ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಆಮೇಲೆ ಬಗೆಬಗೆಯಾದ ವೃಕ್ಷಗಳನ್ನು ಮತ್ತೆ ಎತ್ತಿಕೊಂಡು, ಆ ಬಲಿಷ್ಠ-ರಾಕ್ಷಸ ಭೀಮನತ್ತ ಅವನ್ನೆಸೆದ; ಭೀಮನೂ ಆತನತ್ತ ಅವನ್ನೇ ಎಸೆದ. ಹೀಗೆ ಕ್ಷತ್ರಿಯ ಮತ್ತು ರಾಕ್ಷಸ – ಇವರೀರ್ವರ ನಡುವಿನ ಘೋರ ವೃಕ್ಷಯುದ್ಧದಿಂದಾಗಿ, ಹಲವು ಮರಗಳೇ ನಾಶವಾದವು. ತನ್ನ ಹೆಸರನ್ನು ಘೋಷಿಸಿಕೊಳ್ಳುತ್ತಾ ಈ ಪಾಂಡವನತ್ತ ಧಾವಿಸಿ ಬಂದವನೇ, ಮಹಾಬಲಶಾಲಿಯಾದ ಭೀಮನನ್ನು ತನ್ನ ತೋಳುಗಳಿಂದ ಬಾಚಿಹಿಡಿದುಕೊಂಡ, ಬಕ. (ಗರ್ವಿಗಳಿಗೆ ತಮ್ಮ ಹೆಸರ ಮೇಲೂ ಸಾಕಷ್ಟೇ (ದುರ್-) ಅಭಿಮಾನವಿರುವುದಲ್ಲವೇ? "ನನ್ನನ್ನಾರೆಂದೆಣಿಸಿರುವೆ?, ನನ್ನ ಹೆಸರು ಕೇಳಿ ನಡುಗದವರಾರು?" – ಎಂಬ ಧೋರಣೆ.)
ಮಹಾಭುಜನಾದ ಭೀಮಸೇನನೂ ಸಹ, ದಾಳಿಯಿಡುತ್ತಿದ್ದ ಆ ಮಹಾಬಾಹುವನ್ನು ಬಲಪ್ರಯೋಗದಿಂದ ಎಳೆದಾಡಿದ. ಭೀಮನಿಂದ ಈಡಾಡಿಸಲ್ಪಟ್ಟ ಆ ರಾಕ್ಷಸನು ತಾನೂ ಈ ಪಾಂಡವನನ್ನಷ್ಟಿಷ್ಟು ಎಳೆದಾಡಿದ. ಬರಬರುತ್ತಾ ಆ ನರಭಕ್ಷಕನಿಗೆ ತೀವ್ರವಾದ ಆಯಾಸವೇ ಆಯಿತು. (ನ್ಯಾಯವಾಗಿ, ದಿನಕ್ಕಿಂತಲೂ ಹೆಚ್ಚಾಗಿ, ಅದೂ ಹೊಟ್ಟೆ ಬಿರಿಯುವಂತೆಯೇ, ತಿಂದವನಿಗೆ ಕುಸ್ತಿಯು ಬೇಗ ಆಯಾಸಪಡಿಸುವುದು; ಹಸಿದವನೇ ಹೆಚ್ಚು ಚುರುಕಾಗಿರಬಲ್ಲ. ಹೀಗಾಗಿ ಭೀಮನೇ ಮೊದಲು ದಣಿಯಬೇಕಿತ್ತು; ಬಕನದ್ದೇ ಮೇಲುಗೈಯಾಗಬೇಕಿತ್ತು! ಆದರೆ ಭೀಮನು ಮಹಾಸತ್ತ್ವಸಂಪನ್ನನಲ್ಲವೇ?)
ಅವರಿಬ್ಬರ ಮಹಾವೇಗದಿಂದಾಗಿ ಧರಣಿಯೇ ಕಂಪಿಸಿತು. ಮಹಾಕಾಯವಾದ ಮರಗಳನ್ನೇ ಅವರಿಬ್ಬರೂ ಚೂರ್ಣಗೊಳಿಸಿದರು. ಕ್ಷೀಣನಾಗುತ್ತಿದ್ದ ಆ ನರಭಕ್ಷಕನನ್ನು ದಿಟ್ಟಿಸಿನೋಡುತ್ತಾ ನೆಲದ ಮೇಲಾತನನ್ನು ಕೆಡವಿ ತನ್ನೆರಡು ಮಂಡಿಗಳಿಂದ ಆತನನ್ನು ಜಜ್ಜಿ ಭೀಮ ಆತನಿಗಿಕ್ಕಿದ. ಆಮೇಲೆ ಆತನ ಬೆನ್ನಿನ ಮೇಲೆ ಬಲಪ್ರಯೋಗದಿಂದ ಮಂಡಿಯೂರಿ, ತನ್ನ ಬಲಗೈಯಿಂದ ಆತನ ಕತ್ತನ್ನೂ, ಎಡಗೈಯಿಂದ ಆತನ ಸೊಂಟಕ್ಕೆ ಕಟ್ಟಿದ್ದ ಬಟ್ಟೆಯನ್ನೂ ಹಿಡಿದೆಳೆದ, ಭೀಮ. ಮತ್ತು ಭೀಕರಧ್ವನಿಗೈಯುತ್ತಿದ್ದ ಆ ರಕ್ಕಸನ ಮೈಯನ್ನು ಎರಡು ಸುತ್ತಾಗಿ ತಿರುಚಿದ. ಭೀಮನಿಂದ ಭಗ್ನನಾದ ಆ ಘೋರರಾಕ್ಷಸ; ಆತನ ಬಾಯಿಯಿಂದ ರಕ್ತವು ಪ್ರವಹಿಸಿತು. ಪಕ್ಕೆಲಬುಗಳು ಭಗ್ನಗೊಂಡಿದ್ದ ಆ ಪರ್ವತರಾಜಸದೃಶನಾದ ಬಕರಾಕ್ಷಸ, ಘೋರಧ್ವನಿಗೈಯುತ್ತಾ ಅಂತೂ ಸತ್ತುಹೋದ.
ಆ ರಕ್ಕಸನ ಆ ಶಬ್ದದಿಂದ ಬೆಚ್ಚಿ ಬೆದರಿ, ಸುತ್ತಲಿನ ರಾಕ್ಷಸಜನರೆಲ್ಲ ತಮ ಪರಿಚಾರಕರೊಂದಿಗೆ ಮನೆಯಿಂದಾಚೆಗೆ ಧಾವಿಸಿಬಂದರು. ಅಸುರನ ಅವಸ್ಥೆಗೆ ಹೆದರಿ ಪ್ರಜ್ಞಾಶೂನ್ಯರಾಗಿ ಕಂಗೆಟ್ಟರು. ಯೋಧಶ್ರೇಷ್ಠನೂ ಬಲಶಾಲಿಯೂ ಆದ ಭೀಮನು ಅವರನ್ನು ಶಮನಗೊಳಿಸುತ್ತಾ, "ಈ ನಿಯಮವನ್ನು ನೀವಿನ್ನು ಮುಂದೆ ಪಾಲಿಸತಕ್ಕದ್ದು" - ಎಂದು ಅವರಿಗೆ ಸೂಚಿಸಿದ: "ಮತ್ತೆಂದೂ ನೀವು ಮನುಷ್ಯರನ್ನು ಹಿಂಸಿಸುವಂತಿಲ್ಲ; ಹಿಂಸೆ ಮಾಡುವವರಿಗೆ ಇದೇ ರೀತಿಯ ವಧೆಯು ಶೀಘ್ರವಾಗಿಯೇ ಉಂಟಾಗುವುದು!" ಎಂದ. ಆವನ ಆ ಮಾತುಗಳನ್ನು ಕೇಳಿ, ಕಂಗಾಲಾಗಿದ್ದ ಆ ರಾಕ್ಷಸರು "ಹಾಗೆಯೇ ಆಗಲಿ" ಎಂದು ಹೇಳುತ್ತಾ, ಮರುಮಾತಿಲ್ಲದೆ ಆ ನಿಯಮಕ್ಕೊಪ್ಪಿದರು. ಅಲ್ಲಿಂದ ಮುಂದಕ್ಕೆ, ಆ ನಗರದಲ್ಲಿ ವಾಸವಿದ್ದ ನರರಿಗೆ ಆ ರಾಕ್ಷಸರು ಸೌಮ್ಯವಾಗಿಯೇ ತೋರಿಬಂದರು. (ಮೈಬಲದಿಂದ ಸೊಕ್ಕಿದ ಸಮಾಜಕಂಟಕರಿಗೆ ಮೈಬಲದಿಂದಲೇ ಇಕ್ಕಿ ಪಾಠ ಹೇಳಬೇಕು; ಅವರಿಗೆ ವಿವೇಕದ ಮಾತುಗಳು, ಅನುನಯದ ನುಡಿಗಳು ಮನಸ್ಸಿಗೆ ನಾಟವು. ಇಂದಿನ ಹಿಂದೂಸಮಾಜಕ್ಕೆ ಅನ್ವಯವಾಗುವ ಹಲವಂಶಗಳಿಲ್ಲಿವೆಯಲ್ಲವೇ? ವಜ್ರಂ ವಜ್ರೇಣ ಭಿದ್ಯತೇ – ಎನ್ನುತ್ತಾರಲ್ಲವೇ?)