Thursday, December 7, 2023

ವ್ಯಾಸ ವೀಕ್ಷಿತ - 65 ಪಂಚಪಾಂಡವರ ಪೂರ್ವೇತಿಹಾಸ ( Vyaasa Vikshita - 65 Pancha Pandavara Purvetihasa)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ರುದ್ರನ ಈ ಮಾತನ್ನು ಕೇಳಿದ ಇಂದ್ರನು ನಡುಗಿಹೋದ. ಗಾಳಿ ಬೀಸಿದಾಗ ಆಲದೆಲೆ ನಡುಗುವುದಲ್ಲವೆ? ಹಾಗೆ ನಡುಗಿದ, ಇಂದ್ರ. ಪ್ರಾಂಜಲಿಯಾಗಿ (ಎಂದರೆ ಕೈಜೋಡಿಸಿದವನಾಗಿ) ಉಗ್ರರೂಪಿಯಾದ ಭಗವಂತನಿಗೆ ಹೇಳಿದ: "ಭವನೇ (ಭವ ಎನ್ನುವುದು ರುದ್ರನ ಮತ್ತೊಂದು ಹೆಸರು), ಸಮಸ್ತ-ಜಗತ್ತಿಗೂ ನೀನೇ ನಿಜವಾಗಿಯೂ ಸೃಷ್ಟಿಕರ್ತ!"  

ಅವನ ಈ ಮಾತಿಗೆ ಉಗ್ರವರ್ಚಸ್ಕನಾದ (ಎಂದರೆ ತೀವ್ರವಾದ ತೇಜಸ್ಸುಳ್ಳ) ರುದ್ರನು ಜೋರಾಗಿ ನಕ್ಕು ಹೇಳಿದನು: "ನಿನ್ನಂತಹವರು ನನ್ನ ಕೃಪೆಗೆ ಪಾತ್ರರಾಗಲಾರಿರಿ. ಇವರೂ ಸಹ ಮೊದಲು ಹೀಗೇ ಇದ್ದವರೇ. ಅದಕ್ಕೇ ನೀನೂ ಈ ದರಿ(ಗುಹೆ)ಯನ್ನು ಹೊಕ್ಕು ನಿದ್ರಿಸು, ಹೋಗು." ಎಂದು ಹೇಳಿದನು.  ಅವರೆಲ್ಲರ ಭವಿಷ್ಯತ್ತನ್ನೂ ಬಳಿಕ ಸೂಚಿಸಿದನು: "ನೀವೆಲ್ಲರೂ ಮುಂದೆ ಮನುಷ್ಯಯೋನಿಯಲ್ಲಿ ಜನಿಸುವಿರಿ; ಅಲ್ಲಿ ದುಃಸಹವಾದ (ಎಂದರೆ ಬಹುಕಷ್ಟದಿಂದ ಸಾಧಿಸಬೇಕಾದ) ಅನೇಕ ಕರ್ಮಗಳನ್ನು ಮಾಡುವಿರಿ; ಅನೇಕರ ಸಾವಿಗೂ ಕಾರಣರಾಗುವಿರಿ; ಆದರೂ ಪೂರ್ವಸಾಧಿತವಾದ ಸ್ವಕರ್ಮಗಳಿಂದಾಗಿ ಪುಣ್ಯಶಾಲಿಗಳಿಗಷ್ಟೆ ಲಭ್ಯವೆನಿಸುವ ಇಂದ್ರಲೋಕಕ್ಕೆ ಮತ್ತೆ ಬರುವಿರಿ. ಈಗ ನಾನು ಹೇಳಿರುವ ಹಾಗೂ ಇನ್ನೂ ಅನೇಕಕಾರ್‍ಯಗಳನ್ನು ನೀವು ಮಾಡುವುದಾಗುತ್ತದೆ" ಎಂದನು.

ಆಗ ಪೂರ್ವೇಂದ್ರರು (ಹಿಂದೆ ಇಂದ್ರರಾಗಿದ್ದವರು) ಹೇಳಿದರು: "ನಿನ್ನ ಮಾತಿನಂತೆಯೇ ನಾವು ದೇವಲೋಕದಿಂದ ಮನುಷ್ಯಲೋಕಕ್ಕೆ ಹೋಗುವೆವು. ಅಲ್ಲಿ ತಾನೆ ದುರ್ಲಭವೆನಿಸುವ ಮೋಕ್ಷವೆಂಬುದು ಸಾಧಿತವಾಗತಕ್ಕದ್ದು? ಆದರೆ ಅಲ್ಲಿ ಈ ದೇವತೆಗಳು - ಎಂದರೆ ಧರ್ಮ, ವಾಯು, ಇಂದ್ರ ಹಾಗೂ ಅಶ್ವಿನೀಕುಮಾರ(ರಿಬ್ಬ)ರು - ಇವರುಗಳೇ ತಾಯಿಯ ಗರ್ಭದಲ್ಲಿ ನಮ್ಮನ್ನು ಇರಿಸುವಂತಾಗಲಿ. ದಿವ್ಯಾಸ್ತ್ರಗಳನ್ನು ಬಳಸಿ ನಾವು ಮನುಷ್ಯವೀರರೊಂದಿಗೆ ಹೋರಾಡುವಂತಾಗಿ ಮತ್ತೆ ಇಂದ್ರಲೋಕವನ್ನು ಬಂದು ಸೇರುವಂತಾಗಲಿ."

ಆಗ ವಜ್ರಪಾಣಿಯಾದ ಇಂದ್ರನು ದೇವಶ್ರೇಷ್ಠನಾದ ರುದ್ರನನ್ನು ಕುರಿತು, "ಈ ನಾಲ್ವರೊಂದಿಗೆ ಐದನೆಯ ನರನಾಗಿ, ನಾನು ನನ್ನ ಅಂಶದಿಂದಲೇ ಜನ್ಮತಾಳುವೆನು" ಎಂದನು. ಅದಕ್ಕೆ ರುದ್ರನು ತನ್ನ ಸಮ್ಮತಿಯಿತ್ತನು. ಲೋಕಕಾಂತೆಯೂ ಸ್ವರ್ಗಕ್ಕೆ ಲಕ್ಷ್ಮಿಯಂತಿದ್ದವಳೂ ಆದ ಆ ನಾರಿಯನ್ನು ಇವರ ಮನುಷ್ಯಜನ್ಮದಲ್ಲಿ ಇವರೆಲ್ಲರ ಪತ್ನಿಯಾಗುವಂತೆಯೂ ಅನುಗ್ರಹಿಸಿದನು.

ಅಲ್ಲದೆ, ಅವರೆಲ್ಲರೊಂದಿಗೆ ಆ ಮಹಾದೇವನು ನಾರಾಯಣನಲ್ಲಿಗೆ ಸಾರಿದನು. ಆತನೂ ಅದೆಲ್ಲವೂ ಹಾಗೆಯೇ ಆಗುವಂತೆ ವಿಧಾನಮಾಡಿದನು. ಆಮೇಲೆ ಅದಕ್ಕನುಗುಣವಾಗಿಯೇ ಅವರೆಲ್ಲರೂ ಭೂಮಿಯಲ್ಲಿ ಜನ್ಮತಾಳಿದರು.

ಅದೇ ಸಮಯಕ್ಕೆ ವಿಷ್ಣುವೂ ತನ್ನ ತಲೆಯಿಂದ ಎರಡು ಕೂದಲೆಳೆಗಳನ್ನು ಹೊರಗೆಳೆದನು. ಅವುಗಳಲ್ಲಿ ಒಂದು ಬಿಳಿ ಹಾಗೂ ಮತ್ತೊಂದು ಕಪ್ಪು. ಅವೆರಡು ಕೂದಲುಗಳು ಯದುವಂಶದ ನಾರಿಯರಾದ ದೇವಕಿ ಹಾಗೂ ರೋಹಿಣಿ - ಇವರುಗಳನ್ನು ಪ್ರವೇಶಿಸಿತು.

ಅವುಗಳಲ್ಲಿ ಬಿಳಿದಾದ ಕೂದಲು ಬಲರಾಮನಾಯಿತು; ಎರಡನೆಯದಾದ ಕರಿಗೂದಲು ಶ್ರೀಕೃಷ್ಣನಾಯಿತು. (ಎಂದರೆ ಕೃಷ್ಣ-ಬಲರಾಮರಿಬ್ಬರೂ ವಿಷ್ಣುವಿನ ಅಂಶಗಳೇ ಎಂದರ್ಥ.) ಹಿಮಾಲಯದ ದರಿಯಲ್ಲಿ ಇದ್ದ ನಾಲ್ವರು ಇಂದ್ರರು ಇಲ್ಲಿಯೇ ಇರುವ ಪರಾಕ್ರಮಸಂಪನ್ನರಾದ ಪಾಂಡವರು; ಹಾಗೂ ಇಂದ್ರನ ಅಂಶವೇ ಸವ್ಯಸಾಚಿಯಾದ ಪಾಂಡವ (ಎಂದರೆ ಅರ್ಜುನ) (ಸವ್ಯವೆಂದರೆ ಎಡಗೈ; ಎಡಗೈಯಿಂದಲೂ ಸಹ ಬಿಲ್ಲಿನ ಹೆದೆಯೇರಿಸಬಲ್ಲವನನ್ನು ಸವ್ಯಸಾಚಿಯೆನ್ನುವರು. ಹೀಗೆ ಎರಡೂ ಕೈಗಳಿಂದಲೂ ಧನುರ್ಬಾಣಗಳ ಪ್ರಯೋಗವನ್ನು ಮಾಡಬಲ್ಲವನಾಗಿದ್ದನು, ಅರ್ಜುನ). 

ಸೂಚನೆ : 03/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.