Sunday, March 31, 2024

ವ್ಯಾಸ ವೀಕ್ಷಿತ - 81 ಕರ್ಣನ ವಿಧಿವಾದ- ದ್ರೋಣರ ನಿಷ್ಠುರವಚನ (Vyaasa Vikshita - 81 Karnana Vidhivada - Dronara Nishthuravachana)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಆರ್ಥಿಕವಾದ ಕ್ಲೇಶವುಂಟಾದಾಗ, ಶ್ರೇಯಸ್ಸನ್ನೋ ಅಶ್ರೇಯಸ್ಸನ್ನೋ ಮಿತ್ರರು ಮಾಡಿಬಿಡಬಲ್ಲರೇ? ಯಾರಿಗೇ ಆಗಲಿ ದುಃಖವಾದರೂ ಸರಿಯೇ, ಸುಖವಾದರೂ ಸರಿಯೇ ವಿಧ್ಯನುಸಾರವಾಗಿಯೇ ಅದು ಆಗುವಂತಹುದು (ವಿಧಿಪೂರ್ವಂ ಹಿ ಸರ್ವಸ್ಯ ದುಃಖಂ ವಾ ಯದಿ ವಾ ಸುಖಮ್). ಮನುಷ್ಯನು ಬುದ್ಧಿಶಾಲಿಯೇ ಆಗಿರಲಿ, ಪೆದ್ದನೇ ಆಗಿರಲಿ; ಹಾಗೆಯೇ ಬಾಲಕನೇ ಆಗಿರಲಿ, ವೃದ್ಧನೇ ಆಗಿರಲಿ; ಜೊತೆಗಾರರುಳ್ಳವನೇ ಆಗಿರಲಿ, ಒಂಟಿಯೇ ಆಗಿರಲಿ - ದೈವಯೋಗದ ಅನುಸಾರವಾಗಿ ಎಲ್ಲವನ್ನೂ ಎಲ್ಲೆಡೆ ಹೊಂದುವನು.

ಹಿಂದೆ ರಾಜಗೃಹ ಎಂಬ(ನಗರದ)ಲ್ಲಿ ಅಂಬುವೀಚ ಎಂಬ ರಾಜನಿದ್ದನಷ್ಟೆ. ಮಾಗಧರಾಜರಲ್ಲೊಬ್ಬ ಆತ. ಆತನ ಇಂದ್ರಿಯಗಳು ದುರ್ಬಲವಾಗಿದ್ದವು; ಶ್ವಾಸರೋಗಪೀಡಿತನೂ ಆಗಿದ್ದ, ಆತ: ರಾಜಕಾರ್ಯಗಳಲ್ಲೆಲ್ಲ ಮಂತ್ರಿಗೇ ಅಧೀನನಾಗಿದ್ದ. ಮಂತ್ರಿಯ ಹೆಸರು ಮಹಾಕರ್ಣಿ. ಆಗಿನ ಕಾಲಕ್ಕೆ ಅಲ್ಲೆಲ್ಲಾ ಆತನೊಬ್ಬನೇ ರಾಜ. ರಾಜಸೈನ್ಯವೆಲ್ಲವೂ ತನ್ನ ವಶಕ್ಕೆ ಬಂದಿತಾಗಿ ರಾಜನನ್ನೇ ತಿರಸ್ಕಾರವಾಗಿ ಕಾಣಲಾರಂಭಿಸಿದ. ರಾಜಭೋಗ್ಯರಾದ ಸ್ತ್ರೀಯರನ್ನೂ (ಎಂದರೆ ರಾಜನ ಮಡದಿಯರನ್ನೂ) ರತ್ನಗಳನ್ನೂ ಸಂಪತ್ತುಗಳನ್ನೂ ಎಲ್ಲೆಡೆಗಳಿಂದ ತಾನೇ ಸ್ವೀಕರಿಸಿ ಭೋಗಿಸಲಾರಂಭಿಸಿದ, ಆ ಮೂಢ.

ಒಂದೊಂದಾಗಿ ಇವನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಿದ್ದ ಆ ಲೋಭಿಗೆ ಲೋಭದಿಂದ ಲೋಭವು ಬೆಳೆಯುವಂತಾಯಿತು. ಕೊನೆಗೆ ಅದು ಎಲ್ಲಿಯ ತನಕ ಬಂದಿತೆಂದರೆ, ರಾಜನ ರಾಜ್ಯವನ್ನೇ ಬಾಚಿಕೊಳ್ಳುವ ಆಸೆಯೇ ಉಂಟಾಯಿತು. ಮೊದಲೇ ಹೇಳಿದಂತೆ, ರಾಜನು ಇಂದ್ರಿಯಹೀನನಾಗಿದ್ದರೂ, ಶ್ವಾಸರೋಗಪೀಡಿತನಾಗಿದ್ದರೂ, ಅದೆಷ್ಟು ಯತ್ನಪಟ್ಟರೂ ಆ ಮಂತ್ರಿಗೆ ಆ ರಾಜ್ಯವನ್ನು ವಶಕ್ಕೆ ಪಡೆಯಲಾಗಲಿಲ್ಲ - ಎಂದು ನಾವು ಕೇಳಿದ್ದೇವೆ.

ಹೀಗಾಗಿ ಆ ರಾಜನ ರಾಜತ್ವವೆಂಬುದು ಉಳಿದುದು ಭಾಗ್ಯವಷ್ಟರಿಂದಲೇ, ಮತ್ತಾವುದರಿಂದಲೂ ಅಲ್ಲ. ರಾಜನೇ, ಈ ರಾಜ್ಯವು ನಿನಗೆಂದು ನಿಶ್ಚಿತವಾಗಿದ್ದಲ್ಲಿ, ಎಲ್ಲರೂ ನೋಡುತ್ತಿದ್ದರೂ, ಅದು ನಿನ್ನಲ್ಲಿಯೇ ಉಳಿದುಕೊಳ್ಳುತ್ತದೆ. ಅಷ್ಟೇ ಅಲ್ಲ; ಒಂದು ವೇಳೆ ನಿನ್ನ ಭಾಗ್ಯದಲ್ಲಿ ಅದಿಲ್ಲವೆಂದಾಗಿದ್ದಲ್ಲಿ, ನೀನು ಪ್ರಯತ್ನಪಟ್ಟರೂ ಅದು ದೊರೆಯಲಾಗದು.

ಆದುದರಿಂದ, ಕುಶಲನಾದ ರಾಜನೇ, ಮಂತ್ರಿಗಳಲ್ಲಿ ಯಾರು ಸಾಧು, ಯಾರು ಅಸಾಧು? - ಎಂಬುದನ್ನು ವಿಮರ್ಶಿಸಿ ನಿಶ್ಚಯಿಸಿಕೋ. ದುಷ್ಟಹೃದಯದವರ ಮಾತು ಯಾವುದು, ದುಷ್ಟರಲ್ಲದವರ ಮಾತು ಯಾವುದು? - ಎಂಬುದನ್ನು ನೀನು ಅರಿತುಕೊಳ್ಳಬೇಕು - ಎಂದು ಹೇಳಿ, ತನ್ನ ಮಾತನ್ನು ಮುಗಿಸಿದ, ಕರ್ಣ.

ಆಗ ದ್ರೋಣನು ಹೇಳಿದನು:

"ದುಷ್ಟನಾದ ಕರ್ಣನೇ, ಈ ಮಾತನ್ನು ನೀನು ಏಕೆ ಹೇಳುತ್ತಿರುವೆ - ಎಂಬುದು ಗೊತ್ತಾಗುತ್ತದೆ. ಪಾಂಡವರನ್ನು ಕುರಿತಾಗಿ ದ್ವೇಷಭಾವ ನಿನಗುಂಟು. ಎಂದೇ ನನ್ನ ಮಾತಿನಲ್ಲಿ ದೋಷಗಳನ್ನು ಹೇಳುತ್ತಿರುವೆ.

ಕುರುಕುಲವೃದ್ಧಿಗೆ ಕಾರಣವಾಗತಕ್ಕ ಪರಮಹಿತವನ್ನು ಹೇಳುತ್ತೇನೆ, ಕರ್ಣ. ಅದನ್ನೇ ನೀನು ದೋಷಯುಕ್ತವೆನ್ನುವುದಾದರೆ, ಪರಮಹಿತವು ಯಾವುದೆಂದು ನೀನೇ ಹೇಳು. ಯಾವುದು ಅತ್ಯಂತಹಿತವೋ ಅದನ್ನು ಬಿಟ್ಟು ಬೇರೆಯ ಬಗೆಯಲ್ಲೇನಾದರೂ ಮಾಡುವುದಾದಲ್ಲಿ ಅನತಿಕಾಲದಲ್ಲೇ ಕೌರವರು ನಶಿಸುವರು - ಎಂಬುದರಲ್ಲಿ ಸಂಶಯವಿಲ್ಲ."

ಬಳಿಕ ವಿದುರನು ಮಾತನಾಡಿದನು.

"ರಾಜ ಧೃತರಾಷ್ಟ್ರನೇ, ನಿನಗೆ ಯಾವುದು ನಿಃಸಂಶಯವಾಗಿಯೂ ಶ್ರೇಯಸ್ಸೋ ಅದನ್ನು ಬಂಧುಗಳಾದವರು ನಿನಗೆ ಹೇಳಬೇಕಾದದ್ದಿದೆ. ಆದರೆ ಕೇಳಿಸಿಕೊಳ್ಳಲೇ ಮನಸ್ಸಿಲ್ಲದಿರುವವರಿಗೆ ಆ ಮಾತು ಅಂತರಂಗದಲ್ಲಿ ಉಳಿಯುವುದಾದರೂ ಹೇಗೆ? (ನ ತ್ವಶುಶ್ರೂಷಮಾಣೇ ವೈ ವಾಕ್ಯಂ ಸಂಪ್ರತಿತಿಷ್ಠತಿ).

ಸೂಚನೆ : 31/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.