Tuesday, September 24, 2024

ಒಳ್ಳೆಯ ಕೆಲಸಕ್ಕೆ ಬರುವ ವಿಘ್ನಗಳು (Olleya Kelasakke Baruva Vighnagalu)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)

ದಶರಥನು ರಾಮನಿಗೆ ಪಟ್ಟಾಭಿಷೇಕ ಮಾಡಿಬಿಡಬೇಕೆಂದು ಆಸೆಪಟ್ಟನಷ್ಟೆ? ಇದಕ್ಕೆ ಪುರಮುಖ್ಯರೂ, ಗ್ರಾಮಪ್ರಧಾನರೂ, ಬೇರೆ ರಾಜರುಗಳೂ ಇತ್ಯಾದಿಯಾಗಿ ಎಲ್ಲರ ಹಾರ್ದವಾದ ಸಮ್ಮತಿಯೂ ದೊರೆಯಿತು. ಅವರೆಲ್ಲರಿಗೂ ರಾಮನ ವಿಷಯದಲ್ಲಿ ಬಹಳವೇ ಪ್ರೀತಿ-ಗೌರವ-ಅಭಿಮಾನಗಳಿದ್ದವು. ತಾನು ತೆಗೆದುಕೊಂಡಿರುವ ನಿರ್ಧಾರಕ್ಕೆ ಇವರೆಲ್ಲರ ಅನುಮೊದನ ದೊರೆತಿದ್ದರಿಂದ ದಶರಥನಿಗೆ ಬಹಳವೇ ಸಂತೋಷವಾಯಿತು. ಯೌವರಾಜ್ಯಾಭಿಷೇಕ ಮಾಡಿ ಮುಗಿಸಿಬಿಡಬೇಕೆಂದು ಅವನು ನಿರ್ಧರಿಸಿದನು. ರಾಜಗುರುಗಳಾದ ವಸಿಷ್ಠರ ಅನುಮತಿ ಪಡೆದು ಅದಕ್ಕೆ ಸಿದ್ಧತೆಯನ್ನೂ ಮಾಡಿದನು. ಒಮ್ಮೆ ರಾಮನನ್ನು ಸಭೆಗೆ ಕರೆಯಿಸಿ ಪಟ್ಟಾಭಿಷೇಕದ ನಿರ್ಧಾರ ತಿಳಿಸಿದನು. ಮತ್ತೆ ಇನ್ನೊಮ್ಮೆ ರಾಮನನ್ನು ಕರೆತರಲು ಸುಮಂತ್ರನಿಗೆ ಹೇಳಿದಾಗ, ರಾಮನಿಗೆ ಸ್ವಲ್ಪ ಶಂಕಾತಂಕಗಳಾದವು. ಆಗಷ್ಟೇ ತಂದೆಯನ್ನು ಭೇಟಿಯಾಗ ರಾಜ್ಯಾಭಿಷೇಕದ ಸಮಾಚಾರವನ್ನವನು ತಿಳಿದಿದ್ದಾನೆ. ಮತ್ತೆ ಭವನಕ್ಕೆ ಬರಲು ತಂದೆ ಏಕೆ ಹೇಳಿಕಳಿಸಿದ್ದು? - ಎಂದು ಮನಸ್ಸಿನಲ್ಲಿ ಪ್ರಶ್ನೆಯೆದ್ದಿತು. ಲಗುಬಗೆಯಿಂದ ಅಲ್ಲಿಗೆ ಹೋದಾಗ, ದಶರಥನು ಮಾರನೆಯ ದಿನವೇ ಅಭಿಷೇಕವೆಂದು ತಿಳಿಸುತ್ತಾನೆ. ತನ್ನ ಆತಂಕವನ್ನು ಮಗನಲ್ಲಿ ಹೇಳಿಕೊಳ್ಳುತ್ತಾ, ಹೀಗೆನ್ನುತ್ತಾನೆ: ಹಲವು ದಿನಗಳಿಂದ ನನಗೆ ಅಪಶಕುನಗಳು ಕಾಣುತ್ತಿವೆ. ಈ ರೀತಿಯ ಶಕುನಗಳಾಗುತ್ತಿದ್ದರೆ ಮೃತ್ಯುವೋ ಮತ್ತಾವುದಾದರೋ ಘೋರಪ್ರಸಂಗವೋ ಆಗಬಹುದು. ಮನುಷ್ಯರ ಮನಸ್ಸು ಚಂಚಲ. ಆದ್ದರಿಂದ ನಾಳೆ ಒಳ್ಳೆಯ ಮುಹೂರ್ತವಿರುವುದರಿಂದ ನಾಳೆಯೇ ನಿನ್ನ ಅಭಿಷೇಕವಾಗಿಬಿಡಲಿ.

ಹೀಗೆ ತ್ವರೆಯಿಂದ ದಶರಥನು ನಿರ್ಧರಿಸಿದರೂ, ವಿಧಿಯಲ್ಲಿ ಆಗಬೇಕಾದದ್ದು ಬೇರೇನೋ ಇತ್ತು. ಆ ಯೌವರಾಜ್ಯಾಭಿಷೇಕಕ್ಕೆ ಅಡ್ಡಿಯಾಗೇ ಆಯಿತು. ಇರಲಿ, ಈ ಅಡ್ಡಿಯಾದದ್ದರಿಂದಲೇ ರಾಮಾಯಣವೆಲ್ಲ ನಡೆಯಿತೆಂದು ನಾವು ಭಾವಿಸಬಹುದು. ಈ ಸಂದರ್ಭದಲ್ಲಿ ಮನಃಪೂರ್ವಕವಾಗಿ ಆದ ಪ್ರಯತ್ನಗಳ ಬಗ್ಗೆ ನಾವು ಗಮನಹರಿಸೋಣ. ಸಂಕೇತಗಳು ಸಿಕ್ಕಾಗಲೂ ಕೆಲವೊಮ್ಮೆ ಅದರ ಬಗ್ಗೆ ನಾವು ಏನೂ ಕ್ರಮ ತೆಗೆದುಕೊಳ್ಳದೇ ಸುಮ್ಮನಾಗುವುದುಂಟು. ನಿಷ್ಣಾತರಾದ ಜ್ಯೋತಿಷಿಗಳು ಯಾವುದೋ ಗಂಡಾತರವು ಇಷ್ಟರಲ್ಲೇ ಘಟಿಸುವುದೆಂದು ಹೇಳಿದಾಗ, ನಮ್ಮ ಮುಂದೆ ಎರಡು ವಿಕಲ್ಪಗಳಿರುತ್ತವೆ. ಒಂದೇ, ವಿಧಿಯೇ ಬಲಿಷ್ಠವೆಂದು ಕೈಚೆಲ್ಲಿ ಕೂರುವುದು. ಇಲ್ಲವೆಂದರೆ, ನಮ್ಮ ಎಚ್ಚರದಲ್ಲಿ ನಾವಿರುವುದು ಹಾಗೂ ಬರಬಹುದಾದ ಗಂಡಾಂತರಕ್ಕೆ ಏನಾದರೂ ಪರಿಹಾರವಿದೆಯೇ ಎಂದು ನೋಡಿ ಅದನ್ನು ಮಾಡುವುದು. ಎಷ್ಟೋ ಬಾರಿ, ಅದರಿಂದಾಗಿ ದೊಡ್ಡ ಅನಾಹುತವಾಗುವ ಜಾಗದಲ್ಲಿ ಚಿಕ್ಕದೇನೋ ಆಗಿ ಪ್ರಾಣ ಉಳಿಯುವುದುಂಟು. ಇವೆಲ್ಲ ಮಾಡಿಯೂ ತಪ್ಪಿಸಿಕೊಳ್ಳಲಾಗದಿದ್ದಲ್ಲಿ, ನಮ್ಮ ಪ್ರಯತ್ನ ನಾವು ಮಾಡಿದ ಬಗ್ಗೆಯಾದರೂ ಒಂದು ಸಮಾಧಾನವಿರುತ್ತದೆ.

ಈ ಎರಡನೆಯ ಮಾರ್ಗವನ್ನೇ ದಶರಥನು ಆಯ್ಕೆ ಮಾಡಿಕೊಂಡಿರುವುದು. ಘೋರವಾದದ್ದೇನೋ ಆಗಬಹುದೆಂಬ ಮುನ್ಸೂಚನೆ ಅವನಿಗಿದೆ. ತಾನು ಮಾಡಹೊರಟಿರುವ ಧರ್ಮ್ಯವಾದ ಕೆಲಸಕ್ಕೆ - ಅರ್ಥಾತ್, ಧರ್ಮಿಷ್ಠನಾದ ರಾಮನಿಗೆ ಪಟ್ಟಾಭಿಷೇಕ ಮಾಡುವುದಕ್ಕೆ - ತನ್ನಿಂದಲೇ ಏನಾದರೂ ಘಾತವಾಗಿಬಿಟ್ಟೀತೆಂಬ ಆತಂಕ ಅವನಿಗೆ! ಶ್ರೀರಂಗಮಹಾಗುರುಗಳು ಹೇಳಿದ್ದಂತೆ "ಧರ್ಮವೊಂದು ತಾನೇ ಬೆನ್ನು ಹತ್ತಿ ಬರುತ್ತೆ? ಬುದ್ಧಿಯಾದರೆ ಕ್ಷಣಚಿತ್ತ, ಕ್ಷಣಪಿತ್ತ. ಆದ್ದರಿಂದ ನಂಬಬೇಕಾಗಿದ್ದು ಧರ್ಮವೊಂದನ್ನು ಮಾತ್ರ." ತಾನು ಧರ್ಮದ ಹದ್ದುಬಸ್ತಿನಲ್ಲಿರುವವನೇ ಎಂದು ತಿಳಿದಿದ್ದರೂ, ಮನಸ್ಸಿನ ಚಾಂಚಲ್ಯ ಎಷ್ಟಿರಬಹುದು ಎನ್ನುವುದರ ಸುಳಿವು ಅವನಿಗಿದೆ. ಶ್ರೇಯಾಂಸಿ ಬಹುವಿಘ್ನಾನಿ (ಎಂದರೆ ಒಳ್ಳೆಯ ಕಾರ್ಯಗಳಿಗೆ ವಿಘ್ನಗಳು ಹಲವು) ಎನ್ನುವಂತೆ.

ಸೂಚನೆ: 24/9/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.