ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ವತ್ಸ ಜಾಗೃಹಿ ವಿಭಾತಂ ಆಗತಂ
ಭಗವಂತನನ್ನು ಬಗೆಬಗೆಯಾಗಿ ಭಾವಿಸುವ ಪರಿ ಭಾರತೀಯ-ಸಂಸ್ಕೃತಿಗೇ ಮೀಸಲು. ಮಾನುಷ-ರೂಪದಲ್ಲಿ ಭಗವಂತನು ಅವತರಿಸಿ ಬಂದಾಗ ಆತನನ್ನು ಶಿಶುವನ್ನಾಗಿ ನೋಡಬಹುದು, ಯುವಕನನ್ನಾಗಿ ಕಾಣಬಹುದು. ಹಿರಿಯನನ್ನಾಗಿ ಭಾವಿಸಬಹುದು. ತಮ್ಮ(ಲಕ್ಷ್ಮಣ)ನೊಂದಿಗಿನ ಅಣ್ಣನನ್ನಾಗಿ (ರಾಮನನ್ನು) ಕಾಣಬಹುದು; ಅಣ್ಣ(ಬಲರಾಮ)ನೊಂದಿಗಿನ ತಮ್ಮ(ಕೃಷ್ಣ)ನನ್ನಾಗಿ ನೋಡಬಹುದು.
ಪುತ್ರನಿಗೆ ತಂದೆಯಾಗಿ, ಮತ್ತೊಬ್ಬನಿಗೆ ಮಿತ್ರನಾಗಿ, ಇನ್ನೊಬ್ಬರಿಗೆ ಪ್ರಿಯನಾಗಿ – ಹೀಗೆಲ್ಲ ಚಿತ್ರಿತನಾಗಿರುವುದನ್ನು ಕಾಣಬಹುದು. ಗೀತೆಯ ಮಾತಿನಲ್ಲಿ ಹೇಳುವುದಾದರೆ, "ಪಿತೇವ ಪುತ್ರಸ್ಯ, ಸಖೇವ ಸಖ್ಯುಃ, ಪ್ರಿಯಃ ಪಿಯಾಯ" - ಎಂಬ ಮೂರು ಭಾವಗಳೂ ಆತನ ಬಗ್ಗೆ ಒಬ್ಬನಲ್ಲೇ ಶಕ್ಯ – ಅವಕ್ಕೆ ಸಲ್ಲುವ ಸನ್ನಿವೇಶಗಳಲ್ಲಿ.
ಮತ್ತು ಈ ನಾನಾ-ಭಾವಾನುಸಾರಿಯಾಗಿ ಸಲಿಗೆಯ ಬಗೆಗಳೂ ಬೇರೆಯಾಗುವುವು. ಆದರದಿಂದಲೂ, ಸಖ್ಯದಿಂದಲೂ, ಪ್ರೀತಿ-ವಾತ್ಸಲ್ಯಗಳಿಂದಲೂ ಭಗವಂತನನ್ನು ಹತ್ತಿರದಿಂದ ಕಾಣುವ, ಕಂಡು ಭಾವಿಸುವ, ಭಾವಿಸಿ ಆನಂದಿಸುವ - ಪರಿಗಳೆಲ್ಲವೂ ಉಂಟು.
ಕೃಷ್ಣನನ್ನು ವಾತ್ಸಲ್ಯದಿಂದ ಕಂಡ ಯಶೋದೆಯ ಚಿತ್ರಣವನ್ನು ಶ್ಲೋಕವೊಂದರಲ್ಲಿ ಲೀಲಾಶುಕನು ಮೂಡಿಸಿದ್ದಾನೆ. "ಏಳು ಕಂದ, ಬೆಳಗಾಯಿತು" ಎನ್ನುತ್ತಿದ್ದಾಳೆ, ಯಶೋದೆ. ಕೃಷ್ಣನಿಗೆ ನೂರಾಯುಸ್ಸನ್ನು ಆಶಂಸಿಸುತ್ತಿದ್ದಾಳೆ. "ನೂರು ವರ್ಷ ಬಾಳು" ಎಂದು ನಾವೆಲ್ಲ ಹೇಳುವುದನ್ನು "ನೂರು ಶರತ್ಕಾಲ ಜೀವಿಸು" ಎಂಬುದಾಗಿ ಹೇಳುತ್ತಿದ್ದಾಳೆ.
ಏಕೆ ಶರತ್ಕಾಲ? ಮಳೆಯೇ ಮುಖ್ಯವೆನಿಸುವ ನಮ್ಮ ದೇಶದಲ್ಲಿ ಸಂವತ್ಸರವನ್ನು "ವರ್ಷ"ಗಳಿಂದ, ಎಂದರೆ ಮಳೆಗಳಿಂದ, ನಿರ್ದೇಶಿಸುವ ಕ್ರಮ ಸಹಜವಾದದ್ದೇ ಸರಿ. ಆದರೂ ಸಹ, ನಮ್ಮ ದೇಶದಲ್ಲಿ ಶರದೃತುವಿಗೆ ಒಂದು ಬಹಳ ವಿಶೇಷವಾದ ಸ್ಥಾನವೇ ಇದೆ. ಏನದು?
ಶರತ್ಕಾಲವೆಂದರೆ ಮಳೆಗಾಲ ಮುಗಿದ ಬಳಿಕ ಬರುವ ಕಾಲ. ಹಾಗಾಗಿ ಆ(ಗಾ)ಗ ಮಳೆ ಸುರಿದುಬಿಡುವ ಭೀತಿಯಿಲ್ಲ; ಛಳಿಗಾಲದ ಸುಳಿವು ಸಹ ಇಲ್ಲ; ಬೇಸಿಗೆಯಂತೂ ಬಲುದೂರವೇ. ಹೀಗಾಗಿ ಶರತ್ಕಾಲವು ಬಹಳ ಹಿತವೆನಿಸುವ ಕಾಲ.
ಶರತ್ಕಾಲದ ಚಂದ್ರನನ್ನೇ ಶರಚ್ಚಂದ್ರ ಎನ್ನುವುದು. (ಶರಶ್ಚಂದ್ರ ಎಂದು ಬರೆಯುವುದೂ ಹೇಳುವುದೂ ಸರಿಯಲ್ಲ. 'ಹರಿಶ್ಚಂದ್ರ'-ಪದದ ಹಾಗೆ ಇದೆಂದು ಭ್ರಮಿಸಿದವರು ಇದಕ್ಕೆ ಕಾರಣವಾಗಿರಬಹುದು.) ಮಳೆಗಾಲವು ಕಳೆದಿರುವ ಕಾರಣ, ಆಕಾಶದಲ್ಲಿ ಮೋಡ ಮೂಡುವ ಪರಿಸ್ಥಿತಿಯಿಲ್ಲ. ಹೀಗಾಗಿ ನಭವು ನಿರಭ್ರವಾಗಿರುತ್ತದೆ. ಎಂದೇ ಚಂದ್ರನು ಆಗ ನಿರಾತಂಕವಾಗಿ ಬೆಳಗುವನು. ಎಂದರೆ, ಯಾವಾಗ ಮೋಡ ಬಂದು ತನ್ನನ್ನು ಪೂರ್ಣವಾಗಿಯೋ ಆಂಶಿಕವಾಗಿಯೋ ಸ್ವಲ್ಪ-ಕಾಲವೋ ದೀರ್ಘ-ಕಾಲವೋ ಮುಚ್ಚಿಬಿಡಬಹುದೆಂಬ ಆಶಂಕೆಯಿಲ್ಲ, ಆತಂಕವಿಲ್ಲ, ಚಂದ್ರನಿಗಾಗ!
ಹಾಗೆಯೇ ಶರತ್ಕಾಲದ ಕಮಲವೂ ಪ್ರಸಿದ್ಧವೇ. ಕಮಲಗಳ ಶತ್ರುವೆಂದರೆ ಹಿಮವೇ ಸರಿ: ಕಮಲಗಳಿಗೆ ಹಿಮಗಾಲವೆಂದರೆ ಹೊಡೆತವೇ. ಕಮಲಗಳು ಅರಳಿ ನಲಿಯಲು ಬೇಕಾದದ್ದು, ಸೂರ್ಯನ ತಾಪ. ಆತಪವೆಂದರೂ ಬಿಸಿಲೇ. ಸೂರ್ಯ ಮರೆಯಾದರೆ ಕಮಲವು ಪೆಚ್ಚಾಗುತ್ತದೆ. ಎಂದೇ ಸೂರ್ಯನನ್ನೂ ಪದ್ಮಿನಿಯನ್ನೂ ಪ್ರೇಮಿಗಳೆಂಬಂತೆ ಚಿತ್ರಿಸುವುದೂ ಉಂಟು.
ಅಂತೂ ಶರದೃತುವಿನ ಕಮಲವೆಂದರೆ ಸೊಗಸೇ. ಅದನ್ನೇ ಶಾರದಾಂಭೋಜವೆನ್ನುವರು. ಶರತ್ ಎಂಬುದರಿಂದಲೇ ಶಾರದವೆಂಬುದು ಬಂದಿರುವುದು. ದೇವಿ ಶಾರದೆಯನ್ನು ಶಾರದಾಂಭೋಜ-ವದನಾ ಎಂದೇ ಹೇಳುವರಲ್ಲವೆ?
ಶರನ್ನವರಾತ್ರದ ಸಮಯದಲ್ಲಿ ಇತ್ತ ಪುಷ್ಪ-ಸಮೃದ್ಧಿಯೂ ಇರುವುದು; ಅತ್ತ ದೇವೀ-ಪೂಜೆಗೂ ಪ್ರಶಸ್ತವಾದ ಕಾಲವದು. ಅಂತೂ ಭೌತಿಕವಾಗಿಯೂ ದೈವಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಪ್ರಶಸ್ತವಾದ ಸಮಯವೇ ಶರತ್ಕಾಲ.
ಅಂತಹ ನೂರು ಶರದೃತುಗಳನ್ನು ನೀನು ಕಾಣುವಂತಾಗಲಿ - ಎಂದು ಹಾರ್ದವಾಗಿ ಹಾರೈಸುತ್ತಿದ್ದಾಳೆ, ಯಶೋದೆ. "ಶತಂ ಶತಂ" ಎಂದು ಎರಡೆರಡು ಬಾರಿ ಹೇಳುತ್ತಿದ್ದಾಳೆ. "ಶತಾಯುರ್ ವೈ ಪುರುಷಃ" – ಅಲ್ಲವೇ? ಪುಟ್ಟಮಗುವಿಗೆ ಪೂರ್ಣಾಯುಸ್ಸನ್ನು ಬಯಸುತ್ತಿದ್ದಾಳೆ.
ಮಲಗಿರುವ ಮಗುವಿನ ಸೌಂದರ್ಯವೇ ಸೌಂದರ್ಯ. ಅದರಲ್ಲೂ, ಮಗುವಿನ ಹೆತ್ತತಾಯಿಗಂತೂ ಅದನ್ನು ಅದೆಷ್ಟು ದಿಟ್ಟಿಸಿ ನೋಡಿದರೂ ತೃಪ್ತಿಯೇ ಆಗದು. ನೆಮ್ಮದಿಯಾಗಿ ಮಲಗಿರುವ ಮಗು, ನೆಮ್ಮದಿಯಾಗಿ ನಿದ್ರೆ ಮುಗಿಸಿ ಎಚ್ಚರಗೊಳ್ಳುತ್ತಿರುವ ಮಗು – ಇವೆರಡನ್ನೂ ಕಣ್ತುಂಬ ಕಂಡು ತೃಪ್ತಿ ಪಡುವ ಭಾಗ್ಯ ಯಾವ ತಾಯಿಗಿಲ್ಲ?
ಅಯ್ಯೋ ನಮ್ಮ ದರಿದ್ರ ನಾಗರಿಕತೆಯೇ! ಇಂದಿನ ಕೃತಕ ಜೀವನದಲ್ಲಿ, ಆಫೀಸಿಗೆ ಓಡುವ ರಭಸದಲ್ಲಿ, ಮಕ್ಕಳನ್ನು ಅರ್ಧ-ನಿದ್ರೆಯಲ್ಲೇ ಎಬ್ಬಿಸಿ, ಕ್ರೀಚುಗಳಲ್ಲಿ ದಬ್ಬಿ ಓಡುವ ವಿಕಟ-ಪರಿಸ್ಥಿತಿಯ ಇಂದಿನ ತಾಯಂದಿರು ಅದೆಂತು ಈ ದೈವ-ದತ್ತ-ಸುಖಗಳನ್ನಾದರೂ ಪಟ್ಟಾರು?
ತಾಯಿ ಯಶೋದೆಯು ಕೃಷ್ಣನ ಮೊಗವನ್ನೇ ಈಕ್ಷಿಸುತ್ತಿರುವ ಈ ಬೆಳಗಿನ ಸಂನಿವೇಶದ ಚಿತ್ರಣವನ್ನು ಕವಿ ಲೀಲಾಶುಕ ಕಟ್ಟಿಕೊಟ್ಟಿದ್ದಾನೆ. ಅಮ್ಮನಿಂದ ಹೀಗೆ ದಿಟ್ಟಿಸಿ ನೋಡಲ್ಪಡುತ್ತಿರುವ ಕೃಷ್ಣನನ್ನು ಭಜಿಸುತ್ತೇವೆ - ಎನ್ನುತ್ತಾನೆ. ತಂ-ತಂ-ತಂ-ತಂಗಳ ಪ್ರಾಸ ಕರ್ಣ-ರಂಜಕವಲ್ಲವೇ?
ವತ್ಸ! ಜಾಗೃಹಿ ವಿಭಾತಂ ಆಗತಂ
ಜೀವ ಕೃಷ್ಣ! ಶರದಾಂ ಶತಂ ಶತಂ |
ಇತ್ಯುದೀರ್ಯ ಸುಚಿರಂ ಯಶೋದಯಾ
ದೃಶ್ಯಮಾನ-ವದನಂ ಭಜಾಮಹೇ ||
ಅರ್ಜುನ-ರಥಾಭರಣ
ಶ್ರೀಕೃಷ್ಣನು ಆದ್ಯ-ಮಹಸ್ಸು. ಮಹಸ್ಸೆಂದರೆ ತೇಜಸ್ಸು. ಜಗನ್ಮೂಲವಾದ ಜ್ಯೋತಿಸ್ಸನ್ನೇ ಆದ್ಯ-ಮಹಸ್ಸೆನ್ನುವುದು. ಅಂತಹ ತೇಜೋರಾಶಿಯೇ ಅವತರಿಸಿದೆ, ಶ್ರೀಕೃಷ್ಣನಾಗಿ. ಆ ಕೃಷ್ಣನು ನಮ್ಮನ್ನು ಕಾಪಾಡಲಿ.
ಹೀಗೆ ವಿಶ್ವ-ಮೂಲ-ಜ್ಯೋತಿಸ್ತತ್ತ್ವವೇ ಆದರೂ ಅದೆಷ್ಟು ಸರಳವಾಗಿದ್ದ, ನಮ್ಮ ಕೃಷ್ಣ! ಅರ್ಜುನನ ರಥಕ್ಕೆ ಆತನೇ ಭೂಷಣ. ಇದನ್ನೇ "ಧನಂಜಯ-ರಥಾಭರಣ"ನೆಂದು ಕವಿ ಕರೆದಿರುವುದು.
ಹೇಗಿದ್ದ ಆತ? ಅಂಬುದದಂತೆ ನೀಲ, ಎಂದರೆ ಮೇಘ-ಶ್ಯಾಮನಾಗಿ ಇದ್ದವನಾತ. ಪಾಂಡವರ ಏಳ್ಗೆಗಾಗಿ ಶ್ರಮಿಸಿದ ಆತನ ಮೈಮೇಲೆ ಶ್ರಮಾಂಬುವಿನ ಕಣಗಳು ಆವಿರ್ಭವಿಸಿವೆ. ಶ್ರಮಾಂಬುವೆಂದರೆ ಆಯಾಸದ, ಎಂದರೆ ಬೆವರಿನ, ನೀರು. ಅದರ ಹನಿಗಳು ಮೈದೋರಿವೆ, ಆತನ ಶರೀರದ ಮೇಲೆ.
ಆತನ ಪಾಣಿ-ಕಮಲ, ಎಂದರೆ ಕರ-ಪದ್ಮವು, ಆ-ತಾಮ್ರವಾಗಿದೆ. ತಾಮ್ರವೆಂದರೆ ತಾಮ್ರದಂತಿರುವುದು, ಅರ್ಥಾತ್ ತಾಮ್ರ-ವರ್ಣವನ್ನು ಹೊಂದಿರುವುದು. ತಾಮ್ರವು ಕೆಂಪಲ್ಲವೇ? ಅಂತೂ, ಕಮಲದ ಕೆಂಪೆಂತೋ ಅಂತೆಯೇ ರಕ್ತ-ವರ್ಣದಿಂದ ಕೂಡಿದೆ ಕೃಷ್ಣನ ಕರ-ಕಮಲ.
ಆ ಕೈಯಲ್ಲಿ ಆತನು ಹಿಡಿರಿದುವುದು ಚಾವಟಿಯನ್ನು. ಅದನ್ನು ಆತನು ಬೀಸಿ ಬಾರಿಸುವ ಪ್ರಸಂಗವೇ ಬರದು, ಆ ಚಾವಟಿಗೆ! ವಿಧೇಯವಾದ ಕುದುರೆಗಳಿದ್ದಲ್ಲಿ ಚಾಟಿಯೊಂದು ಬರಿಯ ಭೂಷಣವಷ್ಟೆ. ಎಂದೇ ಅದನ್ನು ಪ್ರಣಯ-ಪ್ರತೋದವೆಂದಿರುವುದು: ಎಂದರೆ "ಪ್ರೀತಿಯ ಚಾವಟಿ"ಯಷ್ಟೇ ಅದು!
ಆತನು ರಥವನ್ನೋಡಿಸುವಾಗ ಆತನ ಮೂರು ಆಭರಣಗಳೂ ಚಲಿಸುತ್ತಿವೆ, ಓಲಾಡುತ್ತಿವೆ: ಆತನ ಹಾರ, ಆತನ ಮಣಿ-ಕುಂಡಲ, ಹಾಗೂ ಆತನ ಹೇಮ-ಸೂತ್ರ (ಎಂದರೆ ಚಿನ್ನದ ಸರ) - ಇವಿಷ್ಟೂ ಆಲೋಲವಾಗಿವೆ.
ಹೀಗಿರುವ ಅರ್ಜುನ-ರಥ-ಭೂಷಣನಾದ ಆದ್ಯ-ತೇಜಸ್ವಿ ನಮ್ಮನ್ನು ಪೊರೆಯಲಿ - ಎನ್ನುತ್ತಾನೆ, ಲೀಲಾಶುಕ, ಈ ಶ್ಲೋಕದಲ್ಲಿ. ಶ್ಲೋಕದ ಆಕಾರ ಚೆನ್ನಾಗಿದೆ: ಅದರ ನಾಲ್ಕೂ ಪಾದಗಳೂ "ಆ"ಕಾರದಿಂದಲೇ ಆರಂಭಿಸುತ್ತವೆ; ಮ್ರ-ಪ್ರ-ಪ್ರ-ಶ್ರಗಳು, ಲ-ಲ-ಲ-ಲಗಳು ಮುಂತಾದ ಅನುಪ್ರಾಸಗಳಿದ್ದೇಇವೆ.
ಆತಾಮ್ರ-ಪಾಣಿಕಮಲ-ಪ್ರಣಯ-ಪ್ರತೋದಂ
ಆಲೋಲ-ಹಾರ-ಮಣಿಕುಂಡಲ-ಹೇಮಸೂತ್ರಮ್ |
ಆವಿಃಶ್ರಮಾಂಬು-ಕಣಮ್ ಅಂಬುದ-ನೀಲಮ್ ಅವ್ಯಾದ್
ಆದ್ಯಂ ಧನಂಜಯ-ರಥಾಭರಣಂ ಮಹೋ ನಃ! ||