Saturday, June 19, 2021

ಇಹಪರ ಭೋಗಕ್ಕೆ ನಾದ ಯೋಗ (Ihapara Bhogakke Nada Yoga)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)






ಪ್ರತಿವರ್ಷ ಜೂನ್ ೨೧ರಂದು "ಇಂಟರ್‌ನ್ಯಾಷನಲ್ ಯೋಗ ಡೇ" (ಅಂತಾರಾಷ್ಟ್ರೀಯ ಯೋಗ ದಿನ) ಎಂಬುದರ ಆಚರಣೆ ರೂಢವಾಗಿದೆಯಷ್ಟೆ. ಯೋಗಾಭ್ಯಾಸದಿಂದೊದಗುವ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯಗಳ ವಿಕಾಸದಿಂದಾಗಿ ಯಾರಿಗೆ ತಾನೆ ಪ್ರಮೋದವಾಗದು? ಸರ್ವರ ಸರ್ವವಿಕಾಸಗಳಿಂದ ಮೋದ ಪಡುವ ನಮ್ಮ ಪ್ರಧಾನಿಯವರು ಈ ಆಚರಣೆಗೆ ಕಾರಣರಾದದ್ದು ಭಾರತೀಯರ ಭಾಗ್ಯವೇ ಸರಿ.

ಒಂದೇ ಪದ!
ಇಡೀ ಭಾರತೀಯ ಸಂಸ್ಕೃತಿಯನ್ನು ಎರಡು ಪದಗಳಲ್ಲಿ ಹೇಳುವುದಾದರೆ, "ಪ್ರವೃತ್ತಿ-ಧರ್ಮ ಮತ್ತು ನಿವೃತ್ತಿ-ಧರ್ಮ" ಎಂಬುದಾಗಿ ಹೇಳಬಹುದು. ಒಂದೇ ಪದದಲ್ಲಿ ಹೇಳಬೇಕೆಂದರೆ 'ಯೋಗ' ಎಂದೇ ಸರಿ! ಭಾರತೀಯ ಸಂಸ್ಕೃತಿಯ ಸಾರವೆನಿಸುವ ಇಡೀ ಭಗವದ್ಗೀತೆಯು "ಯೋಗಶಾಸ್ತ್ರ"ವೆಂದೇ ತನ್ನನ್ನು ತಾನು ಕರೆದುಕೊಳ್ಳುತ್ತದೆ: ಪ್ರತಿ ಅಧ್ಯಾಯದ ಕೊನೆಯಲ್ಲಿ ಬರುವ "ಇತಿ ಶ್ರೀ…" ವಾಕ್ಯದಲ್ಲಿ ಇದನ್ನು ಕಾಣಬಹುದು. 'ಯೋಗ'ವೆಂಬ ಪದವು ಗೀತೆಯಲ್ಲಿ ೩೭ ಬಾರಿ ಬಂದಿದೆ, 'ಯೋಗಿ'ಯು ೨೮ ಬಾರಿ. ಇವಲ್ಲದೆ. ಯೋಗಕ್ಷೇಮ, ಯೋಗಾರೂಢ, ಯೋಗಸ್ಥ, ಯುಕ್ತ, ಯೋಗಭ್ರಷ್ಟ ಮುಂತಾದುವನ್ನೂ ಗಣಿಸಿದರೆ ನೂರಕ್ಕೂ ಮೀರುತ್ತದೆ!

ಒಂದೇ ಅಕ್ಷರ!
ಪೂಜ್ಯ ರಂಗಪ್ರಿಯಸ್ವಾಮಿಗಳು ಇನ್ನೂ ಸಾರವಾಗಿ, "ಒಂದೇ ಅಕ್ಷರದಲ್ಲಿ ಇಡೀ ಭಾರತೀಯ ಸಂಸ್ಕೃತಿಯನ್ನು ಹೇಳಬಹುದು : ಅದುವೇ 'ಓಂ'!" – ಎಂದೊಮ್ಮೆ ನುಡಿದಿದ್ದುಂಟು. ಈ ಲೇಖನದ ಶೀರ್ಷಿಕೆಯಾದ "ನಾದಯೋಗ" ಎಂಬುದರ ಸಾರತಮವಾದ ತತ್ತ್ವವಾದರೂ ಈ ಓಂಕಾರವೇ. ವೇದಗಳ ಸಿದ್ಧಾಂತವಾದ ಉಪನಿಷತ್ತುಗಳಲ್ಲೂ, ಉಪನಿಷತ್ತುಗಳ ಸಾರವಾದ ಭಗವದ್ಗೀತೆಯಲ್ಲೂ ಈ ಪ್ರಣವನಾದದ ಹಿರಿಮೆಯನ್ನು ಎತ್ತಿ ಹೇಳಿದೆ. ಛಾಂದೋಗ್ಯೋಪನಿಷತ್ತು ಓಂ ಎಂಬ ಅಕ್ಷರದ ಉಪಾಸನೆಯಿಂದಲೇ ಆರಂಭವಾಗುತ್ತದೆ. ಅದರ ಆಕಾರವನ್ನು ಹಿಡಿದು, "ಪ್ರಣವವೇ ಬಿಲ್ಲು, ಬ್ರಹ್ಮವೇ ಲಕ್ಷ್ಯ" – ಎನ್ನುತ್ತದೆ ಮುಂಡಕೋಪನಿಷತ್ತು. ಯೋಗದ ತುದಿಗೆ ನಮ್ಮನ್ನು ಒಯ್ಯುವ ರಥವೇ ಓಂಕಾರವೆಂದು ಅಮೃತಬಿಂದೂಪನಿಷತ್ತು ಹೇಳುತ್ತದೆ. ಮಾಂಡೂಕ್ಯೋಪನಿಷತ್ತು "ಸರ್ವಂ ಓಂಕಾರ ಏವ" – ಎನ್ನುತ್ತದೆ

ಸಾಮಗಾನವನ್ನು ಓಂಕಾರದೊಂದಿಗೇ ಮಾಡುವುದೆಂದು ತೈತ್ತಿರೀಯೋಪನಿಷತ್ತು ಸಾರುತ್ತದೆ. ಯೋಗತತ್ತ್ವವನ್ನು ಒತ್ತಿ ಹೇಳುವ ಕಠೋಪನಿಷತ್ತು-ಮೈತ್ರ್ಯುಪನಿಷತ್ತುಗಳೂ ಓಂಕಾರದ ಗರಿಮೆಯನ್ನು ವಿಶದೀಕರಿಸುತ್ತವೆ. "ಬ್ರಹ್ಮನಿರ್ದೇಶವೆಂಬುದು ಓಂ-ತತ್- ಸತ್- ಎಂಬುದಾಗಿ" – ಎಂದು ಹೇಳುತ್ತಾ, "ಓಂ ಎಂಬುದು 'ಏಕಾಕ್ಷರಬ್ರಹ್ಮ'" ಎಂದು ಗೀತೆಯು ಹೇಳುತ್ತದೆ. ಪಾತಂಜಲ ಯೋಗಸೂತ್ರವು ಬ್ರಹ್ಮದ ವಾಚಕವೇ ಪ್ರಣವ ಎಂದು ಹೇಳುತ್ತದೆ. ಇಷ್ಟರಿಂದಲೇ "ನಾದಯೋಗ"ದ ಸಾರವನ್ನೇ ಒಂದರ್ಥದಲ್ಲಿ ಹೇಳಿದಂತಾಯಿತು.

"ನಾದಾತ್ಮಕಂ ಜಗತ್ "
ನಾದಯೋಗವೆಂಬ ಪದವು ಭಗವದ್ಗೀತೆಯಲ್ಲಿ ಬರುವುದಿಲ್ಲ, ನಿಜವೇ. ಆದರೆ ನಾದಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆಯಲ್ಲವೇ? "ಸಂಗೀತವೆಂದರೆ ಹಾಡುಗಾರಿಕೆ" – ಎಂದೇ ನಾವೆಲ್ಲ ತಿಳಿದಿರುವುದು; ಆದರೆ ಅದು ಹಾಗಲ್ಲ. ಅದೊಂದು ಪಾರಿಭಾಷಿಕಪದ. "ಗೀತ-ವಾದ್ಯ-ನೃತ್ಯಗಳು ಮೂರೂ ಸೇರಿದರೇ ಅದಕ್ಕೆ ಸಂಗೀತವೆನ್ನುವುದು". ಹಾಡುಗಾರಿಕೆ ಅಥವಾ ಗೀತವು ಅಲ್ಲಿ ಪ್ರಧಾನವಾಗಬಹುದೇ ವಿನಾ ಅದೇ ಸಂಗೀತವಲ್ಲ. "ಗೀತಂ ವಾದ್ಯಂ ಚ ನೃತ್ಯಂ ಚ ತ್ರಯಂ ಸಂಗೀತಮುಚ್ಯತೇ" ಎಂದೇ ಶಾಸ್ತ್ರವಾಕ್ಯ. ಗೀತವೆಂದಮೇಲೆ ರಾಗವಿಲ್ಲದೆ ಆದೀತೇ? ರಾಗವೆಂದರೆ ಸ್ವರವಿಲ್ಲದೆ ಆದೀತೇ? "ಗೀತ-ರಾಗ-ಸ್ವರಗಳು ನಾದವಿಲ್ಲದೆ ಇದ್ದಾವೇ?" – ಎನ್ನುತ್ತದೆ ಸಂಗೀತಶಾಸ್ತ್ರ: "ನ ನಾದೇನ ವಿನಾ ಗೀತಂ, ನ ನಾದೇನ ವಿನಾ ಸ್ವರಃ | ನ ನಾದೇನ ವಿನಾ ರಾಗಃ ತಸ್ಮಾನ್ನಾದಾತ್ಮಕಂ ಜಗತ್ ||" ನಾವು ಹಾಡುವ ಗೀತವೇ ಹೀಗೆಂದಮೇಲೆ, 'ಭಗವಂತನೇ ಹಾಡಿರುವ' ಭಗವದ್ಗೀತೆಯ ಬಗ್ಗೆ ಹೇಳುವುದೇನು?

ಗಾನ-ನಾದ-ಯೋಗ
ನಮ್ಮ ದೇವತೆಗಳಿಗೂ ಯೋಗಕ್ಕೂ ನಂಟುಂಟು; ಅವರಿಗೂ ಗಾನಕ್ಕೂ ಗಂಟುಂಟು; ಅವರಿಗೂ ನಾದಕ್ಕೂ ಜಂಟಿಯುಂಟು. ಇದೋ: ಕೃಷ್ಣನು ಯೋಗೇಶ್ವರ, ಶಿವನು ಯೋಗೀಶ್ವರ. ಬ್ರಹ್ಮನು ಸಾಮಗಾನರತ; ಸರಸ್ವತಿಯು ವೀಣಾಸಕ್ತೆ; ಪಾರ್ವತೀಪತಿಯು ಗೀತಪ್ರೀತ; ಗೋಪೀಪತಿಯು ಕೊಳಲಿನ ದನಿಗೆ ಮರುಳಾದವನು – ಎಂದು ಮುಂತಾಗಿ ಸಂಗೀತರತ್ನಾಕರವು ದೇವತೆಗಳ ಗೀತಪ್ರೀತಿಯನ್ನು ಕೊಂಡಾಡುತ್ತದೆ. ನಮ್ಮ ನಾನಾದೇವತೆಗಳ ಕೈಗಳಲ್ಲಿ ನಾನಾವಾದ್ಯಗಳುಂಟು : ಶಂಭುವಿನ ಪ್ರದೋಷನೃತ್ಯದ ಸಮಯದಲ್ಲಿ ಬ್ರಹ್ಮ-ವಿಷ್ಣುಗಳು ತಾಳ-ಪಟಹಗಳನ್ನು ಹಿಡಿದಿರುತ್ತಾರೆ. ವೀಣೆಯು ಭಾರತಿಯ ಕೈಯಲ್ಲೂ, ಕೊಳಲು ಸೂರ್ಯ- ಚಂದ್ರರ ಕೈಯಲ್ಲೂ, ಮೃದಂಗವು ನಂದಿ-ಸ್ಕಂದರ ಕೈಗಳಲ್ಲೂ ಕಂಗೊಳಿಸುತ್ತವೆ; ಲಕ್ಷ್ಮಿಯು ಹಾಡುತ್ತಾಳೆ – ಎಂದೆಲ್ಲ ಚಿತ್ರಿಸುವ ಶ್ಲೋಕಗಳುಂಟು. ಸಂಗೀತರತ್ನಾಕರವು ಶಂಕರನನ್ನು ನಾದತನುವೆನ್ನುತ್ತದೆ. ಶಬ್ದಬ್ರಹ್ಮಮಯೀ-ನಾದಮಯೀ – ಎಂಬುದಾಗಿ ಪಾರ್ವತಿಯನ್ನು ಕೊಂಡಾಡಿರುವುದೂ ಉಂಟು. ವೀಣೆ-ವೇಣು-ಮೃದಂಗವಾದ್ಯಗಳ ಧ್ವನಿಯು ಮನಸ್ಸನ್ನು ಎಷ್ಟು ರಂಜಿಸುತ್ತದೆ! – ಎಂದು ಅವುಗಳ ನಾದದ ಮೋಹಕತೆಯನ್ನು ಹೇಳುತ್ತಾ, ಶಂಕರಾಚಾರ್ಯರ ಪ್ರಬೋಧಸುಧಾಕರವು "ಇವುಗಳ ಇಂಪನ್ನೂ ಅತಿಶಯಿಸುವಂತಹುದು ಅನಾಹತನಾದ!" – ಎನ್ನುತ್ತದೆ.

ಆಹತ-ಅನಾಹತ
ನಾದವು ಆಹತ-ಅನಾಹತ – ಎಂಬುದಾಗಿ ಎರಡು ವಿಧ. ಬಡಿತದಿಂದ ಬಂದದ್ದು ಆಹತ. ಒಳಗೇ ಸ್ಫುರಿಸುವುದು – ಅರ್ಥಾತ್ ಯಾವ ಹೊಡೆತದಿಂದಲೂ ಉಂಟಾಗದಂತಹುದು ಅನಾಹತನಾದ. ಹೀಗೆಂಬುದಾಗಿ ಹೇಳಿ, ನಮ್ಮ ಯೋಗಶಾಸ್ತ್ರ- ಸಂಗೀತಶಾಸ್ತ್ರಗ್ರಂಥಗಳಲ್ಲಿ ಒಕ್ಕೊರಲಿನಿಂದ ಅನಾಹತನಾದದ ಹಿರಿಮೆಯನ್ನು ಎತ್ತಿ ಹೇಳಿದೆ. ಜಗತ್ತೆಲ್ಲ ಆಹತನಾದದಿಂದ ತುಂಬಿಹೋಗಿದೆಯಲ್ಲವೇ? ಏರೋಪ್ಲೇನಿನ ಧ್ವನಿ ಕಡಿಮೆಯೇ? ವಾಹನಗಳ ಗದ್ದಲ ಕಿವಿಗಡಚಿಕ್ಕದೇ? ವಾದ್ಯಗಳ ದನಿ-ಮಾರ್ದನಿಗಳ ಪ್ರಮಾಣ ಕಿರಿದೇ? ಪಶು-ಪಕ್ಷಿಗಳ ರುತಗಳಲ್ಲಿ ವೈವಿಧ್ಯವಿಲ್ಲವೇ? ನದಿಯ ನಡೆಯಲ್ಲಿ ನಿನದವಿದೆ; ಸಮುದ್ರದ ಸ್ಥಿತಿಯಲ್ಲಿ ಸ್ವನವಿದೆ; ಮೋಡದಲ್ಲಿ ಮೂಡುವ ಗುಡುಗೂ ಘೋಷವೇ. ಗಾಳಿ ಬೀಸುವಲ್ಲಿ, ನೀರು ಹರಿಯುವಲ್ಲಿ, ಬೆಂಕಿ ಸುಡುವಲ್ಲಿ ಸದ್ದಿಲ್ಲದಿಲ್ಲ. ಇತ್ತ ನಮ್ಮಲ್ಲೇ, ನಾಡಿಯ ಮಿಡಿತದಲ್ಲಿ, ಹೃದಯದ ಬಡಿತದಲ್ಲಿ, ಉಸಿರಿನ ಮಿಸುಕಿನಲ್ಲಿ ರವೆಯಷ್ಟಾದರೂ ರವವಿದ್ದೇ ಇದೆ. ಇನ್ನು ವಿಜ್ಞಾನವು ಹೇಳುವಂತೆ, ಮನುಷ್ಯನ ಕಿವಿಗೇ ಅಗೋಚರವಾದ – ಆದರೆ ನಾಯಿ, ಬಾವಲಿ ಮುಂತಾದ ಪ್ರಾಣಿಗಳಿಗೆ ಗೋಚರವಾಗುವ – ತರಂಗಾಂತರಗಳೂ ಉಂಟು! ಆದರೆ ಇಲ್ಲೆಲ್ಲ – ತಂಬೂರಿ ಮೀಟುವಲ್ಲಿ ಸಹ – ಆಹತಿ ಅಥವಾ ಹೊಡೆತವುಂಟು. ಆದರೆ ಯೋಗಶಾಸ್ತ್ರವು ಎತ್ತಿ ಹೇಳುವುದು ಮತ್ತೊಂದು ಬಗೆಯ ನಾದವನ್ನು. ವಾಸ್ತವವಾಗಿ ನಾದಯೋಗದ ಉನ್ನತಧಾಮವಿರುವುದಲ್ಲಿ! ಸಂಗೀತವೂ ಸಾಟಿಯಲ್ಲವೆನ್ನುವ ಸ್ತರವಿರುವುದಲ್ಲಿ!

ನಾದಾನುಸಂಧಾನ
ಯುಕ್ತಪ್ರಾಣಾಯಾಮಾಭ್ಯಾಸದಿಂದಾಗಿ ನಾಡೀಶುದ್ಧಿಯು ಏರ್ಪಡಲು ನಾನಾ ಪ್ರಕಾರದ ಅನಾಹತನಾದಗಳು ಉಂಟಾಗುವುವು – ಎಂಬುದಾಗಿ ಯೋಗಗ್ರಂಥಗಳು ಹೇಳುವುವು. "ಸರ್ವಾಸು ನಾಡೀಷು ವಿಶೋಧಿತಾಸು ಅನಾಹತಾಖ್ಯಃ…ಪ್ರವರ್ತೇತ ನಿನಾದಃ" ಎಂದು ಹೇಳುತ್ತದೆ, ಯೋಗತಾರಾವಳಿ. ಈ ನಾದವನ್ನು ಆಲಿಸುವುದೇ "ನಾದಾನುಸಂಧಾನ". ಲಕ್ಷಾಧಿಕ ಲಯಮಾರ್ಗಗಳುಂಟೆಂದೂ, ಅವುಗಳಲ್ಲಿ ನಾದಾನುಸಂಧಾನವೆಂಬುದೇ ಮಾನ್ಯತಮವೆಂದೂ ಅಲ್ಲಿ ಶಂಕರಭಗವತ್ಪಾದರು ಸೂಚಿಸಿದ್ದಾರೆ. ಯೋಗಸಾಮ್ರಾಜ್ಯಾಪೇಕ್ಷಿಯು ಅನುಸಂಧಾನಿಸಬೇಕಾದುದು ನಾದವನ್ನೇ – "ನಾದ ಏವಾನುಸಂಧೇಯೋ ಯೋಗಸಾಮ್ರಾಜ್ಯಮಿಚ್ಛತಾ" ಎಂಬುದಾಗಿ ವರಾಹೋಪನಿಷತ್ತು ಸ್ಪಷ್ಟಪಡಿಸಿದೆ.

ಸಮುದ್ರ-ಮೋಡ-ಭೇರಿ-ಮರ್ದಳ(ಮದ್ದಳೆ)-ಶಂಖ-ಘಂಟೆ - ಮುಂತಾದ ಅನೇಕ ಧ್ವನಿಗಳು ಒಳಗೇ – ವಿಶೇಷವಾಗಿ ಬಲಗಿವಿಯಲ್ಲಿ – ಗೋಚರಿಸುವುವೆಂದು ಹಠಯೋಗಪ್ರದೀಪಿಕೆಯು ಹೇಳುತ್ತದೆ. "ವಾಸ್ತವವಾಗಿ, ಹೀಗೆ ಅಂತಃಶ್ರವಣಕ್ಕೆ ಗೋಚರವಾಗುವ ಧ್ವನಿಗಳೇ ಭಾರತೀಯರ ವಾದ್ಯಗಳ ನಿರ್ಮಾಣಕ್ಕೆ ಆಧಾರವಾಗಿರತಕ್ಕವು" – ಎಂಬ ರಹಸ್ಯಾರ್ಥವನ್ನು ಶ್ರೀರಂಗಮಹಾಗುರುಗಳು ತಿಳಿಯಪಡಿಸಿದ್ದರು.

"ಈ ಒಳಗಣ ನಾನಾಧ್ವನಿಗಳನ್ನೂ ಮೀರಿದ ಮೂಲಭೂತವಾದ ನಾದವೊಂದು ಗೋಚರಿಸುವುದು; ಅದನ್ನೇ ಹಿಡಿಯತಕ್ಕದ್ದು" – ಎಂಬುದಾಗಿಯೂ ಯೋಗಶಾಸ್ತ್ರಗಳು ತಿಳಿಯಪಡಿಸುತ್ತವೆ. ಅನಾಹತಧ್ವನಿಯನ್ನೇ ಹಿಡಿದುಹೋದಲ್ಲಿ ದೀರ್ಘಘಂಟಾನಿನಾದವನ್ನು ಹೋಲುವ ನಾದವು ಕೇಳಿಬಂದು, ಆ ಪ್ರಣವನಾದಾಗ್ರ-ನಾದಾಂತಗಳಲ್ಲಿ ಜ್ಯೋತಿರ್ದರ್ಶನ, ಮನೋಲಯ, ವಿಷ್ಣುಪದಪ್ರಾಪ್ತಿಗಳೆಂಬ ಅನುಭವಗಳು ಉಂಟಾಗುವುವೆಂಬುದನ್ನೂ ಯೋಗಗ್ರಂಥಗಳಿಂದ ತಿಳಿಯಬಹುದು. ಸೃಷ್ಟಿಯ ಮೂಲವು ಬಿಂದುವಿನಿಂದ "ಬಿಂದೋರ್ನಾದಸಮುದ್ಭವಃ" ಎಂಬಂತೆ, ಅಲ್ಲಿಂದ ಮುಂದಕ್ಕೆ ನಾದರೂಪಿಯಾದ ಈಶ್ವರನ ಆವಿರ್ಭಾವವಾಗುವುದು – ಎಂಬುದಾಗಿ ತಂತ್ರಶಾಸ್ತ್ರಗಳು ಸಾರುವುವು. ಹೀಗೆ ಯೋಗವಿದ್ಯೆ-ತಂತ್ರವಿದ್ಯೆ-ಸಂಗೀತವಿದ್ಯೆಗಳೆಲ್ಲದರ ಸಾರರೂಪವಾಗಿ "ನಾದತನುಮನಿಶಂ ಶಂಕರಂ" ಎಂದು ಹಾಡಿದ ತ್ಯಾಗರಾಜರನ್ನು ವಂದಿಸಿ, ಈ ನಾದಯೋಗದ ಕಿಂಚಿತ್ತಾದ ದರ್ಶನವನ್ನು ಶ್ರೀರಂಗಾರ್ಪಣ ಮಾಡುತ್ತೇವೆ.

ಸೂಚನೆ : 19/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.