Sunday, March 31, 2024

ಯಕ್ಷ ಪ್ರಶ್ನೆ 83(Yaksha prashne 83)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 82 'ಕ್ಷಮೆ' ಎಂದರೇನು ?

ಉತ್ತರ - ದ್ವಂದ್ವಸಹಿಷ್ಣುತೆ.  

ಈ ಹಿಂದಿನ ಪ್ರಶ್ನೆಗೂ ಈ ಪ್ರಶ್ನೆಗೂ ಒಂದು ಕಾರ್ಯಕಾರಣಭಾವಸಂಬಂಧವಿದೆ. ಮನಸ್ಸಿನ ನಿಗ್ರಹದಿಂದ ಉಂಟಾಗುವ ಪರಿಣಾಮವೇ 'ಕ್ಷಮೆ'. ಕ್ಷಮೆ ಎಂಬ ಪದಕ್ಕೆ ಅರ್ಥ ಏನು ? ಎಂಬ ಸಾಮಾನ್ಯ ಜಿಜ್ಞಾಸೆಯನ್ನು ಇಲ್ಲಿ ಯಕ್ಷನು ಧರ್ಮರಾಜನ ಮುಂದಿಡುತ್ತಾನೆ. ಅದಕ್ಕೆ 'ದ್ವಂದ್ವ ಸಂಹಿಷ್ಣುತೆ' ಎಂಬ ಉತ್ತರವನ್ನು ನೀಡುತ್ತಾನೆ ಧರ್ಮಜ. ದ್ವಂದ್ವ ಎಂದ ಎರಡು ಬಗೆ - ಎರಡು ಪ್ರಕಾರ. ಪರಸ್ಪರ ವಿರುದ್ಧಧರ್ಮಗಳು ಎಂಬುದು ಇಲ್ಲಿನ ಅರ್ಥ. ಉದಾಹರಣೆಗೆ ಶೀತ-ಉಷ್ಣ, ಸುಖ-ದುಃಖ, ಲಾಭ- ಅಲಾಭ, ಜಯ-ಅಪಜಯ ಮುಂತಾದವುಗಳು. ಒಂದೇ ವ್ಯಕ್ತಿಯು ಇಂತಹ ವಿರುದ್ಧವಾದ ಸಂದರ್ಭವನ್ನು ಅನುಭವಿಸುವಂತಾದರೆ ಅದರ ಅನುಭವವನ್ನು ಪಡೆಯುವಂತಹ ಸಾಮರ್ಥ್ಯವನ್ನು ದ್ವಂದ್ವಸಹಿಷ್ಣುತೆ ಎಂದು ಕರೆಯುತ್ತಾರೆ. ಈ ಎರಡು ವಿರುದ್ಧವಾದ ಅನುಭವಗಳನ್ನು ಅನುಭವಿಸುವುದು ಏಕಕಾಲದಲ್ಲಿ ಅಲ್ಲ. ಭಿನ್ನಕಾಲದಲ್ಲಿ. ಆದರೆ ಅವೆರಡನ್ನೂ ಒಂದೆ ಸ್ಥಾನದಲ್ಲಿ ಕಾಣುವುದು ಕಷ್ಟಸಾಧ್ಯ. ಇದು ಮನೋನಿಗ್ರಹದಿಂದ ಮಾತ್ರ ಸಾಧ್ಯ. ಅಂದರೆ ಎರಡನ್ನು ಅನುಭವಿಸುವಾಗಲೂ ಆ ವ್ಯಕ್ತಿಯಲ್ಲಿ ಯಾವುದೇ ವಿಕಾರವನ್ನು ಕಾಣಲು ಸಾಧ್ಯವಿಲ್ಲ ಎಂದು ತಾತ್ಪರ್ಯ. ಸುಖವು ಬಂದಾಗ ಹಿಗ್ಗುವುದು, ದುಃಖವು ಬಂದಾಗ ಕುಗ್ಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಜೀವನದಲ್ಲಿ ಯಾವಾಗಲಾದರೂ ಕಷ್ಟ ಬಂದರೆ ಅದನ್ನೇ ಶಾಶ್ವತ ಎಂದು ಭಾವಿಸಿ 'ಈ ಕಷ್ಟ ನನಗೆ ಎಂದೂ ತಪ್ಪದು' ಎಂಬುದಾಗಿ ಜೀವಿಕೆಯ ಭರವಸೆಯನ್ನೇ ಕಳೆದುಕೊಳ್ಳುವ ಸಂದರ್ಭವನ್ನು ನಾವು ಕಾಣಬಹುದು. ಇನ್ನು ಕೆಲವೊಮ್ಮೆ ಸುಖ ಬಂತೆಂದರೆ 'ನಾನೇ ಇಂದ್ರ, ನಾನೇ ದೇವೇಂದ್ರ, ನನಗೆ ಬಂದ ಸುಖ ಎಂದೂ ಕಳೆಯದು' ಎಂದು ಭ್ರಮಿಸಿ ದುರಹಂಕಾರ, ದುಷ್ಟತನವೆಲ್ಲ ಮೈಗುಡುವ ಸಾಧ್ಯತೆಗಳು ಕಂಡುಬರುತ್ತವೆ. ಆದರೆ ಯಾವನು ಈ ದ್ವಂದ್ವ ಸಂಹಿಷ್ಣುತೆ ಎಂಬ ಗುಣವನ್ನು ಕರಗತ ಮಾಡಿಕೊಳ್ಳುತ್ತಾನೋ ಅವನು ಎರಡು ಸಂದರ್ಭವನ್ನು ಬಹಳ ವ್ಯವಸ್ಥಿತವಾಗಿ ನಿಭಾಯಿಸುತ್ತಾನೆ. ಇದಕ್ಕೆ ಶ್ರೀರಾಮನಲ್ಲಿರುವ ಈ ಗುಣವನ್ನು ಮಾದರಿಯಾಗಿ ನೋಡಬಹುದು.

ದಶರಥನು ಒಂದು ಶುಭಮುಹೂರ್ತದಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕಾಗಿ ಸಕಲ ಸಿದ್ಧತೆಯನ್ನು ಮಾಡಿರುತ್ತಾನೆ. ಅದಕ್ಕಾಗಿ ಶ್ರೀರಾಮನಿಗೂ ತಿಳಿಸಿ, ಶ್ರೀರಾಮನು ಒಪ್ಪಿಗಿ ಸೂಚಿಸುತ್ತಾನೆ. ತನ್ನ ಪಟ್ಟಾಭಿಷೇಕ ವಿಷಯವನ್ನು ತಿಳಿದು ಅತಿಯಾದ ಸಂತಸಪಡಲಿಲ್ಲ ಆತ. ಅದೇ ಕೆಲವು ಸಮಯದ ಅನಂತರ ವಿರುದ್ಧವಾದ ವಾರ್ತೆಯನ್ನು ಶ್ರೀರಾಮನು ಕೇಳುವ ಪ್ರಸಂಗ ಬರುತ್ತದೆ. ಕೈಕೇಯಿ ಮತ್ತು ಮಂಥರೆಯ ಕಾರಣದಿಂದ ದಶರಥ ಮಹಾರಾಜನು ಶ್ರೀರಾಮನನ್ನು ಕಾನನಕ್ಕೆ ತೆರಳುವಂತೆ ಆಜ್ಞಾಪಿಸುತ್ತಾನೆ. ಈ ಸಂದರ್ಭದಲ್ಲೂ ಶ್ರೀರಾಮನ ಭಾವ ಭಂಗಿಗಳಲ್ಲಿ ಯಾವುದೇ ವಿಕಾರವನ್ನು ಕಾಣಲಿಲ್ಲ. ಇದಕ್ಕೆ ಕಾರಣ ಶ್ರೀರಾಮನ ಕ್ಷಮಾಗುಣ. ಅತ್ಯಂತ ವಿರುದ್ಧವಾದ ಎರಡು ಸಂದರ್ಭಗಳನ್ನೂ ಯಾವ ರೀತಿಯಾಗಿ ವಿಕಾರವಿಲ್ಲದೆ ಎದುರಿಸಬೇಕು? ಎಂಬುದನ್ನು ಶ್ರೀರಾಮನು ಚೆನ್ನಾಗಿ ಅರಿತಿದ್ದ. ಅದು ಅವನ ತನುಮನಗಳಲ್ಲಿ ಸಾತ್ಮ್ಯವಾದ ಗುಣವಾಗಿತ್ತು. ಇಂತಹ ಅನೇಕ ಸಂದರ್ಭಗಳನ್ನು ನಾವು ನಮ್ಮ ಜೀವನದಲ್ಲಿ ಕಾಣುವ ಪರಿಸ್ಥಿತಿ ಬರಬಹುದು. ಆಗ ಶ್ರೀರಾಮನಂತೆ ಪರಿಸ್ಥಿತಿಯನ್ನು ಅತ್ಯಂತ ಸಹನೆಯಿಂದ ಎದುರಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ಗುಣವನ್ನೇ ದ್ವಂದ್ವಸಹಿಷ್ಣುತೆ ಎನ್ನುವುದು.   

ಸೂಚನೆ : 31/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.