Monday, March 4, 2024

ಕೃಷ್ಣಕರ್ಣಾಮೃತ - 4 ಗುರುವಾಗಲು ಯಾರು ಅರ್ಹರು? (Krishnakarnamrta - 4 Guruvagalu Yaru Arharu?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

 

ಎಷ್ಟೇ ಒಳ್ಳೆಯ ಗಾನವೋ ಸಾಹಿತ್ಯವೋ ಇರಬಹುದು. ಅದನ್ನು ಹತ್ತಾರು ಬಾರಿ ಕೇಳಿಬಿಟ್ಟಾಗ, ಕೆಲವೊಮ್ಮೆ "ಆಹಾ, ಇದರ ಸ್ವಾರಸ್ಯವನ್ನು ಸಾಕಷ್ಟು ಬಾರಿ ಆಸ್ವಾದಿಸಿಯಾಯಿತು. ಬೇರೆ ಮತ್ತೇನನ್ನಾದರೂ ಆಸ್ವಾದಿಸೋಣವೇ?" ಎಂದು ತೋರಿದರೆ ಅಚ್ಚರಿಯಿಲ್ಲ. ಎಷ್ಟೋ ದೀರ್ಘಕಾಲವಾದರೂ ಒಂದು ಗಾನದ ಅಥವಾ ರಚನೆಯ ಆಸ್ವಾದನೆಯು ಮಾಸದೇ ಇದ್ದು, ಅದನ್ನೇ ಮತ್ತೂ ಇನ್ನೂ ಕೇಳುತ್ತಿರಬೇಕು ಎಂದು ತೋರುತ್ತಿದ್ದರೆ, ಅದಲ್ಲವೆ ಉತ್ತಮಗಾನ/ಉತ್ತಮಸಾಹಿತ್ಯ?

ಇಲ್ಲಿ ಲೀಲಾಶುಕನು ಕೇಳಿಕೊಳ್ಳುತ್ತಿರುವುದೇನು ಗೊತ್ತೇ? ತನ್ನ ಈ ಕೃತಿಯು ಕೃಷ್ಣನಿಗೆ ಮತ್ತೆ ಮತ್ತೆ ಆಸ್ವಾದ್ಯವಾಗುತ್ತಿರಬೇಕು - ಎಂದು. ಎಷ್ಟು ಕಾಲ ಆಸ್ವಾದ್ಯವಾಗಿರಬೇಕೆಂದು? ನೂರು ವರ್ಷವೇ? ಸಾವಿರ ವರ್ಷವೇ? ಭಾರತೀಯರ ಬ್ರಹ್ಮಾಂಡ-ಕಲ್ಪನೆ, ಕಾಲ-ಕಲ್ಪನೆಗಳು ಬಹಳ ವಿಶಿಷ್ಟವಾದವು. ಬೇರಾವ ದೇಶ/ಸಂಸ್ಕೃತಿಗಳಿಗೂ ಅನೂಹ್ಯವಾಗುವಂತಹವು! ಬ್ರಹ್ಮನ ಒಂದು ಹಗಲು, ಒಂದು ರಾತ್ರಿಗಳಿಗೆ ಒಂದು ಕಲ್ಪವೆಂದು ಹೆಸರು. ಒಂದು ಕಲ್ಪವೆಂದರೆ ನಮ್ಮ ಲೆಕ್ಕದಲ್ಲಿ, ಎಂದರೆ ಮನುಷ್ಯರ ಲೆಕ್ಕದಲ್ಲಿ, ೮೬೪ ಕೋಟಿ ವರ್ಷಗಳು! (ಎಂದರೆ ೮೬೪ ಆದಮೇಲೆ ಏಳು ಸೊನ್ನೆಗಳು). ಲೀಲಾಶುಕನು ಹೇಳುತ್ತಿರುವುದು "ಕಲ್ಪಶತಾಂತರ"ಕಾಲ - ಎಂದರೆ ಇನ್ನೆರಡು ಸೊನ್ನೆಗಳನ್ನು, ಅಥವಾ ಇನ್ನೂ ಹೆಚ್ಚನ್ನು ಸೇರಿಸುವುದು - ಅಷ್ಟು ಹೆಚ್ಚು ಕಾಲ! ಅಷ್ಟು ಕಾಲವೂ ನಿನ್ನ ಕಿವಿಗೆ ಅಮೃತವಾಗಿರುತ್ತಿರಲಿ, ಈ ಕೃತಿ! - ಎನ್ನುತ್ತಿದ್ದಾನೆ.

ರಾಮಾಯಣವನ್ನೂ ಮೀರಿಯೇ?

ವಾಲ್ಮೀಕಿರಾಮಾಯಣಕ್ಕೂ ಆಶೀರ್ವಾದ ಬಂದಿತಷ್ಟೆ? - ಅದು ದೀರ್ಘಕಾಲ ಪ್ರಚಾರದಲ್ಲಿರಲಿ, ಎಂದು. ಅದನ್ನು ಹೇಳಿದ್ದು ಹೀಗೆ: "ಈ ಭೂಮಿಯಲ್ಲಿ ಗಿರಿನದಿಗಳು ಎಲ್ಲಿಯ ತನಕ ಇರುವುವೋ ಅಲ್ಲಿಯವರೆಗೂ ಶ್ರೀಮದ್ರಾಮಾಯಣಕಥೆಯು ಲೋಕದಲ್ಲಿ ಪ್ರಚಾರದಲ್ಲಿರಲಿ!" ಹಾಗೆಂದು ವರ ಕೊಟ್ಟವನು ಬ್ರಹ್ಮ. ಆದರೆ ಲೀಲಾಶುಕ ಹೇಳುತ್ತಿರುವುದು ಕಲ್ಪಶತಾಂತರ ಕಾಲ, ಎಂದರೆ ಆ ಬ್ರಹ್ಮನ ಅಹೋರಾತ್ರಗಳ ನೂರಕ್ಕಿಂತಲೂ ಮಿಗಿಲು! ಓ! ಭಾರತೀಯರ ಕಲ್ಪಕಾಲದ ಕಲ್ಪನೆಯೇ ಅನ್ಯರಿಗೆ ಕಲ್ಪನಾತೀತ! ಈಚಿನ ವಿಜ್ಞಾನಿ ಕಾರ್ಲ್ ಸಾಗನ್, ಭಾರತೀಯರ ಕಾಲಗಣನೆಯನ್ನು ಕೊಂಡಾಡಿರುವುದು ನಿಮಗೆ ತಿಳಿದಿರಬಹುದು. ಇರಲಿ.

ಈ ಶ್ಲೋಕದಲ್ಲೇ ತನ್ನ ತಂದೆತಾಯಿಯರ ಹೆಸರನ್ನೂ ಕವಿಯು ಹೇಳಿಕೊಂಡಿದ್ದಾನೆ - ತಾಯಿಯ ಹೆಸರು ನೀವೀ. ತಂದೆಯ ಹೆಸರು ದಾಮೋದರ. ತಾನು ಈಶ್ವರನ ಭಕ್ತ. ಇವಿಷ್ಟಂಶಗಳು ಈ ಶ್ಲೋಕದಿಂದ ತಿಳಿಯುವುದು.

ಈಶಾನದೇವ-ಚರಣಾಭರಣೇನ ನೀವೀ-

   ದಾಮೋದರ-ಸ್ಥಿರ-ಯಶಃಸ್ತಬಕೋದ್ಗಮೇನ |

ಲೀಲಾಶುಕೇನ ರಚಿತಂ ತವ ದೇವ ಕೃಷ್ಣ

   ಕರ್ಣಾಮೃತಂ ವಹತು ಕಲ್ಪ-ಶತಾಂತರೇಽಪಿ ||

ಈ ಶ್ಲೋಕಕ್ಕೆ, ಹಾಗೂ ಅಲ್ಲಿಯ ಕೆಲವು ಪದಗಳಿಗೆ, ವ್ಯಾಖ್ಯಾನಗಳಲ್ಲಿ ಬಗೆಬಗೆಯಾದ ವಿವರಣೆಗಳು ಬಂದಿವೆ. ಅಲ್ಲಿಯ ಕ್ಲಿಷ್ಟಾರ್ಥ-ಕ್ಲಿಷ್ಟಕಲ್ಪನೆಗಳನ್ನು ಇಲ್ಲಿ ವಿಸ್ತರಿಸುವುದು ಅನವಶ್ಯವೆಂದು ಕೈಬಿಟ್ಟಿದೆ.

ಚಿಂತಾಮಣಿಯ ಚಿಂತೆ

ಗ್ರಂಥಾರಂಭದಲ್ಲಿಯ ಶ್ಲೋಕವನ್ನೂ ಈ ಸಂದರ್ಭದಲ್ಲೇ ಗಮನಿಸಬಹುದು. ಅದರಲ್ಲಿ ತನ್ನ ಗುರುಗಳನ್ನು ಸ್ಮರಿಸಿಕೊಂಡಿದ್ದಾನೆ, ಕವಿ ಲೀಲಾಶುಕ. ಅದರಲ್ಲಿಯ ಮೊದಲನೆಯ ಪದವೇ ಗುರುವಿನ ಹೆಸರಂತೆ. ಯಾರು ಆ ಗುರು? ಚಿಂತಾಮಣಿಯೆಂಬ ವೇಶ್ಯೆಯಂತೆ! "ಚಿಂತಾಮಣಿರ್ಜಯತಿ" ಎಂದೇ ಪ್ರಥಮಶ್ಲೋಕದ ಆರಂಭ. ಆ ಚಿಂತಾಮಣಿಯು ಈತನಿಗೆ ಹೇಗೆ ಗುರುವಾದಳು? - ಎಂಬುದನ್ನು ಕುರಿತಾದ ಕಥೆಯಿದೆ.

ಆ ವೇಶ್ಯೆಯಲ್ಲಿ ತೀವ್ರವಾದ ಆಸಕ್ತಿ, ಈ ಲೀಲಾಶುಕನಿಗೆ. ಒಮ್ಮೆ ಮಳೆಗಾಲ ಬಂದಿದೆ. ವಿರಹದಲ್ಲಿರುವ ಪ್ರೇಮಿಗಳಿಗೆ ಕಷ್ಟಪ್ರದವಾದ ಕಾಲವಲ್ಲವೇ, ಮಳೆಗಾಲವೆಂದರೆ? ನಡುರಾತ್ರಿಯಲ್ಲಿ ಅವಳ ಸಂಗವನ್ನು ಬಯಸಿದ ಈತ ಪಟ್ಟ ಪಾಡು ಅಲ್ಪವಲ್ಲ. ಮಳೆಯ ನಡುವೆ, ಪ್ರವಾಹದಲ್ಲಿರುವ ನದಿಯನ್ನು ದಾಟಿಹೋಗಬೇಕಾಗಿದೆ. ಯಾವ ದೋಣಿಯೂ ಇರಲಿಲ್ಲವಾಗಿ, ತೇಲುತ್ತಿದ್ದ ಶವವೊಂದನ್ನು ಹಿಡಿದು, ಅದನ್ನೇ ಆಸರೆಯನ್ನಾಗಿ ಮಾಡಿಕೊಂಡು, ನದಿಯ ಆಚೆಯ ದಡವನ್ನು ಸೇರಿದನಂತೆ. ಅವಳ ಮನೆಗೆ ಹೋಗಲು, ಅಲ್ಲಿ ಬಾಗಿಲನ್ನು ಹಾಕಿಯಾಗಿತ್ತು. ಅದನ್ನು ಕಂಡು ಖೇದಗೊಂಡ, ಲೀಲಾಶುಕ. ಮಹಡಿಯ ಗೋಡೆಯಲ್ಲಿನ ಬಿಲದೊಳಗೆ ಅರ್ಧ ಮೈತೂರಿಸಿದ್ದ ಸರ್ಪವನ್ನು ಹಗ್ಗವೆಂದುಕೊಂಡು ಅದನ್ನು ಹಿಡಿದೇ ಮಹಡಿಯನ್ನು ಹತ್ತಿಹೋಗಿಯೂ ಅವಳನ್ನು ಕಾಣುವ ಮುಂಚೆಯೇ ಮೂರ್ಛಿತನಾಗಿ ಬಿದ್ದಿದ್ದನಂತೆ.

ಸಖಿಯೊಂದಿಗಿದ್ದ ಆ ಚಿಂತಾಮಣಿಗೆ ಇವನು ಅಲ್ಲಿ ಬಿದ್ದಿರುವುದು ಗೊತ್ತಾದದ್ದು ಮಿಂಚು ಹೊಡೆದಾಗಿನ ಬೆಳಕಿನಲ್ಲಿ! ಆತನಿಗೆ ಉಪಚಾರವನ್ನು ಮಾಡಿ ಆತನ ಕಥೆಯನ್ನು ಕೇಳಿದ ಅವಳಿಗೆ ದುಃಖವೂ ಆಶ್ಚರ್ಯವೂ ಒಟ್ಟಿಗೇ ಉಂಟಾದವು. ಇಷ್ಟು ದೊಡ್ಡ ವಿದ್ವಾಂಸನು ತನ್ನ ರೂಪಕ್ಕೆ ಮರುಳಾಗಿ ಬಂದಿರುವುದು ಅವಳಿಗೆ ಅನೂಹ್ಯವಾಗಿತ್ತು, ತನ್ನ ಬಗ್ಗೆಯೇ ಅಸಹ್ಯವೂ ಆಗಿತ್ತು. ತನ್ನದು ಪಾಪಿಜೀವನವೆಂದು ತನ್ನನ್ನೇ ಹಳಿದುಕೊಂಡು, ಆತನಿಗೂ ಒಂದು ಮಾತನ್ನು ಹೇಳಿದಳಂತೆ. ನನ್ನಲ್ಲಿ ನೀನಿಟ್ಟಿರುವಷ್ಟು ಆಸಕ್ತಿಯನ್ನು ಶ್ರೀಕೃಷ್ಣನಲ್ಲಿ ತೋರಿಸಿದ್ದೇ ಆಗಿದ್ದಲ್ಲಿ ಏನೆಲ್ಲ ಸಾಧಿತವಾಗಿಬಿಡುತ್ತಿತ್ತೋ! – ಎಂದು. ಅವಳ ಮಾತಿನಿಂದ ಆತನಿಗೆ ವಿವೇಕೋದಯವಾಯಿತಂತೆ. ಬೆಳಕಾಗುತ್ತಲೇ ಅಲ್ಲಿಂದ ಹೊರಟು ಸೋಮಗಿರಿಯೆಂಬ ವೈಷ್ಣವಗುರುವಿನಿಂದ ಮಂತ್ರೋಪದೇಶವನ್ನು ಪಡೆದುಕೊಂಡನಂತೆ. ಆತನ ಮೊದಲ ಹೆಸರು ಬಿಲ್ವಮಂಗಲನೆಂದೂ, ಆತನ ಭಕ್ತಿಯ ಉತ್ಕಟತೆಯನ್ನು ಕಂಡು ಗುರುವಿತ್ತ ಹೊಸ ನಾಮಧೇಯವೇ ಲೀಲಾಶುಕನೆಂದೂ, ಸಾರಂಗರಂಗದಾ ಎಂಬ ಹೆಸರಿನ ವ್ಯಾಖ್ಯಾನವು ತಿಳಿಸುತ್ತದೆ. ಗುರುಪರಂಪರೆಯಲ್ಲಿ ಬಂದಿರುವ ಸರ್ವಜನಪ್ರಸಿದ್ಧವಾದ ಕಥೆಯಿದು - ಎಂದೂ ಅದು ಹೇಳುತ್ತದೆ.

ಗುರು ಮತ್ತು ಶಿಕ್ಷಾಗುರು

ಎಂದೇ ಅವಳನ್ನೂ, ಜೊತೆಗೆ ಸೋಮಗಿರಿ ಎಂಬ ಹೆಸರಿನ ತನ್ನ ಗುರುಗಳನ್ನೂ ಇಲ್ಲಿ ಸ್ಮರಿಸಿಕೊಂಡಿದ್ದಾನೆಂದು ಹೇಳುತ್ತಾರೆ. ಸೋಮಗಿರಿಯೆಂಬ ಗುರುಗಳು ಉಪದೇಶಿಸಿದುದು "ಶ್ರೀಮದ್‍ಗೋಪಾಲಮಂತ್ರರಾಜ" ಎಂದು ಹೇಳಲಾಗಿದೆ.

ಇದಲ್ಲದೆ ಶಿಕ್ಷಾಗುರುವನ್ನೂ ಸ್ಮರಿಸಿದೆ, ಈ ಕೃತಿಯ ಪ್ರಥಮಶ್ಲೋಕದಲ್ಲಿ. ಗುರುವಿಗೂ ಶಿಕ್ಷಾಗುರುವಿಗೂ ಭೇದವುಂಟೆಂದು ಹೇಳುತ್ತಾರೆ: "ಗುರುರ್ಹಿ ಉಪದೇಶಮಾತ್ರಂ ಕರೋತಿ, ಶಿಕ್ಷಾಗುರುಸ್ತು ಉಪಾಸನಾದಿ-ಪ್ರಕಾರಂ ಜ್ಞಾಪಯತಿ". ಈ ಮಾತಿನ ಅರ್ಥವಿದು. ಗುರುವು ಉಪದೇಶವನ್ನಷ್ಟೆ ಮಾಡುತ್ತಾನೆ. ಆದರೆ ಶಿಕ್ಷಾಗುರುವು ಉಪಾಸನೆ ಮುಂತಾದುವುಗಳ ಬಗೆಯನ್ನು ತಿಳಿಸಿಕೊಡುತ್ತಾನೆ.

ಲೀಲಾಶುಕನಿಗೆ ಯಾರು ಶಿಕ್ಷಾಗುರು? ಆತನ ಮಾತಿನಲ್ಲೇ ಹೇಳುವುದಾದರೆ "ಭಗವಾನ್ ಶಿಖಿ-ಪಿಂಛ-ಮೌಲಿ". ಭಗವಾನ್ ಎಂಬುದನ್ನು ಸಾಧಾರಣವಾಗಿ ಗೌರವಸೂಚಕವಾಗಿ ಬಳಸುವುದಿದೆ. ಉದಾಹರಣೆಗೆ, ವ್ಯಾಕರಣಶಾಸ್ತ್ರದ ಮೂಲಸೂತ್ರಕಾರನೆನಿಸಿದ ಪಾಣಿನಿಯನ್ನು "ಭಗವಾನ್ ಪಾಣಿನಿಃ" ಎಂದೇ ನಿರ್ದೇಶಿಸುವುದುಂಟು. ಶಂಕರ-ರಾಮಾನುಜರನ್ನೂ ಹಾಗೆ ಹೇಳುವುದುಂಟು. ಅವರ ಬಗ್ಗೆ ಅಪಾರ ಗೌರವವೇ ಅದಕ್ಕೆ ಕಾರಣ. ಆದರೆ ಇಲ್ಲಿ ಹಾಗಲ್ಲ. ಇಲ್ಲಿಯ "ಭಗವಾನ್" ಕೇವಲ ಗೌರವಸೂಚಕವಾಗಿ ಬಂದುದಲ್ಲ. ಇಲ್ಲಿ ನಿರ್ದೇಶಿಸಿರುವುದು ಸಾಕ್ಷಾದ್ ಭಗವಂತನನ್ನೇ.

ಯಾರು ಆ ಶಿಕ್ಷಾಗುರು? - ಎಂದರೆ "ಶಿಖಿಪಿಂಛವನ್ನು ತನ್ನ ಮೌಲಿಯಲ್ಲಿ ಧರಿಸಿರುವವನು", ಎನ್ನುತ್ತಾನೆ, ಲೀಲಾಶುಕ. ಅಗ್ನಿ, ಬ್ರಾಹ್ಮಣ, ಪರ್ವತ, ನವಿಲು - ಇವನ್ನು ಶಿಖಿಯೆನ್ನುತ್ತಾರೆ. ಪಿಂಛವೆಂದರೆ ಗರಿ. ಆದ್ದರಿಂದ ಶಿಖಿಪಿಂಛವೆಂದರೆ ನವಿಲುಗರಿ. ಅದನ್ನು ತನ್ನ ಶಿರಸ್ಸಿನಲ್ಲಿ ಧರಿಸಿರುವವನು.

ಕೃಷ್ಣನನ್ನು ಗುರುತಿಸುವುದಕ್ಕೆ ಎರಡೇ ಎಳೆಗಳು ಸಾಕು. ಚಿತ್ರ ಬಿಡಿಸುವವರು ಕೊಳಲ ಗುರುತನ್ನೋ, ನವಿಲ ಗರಿಯ ಗುರುತನ್ನೋ ಮೂಡಿಸುತ್ತಲೇ, ಇದು ಕೃಷ್ಣನೆಂಬ ಊಹೆ ಸ್ಫುರಿಸುತ್ತದಲ್ಲವೇ? ಹಾಗೆಯೇ ಇಲ್ಲಿ. ತಲೆಯ ಮೇಲೆ ಗರಿಯುಳ್ಳವನು – ಎಂದರೆ ಇನ್ನಾರು? ನಮ್ಮ ಕೃಷ್ಣನೇ.

 ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ2/3/2024 ರಂದು ಪ್ರಕವಾಗಿದೆ.