ಪ್ರಾಚೀನ ಮಹರ್ಷಿಗಳು ಪ್ರಕೃತಿಯ ನಿಗೂಢತೆಯನ್ನು ಅರಿಯಲು ಹಗಲು-ಇರುಳು ಶ್ರಮಿಸಿದರು. ಸತ್ಯವನ್ನರಿಯಲು ಅವರು ಉಪಯೋಗಿಸಿದ ವಿಶಿಷ್ಟವಾದ ಪ್ರಯೋಗಾಲಯ, ಅವರದೇ ದೇಹ. ಅವರು ಅನ್ವೇಷಣೆಗೆ ಉಪಯೋಗಿಸಿದ ಸೂಕ್ಷ್ಮದರ್ಶಕ, ಯೋಗದ ಅಭ್ಯಾಸದಿಂದ ತೀಕ್ಷ್ಣಗೊಳಿಸಿ, ಹದಗೊಳಿಸಿ, ತಯಾರುಮಾಡಿದ ಬುದ್ಧಿಯ-ಲೆನ್ಸ್; ಅದನ್ನು ಕೇಂದ್ರೀಕರಿಸಿ ನೋಡಿದಾಗ ಅತ್ಯಂತ ಆಳದಲ್ಲಿ ಅಡಗಿರುವ ವಸ್ತುವನ್ನು ಸ್ಪಷ್ಟವಾಗಿ ದೃಷ್ಟಿಗೆ ದೊರಕಿಸಿಕೊಟ್ಟಿತು. ಅದರಿಂದ ಹೃದಯತುಂಬಿ ಹರಿದುಬಂದಿತು ಪರಮಪುರುಷನ ದರ್ಶನದ ಉದ್ಗಾರ. ಇದೇ ದರ್ಶನವನ್ನು ಪಡೆದ ಅನೇಕಾನೇಕ ಮಹರ್ಷಿಗಳು ಉಪನಿಷತ್ ಗಳಲ್ಲೂ, ಮತ್ತಿತರ ಗ್ರಂಥಗಳಲ್ಲಿಯೂ ತಾವುಗಳು ಕಂಡಿದ್ದನ್ನು ದಾಖಲಿಸಿರುವರು.
ಅವರ ಈ ಅನ್ವೇಷಣೆ-ಸಂಶೋಧನೆಗಳು ಒಂದೇ ಸತ್ಯದಕಡೆ ಬೆಟ್ಟುತೋರಿಸುತ್ತವೆ ('ಏಕಂ ಸತ್')-ಸದ್ವಸ್ತು, ಪರಮೇಶ್ವರ ಒಬ್ಬನೇ ಎಂದು. ಅವನು ಸರ್ವವ್ಯಾಪಕ, ಎಲ್ಲದರಲ್ಲೂ ಅಂತರ್ಗತ ಮತ್ತು ಎಲ್ಲವನ್ನೂ ಮೀರಿದವನು (ಈಶಾವಾಸ್ಯಮಿದಂ ಸರ್ವಂ). ಈ ಒಂದು, ಸಮಯದ ಆದಿಯಲ್ಲಿ ತನ್ನ ಇಚ್ಛೆಯಂತೆ ಅನೇಕರೂಪಗಳಾಗಿ ವಿಕಾಸಗೊಳ್ಳಲು ಆರಂಭಿಸುತ್ತದೆ (ಸೋsಕಾಮಯತ ಬಹುಸ್ಯಾಮ್ ಪ್ರಜಾಯೇಯೇತಿ). ಈ ಸರ್ವೋಚ್ಛಶಕ್ತಿಯೇ ತನ್ನನ್ನುತಾನು ವಿಶ್ವವಾಗಿ ವಿಸ್ತರಿಸಿಕೊಂಡಿತು. ಆದ್ದರಿಂದ ಋಷಿಗಳು ಅದನ್ನು ಬೇರೆಬೇರೆ ಹೆಸರುಗಳಿಂದ ಕರೆಯುತ್ತಾರೆ (ವಿಪ್ರಾಃ ಬಹುಧಾ ವದಂತಿ). ಈ ವಿಸ್ತಾರ-ಕೆಲಸವನ್ನು ನಿರ್ವಹಿಸಲು ಅದು ತನ್ನನ್ನುತಾನು ಮೂರು ಶಕ್ತಿಗಳಾಗಿ ವಿಭಜಿಸಿಕೊಂಡಿತು - ವಿಶ್ವದಲ್ಲಿನ ಪ್ರತಿಯೊಂದು ಸೃಷ್ಟಿಯಕಾರ್ಯಕ್ಕೂ ಬ್ರಹ್ಮನು; ತಾನೇ ಬಯಸಿದ ಸ್ಥಿತಿಯಲ್ಲಿರಿಸುವ ಕಾರ್ಯಕ್ಕೆ ವಿಷ್ಣುವು; ಮತ್ತು ಇವುಗಳನೆಲ್ಲವನ್ನೂ ಮೊದಲ ವಸ್ತುವಿನಲ್ಲಿ ಲಯಹೊಂದಿಸುವುದಕ್ಕಾಗಿ ಶಿವನು (ಏಕೈವ ಮೂರ್ತಿಃ ಬಿಭಿದೇ ತ್ರಿಧಾಸಾ). ಸ್ಥೂಲ-ಸೂಕ್ಷ್ಮವಿಶ್ವಗಳ ನಿರ್ವಹಣೆಗೆ, ಈ ಮೂರು ಶಕ್ತಿಗಳು ತಮ್ಮನ್ನು ಮೂವತ್ತಮೂರು (ವಸು(8)+ರುದ್ರ(11)+ಆದಿತ್ಯ(12)+ಇಂದ್ರ+ಪ್ರಜಾಪಾತಿ = 33) ಉಪಶಕ್ತಿಗಳಾಗಿಯೂ ಮತ್ತು ಇನ್ನೂ ಮುಂದುವರಿದು ಕೋಟ್ಯಂತರ ಸೂಕ್ಷ್ಮಶಕ್ತಿಗಳಾಗಿಯೂ ವಿಂಗಡಿಸಿಕ್ಕೊಂಡವು. ಹೀಗೆ ಅವರ ರೂಪಗಳ ಸಂಖ್ಯೆ ಅಪಾರ-ಅನಂತ. ಮೂವತ್ತುಮೂರು ಕೋಟಿ ಎಂಬ ಸಂಖ್ಯೆ ಇದನ್ನೇ ಸೂಚಿಸುವುದು. ಈ ಶಕ್ತಿಗಳನ್ನೇ ದೇವತೆಗಳು- ಅಂದರೆ ಪ್ರಕಾಶಮಾನವಾದವು ('ದಿವ್ ದೀಪ್ತೌ'=ಹೊಳೆಯುವ)- ಎಂಬುದಾಗಿಯೂ ಆ ಸರ್ವೋಚ್ಚಶಕ್ತಿಯನ್ನು ಪರಾದೇವತೆ (ಭಗವಂತ) ಎಂದೂ ಉಲ್ಲೇಖಿಸಿದ್ದಾರೆ. ಆದುದರಿಂದ ವಿಕಾಸವಾಗದ ಸ್ಥಿತಿಯಲ್ಲಿ ಪರಮಪುರುಷನು 'ಒಬ್ಬನೇ' ಆಗಿರುವನು. ವಿಕಾಸದ ದೆಸೆಯಲ್ಲಿ ಪ್ರತಿಯೊಬ್ಬ ದೇವತೆಯೂ ಆತನ ವಿಸ್ತಾರರೂಪವಾಗಿ ಕಾಣುವರು.
ಇಷ್ಟು ಕೋಟಿ ದೇವತೆಗಳ ಆಗತ್ಯವಿದೆಯೇ ಎಂದರೆ, ಒಂದು ಕಾರ್ಖಾನೆಯಲ್ಲಿ ಉತ್ಪಾದನೆ- ಮಾರುಕಟ್ಟೆ-ದುರಸ್ತಿ-ಆಡಳಿತ ಮೊದಲಾದ ಪ್ರತಿಯೊಂದು ವಿಭಾಗವನ್ನೂ ಸಮರ್ಪಕವಾಗಿ ನಿರ್ವಹಿಸುವುದಕ್ಕೆ ಎಷ್ಟುಮಂದಿ ಕಾರ್ಮಿಕರ ಅವಶ್ಯಕತೆಯಿದೆಯೆಂಬುದನ್ನು ಹೇಗೆ ನಿರ್ಧರಿಸಬೇಕು? ಆ ಸಂಖ್ಯೆ, ಕೆಲಸದ ಪ್ರಮಾಣದ ಅಗಾಧತೆಯಮೇಲೆ ನಿಂತಿದೆ. ತುಲನಾತ್ಮಕವಾಗಿ, ವಿಶ್ವವೆಂಬ ಕಾರ್ಖಾನೆಯನ್ನು ನಿರ್ವಹಿಸಲು ಕೋಟಿಗಟ್ಟಲೆ ಸಂಖ್ಯೆಯಿದ್ದರೆ ಅಸಮಂಜಸವೆಂದೇನೂ ತೋರುವುದಿಲ್ಲ. ಮತ್ತು, ವಿರಾಟ್ ಪುರುಷನಿಗೆ ಸಹಸ್ರ ತಲೆಗಳು-ಸಹಸ್ರ ಕಣ್ಣುಗಳು-ಸಹಸ್ರ ಪಾದಾಗಳು ಎಂಬ ವರ್ಣನೆಯಲ್ಲಿ ಸಹಸ್ರ ಎಂಬುದು 999+1 ಎಂಬ ಅರ್ಥವಲ್ಲ. ಅನಂತ ಎಂಬುದಾಗಿ ತಿಳಿಯಬೇಕು ಎಂಬ ಶ್ರೀರಂಗಮಹಾಗುರುವಿನ ವಿವರಣೆಯಂತೆ ಇಲ್ಲಿಯೂ 33 ಕೋಟಿ ಎಂಬುದನ್ನೂ ಅರ್ಥೈಸಿಕೊಳ್ಳಬೇಕಾಗಿದೆ.
ಅಂತೆಯೇ ಈ ಪಿಂಡಾಂಡವೆಂಬ ಮಾನವದೇಹವು ತನ್ನ ಕಾರ್ಯನಿರ್ವಹಣೆ ಮಾಡಲು ಲಕ್ಷೋಪಲಕ್ಷ ನರಗಳು, ರಕ್ತನಾಳಗಳು ಬೇಕಾಗುತ್ತವೆಯಲ್ಲವೇ? ನೋಡುವ ಕ್ರಿಯೆಯಲ್ಲಿ ಕಣ್ಣಿನ ಪಾತ್ರ ಒಂದೇ ಇರುವುದಿಲ್ಲವಲ್ಲ. ಅದರ ಹಿಂದೆ ಅಸಂಖ್ಯಾತ ನರಗಳು-ರಕ್ತನಾಳಗಳು-ಸ್ನಾಯುಗಳು ಮುಂತಾದವುಗಳು ಮೆದುಳಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಅಂತೆಯೇ ಶ್ರವಣ-ಆಘ್ರಾಣ-ರಕ್ತಸರಬರಾಜು-ಜೀರ್ಣಕ್ರಿಯೆ ಮುಂತಾದ ಪ್ರತಿಯೊಂದು ಕ್ರಿಯೆಯಲ್ಲಿಯೂ ಲಕ್ಷಾಂತರ ಶಕ್ತಿಗಳ ಸಹಾಯ ಆವಶ್ಯಕ ಮತ್ತು ಅನಿವಾರ್ಯ.
ಕಾರ್ಖಾನೆಯನ್ನು ಸಮರ್ಪಕವಾಗಿ ನಡೆಸಲು, ಒಂದು ನಿರ್ವಹಣಾಸರಣಿ ಮತ್ತು ಅಧಿಕಾರವ್ಯಾಪ್ತಿ ಅಗತ್ಯ. ಆಡಳಿತದಲ್ಲಿ ಮಾಲೀಕನಿಂದ office-boyವರೆವಿಗೂ ಅಧಿಕಾರವ್ಯಾಪ್ತಿ ಹರಿದುಬಂದಿರುತ್ತದೆ. ಈ ವ್ಯವಸ್ಥೆಯು ಸುಸೂತ್ರವಾಗಿಯೂ ಲಾಭದಾಯಕವಾಗಿಯೂ ನಡೆಯಬೇಕಾದರೆ, ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಒಪ್ಪಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗುತ್ತದೆ. ಹಾಗೂ, ಪ್ರತಿಯೊಂದು ಕೆಲಸವೂ ಅಷ್ಟೇಮುಖ್ಯ. ಸಂಸ್ಥೆಯ ಎಲ್ಲಾಸದಸ್ಯರೂ ಅವರವರ ಕ್ಷೇತ್ರದಲ್ಲಿ ಅತಿಮುಖ್ಯ ಅಂಗಗಳೇ. ಆದ್ದರಿಂದ, ಸಂಸ್ಥೆಯಲ್ಲಿನ ಯಾರಿಬ್ಬರನ್ನೂ ತುಲನೆಮಾಡುವುದು ಸೂಕ್ತವೆನಿಸುವುದಿಲ್ಲ. ಅದರಂತೆಯೇ ದೇವತೆಗಳಲ್ಲಿನ ಮೇಲು-ಕೀಳು ಭಾವವೂ ಅನುಚಿತವೇ ಸರಿ.
ಆದುದರಿಂದ ಸ್ಥೂಲ ಹಾಗೂ ಸೂಕ್ಷ್ಮವಿಶ್ವದಲ್ಲಿ ಭಗವಂತನ ಆದೇಶದಂತೆ ಕಾರ್ಯನಿರ್ವಹಣೆಯನ್ನು ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬ ದೇವತೆಯ ಪಾಲಿಗೂ ಇದೆ. ಪ್ರತಿಯೊಂದು ಕೆಲಸವೂ ಅಷ್ಟೇಮುಖ್ಯ ಎಂಬುದೂ ಗಮನಾರ್ಹ. ಋಷಿ-ಮಹರ್ಷಿಗಳು ತಿಳಿಸಿರುವಂತೆ ದೇವತೆಗಳು ಈ ಬ್ರಹ್ಮಾಂಡ-ಪಿಂಡಾಂಡಗಳಲ್ಲಿ ಸೃಷ್ಟಿ-ಸ್ಥಿತಿ-ಲಯಗಳ ಹಿಂಬದಿಯಲ್ಲಿ, ಸೂಕ್ಷ್ಮಾತಿಸೂಕ್ಷ್ಮಸ್ತರಗಳಲ್ಲಿ ಬಹುವಿಧವಾದ ಕಾರ್ಯಗಳನ್ನು ನಿರ್ವಹಿಸುವ ಶಕ್ತಿಗಳಾಗಿದ್ದಾರೆ. ಅವರೆಲ್ಲರೂ ಪರಬ್ರಹ್ಮನಿಂದಲೇ ಸೃಷ್ಟಿಯಾದ, ಅವನದೇ ಆದ ವಿಭೂತಿಗಳು, ಅವನ ಸಹಾಯಕರು. ಅವನ ಧರ್ಮ-ಸೇತುವೆಯನ್ನು ಕಟ್ಟಿ-ರಕ್ಷಿಸುವ ಕರ್ತವ್ಯ ಅವರ ಪಾಲಿನದು. ಅವರ ನಿರ್ದಿಷ್ಟ ಕರ್ತವ್ಯಗಳನ್ನು ಸ್ವಾಭಾವಿಕವಾಗಿಯೇ ಸೃಷ್ಟಿಗೆ ಒಡಯನೇ ನಿಗದಿಪಡಿಸುತ್ತಾನೆ.
(ಮುಂದುವರಿಯುವುದು)
ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 16/12/2023 ರಂದು ಪ್ರಕಟವಾಗಿದೆ.