂ ಉಪಚಾರ ಮಾಡಿದನಲ್ಲಾ! ನಾಲ್ಕು ರೀತಿಗಳಲ್ಲಿ ಮಾಡಿದನಂತೆ ಅಶ್ವಸೇವೆಯನ್ನು. ಹೇಗೆ ಮಾಡಿದ?
ಯಾವುದೇ ಪ್ರಾಣಿಗಾದರೂ ಒಂದಲ್ಲ ಒಂದು ಕಾರಣಕ್ಕೆ ಶರೀರದಲ್ಲಿ ಅಲ್ಲಲ್ಲಿ ನವೆಯು ಆಗಾಗ್ಗೆ ಆಗುತ್ತಲೇ ಇರುತ್ತದೆ. ಪ್ರಾಣಿಗಳಿಗಿರಲಿ, ಮನುಷ್ಯರಿಗೆ ಸಹ ಹಿತಮಿತವಾಗಿ ಯಾರಾದರೂ ಮೈತುರಿಸಿದರೆ ಇಷ್ಟಪಡುವಂತಾಗುತ್ತದೆಯಲ್ಲವೇ? ತುರಿಸಿದಾಗಾಗುವ ತೋಷಕ್ಕೆ ಕಣ್ಣೇ ಅರ್ಧಮುಚ್ಚುವಂತೆಯೋ, ಪೂರ್ಣವಾಗಿಯೇ ಮುಚ್ಚುವಂತೆಯೋ ಆಗುತ್ತದಲ್ಲವೇ? ಮನುಷ್ಯರಿಗೂ ಕೋತಿಗಳಿಗೂ ಕೆರೆದುಕೊಳ್ಳಲು ಶರೀರದ ಬಹು ಭಾಗವು ಕೈಕಾಲುಗಳಿಂದ ಬಹುತೇಕ ಎಟಕುವಂತಹುದೇ. ಆದರೆ ಕುದುರೆಯಂತಹ ಪ್ರಾಣಿಗೆ ಅದು ಸುಲಭವಲ್ಲವಷ್ಟೆ?
ಸ್ಯಂದನವೆಂದರೆ ರಥವಾದ್ದರಿಂದ, ರಥಕ್ಕೆ ಹೂಡಿದ ಕುದುರೆಗಳು ಸ್ಯಂದನಾಶ್ವಗಳು. ಅವುಗಳಿಗೆ ನವೆಯಾಗುವುದಲ್ಲವೇ? ಅದನ್ನೇ "ಕಂಡೂ" ಅಥವಾ "ಕಂಡೂತಿ"ಯೆನ್ನುತ್ತಾರೆ. ಆ ನವೆಯನ್ನು ಹೋಗಲಾಡಿಸಲು ಅದಾದೆಡೆ ಕೆರೆಯಬೇಕು. ಪ್ರೀತಿಯಿಂದ ಚೆನ್ನಾಗಿ ಕೆರೆಯುವುದೆಂದರೆ ಉಗುರುಗಳಿಂದಲೇ. ಹಾಗೆ ತನ್ನ ಉಗುರುಗಳಿಂದ ಆ ತುರಂಗಗಳ ತುರಿಯನ್ನು ಹೋಗಲಾಡಿಸಿ ಅವನ್ನೂ ಸುಖಪಡಿಸಿದವ, ನಮ್ಮ ಕೃಷ್ಣ.
ನವೆಯಾದದ್ದನ್ನು ಹೋಗಲಾಡಿಸುವುದು ಒಂದಾದರೆ, ನವೆಯು ಹೆಚ್ಚಾಗಿ ಉಂಟೇ ಆಗದಂತೆ ಮಾಡುವುದಿನ್ನೊಂದು. ಅದಕ್ಕೆ ಬೇಕು ಸ್ನಾನ. ಅದಕ್ಕಾಗಿ ಬೊಗಸೆ ಬೊಗಸೆಯಾಗಿ ನೀರನ್ನು ಕುದುರೆಗಳ ಮೇಲೆ ಚೆಲ್ಲಬೇಕು. ಹೀಗೆ ಅಂಜಲಿಸ್ಥವಾದ ಜಲದಿಂದ ಅಭಿಷೇಕ ಮಾಡಿದರೆ, ಕುದುರೆಗಳಿಗೆ ಅತ್ತ ನವೆಯೂ ಹೋಗುತ್ತದೆ, ಇತ್ತ ಬೆವರೂ ಹೋಗಿ, ಮೈಗೊಂದು ಹೊಸತನ-ಉಲ್ಲಾಸಗಳೂ ತುಂಬಿಕೊಳ್ಳುತ್ತವೆ. ಈ ಅಭಿಷಿಂಚನವನ್ನು ಎಂದೋ ಒಂದೆರಡು ದಿನವಲ್ಲ, ಅನುದಿನವೂ ಮಾಡುತ್ತಿದ್ದ, ವೃಷ್ಣಿವಂಶದ ಅರಸಾದ ಕೃಷ್ಣ!
ಹೀಗೆ ತುರಂಗಗಳನ್ನು ತುರಿಸಿ ತೊಳೆಯುವ ಕೆಲಸಕ್ಕೂ ಬಹುಶಃ ಬಹುದೀರ್ಘಕಾಲವೇನೂ ಬೇಕಿಲ್ಲ. ಎಂದೇ ಅಷ್ಟು ಹೊತ್ತು ತನ್ನ ತೋತ್ರ-ರಶ್ಮಿಗಳನ್ನು ತನ್ನ ಮೈಮೇಲೇ ಸಿಕ್ಕಿಸಿಕೊಂಡಿದ್ದರಾಯಿತು. ತೋತ್ರವೆಂದರೆ ಚಾವಟಿ. ತೋತ್ರ-ತೋದನಗಳು ಹತ್ತಿರದ ಪದಗಳು. ತೋದನವೆಂದರೆ ನೋವುಂಟುಮಾಡುವುದು. ತುಂಟಕುದುರೆಗಳಾದರೆ ತೋತ್ರಕ್ಕೆ ಕೆಲಸ ಹೆಚ್ಚು. ಆದರೆ ಇಲ್ಲಿ ಈ ಚಾವಟಿಯ ಉಪಯೋಗ ಅಷ್ಟೊಂದಿಲ್ಲ. ಅದೊಂದು ಸಂಪ್ರದಾಯವೆಂಬಂತೆ ಜೊತೆಗೇ ಇರತಕ್ಕದ್ದು. ಎಂದೇ ಅದನ್ನು ತನ್ನ ಮೌಲಿಗೇ ಸೆಗಿಸಿಕೊಂಡಿದ್ದಾನೆ. ಮೌಲಿಯೆಂದರೆ ತಲೆ, ಅಥವಾ ತಲೆಯ ಶಿಖೆ, ಅಥವಾ ತಲೆಯ ಮೇಲಿನ ಪೇಟ. ಹೀಗೆ ತನ್ನ ರುಮಾಲಿಗೆ ಚಮ್ಮಟಿಗೆಯನ್ನು ಸಿಕ್ಕಿಸಿಕೊಂಡು ಕುದುರೆಗಳ ಕೆರೆತ ಕಳೆಯುವ ಕೆಲಕಾಲದ ಕೆಲಸ, ಕೃಷ್ಣನಿಗೆ.
ಇನ್ನು ರಶ್ಮಿಯನ್ನು ಹಲ್ಲುಗಳ ನಡುವೆ ಹಿಡಿದಿದ್ದಾನೆ. ಕುದುರೆಯ ಲಗಾಮಿಗೆ ರಶ್ಮಿಯೆನ್ನುತ್ತಾರೆ. ವಾಘೆಯೆಂದರೂ ಅದೇ. ಕ್ಷಣಕಾಲ - ಎಂದರೆ ಮೈತೊಳೆಯುವಷ್ಟು ಕಾಲ - ಲಗಾಮುಗಳನ್ನು ತನ್ನ ದಂತಗಳ ನಡುವೆ ಲಗತ್ತಿಸಿಕೊಂಡಿದ್ದಾನೆ. ಹೀಗೆ ಹಯಗಳ ರಶ್ಮಿಗಳನ್ನು ತನ್ನ ದಶನಗಳಲ್ಲಿ ಹಿಡಿದಿಟ್ಟುಕೊಂಡು, ತನ್ನ ಅಂಜಲಿಭರ-ಜಲಗಳಿಂದ ಅಚ್ಯುತನು ಅಶ್ವಗಳಿಗೆ ಅಭಿಷೇಚನವೆಸಗುತ್ತಿದ್ದಾನೆ.
ಈವರೆಗೆ ಹೇಳಿದುದೆಲ್ಲವೂ ಕೃಷ್ಣನು ಏನೇನು ಮಾಡಿದ್ದ ಅಥವಾ ಮಾಡುತ್ತಿದ್ದ - ಎಂಬುದು. ಕೃಷ್ಣನೆಂತಹವನೆಂದೇ ಹೇಳಲಿಲ್ಲವಲ್ಲ? ಅದನ್ನೂ ಕವಿ ಎರಡು ಮಾತುಗಳಲ್ಲಿ ಹೇಳಿದ್ದಾನೆ.
ಅರ್ಜುನನಲ್ಲಿ ಇದ್ದ ಕುದುರೆಗಳು ಸಾಧಾರಣವಲ್ಲ. ಅವು ಒಳ್ಳೆಯ ಎತ್ತರದವೂ ಇದ್ದಾವು. ಅವಕ್ಕೆ ಸರಿಸಮವೇ ಕೃಷ್ಣನ ಮೈಕಟ್ಟೂ. ಆತನ ಶರೀರದ ಗಾತ್ರವೇ ವಿತತವಾದದ್ದು. ಎಂದರೆ ವಿಸ್ತೃತವಾದದ್ದು. ಅರ್ಥಾತ್, ವಿಶಾಲವಾದ ಎದೆಯ ಆಳೆತ್ತರದ ಆಸಾಮಿ, ನಮ್ಮ ಕೃಷ್ಣ. ವೀರ-ಕ್ಷತ್ರಿಯ-ವಂಶದವನಲ್ಲವೇ, ಎಷ್ಟಾದರೂ? ವ್ಯಾಯಾಮ-ಯೋಗವಿದ್ಯೆಗಳಲ್ಲಿ ಪಳಗಿದವರಿಗೆ ವ್ಯಾಯತವಾದ ಶರೀರವೂ ಇರುವುದೇ.
ಇದಕ್ಕಿಂತಲೂ ಮಿಗಿಲಾಗಿ, ಶ್ಲೋಕದ ಕೊನೆಯ ಪಾದದ ಕೊನೆಯ ಪದವು ಹೇಳುವಂತೆ, ಆತನು ದೇವಕೀ-ಪುಣ್ಯ-ರಾಶಿ. ಎಂದರೆ, ದೇವಕಿಯ ಪುಣ್ಯಗಳ ಪುಂಜ, ಶ್ರೀಕೃಷ್ಣ.
ಯಾರಿಗಾದರೂ ಬಹಳ ಒಳ್ಳೆಯ ಮಗನಿದ್ದರೆ, ಆತನ ತಂದೆತಾಯಿಯರ ಪುಣ್ಯದ ಫಲ ಈತ - ಎನ್ನುತ್ತೇವೆ. ಪುಣ್ಯವೇ ಬೇರೆ, ಪುಣ್ಯದ ಫಲವೇ ಬೇರೆ. ದಾನ-ಧರ್ಮಾದಿಗಳಿಂದ ನೇಮ-ನಿಷ್ಠೆಗಳಿಂದ ಪೂಜೆ-ಪುನಸ್ಕಾರಗಳಿಂದ ಹಿರಿಯರ ಸೇವೆ-ಶುಶ್ರೂಷೆಗಳಿಂದ, ಹಾಗೂ ಜ್ಞಾನವೃದ್ಧ-ತಪೋವೃದ್ಧರ ಅನುಗ್ರಹ-ಆಶೀರ್ವಾದಗಳಿಂದ ದೊರಕುವ ಫಲವೇ ಪುಣ್ಯ. ಆ ಪುಣ್ಯದ ಫಲವಾಗಿ ದೊರಕುವುದೇ ಸಾಧ್ವಿಯಾದ ಗೃಹಿಣಿ, ವಿಧೇಯರಾದ ಮಕ್ಕಳು, ಅಪ್ಪಣೆಯನ್ನು ಒಪ್ಪವಾಗಿ ನೆರವೇರಿಸುವ ಆಳುಕಾಳುಗಳು ಇತ್ಯಾದಿಗಳು, ಅಲ್ಲವೇ?
ಹೀಗೆ ಎಷ್ಟೋ ಜನ್ಮಗಳ ಸುಕೃತಗಳ ಸತ್ಫಲವಾಗಿಯೇ ಸುಪುತ್ರ-ಸುಪುತ್ರಿಯರು ಸಂಪ್ರಾಪ್ತವಾಗುವುದು. ಪುಣ್ಯವು ಬೀಜ, ಸುಪುತ್ರನು ಪುಣ್ಯಫಲ. ಸುಕೃತವು ಕಾರಣ, ಸತ್ಪುತ್ರನು ಕಾರ್ಯ.
ಆದರೆ ಈ ಶ್ಲೋಕದಲ್ಲಿ ದೇವಕಿಯ ಪುಣ್ಯಗಳ ಫಲವೆಂದು ಹೇಳಿಲ್ಲ, ಕೃಷ್ಣನನ್ನು. ಬದಲಾಗಿ, ದೇವಕಿಯ ಪುಣ್ಯಗಳ ರಾಶಿಯೇ ಶ್ರೀಕೃಷ್ಣ ಎಂದು ಹೇಳಿದೆ! ಅರ್ಥಾತ್, ಕಾರ್ಯವನ್ನು ಮರೆಮಾಚಿ ಕಾರಣವೆಂದೇ ಹೇಳಿದೆ. ಕಾರ್ಯ-ಕಾರಣಗಳಲ್ಲಿ ಹೀಗೆ ಅಭೇದವನ್ನು ಹೇಳುವುದೂ ಒಂದು ಕಾವ್ಯಭಂಗಿ. ಇಂತಹ ಉತ್ತಮ-ಕಾರ್ಯವು ಇಂತಹ ಉತ್ಕಟ-ಕಾರಣದಿಂದ ಆಗುವುದು - ಎಂಬುದನ್ನು ಹೇಳಲೋಸುಗ ಈ ಬಗೆಯ ಭಂಗಿಯನ್ನು ಬಳಸುತ್ತಾರೆ. ಅಲ್ಲಿಗೆ, ದೇವಕಿಯ ಪುಣ್ಯಗಳನ್ನೆಲ್ಲಾ ಗುಡ್ಡೆ ಹಾಕಿದರೆ ಅದುವೇ ಕೃಷ್ಣ!
ಹೀಗೆ ಈ ಶ್ಲೋಕದಲ್ಲಿ ದೇವಕೀ-ಭಾಗ್ಯ-ರಾಶಿಯಾದ ಕೃಷ್ಣನ ಮೈಕಟ್ಟನ್ನು ಒಂದು ವಿಶೇಷಣದಿಂದ ಹೇಳಿ, ಇನ್ನು ನಾಲ್ಕರ ಮೂಲಕ ಅರ್ಜುನಾಶ್ವಗಳಿಗೆ ಆತನು ಮಾಡುತ್ತಿದ್ದ ತುರಿ ತೆಗೆಯುವ ಪರಿ, ಸ್ನಾನ ಮಾಡಿಸುವ ವೈಖರಿ, ಲಗಾಮು-ಚಾವಟಿಗಳಿಗೆ ಆತ ಕಲ್ಪಿಸಿಕೊಂಡ ಎಡೆಗಳು - ಇವೆಲ್ಲವನ್ನೂ ಹೇಳಿವೆ.
ಹೀಗೆಲ್ಲ ಇರುವ ಶ್ರೀಕೃಷ್ಣನು ಕಾಪಾಡಲಿ - ಎಂದು ಹೇಳಿದೆ. ಯಾರನ್ನು? ನಮ್ಮನ್ನು, ನಮಗೆ ಸೇರಿದವರನ್ನು – ಎಂದುಕೊಳ್ಳಬಹುದಲ್ಲವೇ?
ಕೃಷ್ಣಂ ವಂದೇ ಜಗದ್ಗುರುಂ - ಎನ್ನುತ್ತೇವೆ. ಅಂತಹ ಮಹಾಶಯನು ಇತ್ತ ಭಕ್ತರ ಸೇವೆಗಾಗಿರುವ ಪ್ರಾಣಿಗಳ ಸೇವೆಯನ್ನೇ ಅನುದಿನವೂ ಅನುಸರಿಸಿಕೊಂಡು ಬರುತ್ತಿರುವುದು ಅತ್ತ ಆತನ ಪಾರಮ್ಯಕ್ಕೂ ಇತ್ತ ಸಾರಲ್ಯಕ್ಕೂ ಕನ್ನಡಿ ಹಿಡಿದಿರುವಂತಿದೆ.
ಅಂತಹ ಕೃಷ್ಣ ನಮ್ಮನ್ನು ಕಾಪಾಡಲಿ, ಎಂದಿದ್ದಾನೆ ಈ ವರಕವಿ.
ಕೃಷ್ಣನನ್ನು ಪುತ್ರನನ್ನಾಗಿ ಪಡೆದ ದೇವಕಿಯು ಪುಣ್ಯಶಾಲಿನಿ. ಜಗದ್ಗುರುವನ್ನು ಗುರುವನ್ನಾಗಿ ಪಡೆದ ಅರ್ಜುನನೂ ಪುಣ್ಯಶಾಲಿ. ಪ್ರಾಣಿಗಳಾಗಿ ಜನಿಸಿದರೂ ಜಗತ್ಪ್ರಾಣನೆನಿಸಿದ ಕೃಷ್ಣನಿಂದ ತುರಿಕೆ-ಜಳಕಗಳಿಗೆ ಭಾಜನವಾದ ವಾಜಿಗಳೂ ಪುಣ್ಯಶಾಲಿಗಳೇ ಸರಿ.
ತನ್ನ ಕಮನೀಯ ಕಾವ್ಯಮಯ ಕಲ್ಪನೆಯೆಂಬ ಕ್ಯಾಮರಾವಿನ ಕಣ್ಣಲ್ಲಿ ಕೃಷ್ಣನನ್ನು ಕಂಡುಕೊಂಡು ವಾಚಕರಿಗೊಂದು ವಾಕ್ಚಿತ್ರವಾಗಿ ಅದನ್ನು ಲೀಲಾಜಾಲವಾಗೊದಗಿಸಿಕೊಟ್ಟಿರುವ ಲೀಲಾಶುಕನಿಗೆ ನಮ್ಮ ನಮ್ರ ನಮನಗಳು ಸಲ್ಲಬೇಕಲ್ಲವೇ?
ನಖನಿಯಮಿತ-ಕಂಡೂನ್ ಪಾಂಡವ-ಸ್ಯಂದನಾಶ್ವಾನ್
ಅನುದಿನಂ ಅಭಿಷಿಂಚನ್ ಅಂಜಲಿಸ್ಥೈಃ ಪಯೋಭಿಃ |
ಅವತು ವಿತತ-ಗಾತ್ರಃ ತೋತ್ರ-ಸಂಸ್ಯೂತ-ಮೌಲಿಃ
ದಶನ-ವಿಧೃತ-ರಶ್ಮಿಃ ದೇವಕೀ-ಪುಣ್ಯ-ರಾಶಿಃ ||
ಸೂಚನೆ : 23/11/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.