ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 65 ಸೇವಕರಿಗೆ ವೇತನವನ್ನು ಕೊಡುವ ಉದ್ದೇಶವೇನು ?
ಉತ್ತರ - ಪೋಷಣೆಗಾಗಿ
ಈ ಜಗತ್ತಿಗೆ ಕಾಲಿಟ್ಟ ಪ್ರತಿಯೊಬ್ಬ ಮಾನವನೂ ತನ್ನ ಭೌತಿಕ ಜೀವನವನ್ನು ನಡೆಸಲೇಬೇಕು. ಅದಕ್ಕೆ ಅವನಿಗೆ ಜೀವನ ನಿರ್ವಹಣೆಗೆ ಯಾವುದಾದರೂ ವ್ಯಾವಹಾರಿಕವಾದ ದ್ರವ್ಯದ ಅಗತ್ಯವಿದ್ದೇ ಇದೆ. ಈ ವ್ಯಾವಹಾರಿಕ ದ್ರವ್ಯವು ಕಾಲಕಾಲಕ್ಕೆ ಬೇರೆಬೇರೆಯಾಗುತ್ತಾ ಬಂದಿದೆ. ಒಂದುಕಾಲದಲ್ಲಿ ವಸ್ತುವಿನಿಮಯವೇ ಅಂತಹ ಸಾಧನವಾದರೆ, ಇನ್ನು ಕೆಲವೊಮ್ಮೆ ಗೋವು ಮುಂತಾದ ಪ್ರಾಣಿಗಳೂ ಆ ಸ್ಥಾನವನ್ನು ಪಡೆದಿದ್ದವು. ಪ್ರಕೃತಸಂದರ್ಭದಲ್ಲಿ ಆ ಸ್ಥಾನವನ್ನು ಹಣ ಅಥವಾ ಧನ ಆವರಿಸಿಕೊಂಡಿದೆ. ಆದ್ದರಿಂದ ಇಂದಿನ ಕಾಲದಲ್ಲಿ ಜೀವನ ನಿರ್ವಹಣೆ ಮಾಡಲು ಹಣ ತುಂಬಾ ಅಗತ್ಯವಾದುದು. ಅದು ಎಷ್ಟು ಅಗತ್ಯ ಎಂಬುದಕ್ಕೆ ಮಹಾಭಾರತದಲ್ಲಿ ' ಅರ್ಥಾಃ ಬಹಿಶ್ಚರಾಃ ಪ್ರಾಣಾಃ - ಹಣವೆಂದರೆ ಅದು ನಮ್ಮ ಬಾಹ್ಯವಾದ ಉಸಿರು ಎಂಬಷ್ಟರ ಮಟ್ಟಿಗೆ ಹೇಳಲಾಗಿದೆ. ಅಂದರೆ ಹಣವಿಲ್ಲದೆ ಜೀವನ ಅಸಾಧ್ಯ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅದಕ್ಕಾಗಿ ಕಷ್ಟಪಡಲೇಬೇಕು. ಸನ್ಮಾರ್ಗದಲ್ಲಿ ಧನಸಂಪಾದನೆ ಮಾಡಿ ತನ್ನ ಕುಟುಂಬವನ್ನು ಅಥವಾ ತನ್ನನ್ನು ಆಶ್ರಯಿಸಿದವರನ್ನು ಪೋಷಿಸಬೇಕಾದುದು ಅವನ ಆದ್ಯ ಕರ್ತವ್ಯವಾಗಿರುತ್ತದೆ. ಇಲ್ಲಿ ಯಕ್ಷನು ಕೇಳುವ ಪ್ರಶ್ನೆ ಇದಕ್ಕೆ ಸಂಬಂಧಿಸಿದ್ದಾಗಿದೆ. ಸಾಮಾನ್ಯವಾಗಿ ಕೆಲಸ ಮಾಡುವ ಒಬ್ಬ ಸೇವಕ ಅಥವಾ ವೇತನವನ್ನು ಪಡೆದು ತನ್ನ ಜೀವಿತವನ್ನು ನಿರ್ವಹಿಸುವ ವ್ಯಕ್ತಿಯು ಹೇಗೆ ತನ್ನ ಜೀವನವನ್ನು ನಿರ್ವಹಿಸಬೇಕು ಎಂಬುದು. ಅಂತಹ ವ್ಯಕ್ತಿಗೆ ಕೊಡುವ ಧನವು ಅಥವಾ ವೇತನವು ಯಾವ ಉದ್ದೇಶಕ್ಕಾಗಿ ಕೊಡಲಾಗುತ್ತದೆ? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಅದಕ್ಕೆ ಧರ್ಮರಾಜನ ಉತ್ತರ ಹೀಗಿದೆ - "ವೇತನವನ್ನು ಪಡೆದ ಆ ವ್ಯಕ್ತಿಯು ಆ ಧನದಿಂದ ತನ್ನ ಕುಟುಂಬವನ್ನು ಪೋಷಿಸಬೇಕು" ಎಂದು.
ಈ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಆಶ್ರಿತರು ಯಾರು ಎಂಬುದಕ್ಕೆ ಒಂದಿಷ್ಟು ವ್ಯಾಪ್ತಿಯಿದೆ. ತನ್ನ ವ್ಯಾಪ್ತಿಯಲ್ಲಿ ಬರುವ ಜನರನ್ನು ಪೋಷಿಸಬೇಕಾದುದು ಅವನ ಕರ್ತವ್ಯವಾಗಿರುತ್ತದೆ. ಅದಕ್ಕೆ ಅವನು ಒಂದಷ್ಟು ಸಂಪತ್ತನೋ ಅಥವಾ ಧನವನ್ನು ಸಂಪಾದನೆ ಮಾಡಬೇಕಾಗುತ್ತದೆ. ಸಂಪಾದಿಸಿದ್ದನ್ನು ವಿತರಿಸಲೂ ಬೇಕಾಗುತ್ತದೆ. ಅದನ್ನೇ ದಾನ ಎನ್ನುವ ಪದದಿಂದ ಇಲ್ಲಿ ಅರ್ಥೈಸಲಾಗಿದೆ. ಅಂದರೆ ಪಡೆದ ದ್ರವ್ಯವು ಯಾವುದಕ್ಕೆ ಉಪಯೋಗವಾದಾಗ ಆ ದ್ರವ್ಯಕ್ಕೆ ಸಾರ್ಥಕತೆ ಬರುತ್ತದೆ ಎಂಬುದು ಇಲ್ಲಿ ಅತ್ಯಂತ ಮುಖ್ಯವಾದ ವಿಷಯವಾಗಿದೆ. ಒಬ್ಬ ರಾಜನಾದವು ತನ್ನ ಸಂಪಾದನೆಯನ್ನು ಪ್ರಜೆಗಳ ಯೋಗಕ್ಷೇಮಕ್ಕಾಗಿಯೇ ವಿನಿಯೋಗಿಸಬೇಕಾಗುತ್ತದೆ. ಸಂಪೂರ್ಣ ರಾಜ್ಯದ ಹೊಣೆ ಅವನದ್ದಾಗಿರುತ್ತದೆ. ಆದರೆ ಒಬ್ಬ ಸಾಮಾನ್ಯ ಗೃಹಸ್ಥನದ್ದು ಅವನ ಹೆಂಡತಿ, ಮಕ್ಕಳು, ತಂದೆ ತಾಯಿ ಇಷ್ಟೇ ಪ್ರಧಾನವಾದ ವ್ಯಾಪ್ತಿಯಾಗಿರುತ್ತದೆ. ಅದನ್ನು ಅವನು ಸರಿಯಾಗಿ ನಿರ್ವಹಣೆ ಮಾಡಿದ ಪಕ್ಷೇ ಆ ಸಂಗ್ರಹ ಸದ್ವಿನಿಯೋಗವಾಯಿತು ಎಂದೇ ಅರ್ಥ. ಯಾವುದೇ ಪ್ರತಿಗ್ರಹವೂ ಸಾರ್ಥಕವಾಗಬೇಕಾದರೆ ಅದರ ಸದುಪಯೋಗ ಅಥವಾ ಸರಿಯಾದ ಬಳಕೆಯಿಂದ ಮಾತ್ರವೇ. ಹಾಗಾಗಿ ವೇತನವನ್ನು ಪಡೆಯುವವನ ಸಂಪಾದನೆಯು ಅವನ ಮತ್ತು ಅವನ ಪರಿವಾರ ಪೋಷಣೆಯಾದರೆ ಸಾರ್ಥಕ. ಮತ್ತು ಪ್ರತಿಯೊಬ್ಬರೂ ತನ್ನ ಸಂಗ್ರಹದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವುದರಿಂದಲೂ, ಮತ್ತೊಬ್ಬರ ಜೀವಿಕೆಗೆ ಸಹಾಯ ಮಾಡುವುದರಿಂದಲೂ ಅದು ಸಾರ್ಥಕವೇ. ಇಷ್ಟು ವಿಚಾರ ಈ ಉತ್ತರದಲ್ಲಿ ಅಡಕವಾಗಿದೆ.
ಸೂಚನೆ : 03/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.