ಪ್ರಶ್ನೆ – 78 ವಿಷ ಯಾವುದು ?
ಉತ್ತರ - ಪ್ರಾರ್ಥನೆಯೇ ವಿಷ..
ವಿಷವೆಂದರೆ ವ್ಯಕ್ತಿಯನ್ನು ಸಾಯಿಸಲು ಬಳಸುವ ಒಂದು ಬಗೆಯ ದ್ರವ್ಯ ಎಂದು ಒಮ್ಮೆಲೇ ನಮಗೆ ಅನಿಸುವುದು. ಅಥವಾ ಆಗುವ ಕಾರ್ಯವನ್ನು ಯಾವುದು ಆಗದಂತೆ ತಡೆಯುವುದೋ ಅದನ್ನು ವಿಷವೆನ್ನಬಹುದು. ಇಲ್ಲಿ ಯಕ್ಷನು ಕೇಳುವ ಪ್ರಶ್ನೆ ಈ ಅರ್ಥವನ್ನು ಕೊಡುತ್ತದೆ. ವಿಷವೆಂದರೆ ದ್ರವ್ಯವಲ್ಲ. ಕಾರ್ಯಪ್ರತಿಬಂಧಕ. ಕಾರ್ಯ ಯಾವುದು? ಎಂದರೆ ಮಾನವನ ಜೀವಿತದ ಪರಮೋದ್ದೇಶ. ಹಾಗಾದರೆ ಮಾನವನ ಜೀವಿತದ ಪರಮೋದ್ದೇಶ ಯಾವುದು? ಎಂಬ ಬಗ್ಗೆ ಸರಿಯಾದ ತಿಳಿವಳಿಕೆಯ ಕೊರತೆ ಇದೆ. ಯಾವುದನ್ನೋ ಉದ್ದೇಶವಾಗಿಟ್ಟುಕೊಂದು ಮಾನವ ತನ್ನ ಜೀವನವನ್ನು ನಡೆಸುತ್ತಿರುವುದನ್ನು ನಾವು ನೋಡಬಹುದು. ಆದರೆ ಇಲ್ಲಿ ಕೇಳುವ ಪ್ರಶ್ನೆಯಲ್ಲಿ ಮಾನವನ ಜೀವಿತ ಯಾವುದೆಂಬ ಬಗ್ಗೆ ಸ್ಪಷ್ಟ ಚಿತ್ರಣವಿದೆ. ಆದರದು ಶಬ್ದದಿಂದ ಇಲ್ಲಿ ಹೇಳಲಾಗಿಲ್ಲ ಅಷ್ಟೇ. ಪ್ರಶ್ನೋತ್ತರದ ಜಾಡನ್ನು ಹಿಡಿದಾಗ ಜೀವಿತದ ಉದ್ದೇಶ ಮನಸ್ಸಿಗೆ ಬರುವುದು. ಮಾನವನ ಪರಮೋದ್ದೇಶವೇ ಮೋಕ್ಷವೆಂಬ ಪರಮ ಪುರುಷಾರ್ಥ ಸಾಧನೆ. ಇದನ್ನೇ ಪರಾಮ ಲಕ್ಷ್ಯವಾಗಿ ಇಟ್ಟುಕೊಂಡವನಿಗೆ ಯಾವುದು ವಿಷವಾಗಿ ಅಂದರೆ ಪ್ರತಿಬಂಧಕವಾಗಿ ನಿಲ್ಲುತ್ತದೆ ಪ್ರಾರ್ಥನೆ. ಅದನ್ನೇ ಇಲ್ಲಿ ವಿಷ ಎಂದು ಕರೆಯಲಾಗಿದೆ. ಹಾಗಾದರೆ ಪ್ರಾರ್ಥನೆಯು ಹೇಹೇಗೆ ವಿಷವಾಗುವದು?
ಬೇಕು ಎನ್ನುವುದೇ ಪ್ರಾರ್ಥನೆ. ಇದೇ ಬಂಧನ. ಸಾಕು ಎನ್ನುವುದೇ ಬಿಡುಗಡೆ. ಅದುವೇ ಮೋಕ್ಷ. "ನ ಕರ್ಮಣಾ ನ ಪ್ರಜಾಯಾ ಧನೇನ ತ್ಯಾಗೇನೈಕೇ ಅಮೃತತ್ವಮಾನಶುಃ" ಎಂಬ ಉಪನಿಷತ್ ವಾಣಿಯು ಬಿಡುವ ಬಗ್ಗೆ ಮತ್ತು ಬಿಡುವುದರಿಂದ ಆಗುವ ಒಳ್ಳೆಯದರ ಬಗ್ಗೆ ಉತ್ತಮವಾಗಿ ನಿರೂಪಿಸುತ್ತದೆ. ಉಪನಿಷತ್ತುಗಳಲ್ಲಿ ಯಾವ ಆಸೆಯನ್ನು ಬಿಡಬೇಕು ಎಂಬುದನ್ನೂ ಹೇಳಲಾಗಿದೆ. ವಿತ್ತೈಷಣಾ, ದಾರೈಷಣಾ ಪುತ್ರೈಷಣಾ ಎಂಬಿವೇ ಈಷಣಾತ್ರಯಗಳು. ಇವುಗಳಿಂದ ದೂರವಿರುವ್ದೇ ನೆಮ್ಮದಿಗೆ ಮೂಲ ಕಾರಣ. ಇವೇ ನಮ್ಮ ಬಂಧನಕ್ಕೂ ಕಾರಣ ಎಂಬುದು ಇದರ ಆಶಯ. ಆದರೆ ತನ್ನ ಕರ್ತವ್ಯವನ್ನು ಮಾಡಿ, ಇವುಗಳನ್ನು ಬಿಡಬೇಕು ಎಂಬುದು ತಾತ್ಪರ್ಯವಷ್ಟೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ ಎಂಬ ಆಶ್ರಮಗಳನ್ನು ಸ್ವೀಕರಿಸಿ, ಅವುಗಳಿಗೆ ವಿಹಿತವಾದ ಕರ್ಮಗಳನ್ನು ಮಾಡಬೇಕು. ಗೃಹಸ್ಥನಾದವನು ಈ ಈಷಣಾತ್ರಯವನ್ನು ಪ್ರಜ್ಞಾವಂತಿಕೆಯಿಂದ ಮಾಡಿಮುಗಿಸಿ ಅನಂತರ ಸಕಾಲದಲ್ಲಿ ತನ್ನ ಕುಟುಂಬದ ಹೊಣೆಗಾರಿಕೆಯನ್ನು ಮಕ್ಕಳಿಗೆ ವಹಿಸಬೇಕು. ತದನಂತರದಲ್ಲಿ ಆತ ಸಂನ್ಯಾಸವನ್ನು ಸ್ವೀಕರಿಸಬೇಕು. ಈ ಜಗತ್ತಿನ ಅಂಟನ್ನು ಬಿಡಬೇಕು. ಅದಕ್ಕೆ ಬೇಕಾದ ಪ್ರಾರ್ಥನೆಯೇ ವಿಷ. ತನ್ನ ಕರ್ತವ್ಯರೂಪವಾದ ಕರ್ಮವನ್ನು ಮಾಡುವ ಸಂದರ್ಭದಲ್ಲಿ ಪ್ರಾರ್ಥನೆಯ ಆವಶ್ಯಕತೆ ಇರುತ್ತದೆ. ಅಂತಹ ಪ್ರಾರ್ಥನೆ ಬೇಡವೆಂದಲ್ಲ. "ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಮ್ । ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮ್ ಅಚಂಚಲಾಮ್" ಎಂಬ ಪ್ರಾರ್ಥನೆ ನಮ್ಮ ಮೋಚಕ. ಇದಕ್ಕೆ ಅನುರೋಧವಾದ ಪ್ರರ್ಥನೆಯೆಲ್ಲವೂ ವಿಹಿತವೇ. ಉಳಿದೆಲ್ಲಾ ಪ್ರಾರ್ಥನೆಯೂ ತ್ಯಾಜ್ಯವೇ. ಹಾಗಾಗಿ ಜಗತ್ತಿಗೆ ಅಂಟಿಕೊಳ್ಳುವಂತಹ ಪ್ರಾಥನೆ ಸಲ್ಲದು. ಎಂಬುದು ಈ ಪ್ರಶ್ನೋತ್ತರದ ಸಾರ.