ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
ಪ್ರಶ್ನೆ – 23 ಬಾಹ್ಯಜೀವನವನ್ನು ಚೆನ್ನಾಗಿ ಅನುಭವಿಸುತ್ತಾ, ಬುದ್ಧಿಮಂತನೂ, ಲೋಕಪೂಜಿತನೂ, ಎಲ್ಲರಿಗೂ ಪ್ರಿಯನೂ ಆದ ಯಾವ ಪುರುಷನು ಬದುಕಿದ್ದರೂ ಸತ್ತಂತೆ ಆಗುತ್ತಾನೆ?
ಉತ್ತರ - ದೇವತೆ, ಅತಿಥಿ, ಸೇವಕ, ಪಿತೃ ಮತ್ತು ತನ್ನನ್ನು ಈ ಐವರನ್ನು ಯಾರು ತೃಪ್ತಿಪಡಿಸುವುದಿಲ್ಲವೋ ಅವನು ಉಸಿರಿದ್ದೂ ಸತ್ತಂತೆಯೇ.
ಮನುಷ್ಯನ ಜೀವನವು ಸಫಲವಾಗಲು ಅತಿಮುಖ್ಯವಾದ ವಿಷಯಗಳು ಯಾವುವು? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಅದಕ್ಕೆ ಧರ್ಮರಾಜನ ಉತ್ತರ ಬಹಳ ಸ್ಪಷ್ಟವಾಗಿದೆ. ಈ ಭೂಮಿಯಲ್ಲಿ ಮನುಷ್ಯ ಮಾತ್ರ ಬದುಕುವ ಅರ್ಹತೆಯನ್ನು ಅಥವಾ ಅವಕಾಶವನ್ನು ಪಡೆದಿರುವುದಿಲ್ಲ. ಭಗವಂತನ ಸೃಷ್ಟಿಯಲ್ಲಿ ಬರುವ ಎಲ್ಲಾ ಎಂಭತ್ತ ನಾಲ್ಕು ಲಕ್ಷ ಜೀವಜಾತಿಗಳಿಗೂ ಬದುಕುವ ಹಕ್ಕಿದೆ. ಎಲ್ಲರೂ ಬದುಕಬೇಕು. ಎಲ್ಲರೂ ಒಬ್ಬರಿಗೊಬ್ಬರು ಸಹಕರಿಸುತ್ತಾ ಬದುಕಬೇಕು. ಎಲ್ಲರೂ ಸಾಮರಾಸ್ಯದ ಬದುಕನ್ನು ಮಾಡಿದಾಗ ಮಾತ್ರ ಪ್ರಕೃತಿಯಲ್ಲಿ ಸಮತೋಲನ ಸಾಧ್ಯ. ಯಾವುದೊಂದು ಜಾಸ್ತಿ ಆದರೂ ಅದು ಪ್ರಕೃತಿಗೆ ಮಾರಕವೇ ಸರಿ. ಈ ಸೃಷ್ಟಿಯಲ್ಲಿ ಸಮತೋಲನ ಮಾಡಿಕೊಳ್ಳುವ ಸಹಜಪ್ರಕ್ರಿಯೆಯೂ ಅಷ್ಟೇ ಸಹಜವಾಗಿದೆ. ಒಂದು ಜೀವವು ಬದುಕಬೇಕಾದರೆ ಇನ್ನೊಂದು ಜೀವವನ್ನು ಪಡೆದೇ ಬದುಕಬೇಕು. ಇದು ಒಂದು ಬಗೆಯ ಜೀವನ ಪದ್ದತಿ. ನಾವು ಬದುಕಬೇಕು. ಇನ್ನೊಂದು ಜೀವವೂ ನನ್ನ ಹಾಗೇ ಬದುಕಬೇಕೆಂಬ ಕಾರುಣ್ಯಜೀವನ ಎಂಬುದು ಇನ್ನೊಂದು ಬಗೆಯ ಜೀವನ ಪದ್ಧತಿ. ಮನುಷ್ಯನಿಗೆ ಬಿಟ್ಟು ಉಳಿದ ಎಲ್ಲ ಬಗೆಯ ಜೀವಜಂತುಗಳೂ, ತಮಗೆ ಬೇಕಾದ ಆಹಾರವನ್ನು ಹುಡುಕಿಕೊಂಡು ಬದುಕುತ್ತವೆ. ಅಲ್ಲಿ ಆ ವ್ಯವಸ್ಥೆಯಿದೆ. ನಾವೇ ಇನ್ನೊಂದು ಜೀವಕ್ಕೆ ಬದುಕಲು ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಅವಕಾಶವನ್ನು ಕೊಟ್ಟು, ಅವರ ಅನುಮತಿ, ಸಹಕಾರವನ್ನು ಪಡೆದು, ಬದುಕಬೇಕಾದ ಜೀವನಕ್ರಮವನ್ನು ಮನುಷ್ಯನಿಗೆ ಭವಗಂತನು ಕೊಟ್ಟಿರುವ ವರವೇ 'ಪಂಚಮಹಾಯಜ್ಞ' ಎಂಬ ವ್ಯವಸ್ಥೆ.
ಕೊಟ್ಟು ಬದುಕುವುದು ಆದರ್ಶ. ಯಾರಿಗೂ ಕೊಡದೆ ಬದುಕುವುದು ಸ್ವಾರ್ಥಪರತೆಯ ನಿದರ್ಶನ. ಯಾರು ಬೇರೆಯವರಿಗೂ ಕೊಟ್ಟು ಜೀವಿಸುತ್ತಾನೋ ಅಂತವನ ಜೀವನ ಆದರ್ಶ. ಇದಕ್ಕೆ ವಿರುದ್ಧವಾದುದು ಬದುಕಿದ್ದೂ ಸತ್ತಂತೆ. ಆ ಜೀವನಕ್ಕೆ ಯಾವುದೇ ಬೆಲೆ ಇರುವುದಿಲ್ಲ.
ಭಾರತೀಯರ ಜೀವನವು ಕೇವಲ ಭೌತಿಕವಾದದ್ದು ಮಾತ್ರ ಅಲ್ಲ. ನಮ್ಮ ಸುತ್ತಲಿನವರನ್ನು ಮಾತ್ರ ಸಂತೋಷಪಡಿಸಿದರೆ ಸಾಲದು. ಜೀವನ ಪೂರ್ಣ ಆಗಬೇಕಾದರೆ ದೈವಿಕ ಮತ್ತು ಆಧ್ಯಾತ್ಮಿಕ ಈ ಮೂರು ಸ್ತರಗಳ ತೃಪ್ತಿಯು ಆಗಬೇಕಾದುದು ಅಷ್ಟೇ ಅವಶ್ಯ. ಇಲ್ಲಿನ ಪ್ರಶ್ನೆಯಲ್ಲಿ ಅದಕ್ಕೆ ಸಂಬಂಧಿಸಿದಂತೆ ಇದೆ. ದೇವತೆಯ ಸಂಪ್ರೀತಿಯಿಂದ ಆ ಕ್ಷೇತ್ರದ ಅನುಕೂಲ, ಗತಿಸಿದ ಪಿತೃಗಳಿಗೆ ಶ್ರಾದ್ಧ ತರ್ಪಣಾದಿಗಳಿಂದ ಪಿತೃಲೋಕದ ಆನುಕೂಲ್ಯ, ಮನೆಗೆ ಬಂದ ಅತಿಥಿಗಳನ್ನು ಆದರಿಸಿ ಸತ್ಕಕರಿಸುವುದರಿಂದ ಮತ್ತು ನಮಗೆ ಸಹಕರಿಸುವ ಸೇವಕ ವರ್ಗವನ್ನು ಪ್ರೀತಿಗೊಳಿಸುವುದರಿಂದ ಈ ಲೋಕದ ಸಾಮರಸ್ಯವು ಮತ್ತು ಆತ್ಮತೃಪ್ತಿಯಾಗುವಂತಹ ಕಾರ್ಯದಿಂದ ಅಧ್ಯಾತ್ಮಕ್ಷೇತ್ರದ ಆನುಕೂಲ್ಯವು ಉಂಟಾಗುತ್ತವೆ. ಇಂತವನಿಂದ ಮಾತ್ರವೇ ನಿಜವಾದ ಜೀವನ ಸಾಫಲ್ಯ. ಹಾಗಿಲ್ಲದಿದ್ದರೆ ಅಂತಹ ಜೀವನ ವ್ಯರ್ಥವೇ ಸರಿ.
ಸೂಚನೆ : 05/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.