ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಕೃಷ್ಣನ ಬಾಲಲೀಲೆಗಳು ಯೌವನಲೀಲೆಗಳು - ಇವುಗಳನ್ನೆಲ್ಲವನ್ನೂ ಚಿತ್ರಿಸಿದ್ದಾನೆ ಲೀಲಾಶುಕ, ತನ್ನೀ ಕೃತಿಯಲ್ಲಿ. ಹೀಗಾಗಿ, ಶೃಂಗಾರರಸಭರಿತವಾದ ಪದ್ಯಗಳೂ ಹಲವುಂಟು, ಕೃಷ್ಣಕರ್ಣಾಮೃತದಲ್ಲಿ. ಆ ದೃಷ್ಟಿಯಿಂದ ಕೃಷ್ಣಕರ್ಣಾಮೃತಕಾವ್ಯವು ಭಕ್ತಿಕಾವ್ಯವಾದರೂ ಕೇವಲ ಚಿಕ್ಕವರಿಗಾಗಿಯೇ ಬರೆದ ಕಾವ್ಯವೆಂದೇನೂ ಅಲ್ಲ.
ಕರುಣಾಮಯನಾದ ಬಾಲಕೃಷ್ಣನನ್ನು ಆದರಿಸುವ ಈ ಶ್ಲೋಕವೂ ಕೃಷ್ಣಕರ್ಣಾಮೃತದಲ್ಲಿಯ ಅನೇಕಶ್ಲೋಕಗಳಂತೆ ಅನುಪ್ರಾಸಮಯವಾಗಿದೆ. ಪ್ರಾಸ ಅಥವಾ ಅನುಪ್ರಾಸವೆಂದರೆ ಒಂದೇ ತೆರನಾದ ವರ್ಣಗಳು ಮತ್ತೆ ಮತ್ತೆ ಬರುತ್ತಿರುವುದು. ಇಂತಹ ವಾಗ್ಭಂಗಿಗಳಿಗೆ - ಎಂದರೆ ಮಾತಿನ ಪ್ರಕಾರವಿಶೇಷಗಳಿಗೆ - ನಿರ್ದಿಷ್ಟವಾದ ಅಭಿಧಾನವೂ ಲಕ್ಷಣವೂ ಇರುತ್ತದೆ. ಏನು ಹಾಗೆಂದರೆ?
ಅಭಿಧಾನವೆಂದರೆ ವಿಶಿಷ್ಟವಾದ ಹೆಸರು. ಲಕ್ಷಣವೆಂದರೆ "ಇದು ಹೀಗಿರತಕ್ಕದ್ದು (ಅಥವಾ ಹಾಗಿರತಕ್ಕದ್ದಲ್ಲ)" - ಎಂದು ತಿಳಿಸುವ ಬಗೆ. ಮೇಲೆ ಹೇಳಿದಂತೆ, ಒಂದೇ ತೆರನಾಗಿ ತೋರುವ ವರ್ಣಗಳು ಬರುತ್ತಿದ್ದರೆ ಅದಕ್ಕೆ ಅನುಪ್ರಾಸಾಲಂಕಾರವೆನ್ನುವರು. ಅನುಪ್ರಾಸವೆನ್ನುವುದು ಅದರ ಅಭಿಧಾನವಾಯಿತು. "ವರ್ಣಸಾಮ್ಯಮ್ ಅನುಪ್ರಾಸಃ" ಎನ್ನುವುದು ಅದರ ಲಕ್ಷಣವೆನಿಸುತ್ತದೆ. "ವರ್ಣಗಳಲ್ಲಿಯ ಸಾಮ್ಯವು ಅನುಪ್ರಾಸ ಎಂದು ಕರೆಸಿಕೊಳ್ಳುತ್ತದೆ" – ಎಂಬುದು ಇದರ ಅರ್ಥ. ಸಾಮ್ಯವೆಂದರೂ ಸಮತೆ ಅಥವಾ ಸಮತ್ವವೆಂದರೂ ಒಂದೇ. ಉಚ್ಚಾರಣೆಯ ಬಗೆಯಲ್ಲೋ ಉತ್ಪತ್ತಿಸ್ಥಾನದಲ್ಲೋ ಹತ್ತಿರಹತ್ತಿರವಿರುವ ವರ್ಣಗಳಿಂದಾಗಿ ಅನುಪ್ರಾಸವೇರ್ಪಡುತ್ತದೆ.
ಎಷ್ಟು ಸ್ಪಷ್ಟವಾದ ಲಕ್ಷಣವನ್ನೇ ಕೊಟ್ಟರೂ, ಅದು ಚೆನ್ನಾಗಿ ಮನದಟ್ಟಾಗುವುದು ಉದಾಹರಣೆಗಳ ಅನ್ವಯದ ಮೂಲಕವೇ. ಅದನ್ನು ಮುಂದೆ ನೋಡಬಹುದು.
ಪುಟ್ಟಮಕ್ಕಳ ಕೆಂದುಟಿಯ ಸೊಬಗನ್ನು ಕಣ್ತುಂಬ ನೋಡಿ ಆಸ್ವಾದಿಸಬಹುದಷ್ಟೆ? ಅರುಣವರ್ಣದ ತುಟಿ ಈ ಪುಟ್ಟಕೃಷ್ಣನದು. ಹೊಳೆಯುವ ತುಟಿಯ ಮೇಲೆ ಮಂದಹಾಸ ಮಿಂಚಿದಾಗ ತೋರುವ ಸೊಗಸೇ ಬೇರೆ. ಮಗು ಕೃಷ್ಣನ ಈ ಅರುಣಾಧರವೇ ಒಂದು ಅಮೃತ. ಅಧರವೆಂದರೆ ಕೆಳದುಟಿ. ಈ ಅಮೃತವು ಮುಗ್ಧಸ್ಮಿತಕ್ಕೆ ಮೆರುಗನ್ನಿತ್ತಿದೆ.
ಇನ್ನು ಕೃಷ್ಣನ ಮೈಬಣ್ಣವೂ ವಿಶೇಷವೇ. ಆರ್ಯರು ಹೊರಗಿನಿಂದ ಬಂದವರೆಂದು ವಾದಿಸುವವರಿಗೆ ಇಲ್ಲೇ ಒಂದು ಸುಲಭವಾದ ಪ್ರತ್ಯುತ್ತರವಿದೆ. ರಾಮನೂ ಕೃಷ್ಣನೂ ಬಿಳಿ ಚರ್ಮದವರೇನಲ್ಲ! ಇಬ್ಬರನ್ನೂ ನೀಲಮೇಘಕ್ಕೇ ಹೋಲಿಸಿದೆ. ಕೃಷ್ಣನೆಂಬ ಪದಕ್ಕೇ "ಕರಿಯ" ಎಂಬ ಅರ್ಥವಿದೆಯಲ್ಲವೆ? ಪ್ರಕೃತಶ್ಲೋಕದಲ್ಲಿ, "ವರುಣಾಲಯನು ಕೃಷ್ಣನ ವರ್ಣವೈಭವವನ್ನು ಅನುಸರಿಸಿದ್ದಾನೆ" - ಎಂದಿದೆ. ಏನು ಹಾಗೆಂದರೆ? ವರುಣನಿಗೆ ಆಲಯ ಅಥವಾ ಮನೆಯೆಂದರೆ ಸಮುದ್ರ. ಸಮುದ್ರದ ಬಣ್ಣವೂ ಆಕಾಶನೀಲಿಯೇ. ಕೃಷ್ಣನ ಮೈಬಣ್ಣದ ವೈಭವ ಸಮುದ್ರರಾಜನಿಗೆ ಆಕರ್ಷಕವಾಗಿ ಕಂಡಿದೆ. ಎಂದೇ ತನ್ನ ಮೈಬಣ್ಣವನ್ನೂ ಅದಕ್ಕೆ ಹೊಂದಿಸಿಕೊಂಡಿದ್ದಾನೆ!
ಇಲ್ಲಿ ಹೇಳುತ್ತಿರುವುದು ಆಲಂಕಾರಿಕ-ಭಾಷೆಯೆಂಬುದು ಯಾರಿಗಾದರೂ ಸುಲಭವಾಗಿ ಗೋಚರವಾಗುವುದೇ. ಏಕೆಂದರೆ ಕೃಷ್ಣಾವತಾರಕ್ಕೆ ಹಿಂದೆಯೂ ಸಮುದ್ರವಿತ್ತಲ್ಲವೇ? ಮೊದಲ ಅವತಾರವೆನಿಸುವ ಮತ್ಸ್ಯಾವತಾರವಾದುದೇ ಸಮುದ್ರದಲ್ಲಲ್ಲವೇ? ಹಾಗಿರುವಲ್ಲಿ, "ಸಮುದ್ರದ ಬಣ್ಣವನ್ನು ಕೃಷ್ಣನು ಹೊತ್ತನು" - ಎಂದು ಹೇಳುವಲ್ಲಿ ಹೆಚ್ಚು ಔಚಿತ್ಯವಿದ್ದೀತೇ ವಿನಾ, ಇದನ್ನೇ ವ್ಯುತ್ಕ್ರಮವಾಗಿ ಹೇಳುವುದರಲ್ಲಲ್ಲ. (ವ್ಯುತ್ಕ್ರಮವೆಂದರೆ ವಿರುದ್ಧವಾದ ಕ್ರಮ. ಉದಾಹರಣೆಗೆ, ಮೊದಲು ಬಂದದ್ದನ್ನು ಮೊದಲೆಂದು ಹೇಳಿದರೆ ಅದು ಕ್ರಮ; ಇದಕ್ಕೆ ಬದಲಾಗಿ, ಆಮೇಲೆ ಬಂದದ್ದನ್ನೇ ಮೊದಲು ಹೇಳಿಬಿಟ್ಟು, ಮೊದಲು ಬಂದದ್ದನ್ನು ಆಮೇಲೆ ಹೇಳಿದರೆ ಅದು ವ್ಯುತ್ಕ್ರಮ). ಹೀಗಾಗಿ ಸಮುದ್ರವು ಕೃಷ್ಣನ ಬಣ್ಣವನ್ನು ಅನುಸರಿಸಿತು - ಎನ್ನುವುದು ಒಪ್ಪಲಾಗದ ಮಾತೇ.
ಆದರೆ ಕಾವ್ಯಮಯವಾಗಿ ಹೇಳುವಾಗ ವ್ಯುತ್ಕ್ರಮದಲ್ಲೂ ಸೊಬಗನ್ನು ಕಾಣಬಹುದು. ಕೃಷ್ಣನ ಮೈಬಣ್ಣವು ಕವಿಯ ಕಣ್ಣು-ಮನಸ್ಸುಗಳಲ್ಲಿ ಹೇಗೆ ಮತ್ತು ಎಷ್ಟು ನಾಟಿದೆಯೆಂದರೆ, "ಸಮುದ್ರರಾಯನ ಬಣ್ಣಕ್ಕೆ ಈ ಕೃಷ್ಣನ ಬಣ್ಣವೇ ಆದರ್ಶ"ವೆಂಬಂತೆ ಹೇಳಿರುವುದು ಆಗಿದೆ.
ಮತ್ತು ಹೀಗೆ ಹೇಳುವುದರ ಬಗ್ಗೆ ಬಹಳವಾದ ಆಶ್ಚರ್ಯಪಡಲೂ ಬೇಕಿಲ್ಲ. ಏಕೆಂದರೆ, ಪ್ರಿಯೆಯ ಮುಖವನ್ನು ಚಂದ್ರನಂತಿದೆಯೆಂದು ಹೇಳುವುದು ಲೋಕರೂಢಿಯಲ್ಲವೇ? ಆದರೆ ಕವಿಯೊಬ್ಬನು ಚಂದ್ರನನ್ನು ಕುರಿತು, "ತನ್ನ ಪ್ರೇಯಸಿಯ ಮುಖವನ್ನು ಹೋಲುತ್ತಾನೆ, ಈ ಚಂದ್ರ" - ಎಂದು ಹೇಳಿದರೆ ಹೇಗೋ ಹಾಗೆ. ಸಾಮ್ಯವಿಶೇಷವನ್ನು ಮನಗಾಣಿಸುವ ಸಲುವಾಗಿ ಹೀಗೆ ವ್ಯುತ್ಕ್ರಮದಿಂದ ಹೇಳುವ ಕಾವ್ಯಪರಿಪಾಟಿಯೂ ಉಂಟು. (ಪರಿಪಾಟಿ - ಎಂಬುದೇ ಸರಿಯಾದ ಪದ, ಪರಿಪಾಠಿ ಎನ್ನಬಾರದು).
ಕೃಷ್ಣನ ಸ್ಮಿತ ಅಥವಾ ಮುಗುಳ್ನಗೆಯನ್ನು ಹೇಳಿದ್ದಾಯಿತು. ಮೈಬಣ್ಣವನ್ನು ಹೇಳಿದ್ದಾಯಿತು. ಆತನ ಕಣ್ಣುಗಳನ್ನು ಕುರಿತು ಒಂದು ಮಾತು ಬೇಕಲ್ಲವೆ? ಕೃಷ್ಣನ ಕಣ್ಣುಗಳು ದೀರ್ಘವಾಗಿವೆ. ಯಾವುದರಂತೆ? ಅರವಿಂದ-ದಳದಂತೆ, ಅರ್ಥಾತ್ ಕಮಲ-ಪತ್ರದಂತೆ. ಅದೂ ಎಂಥಾ ಕಮಲ? ಬಾಡುತ್ತಿರುವ ಕಮಲವಲ್ಲ, ಅಥವಾ ಇನ್ನೂ ಮೊಗ್ಗಾಗಿರುವ ಪದ್ಮವೂ ಅಲ್ಲ. ಬದಲಾಗಿ ಅದು ತರುಣಾರವಿಂದ. ತರುಣವೆಂದರೆ ಎಳಸಿನ್ನೂ ಮಾಸಿಲ್ಲದಿರುವುದು. ಅರ್ಥಾತ್, ಮೈಹೊಳಪುಳ್ಳದ್ದು, ಕಾಂತಿಸಂಪನ್ನವಾಗಿರುವುದು.
ಕೃಷ್ಣನ ಬಣ್ಣವಾಯಿತು, ಕಣ್ಣಾಯಿತು, ಸ್ಮಿತವಾಯಿತು. ಆತನ ಮನಸ್ಸಿನ ಬಗ್ಗೆ ಒಂದು ಮಾತು ಬೇಡವೇ? ಹೌದು, ಬೇಕು. ಕರುಣಾಮಯ, ನಮ್ಮ ಬಾಲಕೃಷ್ಣ. ದಯಾಮಯನಾದ ಈ ದಿವ್ಯಬಾಲಕನನ್ನು ಆಶ್ರಯಿಸುತ್ತೇನೆ, ಎನ್ನುತ್ತದೆ ಶ್ಲೋಕ. ಶ್ಲೋಕದ ಪ್ರತಿಪಾದದ ಆರಂಭದಲ್ಲಿ ಬರುವ ಮೊದಲ ಮೂರು ಅಕ್ಷರಗಳಲ್ಲಿಯ ಅನುಪ್ರಾಸವನ್ನು ಗಮನಿಸಿ: ಅರುಣಾ-ವರುಣಾ-ತರುಣಾ-ಕರುಣಾ.
ಪೂರ್ಣಶ್ಲೋಕವಿದು:
ಅರುಣಾಧರಾಮೃತ-ವಿಶೇಷಿತ-ಸ್ಮಿತಂ
ವರುಣಾಲಯಾನುಗತ-ವರ್ಣ-ವೈಭವಮ್ |
ತರುಣಾರವಿಂದ-ದಲ-ದೀರ್ಘ-ಲೋಚನಂ
ಕರುಣಾಮಯಂ ಕಮಪಿ ಬಾಲಮಾಶ್ರಯೇ ||
ಕೃಷ್ಣನನ್ನು ಇಷ್ಟು ಚಿತ್ರಿಸಿದರೂ ಆತನ ಬಗೆ ಏನನ್ನೂ ವಿಶೇಷವಾಗಿ ಅಥವಾ ಚೆನ್ನಾಗಿ ಹೇಳಲಾಗಿಲ್ಲವೆಂಬ ಭಾವನೆ, ಕವಿಗೆ. ಭಗವಂತನನ್ನು ನಾವು ಅದೆಷ್ಟೇ ವರ್ಣಿಸಬಹುದು. ಆದರೂ, ಕೊನೆಗೆ ಆತನು ವಾಚಾಮಗೋಚರನೇ. ಏನು ಹಾಗೆಂದರೆ? ಮಾತುಗಳಿಗೆ ಗೋಚರನಾಗದವನು. ಅದು ಹೇಗೆ? ಶ್ಲೋಕಪೂರ್ತಿ ಆತನನ್ನು ಚಿತ್ರಿಸಿಯೂ ಆತನನ್ನು ವಾಚಾಮಗೋಚರನೆನ್ನುವುದೇ? - ಎಂಬ ಪ್ರಶ್ನೆ ಬರಬಹುದು. ಹೌದು, ಎಷ್ಟು ಬಣ್ಣಿಸಿದರೂ ಆತನ ಅಂಶದ ಒಂದು ಅಂಶವನ್ನೂ ಹೇಳಿದಂತಾಗದು - ಎನ್ನುವುದೇ ಕವಿಯ ಕೊರಗು. ಒಂದು ದೊಡ್ಡ ಬೆಟ್ಟವನ್ನು ಪುಟ್ಟ ಮಾತುಗಳಲ್ಲಿ ಚಿತ್ರಿಸು – ಎಂದಾರಾದರೂ ಹೇಳಿದರೆ, ಅದರ ಅಸಾಧ್ಯತೆಯು ನಮಗೆ ಆಗ ಒಡನೆಯೇ ಗೋಚರವಾಗುತ್ತದೆ.
ಹಾಗಿರಲು ಹಿರಿದಾದ ವ್ಯಕ್ತಿಯನ್ನು ಕಿರಿದಾದ ಮಾತು ಬಣ್ಣಿಸಲಳವೇ? ಇನ್ನೂ, ಅನಂತವೇ ಆದ ಶಕ್ತಿಯನ್ನು ಸಣ್ಣದಾದ ಮಾತು ಅಭಿವ್ಯಕ್ತಿಗೊಳಿಸೀತೇ? - ಅದನ್ನೇ "ಕಮಪಿ" ಎಂಬ ಮಾತುಗಳಿಂದ ಕವಿಯು ತೋರ್ಪಡಿಸಿದ್ದಾನೆ. "ಇದಾರೋ ಬಾಲಕ!" ಎಂದರೆ, ಆ ತೆರನು ಹಿಂದೆ ಬಂದುದಿಲ್ಲ, ಮುಂದೆ ಬರುವ ಸಂಭವವಿಲ್ಲ - ಎಂಬ ಭಾವ. ಹೀಗೆ, "ನ ಭೂತೋ ನ ಭವಿಷ್ಯತಿ" - ಎನಿಸಿಕೊಳ್ಳಬಹುದಾದ ದಿವ್ಯಶಕ್ತಿಯ ಬಾಲರೂಪವನ್ನು ಅದೆಂತು ಬಣ್ಣಿಸಲಿ? - ಎಂಬುದು ಇಲ್ಲಿಯ ಭಾವ.
ಈ ಅಪೂರ್ವಬಾಲಕನನ್ನು ನಾನು ಸೇವಿಸುತ್ತೇನೆ - ಎಂಬುದು ಕವಿಯ ಉಕ್ತಿ.
ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 14/4/2024 ರಂದು ಪ್ರಕವಾಗಿದೆ.