Sunday, September 29, 2024

ವ್ಯಾಸ ವೀಕ್ಷಿತ 105 ಚಿತ್ರಾಂಗದೆಯನ್ನು ಬೀಳ್ಕೊಟ್ಟು ಪಶ್ಚಿಮದ ಪ್ರಭಾಸಕ್ಕೆ (Vyaasa Vikshita 105 Citrangadeyannu Bilkottu Pascimada Prabhasakke)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಬಭ್ರುವಾಹನನನ್ನು ರಾಜನಿಗೆ ಒಪ್ಪಿಸಿ ಹೊರಟು ನಿಂತಿದ್ದ ಅರ್ಜುನನು ಚಿತ್ರಾಂಗದೆಗೆ ಹೇಳಿದನು.


 "ಇದೋ ನಿನಗೆ ಕಲ್ಯಾಣವಾಗಲಿ. ಬಭ್ರುವಾಹನನ ಪಾಲನ-ಪೋಷಣಗಳನ್ನು ಮಾಡು. ಮುಂದೊಮ್ಮೆ ನನ್ನ ವಾಸ-ಸ್ಥಾನವಾದ ಇಂದ್ರಪ್ರಸ್ಥಕ್ಕೆ ಬಂದು ಸಂತೋಷದಿಂದ ನೀನಿರಬಹುದು.


ಅಲ್ಲಿಗೆ ಬಂದು ನೀನು ಕುಂತಿ, ಯುಧಿಷ್ಠಿರ, ಭೀಮ, ನನ್ನ ಚಿಕ್ಕ ಭ್ರಾತೃಗಳಿಬ್ಬರು, ಹಾಗೂ ಇತರ ಬಂಧುಗಳು - ಎಲ್ಲರನ್ನೂ ಕಾಣಬಹುದು. ಬಂಧುಗಳಿಂದ ಕೂಡಿದ ಇತರರನ್ನೆಲ್ಲರನ್ನೂ ಕಂಡು ನೀನು ಸಂತೋಷಪಡುವೆ, ಪ್ರಶಂಸನೀಯಳೇ!


ಧರ್ಮದಲ್ಲೇ ನೆಲೆಗೊಂಡವನೂ, ಸತ್ಯ-ಧೃತಿಯೂ, ಎಂದರೆ ಸತ್ಯ-ನಿಷ್ಠೆಯುಳ್ಳವನೂ ಆದ ಕುಂತೀಪುತ್ರನಾದ ಯುಧಿಷ್ಠಿರನು ಮುಂದೊಮ್ಮೆ ಭೂಮಿಯೆಲ್ಲವನ್ನೂ ಗೆದ್ದವನಾಗಿ ರಾಜಸೂಯವನ್ನು ಮಾಡುವನು. ಭೂಮಿಯ ಮೇಲೆ ರಾಜರೆನಿಸಿಕೊಳ್ಳತಕ್ಕ ದೊರೆಗಳೆಲ್ಲರೂ ಅಲ್ಲಿಗೆ ಬರುವರು – ಬರುವಾಗ ಅನೇಕ-ರತ್ನಗಳನ್ನೂ ತರುವರು; ನಿನ್ನ ತಂದೆಯೂ ಬರುವನು. ತಂದೆ ಚಿತ್ರವಾಹನನ ಸೇವೆಯೆಂದು ಆಗ ಆತನೊಂದಿಗೆ ನೀನೂ ಸಹ ರಾಜಸೂಯಕ್ಕೆ ಬರತಕ್ಕವಳೇ.


ಈ ಮಧ್ಯಕಾಲದಲ್ಲಿ ಮಗನನ್ನು ಪಾಲಿಸು, ಬೆಳಸು, ದುಃಖಿಸಬೇಡ. ಬಭ್ರುವಾಹನನೆಂದರೆ ಭೂಮಿಯ ಮೇಲೆ ಓಡಾಡುವ ನನ್ನ ಪ್ರಾಣವೇ ಸರಿ. ಆದುದರಿಂದ ವಂಶವರ್ಧಕನಾದ ಪುರುಷನೆನಿಸುವ ಈ ಮಗನನ್ನು ಚೆನ್ನಾಗಿ ಪೋಷಿಸು.


ಧರ್ಮ-ದೃಷ್ಟಿಯಿಂದ ಹೇಳುವುದಾದರೆ ಈತನು ಚಿತ್ರವಾಹನನ ಪುತ್ರನೇ ಸರಿ. ಇನ್ನು ಶರೀರ-ದೃಷ್ಟಿಯಿಂದ ಹೇಳುವುದಾದರೆ ಆತನು ಪುರುವಂಶ-ಪ್ರದೀಪನು, ಪಾಂಡವರಿಗೆ ಪ್ರಿಯನಾದವನು. ಆದುದರಿಂದ ಸದಾ ಚೆನ್ನಾಗಿ ಪಾಲಿಸು. ಅನಿಂದಿತೇ (ಎಂದರೆ ಶುದ್ಧಾತ್ಮಳೇ) ವಿಯೋಗದ ನಿಮಿತ್ತವಾಗಿ ದುಃಖಿಸಬೇಡ."


ಹೀಗೆಂಬುದಾಗಿ ಚಿತ್ರಾಂಗದೆಗೆ ಹೇಳಿ, ಮುಂದಕ್ಕೆ ಗೋಕರ್ಣದತ್ತ ಸಾಗಿದನು. ಆ ಗೋಕರ್ಣವಾದರೂ ಪಶುಪತಿಯ ಸ್ಥಾನ. ದರ್ಶನ-ಮಾತ್ರದಿಂದಲೇ ಮುಕ್ತಿ-ಪ್ರದವಾದದ್ದು. ಪಾಪಿಯಾದ ಮನುಷ್ಯನಾದವನೂ ಸಹ ಅಲ್ಲಿಗೆ ಹೋದಲ್ಲಿ ಅಭಯ-ಪ್ರದವಾದ ಸ್ಥಾನವನ್ನು ಹೊಂದುವನು.


ಅಮಿತ-ಪರಾಕ್ರಮಿಯಾದ ಅರ್ಜುನನು ಅಪರಾಂತದಲ್ಲಿಯ ತೀರ್ಥಗಳನ್ನು, ಎಂದರೆ ಪಶ್ಚಿಮ-ಸಮುದ್ರದ ದಡದಲ್ಲಿರುವ ತೀರ್ಥಗಳನ್ನು, ಎಲ್ಲವನ್ನೂ ಅನುಕ್ರಮವಾಗಿ ಸೇವಿಸಿದನು. ಪಶ್ಚಿಮ-ಸಮುದ್ರ-ತಟದಲ್ಲಿ ಯಾವ ಯಾವ ತೀರ್ಥಗಳುಂಟೋ, ದೇವಾಲಯಗಳುಂಟೋ ಅವೆಲ್ಲಕ್ಕೂ ಹೋದನು.


ಕೊನೆಗೆ ಪ್ರಭಾಸ-ತೀರ್ಥಕ್ಕೆ ಬಂದನು. ಎಲ್ಲೂ ಸೋಲನ್ನು ಕಾಣದ ಅರ್ಜುನನು, ಸುಪುಣ್ಯವೂ ರಮಣೀಯವೂ ಆದ ಪ್ರಭಾಸ-ಕ್ಷೇತ್ರಕ್ಕೆ ಬಂದಿರುವನೆಂಬ ಸುದ್ದಿ ಶ್ರೀಕೃಷ್ಣನ ಕಿವಿಗೆ ಮುಟ್ಟಿತು. ತನ್ನ ಮಿತ್ರನಾದ ಕೌಂತೇಯನನ್ನು ಮಾಧವನು ಎದುರ್ಗೊಂಡನು. ಪ್ರಭಾಸದಲ್ಲಿ ಕೃಷ್ಣಾರ್ಜುನರು ಪರಸ್ಪರ-ಅಭಿಮುಖರಾದರು. ಪರಸ್ಪರ-ಆಲಿಂಗಿಸಿಕೊಂಡು ಕುಶಲ-ಪ್ರಶ್ನವನ್ನು ಮಾಡಿಕೊಂಡರು, ಪ್ರಿಯ-ಮಿತ್ರರಾದ ಈ ಋಷಿಗಳಾದ ನರ-ನಾರಾಯಣರು. ಆಮೇಲೆ ವಾಸುದೇವನು ಅರ್ಜುನನ ಚರ್ಯೆಯನ್ನು ಕುರಿತಾಗಿ ವಿಚಾರಿಸಿದನು: "ಅರ್ಜುನಾ, ಯಾವ ಕಾರಣಕ್ಕಾಗಿ ಈ ತೀರ್ಥಾಟನವನ್ನು ಮಾಡುತ್ತಿದ್ದೀಯೇ?" ಎಂದು.


ನಡೆದುದೆಲ್ಲವನ್ನೂ ಅರ್ಜುನನು ಯಥಾವತ್ತಾಗಿಯೇ ಕೃಷ್ಣನಿಗೆ ತಿಳಿಸಿದನು. ಆತನ ಮಾತುಗಳೆಲ್ಲವನ್ನೂ ಕೇಳಿ, "ಓಹೋ, ಹೀಗೋ?" ಎಂದನು ಕೃಷ್ಣನು. ಆ ಪ್ರಭಾಸದಲ್ಲಿ ಕೃಷ್ಣನೂ ಪಾಂಡವನೂ ಯಥೇಷ್ಟವಾಗಿ ವಿಹರಿಸಿದರು; ವಾಸಕ್ಕಾಗಿ ರೈವತ-ಪರ್ವತದತ್ತ ಸಾಗಿದರು. ಕೃಷ್ಣನ ಮಾತಿನಂತೆ ಆತನ ಸೇವಕರು ಮೊದಲೇ ರೈವತಕಕ್ಕೆ ಹೋಗಿ ಅದನ್ನು ಸಜ್ಜಾಗಿಸಿದರು. ಹಾಗೂ ಭೋಜನಕ್ಕೆ ತಕ್ಕ ವ್ಯವಸ್ಥೆಯನ್ನೂ ಮಾಡಿದರು.


ಆ ಸತ್ಕಾರವೆಲ್ಲವನ್ನೂ ಅರ್ಜುನನು ಸ್ವೀಕರಿಸಿದನು, ಭಕ್ಷ್ಯಗಳನ್ನು ಭುಜಿಸಿದನು. ವಾಸುದೇವನೊಂದಿಗೆ ನಟನರ್ತಕರ ನರ್ತನವನ್ನೂ ಕಂಡನು. ಎಲ್ಲರನ್ನೂ ಆದರಿಸಿದನು. ಚೆನ್ನಾಗಿ ಸಿದ್ಧಪಡಿಸಿದ್ದ ಶಯ್ಯೆಯ ಮೇಲೆ ಪವಡಿಸಿದನು.


ಸೂಚನೆ : 29/9/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.