Monday, November 11, 2024

ಯಕ್ಷ ಪ್ರಶ್ನೆ 113 (Yaksha prashne 113)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  112 ಮಿತ್ರರನ್ನು ಸಂಪಾದಿಸಿಕೊಳ್ಳುವವನಿಗೆ ಏನು ಸಿಗುತ್ತದೆ ?

ಉತ್ತರ - ಸುಖ

ಮಿತ್ರನನ್ನು ಸಂಪಾದಿಸಿಕೊಳ್ಳುವವರಿಗೆ ಏನು ಸಿಗುತ್ತದೆ? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಅದಕ್ಕೆ ಧರ್ಮಜನ ಉತ್ತರ 'ಸುಖ' ಎಂಬುದು. ಅಂದರೆ ಸುಖ ಬೇಕು ಎಂಬ ಇಚ್ಛೆ ಪ್ರತಿಯೊಬ್ಬನಿಗೂ ಇದ್ದೇ ಇರುತ್ತದೆ. ಕೇವಲ ಮನುಷ್ಯಮಾತ್ರನಿಗಲ್ಲ ಇದು. ಪ್ರಾಣಿ, ಪಶು, ಪಕ್ಷಿ ಸಸ್ಯ ಹೀಗೆ ಎಲ್ಲೆಲ್ಲೂ ಅತಿಶಯವಾಗಿ ಚೈತನ್ಯ ಇರುವ ಸಕಲ ಜೀವಿಗಳಲ್ಲೂ ಕಂಡುಬರುವ ವಿಷಯವಾಗಿದೆ. ಅದರಲ್ಲೂ ವಿಶೇಷವಾಗಿ ಮನುಷ್ಯನಿಗೆ ಸುಖ ಎಂಬುದು ವಿಶೇಷ. ಕೇವಲ ಬಾಹ್ಯವಾದ ಸುಖ ಮಾತ್ರವಲ್ಲ; ಆಂತರಂಗಿಕಸುಖವನ್ನು ಕೂಡ  ಮನುಷ್ಯಮಾತ್ರನೇ  ಪಡೆಯಬಲ್ಲ. ಇದು ಪ್ರಾಣಿಗಳಿಗೆ ಸಿಗುವುದೂ ಅಲ್ಲ. ಮನುಷ್ಯ ಈ ಆತ್ಯಂತಿಕಸುಖಕ್ಕಾಗಿ ಪ್ರಯತ್ನಿಸುವುದು ಅವನ ಆದ್ಯ ಕರ್ತವ್ಯವಾಗಿದೆ. ಮನುಷ್ಯನು ಸುಖಿಸಬೇಕಾದರೆ ಯಾವುದರಿಂದ ಸುಖ ಬರುತ್ತದೆಯೋ ಅದರ ಜೊತೆ ತನ್ನ ಸಂಗವನ್ನು - ಸಂಪರ್ಕವನ್ನು ಬೆಳೆಸಿಕೊಳ್ಳುವುದು ಅತ್ಯಂತ ಅನಿವಾರ್ಯವೂ ಹೌದು. ಆದರೆ ನಾವಿಂದು ಯಾವುದು ಸುಖಸಾಧನ? ಯಾವುದು ದುಃಖಸಾಧನ? ಎಂಬ ವಿವೇಕವಿಲ್ಲದೆ ದುಃಖಸಾಧನವನ್ನು ಸುಖಸಾಧನವನ್ನಾಗಿ ಭಾವಿಸಿ ಭ್ರಮಿಸಿ ಆತ್ಯಂತಿಕಸುಖದಿಂದ ವಂಚಿತರಾಗುತ್ತಿರುವುದನ್ನು ಕಾಣುತ್ತಿದ್ದೇವೆ.

ಯಾವುದು ನಿಜವಾಗಿಯೂ ಸುಖಸಾಧನ? ಯಾವುದು ನಿಜವಾಗಿಯೂ ದುಃಖಸಾಧನ? ಎಂಬ ವಿವೇಕವನ್ನು ಪಡೆದುಕೊಂಡರೆ ಮನಸ್ಸಿನ ಏಕಾಗ್ರತೆ ಸಂಪಾದನೆ ಸುಲಭವಾಗಿ ಆಗುತ್ತದೆ ಎಂಬುದಾಗಿ ಯೋಗಶಾಸ್ತ್ರವು ಸಾರುತ್ತದೆ. "ಮೈತ್ರೀ- ಕರುಣ- ಮುದಿತ- ಉಪೇಕ್ಷಣಾಂ ಸುಖ- ದುಃಖ- ಪುಣ್ಯ ಅಪುಣ್ಯ ವಿಷಯಾಣಾಂ ಭಾವನಾತಃ ಚಿತ್ತಪ್ರಸಾದನಮ್" ಅಂದರೆ ಯಾವುದು ನಮಗೆ ಸುಖವನ್ನು ಕೊಡುತ್ತದೆಯೋ ಅದರ ಜೊತೆ ಮೈತ್ರಿಯನ್ನು ಮಾಡುತ್ತಾ ಮಾಡುತ್ತಾ ಹೋದರೆ ಅದು ಮನಸ್ಸಿನ ಪ್ರಸನ್ನತೆಗೆ, ಸಮಾಧಾನತೆಗೆ ಅಥವಾ ನೆಮ್ಮದಿಗೆ ಕಾರಣವಾಗುತ್ತದೆ. ಮಾನಸಿಕ ನೆಮ್ಮದಿಯೇ ಜೀವನ.  ಅಂದರೆ ತ್ರಿಗುಣಗಳಲ್ಲಿ ಶ್ರೇಷ್ಠವಾದುದು ಸತ್ತ್ವಗುಣ. ಯಾವ ವಸ್ತುವಿನಲ್ಲಿ ಅಥವಾ ಯಾವ ವ್ಯಕ್ತಿಯಲ್ಲಿ ಸತ್ತ್ವಗುಣವು ಅಧಿಕವಾಗಿ ಇರುತ್ತದೆಯೋ ಅಂತಹ ವಸ್ತು ಅಥವಾ ಅಂತಹ ವ್ಯಕ್ತಿಯ ಸಂಗದಿಂದ ನಮ್ಮಲ್ಲೂ ಆ ಗುಣ ಬೆಳೆಯುತ್ತಾ ಹೋಗುತ್ತದೆ. ಆಧುನಿಕ ವೈದ್ಯವಿಜ್ಞಾನವನ್ನೇ ತೆಗೆದುಕೊಂಡು ವಿಚಾರ ಮಾಡುವುದಾದರೆ ನಮ್ಮ ಶರೀರಕ್ಕೆ ಯಾವ ಅಂಶ (ವಿಟಮಿನ್) ಬೇಕಾಗಿದೆಯೋ ಅದನ್ನು ಕೊಡುವ ಪದಾರ್ಥದ ಬಳಕೆಯನ್ನು ಹೆಚ್ಚೆಚ್ಚು ಮಾಡಬೇಕೆಂಬುದು ಎಷ್ಟು ಸಹಜವೂ ಅಂತೆಯೇ ಸತ್ತ್ವಗುಣದ ಜಾಗೃತಿ ಯಾವುದರಿಂದ ಆಗುತ್ತದೆಯೋ, ಅಂತಹ ವಸ್ತುವನ್ನು ಅಥವಾ ಪದಾರ್ಥವನ್ನು ನಾವು ಬಯಸುತ್ತಾ ಬಳಸುತ್ತಾ ಸಾಗಿದಾಗ ನಮ್ಮಲ್ಲಿ ಅದಕ್ಕೆ ಬೇಕಾದ ಸಿದ್ಧತೆ ಉಂಟಾಗುತ್ತದೆ. ಇದನ್ನೇ 'ಸುಖಸಾಧನ' ಎಂಬುದಾಗಿ ಕರೆಯಬಹುದು. ಇಂತಹ ಸಾಧನದ ಸಂಗ ಬೇಕು. ಅಂದರೆ ಯಾವ ವ್ಯಕ್ತಿವು ಇಂತಹ ಸುಖಸಾಧನವನ್ನ ಬಳಸಿಕೊಂಡು ತನ್ನ ಜೀವಿತದ ಸಾಧನೆಯನ್ನ ಮಾಡಿ ಆತ್ಯಂತಿಕಸುಖವನ್ನು ಪಡೆದಿರುತ್ತಾನೋ ಅಂತಹ ವ್ಯಕ್ತಿಯನ್ನು ಯೋಗಿ, ಜ್ಞಾನಿ, ಮಹಾತ್ಮ ಇತ್ಯಾದಿ ಶಬ್ದಗಳಿಂದ ಹೇಳುತ್ತೇವೆ. ಇದನ್ನೇ ಶಂಕರಭಗವತ್ಪಾದರು "ನೇಯಂ ಸಜ್ಜನಸಂಗೇ ಚಿತ್ತಂ" ಎಂದು ಹೇಳಿದ್ದಾರೆ. ಇಂತಹ ಮಹಾಜನರ ಸಂಗವನ್ನು ಮಾಡುವುದೇ ಸುಖ; ಅದೇ ಆತ್ಯಂತಿಕಸುಖ ಎಂಬುದಾಗಿ ನಾವು ತಿಳಿಯಬೇಕು.

ಸೂಚನೆ : 10
/11/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.