Saturday, June 19, 2021

ಷೋಡಶೋಪಚಾರ - 5 ಆಸನ (Shodashopachaara - 5 Aasana)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)

ಷೋಡಶೋಪಚಾರಗಳಲ್ಲಿ ಎರಡನೆಯದು ಮತ್ತು ವಿಶಿಷ್ಟವಾದುದು ಆಸನ ಎಂಬ ಉಪಚಾರ. ಆಸನವೆಂಬ ಶಬ್ದವನ್ನು ಕೇಳಿದ ಆ ಕ್ಷಣದಲ್ಲಿ ನಮಗೆ ಮೊಟ್ಟಮೊದಲು ಮನಸ್ಸಿಗೆ ಬರುವವಿಷಯವೇನೆಂದರೆ ಯೋಗಾಸನ. ನಮ್ಮ ಮನಸ್ಸು, ಇಂದ್ರಿಯ ಮತ್ತು ಶರೀರ ಇವುಗಳು ಸರಿಯಾಗಿಒಂದು ಕಡೆ ಕುಳಿತುಕೊಳ್ಳುವಂತಾಗಲು ಮಾಡುವ ಅಭ್ಯಾಸವೇ ಆಸನ. ಇಲ್ಲಿ ಹೇಳಿದ ಆಸನವು, ನಮ್ಮಮನೆಗೆ ಅಥವಾ ಮನಕ್ಕೆ, ಬರಮಾಡಿಕೊಳ್ಳಲು ಮಾಡುವ ಕೆಲಸವಾಗಿದೆ. ಎರಡೂಕುಳಿತುಕೊಳ್ಳಲು ಬೇಕಾದ ವ್ಯವಸ್ಥೆಯೇ ಆಗಿದೆ.


ನಾವು ಭಗವಂತನ ಆಸನಕ್ಕಾಗಿ ವಿವಿಧ ಬಗೆಯ ಪೀಠವನ್ನು ಇಡುತ್ತೇವೆ. ವಜ್ರಪೀಠ, ರತ್ನಪೀಠ, ಸುವರ್ಣಮಯಪೀಠ, ರಜತಪೀಠ, ದಾರುಪೀಠ ಹೀಗೆ ಅನೇಕ ಬಗೆಯ ವಸ್ತುಗಳನ್ನು ಬಳಸಿ ಪೀಠವನ್ನುಮಾಡಿ ಅದರಲ್ಲಿ ಭಗವಂತನನ್ನು ಕುಳ್ಳಿರಿಸಿ ಆರಾಧಿಸುತ್ತೇವೆ. ಅದಕ್ಕಾಗಿ ಮಂಟಪವನ್ನುಮಾಡುತ್ತೇವೆ. ಆ ಮಂಟಪವನ್ನು ಪುಷ್ಪಗಳಿಂದ ಅಲಂಕರಿಸುತ್ತೇವೆ. ದೀಪಗಳಿಂದ ಆ ಪೀಠವು ಇನ್ನೂಶೋಭೆಗೊಳ್ಳುವಂತೆ ಮಾಡುತ್ತೇವೆ. ಒಟ್ಟಾರೆ ಪೀಠದಲ್ಲಿ ಬಿಜಯಿಸಿದ ಭಗವಂತನು ನಮಗೆಸುಂದರವಾಗಿ ಕಾಣಬೇಕು. ನಮ್ಮ ಮನಸ್ಸಿಗೆ ಸಂತೋಷವಾಗಬೇಕು. ಅವರವರ ಭಾವಕ್ಕೆ ಅವರವರಶಕ್ತಿಸಾಮರ್ಥ್ಯಕ್ಕೆ ಅನುಗುಣವಾಗಿ ಪೀಠದ ವ್ಯವಸ್ಥೆಯನ್ನು ಮಾಡುತ್ತೇವೆ. ಭಗವಂತನು ಇಂತಹದ್ದೇಪೀಠ ಬೇಕೆಂದು ಬಯಸುವುದಿಲ್ಲ ತಾನೆ! ಹಾಗಾದರೆ ಇಂತಹ ವೈಭವೋಪೇತವಾದ ಪೀಠದ ಅವಶ್ಯಕತೆಏನು? ಎಂಬ ಪ್ರಶ್ನೆಯೂ ಬಂದೇ ಬರುತ್ತದೆ. 'ಐಶ್ವರ್ಯ ಎಂಬುದು 'ಈಶ್ವರ' ಎಂಬ ಪದದಿಂದಲೇಬಂದಿದೆ. ಅವನು ಕೊಟ್ಟಿದ್ದನ್ನು ಅವನಿಗೆ ಕೊಡುವುದು ಐಶ್ಚರ್ಯದ ಸದುಪಯೋಗ. ದೈವಕೊಟ್ಟಿದ್ದನ್ನು ದೈವಕ್ಕೆ ಉಪಯೋಗಿಸಬೇಕು' ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿಸಂಶಯವನ್ನು ಪರಿಹರಿಸುತ್ತದೆ. ಇದೇ ಅಲ್ಲವೇ ಪೂಜೆಯ ಅಂತರಾರ್ಥ. ಪೀಠದಲ್ಲಿರುವ ಅಲಂಕಾರಭೂಷಿತನಾದ ಅವನ ಸ್ಮರಣೆಯು, ನಮ್ಮನ್ನು ಸದಾ ಭಗವದ್ಭಾವದಲ್ಲಿ ತುಂಬಿಸಿಕೊಳ್ಳಲುಸಹಾಯಮಾಡುತ್ತದೆ. ಆ ಕಾರಣಕ್ಕಾಗಿ ಭಗವಂತನಿಗೆ ವೈಭವೋಪೇತವಾದ ಪೀಠವನ್ನು ನಾವುಕಲ್ಪಿಸುತ್ತೇವೆ. ಇದಾವುದೂ ಸಾಧ್ಯವಿಲ್ಲದವನು ಕೇವಲ ಮಾನಸಿಕವಾಗಿ ಇಂತಹ ಆಸನವನ್ನುಕಲ್ಪಿಸಿಕೊಂಡರೂ ಭಗವಂತನು ತೃಪ್ತನಾಗುತ್ತಾನೆ. ಪ್ರತಿಯೊಂದು ವಸ್ತುವೂ ಅದರದ್ದೇ ಆದಪರಿಣಾಮವನ್ನು ಬೀರುತ್ತದೆ. 'ಧಾತುಃ ಪ್ರಸಾದಾತ್ ಮಹಿಮಾನಮೀಶಮ್' ಎಂಬಂತೆ ಇವೆಲ್ಲದರಗುರಿ ನಮ್ಮ ಶರೀರದ ಸಪ್ತಧಾತುಗಳ ಪ್ರಸನ್ನತೆ ತಾನೇ! ಆಗ ಮಾತ್ರ ಭಗವಂತನ ಸಾಕ್ಷಾತ್ಕಾರ ಸಾಧ್ಯ! ಇಂತಹ ವಿಜ್ಞಾನದಿಂದ ಕೂಡಿದ ಉಪಚಾರವನ್ನು ನಮ್ಮ ಋಷಿಗಳು ತಂದರು. ಆದರೆ ಈ ವಿಜ್ಞಾನನಮ್ಮಿಂದ ದೂರವಾಗುತ್ತಿರುವುದು ಖೇದದ ಸಂಗತಿಯಾಗಿದೆ.


ಸೂಚನೆ : 19/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.