Monday, December 18, 2023

ವ್ಯಾಸ ವೀಕ್ಷಿತ - 67 ವ್ಯಾಸರು ತಿಳಿಸಿದ ರಹಸ್ಯವೃತ್ತಾಂತ (Vyaasa Vikshita - 67 Vyasaru Tilisida Rahasyavrttanta)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಋಷಿಕನ್ಯಾವೃತ್ತಾಂತವನ್ನು ವ್ಯಾಸರು ಮುಂದುವರೆಸಿದರು:

ಶಿವನನ್ನು ಮೆಚ್ಚಿಸಿ, ಆತನಿಗೆ ಹೇಳಿದಳು, ಆ ಋಷಿಕನ್ಯೆ: "ಗುಣಗಳಿಂದ ಕೂಡಿದ ಒಬ್ಬ ಪತಿಯನ್ನಷ್ಟೆ ನಾ ನಿನ್ನಿಂದ ಅಪೇಕ್ಷಿಸುವುದು" ಎಂದಳು. ಅವಳ ವಿಷಯದಲ್ಲಿ ಸಂತುಷ್ಟನಾಗಿದ್ದ ದೇವದೇವನು ಅವಳಿಗೆ ಮತ್ತೂ ಶುಭವಾದ ನುಡಿಯೊಂದನ್ನು ನುಡಿದನು. "ಪತಿಂ ದೇಹಿ" (ಪತಿಯನ್ನು ದಯಪಾಲಿಸು) ಎಂಬುದಾಗಿ ನೀನು ಐದು ಬಾರಿ ಹೇಳಿದೆಯಲ್ಲವೆ? ಆದ್ದರಿಂದ ನಿನ್ನಾ ಮಾತು ಹಾಗೆಯೇ ಯಥಾವತ್ತಾಗಿ ಘಟಿಸುವುದು, ಶುಭೇ! ನಿನಗೆ ಒಳ್ಳೆಯದಾಗಲಿ. ಬೇರೊಂದು ದೇಹವನ್ನು ನೀ ಪಡೆಯಲಿರುವೆ; ಆಗ ಇದು (ಪಂಚಪತಿತ್ವವು) ಜರುಗುವುದು - ಎಂಬುದಾಗಿ ಹೇಳಿದನು.

ಈ ಪೂರ್ವಘಟಿತವನ್ನು ಸ್ಮರಿಸಿಕೊಂಡ ವ್ಯಾಸರು ಮತ್ತೆ ಹೀಗೆ ಹೇಳಿದರು: "ಆ ದೇವರೂಪಿಣಿಯಾದವಳೇ ನಿನಗೆ ಮಗಳಾಗಿ ಜನಿಸಿರುವಳು, ದ್ರುಪದನೇ! ಐದು ಮಂದಿಗೆ ಪತ್ನಿಯಾಗಿ ವಿಹಿತಳಾಗಿರತಕ್ಕವಳು, ಈ ಪರಿಶುದ್ಧೆಯಾದ ನಾರಿ. ಮಹಾಮಖದಲ್ಲಿ (ಮಖವೆಂದರೆ ಯಜ್ಞ) ಜನಿಸಿರುವ ಈಕೆ, ಪಾಂಡವರಿಗಾಗಿ ಹುಟ್ಟಿರುವ ಸ್ವರ್ಗಶ್ರೀ- ಎಂಬುದಾಗಿ ತಿಳಿ. ಘೋರವಾದ ತಪಸ್ಸನ್ನೆಸಗಿ ಇವಳು ನಿನ್ನ ಮಗಳಾಗಿರುವಳು. ಓ ದ್ರುಪದರಾಜನೇ, ದೇವತೆಗಳಿಂದ ಸೇವಿತಳಾದ ಈ ಸುಂದರಿಯು ಐವರಿಗೆ ಒಬ್ಬ ಪತ್ನಿಯಾಗಿ ಸೃಜಿಸಲ್ಪಟ್ಟಿದ್ದಾಳೆ. ಇದು ತನ್ನ ಕರ್ಮದಿಂದಲೇ ಆಗಿರುವಂತಹುದು. ದೇವಸ್ವರೂಪರಾದ ಪಾಂಡವರಿಗೆ ಪತ್ನಿಯಾಗಲೆಂದೇ ಸ್ವಯಂಭುಬ್ರಹ್ಮನಿಂದ ಇವಳು ಸೃಷ್ಟಳಾಗಿರುವಳು. ಇದಿಷ್ಟನ್ನು ಕೇಳಿದ ಮೇಲೆ, ಓ ದ್ರುಪದನೇ, ನಿನಗೆ ಏನು ಇಷ್ಟವೋ ಅದನ್ನು ನೀ ಮಾಡಬಹುದು." ಇಷ್ಟು ಮಾತುಗಳನ್ನು ಅವರು ಆಡಿದರು.

(ಈ ಪ್ರಸಂಗಕ್ಕೆ ಪಂಚೇಂದ್ರೋಪಾಖ್ಯಾನವೆನ್ನುವರು. ಮಹಾಭಾರತದ ಒಂದು ಮುಖ್ಯವಾದ ಘಟ್ಟವಿದು. ವೈವಾಹಿಕಪರ್ವವೆಂದು ಇದರ ಹೆಸರು; ಆದಿಪರ್ವದೊಳಗಿನ ಉಪಪರ್ವವಿದು.

ದ್ರೌಪದಿಯ ವಿವಾಹದ ಔಚಿತ್ಯದ ಬಗ್ಗೆ ಎಲ್ಲಾ ಮುಖ್ಯಪ್ರಶ್ನೆಗಳನ್ನೂ ಮೂಲಮಹಾಭಾರತದಲ್ಲೇ ಎತ್ತಲಾಗಿದೆ. (ಪಾಶ್ಚಾತ್ತ್ಯವಿದ್ವಾಂಸರನ್ನು ಅನುಕರಿಸುವ) ಅನೇಕ ಭಾರತೀಯ ವಿದ್ವಾಂಸರೂ ಆಧುನಿಕ ವಿಮರ್ಶಕರೂ ಈಚಿ(ಗಿ)ನ ಕವಿಗಳೂ ತಮತಮಗೆ ರುಚಿಸುವ ಅರ್ಥ-ಭಾವಗಳನ್ನು ವ್ಯಕ್ತಪಡಿಸುತ್ತಾ, ಮೂಲಭಾರತದಲ್ಲೇ ಹೀಗಿದೆಯೆಂದೋ, ಅದರ ತಾತ್ಪರ್ಯವು ಹೀಗೆಂದೋ, ತಿರುಚುವ ತಮ್ಮ ಪ್ರವೃತ್ತಿಯನ್ನೇ ತೋರಿಸಿಕೊಂಡಿದ್ದಾರೆ. ಮೂಲದತ್ತ ನಮ್ಮ ದೃಷ್ಟಿ ನೆಟ್ಟಿರಲಿ. ಕರ್ಣನು ಬಿಲ್ಲನ್ನೆತ್ತಿದ್ದೂ ಅಲ್ಲದೆ ಅದನ್ನು ಹೆದೆಯೇರಿಸಿದನು ಕೂಡ; ಅವನಿನ್ನೇನು ಲಕ್ಷ್ಯವನ್ನು ಬೀಳಿಸಿಬಿಡುವನೆಂದು ಪಾಂಡವರೆಂದುಕೊಳ್ಳುವಷ್ಟರಲ್ಲೇ ದ್ರೌಪದಿಯು ಸ್ಪಷ್ಟವಾಗಿ ಘೋಷಿಸಿಯೇಬಿಟ್ಟಳು, "ನಾನು ಸೂತನನ್ನು ವರಿಸುವವಳಲ್ಲ" ಎಂದು. 

ಬಿಲ್ಲನ್ನೆತ್ತಲು ಯತ್ನಿಸಿದ ಇತರರಾರೂ ಸಫಲರಾಗದಿರಲು, ಬ್ರಾಹ್ಮಣರ ಮಧ್ಯದಿಂದ ಎದ್ದು ಬಂದವನು ವಿಪ್ರವೇಷಧಾರಿಯಾದ ಅರ್ಜುನ. ಆತನು ಲಕ್ಷ್ಯವನ್ನು ಭೇದಿಸಿಯಾದ ಮೇಲೆ ಆದದ್ದು ಕೋಲಾಹಲವೇ: ನಮ್ಮನ್ನು (ಕ್ಷತ್ರಿಯರನ್ನು) ಬಿಟ್ಟು ಬ್ರಾಹ್ಮಣನೊಬ್ಬನಿಗೆ ರಾಜಪುತ್ರಿಯನ್ನು ಕೊಡುವುದೆಂದರೇನರ್ಥ? - ಎಂದು ಗುಲ್ಲೆಬ್ಬಿಸಿ ದ್ರುಪದನನ್ನೇ ಕೊಲ್ಲಲು ಮುಂದಾದರು, ಅಲ್ಲಿ ಸೇರಿದ್ದ ರಾಜರು. ಭೀಮಾರ್ಜುನರು ಅವರನ್ನೆಲ್ಲ ಸದೆಬಡಿಯಬೇಕಾಯಿತು. ಕರ್ಣ-ಶಲ್ಯರೂ ಏಟು ತಿನ್ನಬೇಕಾಯಿತು.

ದ್ರುಪದನಿಗಂತೂ ಚಿಂತೆಯಾಗಿತ್ತು. ತನ್ನ ಪುತ್ರಿಯು ವೈಶ್ಯನ ಅಥವಾ ಶೂದ್ರನ ಕೈಯನ್ನು ಹಿಡಿದಿಲ್ಲ ತಾನೆ? - ಎಂದು. ಆತನು ಕಳುಹಿಸಿದ ಪುರೋಹಿತನಿಗೆ ಯುಧಿಷ್ಠಿರನು ಸ್ಪಷ್ಟವಾಗಿ ಹೇಳಿದುದು: ವರ್ಣ-ಶೀಲ-ಕುಲ-ಗೋತ್ರಗಳನ್ನೇನೂ ದ್ರುಪದನು ನಿಗದಿ ಮಾಡಿರಲಿಲ್ಲವಲ್ಲವೇ? ಲಕ್ಷ್ಯವೇಧವೆಂಬ ಶುಲ್ಕವನ್ನು ತೆತ್ತೇ ದ್ರೌಪದಿಯನ್ನು ಪಡೆಯಲಾಗಿದೆ - ಎಂದು.

ಸೂಚನೆ : 17/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.