ಅಹಲ್ಯಾಶಾಪವಿಮೋಚನೆಯ ಪ್ರಸಂಗದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಮೊದಲು ಶಾಪ ಬಂದದ್ದೇಕೆಂದು ನೋಡೋಣ. ಮಹಾತ್ಮನಾದ ಗೌತಮಋಷಿಯ ಪತ್ನಿ ಅಹಲ್ಯೆ. ಸುಂದರಿಯಾಗಿದ್ದ ಅವಳನ್ನು ಬಯಸಿ ಬಂದವನು, ದೇವರಾಜನಾದ ಇಂದ್ರ. ಇಂದ್ರನೊಂದಿಗೆ ಸಮಾಗಮವಾಗುತ್ತದೆ ಎಂಬ ಆಸೆಯಿಂದ, ತನಗಾಗಬಹುದಾದ ಪತನದ ಬಗ್ಗೆ ಆಕೆ ಗಮನ ಕೊಡಲಿಲ್ಲ. ಗೌತಮ ಮುನಿಯಾದರೋ ತಪೋಬಲದಿಂದ ಅಗ್ನಿಯಂತೆ ಜ್ವಲಿಸುತ್ತಿದ್ದವನು. ಕುಕೃತ್ಯವನ್ನು ಮಾಡಿ ತ್ವರೆಯಿಂದ ಹೋಗುತ್ತಿದ್ದ ಇಂದ್ರನ ಮುಂದೆ ಏಕಾಏಕಿ ಆ ಮುನಿಯು ಬಂದುಬಿಟ್ಟಾಗ, ಇಂದ್ರನಿಗೆ ನಡುಕ ಹುಟ್ಟಿಬಿಟ್ಟಿತು. ದುರ್ವೃತ್ತನಾದ ಇಂದ್ರನನ್ನು ಕಂಡ ಆ ವೃತ್ತಸಂಪನ್ನನಿಗೆ ಆದ ಘಟನೆ ತಿಳಿದು, ಇಂದ್ರನಿಗೆ ಶಾಪವಿತ್ತನು. ಅಷ್ಟೇ ಅಲ್ಲ. ಅಹಲ್ಯೆಯನ್ನೂ ಕಂಡ ಅವನು, ಅವಳು ನಿರಾಹಾರಳಾಗಿ ಸಾವಿರ ವರ್ಷ ಯಾರಿಗೂ ಗೋಚರಳಾಗದೇ ಆ ಘೋರವನದಲ್ಲಿ ಭಸ್ಮದಲ್ಲಿದ್ದು ತಪಿಸುವಂತೆ ಶಪಿಸಿದನು. ರಾಮನ ಆಗಮನ ಹಾಗೂ ಅವನ ಸತ್ಕಾರದ ಮೂಲಕ ಶಾಪಮೋಚನೆಯು ಆಗುವುದೆಂದೂ ಹೇಳಿದನು. ಆ ಶಾಪವಿತ್ತಾಗ ಗೌತಮಮುನಿಯು ಅಹಲ್ಯೆಯನ್ನು ಕರೆಯುವುದು "ದುರ್ವೃತ್ತೇ" ಎಂದು.
ಶ್ರೀರಾಮನು ಆ ಆಶ್ರಮದ ಹತ್ತಿರಕ್ಕೆ ಬಂದಾಗ, ಮೇಲಿನ ಮಾತಿಗೆ ವಿರೋಧವೋ ಎಂಬಂತೆ, ವಿಶ್ವಾಮಿತ್ರರು ಹೇಳುವ ಮಾತುಗಳಾದರೋ, "ಇಲ್ಲಿರುವ ದೇವರೂಪಿಣಿಯಾದ ಮಹಾತ್ಮಳಾದ ಅಹಲ್ಯೆಯನ್ನು ಉದ್ಧರಿಸು" ಎಂದು. ಹಾಗಾದರೆ ಅಹಲ್ಯೆ ಏನು - ಕೆಟ್ಟ ನಡತೆಯವಳೋ ಅಥವಾ ಮಹಾತ್ಮಳೋ?
ಆ ವಿಷಯವಿರಲಿ. ಕುರ್ಚಿಯ ಮೇಲೆ ಒಬ್ಬ ಹತ್ತಿ ನಿಂತಿದ್ದಾನೆನ್ನೋಣ. ಅಲ್ಲಿಂದ ಬಿದ್ದರೆ ಒಂದಷ್ಟು ಏಟಾಗಬಹುದು, ನೋಯಬಹುದು. ಅದೇ ವ್ಯಕ್ತಿ ಬೆಟ್ಟ ಹತ್ತುತ್ತಿದ್ದು, ಬಹಳ ಎತ್ತರದವರೆಗೂ ಹೋಗಿದ್ದರೆ, ಅಲ್ಲಿಂದ ಬಿದ್ದಾಗ ಏನಾಗಬಹುದು? ಎತ್ತರೆತ್ತರದಿಂದ ಬಿದ್ದಷ್ಟೂ ಪತನ ಹೆಚ್ಚು, ಪೆಟ್ಟೂ ಹೆಚ್ಚು. ಇದನ್ನು ಅಧ್ಯಾತ್ಮಕ್ಕೂ ಅನ್ವಯಿಸಬಹುದು. ಶ್ರೀರಂಗಮಹಾಗುರುಗಳು ತಮ್ಮ ಶಿಷ್ಯರೊಬ್ಬರೊಂದಿಗೆ ಬೆಟ್ಟ ಹತ್ತಿದಾಗ ಇದೇ ಅನ್ವಯವನ್ನು ಕೊಟ್ಟು "ಬೆಟ್ಟದಿಂದ ಕೆಳಗೆ ಬೀಳಲು ಹೆದರಿಕೆಯಾಗುತ್ತದೆಯಲ್ಲವೇಪ್ಪಾ?" ಎಂದು ಕೇಳಿದ್ದರು. ಈ ಮಾತಿನ ಅನ್ವಯ ಅಧ್ಯಾತ್ಮಕ್ಕೇ ಎಂಬುದು ಅವರ ಶಿಷ್ಯರಿಗೂ ತಿಳಿಯಿತು.
'ಪಾಪ' ಎನ್ನುವುದಕ್ಕಿರುವ ಮತ್ತೊಂದು ಪದ 'ಪಾತಕ'. ಪಾತಕವೆಂದರೆ "ಬೀಳಿಸುವಂತಹುದು". ಆಧ್ಯಾತ್ಮಿಕವಾಗಿ ಹೆಚ್ಚು ಎತ್ತರಕ್ಕೇರಿದವರು ಒಂದೊಂದು "ಪಾತಕ"ದ ಬಗ್ಗೆಯೂ ಬಹಳ ಭಯದಿಂದಿರಬೇಕು. ಏಕೆಂದರೆ ಅವರನುಭವಿಸುವ ಪತನ, ಅದರಿಂದಾಗುವ ನಷ್ಟವೆಂಬೆರಡೂ ಅಧಿಕ. ಮಹಾತ್ಮಳೇ ಆದ ಅಹಲ್ಯೆಯು ಮಾಡಿದ ಪಾಪದಿಂದ ಆದ ಪತನವೂ ಹೆಚ್ಚು. ಆ ಪಾಪವನ್ನು ಸುಡಲು ಆಕೆ ಮಾಡಬೇಕಾದ ತಪನವೂ (ಎಂದರೆ ತಪಸ್ಸೂ) ಹೆಚ್ಚೇ. ಮಹಾತ್ಮಳೇ ಆಗಿದ್ದ ಅವಳ ಒಂದು ಕೃತ್ಯ ಖಂಡನೀಯವಾಗಿದ್ದರೂ, ಅವಳ ಪಶ್ಚಾತ್ತಾಪ-ತಪಸ್ಸುಗಳಿಂದಾಗಿ, ಅವಳು ಆದರಣೀಯಳೇ ಸರಿ. ರಾಮ-ಲಕ್ಷ್ಮಣರೇ ಅವಳ ಪಾದಸ್ಪರ್ಶಮಾಡಿದರು.
ಇಲ್ಲಿ ನಮಗೆ ಸಿಗುವ ಪಾಠವಿದು. ಉನ್ನತಿಯನ್ನು ದೊರಕಿಸಿಕೊಳುವುದು ಎಷ್ಟು ಕಷ್ಟವೋ, ಅದನ್ನು ಕಾಪಾಡಿಕೊಳ್ಳುವುದು ಮತ್ತೂ ಕಷ್ಟ; ಮತ್ತು ಅಲ್ಲಿಂದ ಬಿದ್ದರೆ, ಪುನಃ ಆ ಶಿಖರವೇರುವುದು ಅತ್ಯಂತಕಠಿಣವೇ ಸರಿ. ಅಂತಹ ದುಷ್ಕರಕಾರ್ಯವನ್ನು ಸಾಧಿಸಿಕೊಂಡವಳು ಮಹಾತ್ಮಳಾದ ಅಹಲ್ಯೆ.
ಸೂಚನೆ: 5/3/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.