ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 84 ಯಾವುದನ್ನು 'ಜ್ಞಾನ' ಎಂದು ಕರೆಯುತ್ತಾರೆ ?
ಉತ್ತರ - ತತ್ತ್ವಾರ್ಥದ ಅರಿವನ್ನು
ಜ್ಞಾನ ಎಂದರೆ ಅರಿವು. ಈ ಅರಿವು ಪದಾರ್ಥಗಳ ಸಂಬಂಧದಿಂದ ಬರುತ್ತದೆ. ಸಮಸ್ತ ಪ್ರಪಂಚವನ್ನು ಎರಡಾಗಿ ವಿಭಾಗಿಸಲಾಗಿದೆ; ಅರ್ಥ ಪ್ರಪಂಚ ಮತ್ತು ಶಬ್ದ ಪ್ರಪಂಚ ಎಂಬುದಾಗಿ. ಅರ್ಥಪ್ರಪಂಚವು ಒಂದು ಬಿಂದುವಿನಿಂದ ಆರಂಭವಾಗಿದೆ ಎಂದು ವೇದಾದಿ ಸಾಹಿತ್ಯಗಳು ಹೇಳುತ್ತವೆ. ಅಂತಯೇ ಶಬ್ದಪ್ರಪಂಚವು ಕೂಡ ಅದೇ ರೀತಿಯಾಗಿ ಪ್ರಣವ ಎಂಬ ಶಬ್ದಮೂಲದಿಂದ ವಿಸ್ತಾರವಾಗಿದೆ ಎಂಬುದಾಗಿ ಅದೇ ಸಾಹಿತ್ಯಗಳು ಸಾರುತ್ತವೆ. ಅರ್ಥಪ್ರಪಂಚದ ಮೂಲವನ್ನು ಪರಬ್ರಹ್ಮ ಎನ್ನುತ್ತಾರೆ. ಅದೇ ಪರಬ್ರಹ್ಮ ವಾಚಕವಾದ ಶಬ್ದವನ್ನು ಪ್ರಣವ ಎನ್ನುತ್ತಾರೆ. ನಾವು ಈ ಪ್ರಪಂಚದ ಅರಿವನ್ನು ಪಡೆಯುವುದು ಎಂದರೆ ಶಬ್ದ ಪ್ರಪಂಚ ಮತ್ತು ಅರ್ಥ ಪ್ರಪಂಚ ಈ ಎರಡರ ಅರಿವನ್ನು ಪಡೆದಾಗ ಮಾತ್ರ. ಅರ್ಥಪ್ರಪಂಚ ಮತ್ತು ಶಬ್ದಪ್ರಪಂಚವನ್ನು ಸ್ಥೂಲ, ಸೂಕ್ಷ್ಮ, ಪರಾ ಎಂದು ಮೂರಾಗಿ ವಿಭಾಗಿಸಬಹುದು. ಸ್ಥೂಲವಾದುದು ಎಂದರೆ ನಮ್ಮ ಬಾಹ್ಯ ಇಂದ್ರಿಯಗಳಿಗೆ ಗೋಚರವಾಗುವಂಥವುಗಳು. ಸೂಕ್ಷ್ಮ ಎಂದರೆ ಮನಸ್ಸಿಗೆ ಗೋಚರವಾಗುವಂಥವುಗಳು. ಪರಾ ಎಂದರೆ ಮನಸ್ಸಿಗಿಂತಲೂ ಮೀರಿದ ವಿಷಯ. ಇಲ್ಲಿ ತತ್ತ್ವಜ್ಞಾನ ಎಂದರೆ ಈ ಮೂರರ ಸಮಗ್ರವಾದ ಅರಿವು. ಈ ಮೂರರ ಅರಿವು ಕೂಡ ಯಥಾರ್ಥವಾಗಿ ಆದಾಗ ಅದನ್ನೇ 'ತತ್ತ್ವಜ್ಞಾನ' ಎಂದು ಹೇಳಬಹುದು. ಇಲ್ಲಿ ಸ್ಥೂಲ, ಸೂಕ್ಷ್ಮ ಮತ್ತು ಪರಾ ಎಂಬ ಮೂರು ಹಂತಗಳಲ್ಲಿ ಬರುವ ಜ್ಞಾನವು ಒಂದಕ್ಕೊಂದು ಸಂಬಂಧವಿರುವಂತದ್ದು. ಪರಾರೂಪವಾದ ಜ್ಞಾನವು ಯಥಾರ್ಥವಾಗಿ ಆದಾಗ ಅದು ಸೂಕ್ಷ್ಮರೂಪವಾದ ಜ್ಞಾನಕ್ಕೆ ಸಹಕಾರಿಯಾಗುತ್ತದೆ. ಅಂತಯೇ ಸ್ಥೂಲ ಮತ್ತು ಸೂಕ್ಷ್ಮ ರೂಪವಾದ ಜ್ಞಾನವು ಯಥಾರ್ಥವಾಗಿ ಆದಾಗ ಅದು ಪರಾರೂಪವಾಗಿರುವ ಜ್ಞಾನಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ಮೂರರ ಯಥಾರ್ಥವಾದ ಜ್ಞಾನವನ್ನೇ ತತ್ತ್ವಜ್ಞಾನ ಎಂಬುದಾಗಿ ಕರೆಯಲಾಗುತ್ತದೆ. ಇದರಲ್ಲೂ ಪರಾರೂಪವಾದ ಜ್ಞಾನವೇ ಮೂಲತಃ ತತ್ತ್ವ ಎಂಬುದಾಗಿ ಕರೆಯಲಾಗಿದೆ. ಅದನ್ನು 'ಪರಬ್ರಹ್ಮ' ಎಂದು ಕರೆದು ಅದರ ಭಾವವನ್ನು 'ತತ್ತ್ವ' ಎಂಬುದಾಗಿ ಹೇಳಿ, ಪರೋಕ್ಷವಾಗಿ, ಸಹಜವಾಗಿ, ಅನುಭವಕ್ಕೆ ಗೋಚರವಾಗುವ ಯಾವ ವಿಷಯವಿದೆಯೋ ಅದನ್ನೇ ತತ್ತ್ವ ಎಂಬುದಾಗಿ ಕರೆದು ಅದರ ಅರಿವನ್ನು ತತ್ತ್ವಜ್ಞಾನ ಎಂಬುದಾಗಿ ಹೇಳಲಾಗಿದೆ ಈ ತತ್ತ್ವಜ್ಞಾನವನ್ನೇ ಯಕ್ಷನು ಧರ್ಮರಾಜನ ಮುಖೇನ ಪ್ರಪಂಚಕ್ಕೆ ಅರಹುತ್ತಾನೆ.
ಆದರೆ ಇಷ್ಟೇ ಅಲ್ಲ. ಸ್ಥೂಲ, ಸೂಕ್ಷ್ಮ ಮತ್ತು ಪರಾ ಎಂಬುದಾಗಿ ಮೂರು ವಿಧವಾದ ಈ ಪ್ರಪಂಚವನ್ನು ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಎಂದೂ ಕರೆಯುತ್ತಾರೆ. ಸ್ಥೂಲವಾದುದನ್ನು ಭೌತಿಕ ಎಂದರೆ; ಸೂಕ್ಷ್ಮವಾದುದನ್ನು ದೈವಿಕ ಎಂದೂ; ಅತ್ಯಂತ ಸೂಕ್ಷ್ಮವಾದುದನ್ನು ಪರಾ ಎಂದು ಕರೆಯಬಹುದು. ಇಂತಹ ಸಮಸ್ತವಿಷಯದ ಯಥಾರ್ಥ ಅನುಭವವನ್ನೇ 'ತತ್ತ್ವಜ್ಞಾನ'ಎನ್ನಲಾಗಿದೆ. ಶ್ರೀರಂಗಮಹಾಗುರುಗಳು ಹೇಳುವಂತೆ "ಜಾಗ್ರತ್-ಸ್ವಪ್ನ-ಸುಷುಪ್ತಿಗಳಂತೆಯೇ ತುರೀಯಸ್ಥಿತಿಯೂಮಾನವನ ಸಹಜವಾದಹಕ್ಕು. ಆ ಸ್ಥಿತಿಯಲ್ಲಿ ಅನುಭವಕ್ಕೆಬರುವುದು ಜ್ಞಾನ" ಎಂಬುದಾಗಿ. ಯಾವ ಜ್ಞಾನವನ್ನು ಪಡೆದ ಅನಂತರೈನ್ನಾವಜ್ಞಾನವನ್ನುಪಡೆಯುವ ಅವಶ್ಯಕತೆ ಇರುವುದಿಲ್ಲವೋ ಅದರ ಜ್ಞಾನವನ್ನೇ ತತ್ತ್ವಜ್ಞಾನದ ಅರಿವು ಎಂಬುದಾಗಿ ಹೇಳುವುದು ಇಲ್ಲಿನ ಪ್ರಶ್ನೋತ್ತರದ ಆಶಯವಾಗಿದೆ.
ಸೂಚನೆ : 14/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.