Monday, November 11, 2024

ವ್ಯಾಸ ವೀಕ್ಷಿತ 110 ಸುಭದ್ರಾವಿವಾಹ (Vyaasa Vikshita 110 Subhadravivaha)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಅರ್ಜುನನ ವಿಷಯದಲ್ಲಿ ಕ್ರೋಧಗೊಂಡಿದ್ದ ವೃಷ್ಣ್ಯಂಧಕವೀರರನ್ನುದ್ದೇಶಿಸಿ, ತನ್ನ ವಿವೇಕದ ಮಾತುಗಳನ್ನು ಮುಂದುವರೆಸುತ್ತಾ, ಶ್ರೀಕೃಷ್ಣನು ಹೇಳುತ್ತಾನೆ.

"ಈ ವಿಷಯವನ್ನೂ ನಾವು ಯೋಚಿಸಬೇಕು: ಅರ್ಜುನನು ಜನಿಸಿರುವುದು ಭರತನ ವಂಶದಲ್ಲಿ, ಶಾಂತನುವಿನ ವಂಶದಲ್ಲಿ! ಅವರಾದರೂ ಯಶಸ್ವಿಗಳೇ, ಎಂದರೆ ಒಳ್ಳೆಯ ಹೆಸರನ್ನು ಸಂಪಾದಿಸಿರುವವರೇ. ಇನ್ನು ಅರ್ಜುನನ ತಾಯಿಯಾದ ಕುಂತಿಯೂ ಕುಂತಿಭೋಜನ ಮಗಳು. ಹಾಗೆಲ್ಲ ಇರುವಾಗ ಅರ್ಜುನನನ್ನು ಬಂಧುವಾಗಿ ಬಯಸದವರಾರು?

ಅಷ್ಟೇ ಅಲ್ಲ. ರಣರಂಗದಲ್ಲಿ ಬಲಪ್ರಯೋಗ ಮಾಡಿ ಅರ್ಜುನನನ್ನು ಜಯಿಸುವವರನ್ನು ನಾ ಕಾಣೆ. ವಿರೂಪಾಕ್ಷನಾದ ಹರನನ್ನು ಬಿಟ್ಟರೆ ಮತ್ತಾರೂ ಆತನನ್ನು ಜಯಿಸಲಾರರು. ಯಾವುದೇ ಲೋಕಗಳಲ್ಲೂ ಇಂದ್ರ-ರುದ್ರರುಗಳಲ್ಲೊಬ್ಬರೂ ಜಯಿಸಲಾರರು, ಆತನನ್ನು. ಅರ್ಜುನನು ಈಗ ಬಳಸಿರುವ ರಥವೂ ತಕ್ಕುದಾದುದೇ. ಇನ್ನು ಆ ರಥಕ್ಕೆ ಕಟ್ಟಿರುವ ಕುದುರೆಗಳು ನನ್ನವೇ. ಅರ್ಜುನನ ಅಸ್ತ್ರಗಳು ಅದೆಷ್ಟು ವೇಗಸಂಪನ್ನ! ಹೀಗೆಲ್ಲಾ ಇರಲು ಆತನಿಗಾರು ಸಮರು?

ಆದುದರಿಂದ ಆತನ ಬಳಿಗೆ ಹೋಗಿ ಅತ್ಯಂತ-ಶಮನ-ಪ್ರದವಾದ ಮಾತುಗಳಿಂದ ಆತನನ್ನು ಪರಮ-ಸಂತೋಷದೊಂದಿಗೆ ಹಿಂತಿರುಗಿಸಿ ಕರೆತನ್ನಿ. ಇದುವೇ ಪರಮವೆಂದು ನನಗೆ ತೋರುತ್ತದೆ.

ಆದರೆ ಆತನೊಂದಿಗೆ ನೀವು ಕಾದಿರೋ ತಮ್ಮನ್ನೆಲ್ಲಾ ಜಯಿಸಿ ಅರ್ಜುನನು ಸ್ವಪುರಕ್ಕೆ ಹೋದನೆನ್ನಿ. ತಮ್ಮ ಕೀರ್ತಿಯೆಲ್ಲಾ ಹಾಳಾಗುವುದು. ಆದರೆ ಸಾಮ-ಮಾರ್ಗದಲ್ಲಿ ಹೋದರೆ ಪರಾಜಯವಿಲ್ಲ."

ಶ್ರೀಕೃಷ್ಣನ ಈ ಮಾತುಗಳನ್ನು ಯಾದವರು ಕೇಳಿದರು, ಮತ್ತು ಅಂತೆಯೇ ಮಾಡಿದರು. ಅರ್ಜುನನೂ ದ್ವಾರಕೆಗೆ ಹಿಂದಿರುಗಿದನು. ಸುಭದ್ರೆಯೊಂದಿಗೆ ಆತನ ವಿವಾಹವೂ ನೆರವೇರಿತು. ಒಂದು ಸಂವತ್ಸರಕ್ಕಿಂತಲೂ ಹೆಚ್ಚುಕಾಲ, ಎಂದರೆ ಒಂದು ವರ್ಷಕ್ಕೂ ಹೆಚ್ಚಿನ ಕಾಲ, ಅರ್ಜುನನು ಅಲ್ಲಿಯೇ ವಾಸ ಮಾಡಿದನು, ಮತ್ತು ಯಥೇಷ್ಟವಾಗಿ ವಿಹರಿಸಿದನು. ವೃಷ್ಣಿವಂಶದವರೆಲ್ಲಾ ಆತನನ್ನು ಆದರಿಸಿದರು.

ಅಲ್ಲಿಂದ ಪುಷ್ಕರತೀರ್ಥಕ್ಕೆ ನಡೆದನು. ಉಳಿದ ಸಮಯವನ್ನು ಅಲ್ಲಿಯೇ ಕಳೆದನು. ಹನ್ನೆರಡು ವರ್ಷಗಳು ಪೂರೈಸಲು ಖಾಂಡವಪ್ರಸ್ಥಕ್ಕೆ ಹಿಂದಿರುಗಿದನು.

ಬಂದವನೇ, ಧೌಮ್ಯರಿಗೂ ತಾಯಿಕುಂತಿಗೂ ನಮಸ್ಕರಿಸಿದನು. (ಪಾಂಡವರ ಪುರೋಹಿತನ ಹೆಸರು ಧೌಮ್ಯ). ಯುಧಿಷ್ಠಿರ ಹಾಗೂ ಭೀಮ - ಇವರುಗಳಿಗೂ ನಮಸ್ಕಾರ ಮಾಡಿದನು. ಯಮಳರು, ಎಂದರೆ ಅವಳಿ-ಜವಳಿಗಳಾದ ನಕುಲ-ಸಹದೇವರು ಬಂದು ಅರ್ಜುನನಿಗೆ ವಂದಿಸಿದರು. ಅವರನ್ನು ಆಲಿಂಗಿಸಿಕೊಂಡು ಸಂತೋಷಪಟ್ಟನು, ಅರ್ಜುನನು.

ಬ್ರಾಹ್ಮಣರಿಗೆ ಹಾರ್ದವಾಗಿ ವಂದಿಸಿ ದ್ರೌಪದಿಯನ್ನು ಹೋಗಿ ಕಂಡನು. ಅವಳಾದರೂ ಪ್ರಣಯಕೋಪದಿಂದ ನುಡಿದಳು:

"ಕುಂತೀಪುತ್ರನೇ, ಸಾತ್ವತವಂಶದವಳಾದ ಸುಭದ್ರೆಯಿದ್ದಾಳಲ್ಲಾ, ಅವಳೆಲ್ಲಿರುವಳೋ ಅಲ್ಲಿಗೇ ಹೋಗಬಹುದು. ಅದೆಷ್ಟೇ ಚೆನ್ನಾಗಿ ಕಟ್ಟಿದ್ದ ಹೊರೆಯೇ ಆಗಿರಬಹುದು, ಹೊಸದೆಂಬುದೊಂದು ಬಂದಮೇಲೆ ಪೂರ್ವಬಂಧವು, ಎಂದರೆ ಹಿಂದಿದ್ದ ಕಟ್ಟು, ಶಿಥಿಲವಾದಂತೆಯೇ ಸರಿ. ಅರ್ಥಾತ್ ಹಳೆಯ ಪ್ರೇಮಪಾಶವು ಸಡಿಲವಾಗಿದೆ."

ಹೀಗೆಲ್ಲ ಹೇಳಿಕೊಂಡು ಅಳುತ್ತಿದ್ದ ಕೃಷ್ಣೆಯನ್ನು ಅರ್ಜುನನು ಸಮಾಧಾನಪಡಿಸಿದನು, ಅನೇಕಬಾರಿ ಕ್ಷಮೆ ಯಾಚಿಸಿದನು.

ಕೆಂಪನೆಯ ರೇಷ್ಮೆಸೀರೆಯನ್ನು ಧರಿಸಿಬಂದಿದ್ದ ಸುಭದ್ರೆಗೆ ಗೋಪಾಲಕ-ಸ್ತ್ರೀಯರಂತೆ ವೇಷತೊಟ್ಟು ಬರುವಂತೆ ತ್ವರೆಪಡಿಸಿದನು. ವೀರಪತ್ನಿಯೂ ವರನಾರಿಯೂ ಆದ ಆ ಯಶಸ್ವಿನಿಯಾದ ಸುಭದ್ರೆಯಾದರೂ ಆ ವೇಷದಲ್ಲಿ ಮತ್ತೂ ಶೋಭಿಸಿದಳು. ಆ ಶ್ರೇಷ್ಠಭವನಕ್ಕೆ ಬಂದವಳೇ ರಾಜಮಾತೆ ಕುಂತಿಗೆ ನಮಸ್ಕರಿಸಿದಳು, ಆ ವಿಶಾಲನೇತ್ರೆಯಾದ ಸುಭದ್ರೆ. ಅವಳ ಕಣ್ಣುಗಳು ಒಂದಿಷ್ಟು ಕೆಂಪಗೂ ಆಗಿದ್ದವು. ಸರ್ವ ಅಂಗಗಳೂ ಚೆಂದವಾಗಿದ್ದ ಆಕೆಯನ್ನು ಕುಂತಿಯು ಆಲಿಂಗಿಸಿಕೊಂಡು ಶಿರಸ್ಸನ್ನು ಸಮಾಘ್ರಾಣಿಸಿದಳು, ಎಂದರೆ ತಲೆಯನ್ನು ಮೂಸಿದಳು. ನಿರುಪಮಳಾದ ಸೊಸೆಗೆ ಪರಮಪ್ರೀತಿಯಿಂದ ಅವಳು ಆಶೀರ್ವದಿಸಿದಳು.

ಸೂಚನೆ : 10/11/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.