Sunday, April 5, 2026

ವ್ಯಾಸ ವೀಕ್ಷಿತ 182 ವಾದದಲ್ಲಿ ಸರಿಸಮನೆನಿಸಿದ ಜರಾಸಂಧ! ( Vyaasa Vikshita 182)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)

 


ಜರಾಸಂಧನನ್ನು ಎದುರಿಸಿ ನಿಂತಿದ್ದಾರೆ, ಪಾಂಡವರಿಬ್ಬರು, ಹಾಗೂ ಕೃಷ್ಣ.  ವೇಷಾಂತರದಲ್ಲಿ ಬಂದಿರುವುದಾದರೂ ತಾವು ವಾಸ್ತವವಾಗಿ ಯಾರೆಂಬುದನ್ನು ತಿಳಿಸಹೊರಟ ಕೃಷ್ಣನು ತನ್ನ ಮಾತನ್ನು ಮುಂದುವರೆಸುತ್ತಿದ್ದಾನೆ.

"ಜರಾಸಂಧನೇ, ಸ್ವರ್ಗಪ್ರಾಪ್ತಿಗೆ ಕಾರಣವಾಗಬಲ್ಲವು ಹಲವು: ಸ್ವರ್ಗವು ದೊರಕುವುದು ವೇದಾಧ್ಯಯನದಿಂದ; ಸ್ವರ್ಗವನ್ನು ಹೊಂದಲು ಕಾರಣವೆನಿಸುವುದು ಮಹಾಯಶಸ್ಸು; ಸ್ವರ್ಗಸಂಪಾದನೆಗೆ ಹೇತುವಾದದ್ದು ತಪಸ್ಸು; ಇವೆಲ್ಲಕ್ಕಿಂತಲೂ ಮಿಗಿಲಾದದ್ದೆಂದರೆ ಹಿಂಜರಿಯದೆಯೇ ಯುದ್ಧದಲ್ಲಿ ಕ್ಷತ್ರಿಯನು ಮೃತ್ಯುವನ್ನು ಹೊಂದುವಂತಹುದು.

ಯುದ್ಧದಲ್ಲಿಯ ಸಾವೆಂದರೆ ಕ್ಷತ್ರಿಯನು ವೈಜಯಂತವನ್ನು ಹೊಂದಿದಂತೆಯೇ – ಅದಂತೂ, ಇಂದ್ರನ ಪ್ರಾಸಾದ, ಎಂದರೆ  ರಾಜಗೃಹವೇ!  ಸರ್ವಗುಣಗಳಿಂದಲೂ ಪರಿಪೂರ್ಣವಾದುದು ಅದು. ಯುದ್ಧವೆಂಬುದನ್ನು ಆಧರಿಸಿಯೇ ಅಸುರರನ್ನು ಪರಾಭವಗೊಳಿಸಿ ಇಂದ್ರನು ಜಗದ್ರಕ್ಷಕನಾಗಿರುವುದು.

ಈಗ ನಮ್ಮೊಂದಿಗೆ ಯುದ್ಧವೆಂಬುದೇನುಂಟೋ ಅದು ನಿನಗೆ ಸ್ವರ್ಗ-ಪ್ರಾಪಕವೇ ಸರಿ. ಈ ಬಗೆಯು ಮತ್ತಾರಿಗೆ ದೊರಕೀತು?

"ಮಾಗಧರ ವಿಪುಲವಾದ ಸೈನ್ಯವೆನಗಿದೆ" ಎಂಬ ಬಾಹುಲ್ಯದ ಬಲದಿಂದ ನೀನು ದರ್ಪಗೊಂಡಿರುವೆ. ಹಾಗೆ ನೀನು ದರ್ಪಗೊಂಡು ಅನ್ಯರನ್ನು ಅವಮಾನಿಸುವುದಲ್ಲ, ತಿಳಿದುಕೋ. ನರ-ನರನಲ್ಲೂ - ಎಂದರೆ ಪ್ರತಿಯೊಬ್ಬ ಮನುಷ್ಯನಲ್ಲೂ - ವೀರ್ಯವಿರುವುದು, ನಿನಗೆ ಸಮಾನವೆನಿಸುವ ತೇಜಸ್ಸಿರುವುದು. ನಿನಗಿಂತಲೂ ಅತಿಶಯವಾದದ್ದೂ ಉಂಟು, ರಾಜನೇ!

ಎಲ್ಲಿಯವರೆಗೆ ಇದೆಲ್ಲಾ ನಿನ್ನ ಅರಿವಿಗೆ ಬರುವುದಿಲ್ಲವೋ, ಅಲ್ಲಿಯವರೆಗಷ್ಟೆ ಇದನ್ನೆಲ್ಲಾ ನಾವು ಸಹಿಸಿಕೊಳ್ಳಬೇಕಾಗಿಬರುವಂತಹುದು! ಎಂದೇ, ರಾಜನೇ, ನಾನು ನಿನಗೆ ಹೇಳುತ್ತಿರುವುದು - ನಿನಗೆ ಯಾರು ಸಮಾನರೋ ಅಂತಹವರ ವಿಷಯದಲ್ಲಿ ನಿನ್ನ ಸ್ವಾಭಿಮಾನವನ್ನೂ ದರ್ಪವನ್ನೂ ಬಿಡು, ಮಾಗಧನೇ!

ನಿನ್ನ ಮಕ್ಕಳು ಮಂತ್ರಿಗಳೊಂದಿಗೆ ಹಾಗೂ ಸೈನ್ಯದೊಂದಿಗೆ ನೀನು ಯಮಲೋಕವನ್ನು ಸೇರಬಾರದಲ್ಲವೇ?

ದಂಭೋದ್ಭವ, ಕಾರ್ತವೀರ್ಯ, ಉತ್ತರ, ಬೃಹದ್ರಥ - ಎಂಬೀ ನಾಲ್ವರು ರಾಜರೂ ನಾಶಹೊಂದಿದರು - ತಮ್ಮ ಸೈನ್ಯಸಮೇತರಾಗಿಯೇ. ಏಕೆ? ತಮಗಿಂತಲೂ ಹಿರಿಯರನ್ನು ಅವಮಾನಗೊಳಿಸಿಯೇ !

ನಿನ್ನೊಡನೆ ಯುದ್ಧಮಾಡಬಯಸುತ್ತಿರುವ ನಾವು ಬ್ರಾಹ್ಮಣರಲ್ಲ. ನಾನು ಶೌರಿಯಾದ ಹೃಷೀಕೇಶ, ಎಂದರೆ ವಸುದೇವಪುತ್ರ. ಹಾಗೂ ಇವರಿಬ್ಬರೂ ಪಾಂಡವರು. ಇವರಿಬ್ಬರಿಗೂ ನಾನು ಮಾತುಲೇಯ, ಎಂದರೆ ಸೋದರಮಾವನ ಮಗನಾದ ಕೃಷ್ಣ, ನಿನ್ನ ಶತ್ರು - ಎಂಬುದಾಗಿ ತಿಳಿ.

ಇದೋ, ಯುದ್ಧಕ್ಕೆ ನಿನ್ನನ್ನು ಆಹ್ವಾನಿಸುತ್ತಿದ್ದೇವೆ, ರಾಜನೇ. ಸ್ಥಿರನಾಗಿ ಯುದ್ಧಮಾಡು, ಮಾಗಧ! ನಿನಗಿರುವುದು ಎರಡೇ ಆಯ್ಕೆಗಳು:ಇಲ್ಲವೇ ಎಲ್ಲ ರಾಜರನ್ನೂ ಬಂಧಮುಕ್ತಗೊಳಿಸು; ಇಲ್ಲವೇ ಯಮಸದನಕ್ಕೆ ಹೋಗು" – ಎಂದನು.

ಕೃಷ್ಣನು ಹೀಗೆ ಹೇಳಲು, ಜರಾಸಂಧನು ನುಡಿದನು: "ಮೊದಲು ನೀನಿದನ್ನು ತಿಳಿದುಕೋ, ಕೃಷ್ಣಾ! ಯಾವ ರಾಜರು ನನ್ನೊಡನೆ ಸೆಣಸಿನಲ್ಲಿ ಸೋತಿಲ್ಲವೋ, ಅಂತಹವರನ್ನೊಬ್ಬರನ್ನೂ ನಾನು ಕೈದಿಯಾಗಿಸಿಲ್ಲ. ನನಗೆ ಪ್ರತಿಭಟಿಸಿಯೂ ನನ್ನಿಂದ ಸೋಲನ್ನು ಕಾಣದ ಯಾವೊಬ್ಬ ವ್ಯಕ್ತಿಯೂ ಇಲ್ಲಿಲ್ಲ.

ಕೃಷ್ಣಾ! ಇದನ್ನೇ ಅಲ್ಲವೆ ಕ್ಷತ್ರಿಯನ ಜೀವಿಕೆಯೆಂಬುದಾಗಿ ಹೇಳುವುದು?: ಏನೆಂದರೆ, ಪರಾಕ್ರಮವನ್ನು ತೋರಿಸಿ, ಶತ್ರುವನ್ನು ವಶಕ್ಕೆ ತೆಗೆದುಕೊಂಡು, ಬಳಿಕ ತನಗೆ ತೋಚಿದಂತೆ ಆಚರಿಸುವುದು - ಎಂಬುದು.

ದೇವತೆಗಳಿಗೆ ಬಲಿಗೊಡಲೆಂದು ಈ ರಾಜರುಗಳನ್ನು ನಾನು, ಕ್ಷತ್ರಿಯ-ವ್ರತವನ್ನು ಮರೆಯದೆ, ಸೆರೆಯಾಗಿಸಿದ್ದೇನೆ. ಈಗೇನು ನಿನಗೆ ಭಯಪಟ್ಟುಕೊಂಡು ಅವರುಗಳನ್ನು ನಾನು ವಿಮುಕ್ತಗೊಳಿಸಬೇಕೇನು?

ನಿನ್ನ ಸೇನಾವ್ಯೂಹದೊಂದಿಗೆ ನನ್ನ ಸೇನಾವ್ಯೂಹವು ಹೋರಲಿ. ಅಥವಾ ಒಂಟಿಯಾಗಿ ಒಂಟಿಯಾದವನ ಮೇಲೆ ಹೋರಾಡುವುದೆಂದರೆ ಹಾಗೂ ಸರಿಯೇ. ಅಥವಾ ಇಬ್ಬರೊಂದಿಗೋ ಮೂವರೊಂದಿಗೋ ಸೆಣಸುವುದೆಂದರೆ ಹಾಗೂ ಸರಿಯೇ! ನಾನು ಯಾವುದಕ್ಕೂ ಸಿದ್ಧ! " ಎಂದನು, ಜರಾಸಂಧ.

ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಪ್ರಶ್ನೋತ್ತರ ರತ್ನಮಾಲಿಕೆ 60 (Prasnottara Ratnamalike 60)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೬೦ - ಪ್ರಶಂಸೆ ಮಾಡಲು ಯೋಗ್ಯವಾದುದು ಯಾವುದು ?

ಉ. ಉದಾರತಾ.

ಔದಾರ್ಯ ಅಥವಾ ಉದಾರತಾ ಎಂಬ ಗುಣವು ಅತ್ಯಂತ ಶ್ರೇಷ್ಠವಾದದ್ದು. ಇದು ಯಾರಲ್ಲಿ ಇರುತ್ತದೆಯೋ ಆ ವ್ಯಕ್ತಿಯನ್ನು ಪ್ರಶಂಸೆ ಮಾಡುವುದರಲ್ಲಿ ಯಾವುದೇ ಅಂಜಿಕೆ ಇರಬಾರದು. ಏಕೆಂದರೆ ಆ ವ್ಯಕ್ತಿ ಈ ಗುಣದಿಂದ ಪ್ರಶಂಸೆಗೆ ಅರ್ಹನಾಗುತ್ತಾನೆ. ಹಾಗಾದರೆ ಈ 'ಉದಾರತಾ' ಎಂಬ ಗುಣವು ಏಕೆ ಅಷ್ಟು ಶ್ರೇಷ್ಠವಾಗಿದೆ? ಎಂಬುದನ್ನು ತಿಳಿಯಬೇಕಾಗಿದೆ. 

'ಔದಾರ್ಯ' ಎಂಬುದು ಒಂದು ಕೊಡುವ ಮನೋಧರ್ಮ. ಈ ಹಿಂದಿನ ಪ್ರಶ್ನೋತ್ತದಲ್ಲಿ ಒಂದು ವಿಷಯವನ್ನು ಗಮನಿಸಿದ್ದೆವು. ಆ ವಿಷಯವನ್ನು ಇಲ್ಲಿ ನೆನಪಿಸಿಕೊಂಡು ಈ ಉತ್ತರವನ್ನು ಅರ್ಥ ಮಾಡಿಕೊಳ್ಳಬೇಕು. ಈ ಹಿಂದಿನ ಪ್ರಶ್ನೆಯಲ್ಲಿ ವೈಭವಿದ್ದರೂ ಮತ್ತೊಬ್ಬರಿಗೆ ಕೊಡದಿರುವ ಅತಿಹೇಯವಾದ ಕೃಪಣತಾ ಎಂಬ ದೋಷವನ್ನು ವಿವರಿಸಿದ್ದಾಗಿತ್ತು. ಇದಕ್ಕೆ ವಿರುದ್ಧವಾದ ಗುಣವೇ ಉದಾರತಾ ಎಂಬುದು. ಅಂದರೆ ತನ್ನಲ್ಲಿ ಏನಿದೆಯೋ ಅದರಲ್ಲಿ ಕೊಟ್ಟು ಸಂತೋಷಪಡುವ, ತೃಪ್ತಿಪಡುವ ಮನಸ್ಸು. ಈ ಔದಾರ್ಯವೆಂಬ ಗುಣವಿಲ್ಲದಿದ್ದರೆ ದಾನ ಮಾಡುವ ಸ್ವಾಭಾವ ಹೇಗೆ ಬರಲು ಸಾಧ್ಯ. ಇದ್ದು ಕೊಟ್ಟರೆ ಅದು ಔದಾರ್ಯವೆನಿಸತದು. ತನ್ನಲ್ಲಿ ಇರುವಷ್ಟನ್ನು ದೀನದರಿದ್ರರಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ಸ್ಪಂದಿಸುವ ವಿಶೇಷ ಗುಣವೇ ಉದಾ

ತಾ. ಹಾಗಾಗಿ ಇಂತಹ ವಿಶೇಷ ಗುಣವನ್ನು ಪ್ರಶಂಸಿಸಬೇಕಾದುದು ಅತ್ಯಂತ ಅವಶ್ಯಕ. ಈ ಗುಣವು ಬರಲು ಹೇಗ ಸಾಧ್ಯ? ಎಂಬುದಕ್ಕೆ ಭಗವದ್ಗೀತೆಯಲ್ಲಿ ಯಾರು ಉದಾರರು ಎಂಬುದನ್ನು ಹೀಗೆ ಹೇಳಲಾಗಿದೆ. ಆರ್ತ, ಜಿಜ್ಞಾಸು ಅರ್ಥಾರ್ಥೀ ಮತ್ತು ಜ್ಞಾನಿ ಈ ನಾಲ್ವರನ್ನು ಉದಾರರು ಎಂಬುದಾಗಿ ಕರೆಯಬೇಕು. ಈ ನಾಲ್ವರಲ್ಲಿ ಜ್ಞಾನಿಯಾದವನು ಅತ್ಯಂತ ಶ್ರೇಷ್ಠ ಉದಾರಿ ಎಂಬುದಾಗಿ ತಿಳಿಯಬೇಕು. ಅಂದರೆ ಅಂತಹ ಜ್ಞಾನಿಗೆ ಮಾತ್ರ ಈ ವಿಶೇಷಗುಣ ಬರಲು ಸಾಧ್ಯ ಎಂಬುದು ಇದರ ತಾತ್ಪರ್ಯ. ಸಾಮಾನ್ಯ ಮಾನವನಿಗೆ ಅಲ್ಪಸಲ್ಪ ಔದಾರ್ಯದ ಗುಣ ಬರಬಹುದು. ಆದರೆ ಜ್ಞಾನಿಗೆ ಪರಿಪೂರ್ಣ ಔದಾರ್ಯ ಗುಣವು ಬರುತ್ತದೆ. ಏಕೆಂದರೆ ಜ್ಞಾನಿಯಾದವನಿಗೆ ತ್ಯಾಗ ಎಂಬ ಗುಣವುವಿಶೇಷವಾಗಿರುತ್ತದೆ.

ತ್ಯಾಗದಿಂದಲೇ ಅವನು ಅಮೃತತ್ವವನ್ನು ಪಡೆಯಬಹುದು ಎಂಬುದನ್ನು ಬಲವಾಗಿ ನಂಬಿದವನಾಗಿರುತ್ತಾನೆ. ಕೇವಲ ಸಂಪತ್ತನ್ನು ಮಾತ್ರವಲ್ಲದೆ ಈ ಜನ್ಮಕ್ಕೆ ಕಾರಣವಾದ ಶರೀರವು ಕೂಡ ತ್ಯಾಜ್ಯವಾದದ್ದು ಎಂಬ ಎಂಬ ತ್ಯಾಗ ಮನೋಧರ್ಮ ಅವನಿಗೆ ಇರುತ್ತದೆ. ಔದಾರ್ಯ ಇರುವವನು ಎಲ್ಲಾ ಕಾಲದಲ್ಲೂ ಶುದ್ಧನಾಗಿ ಇರುತ್ತಾನೆ. ಕಾರಣ ಇಷ್ಟೇ - ಔದಾರ್ಯ ಎಂಬ ಗುಣ ಇರುವುದರಿಂದಲೇ ಅವನು ಜ್ಞಾನಿಯಾದ, ಯೋಗಿಯಾದ, ಶೋಭಾ ವಿಲಾಸೋ ಮಾಧುರ್ಯಂ ಗಾಂಭೀರ್ಯಂ ಧೈರ್ಯತೇಜಸೀ। ಲಲಿತಾ ಔದಾರ್ಯಂ ಇತಿ ಅಷ್ಟ ಸತ್ತ್ವಜಾಃ ಪುರುಷಾಃ ಗುಣಾಃ॥ " ಎಂದು ಸಾಹಿತ್ಯದರ್ಪಣ ಎಂಬ ಗ್ರಂಥದಲ್ಲಿ ಸಜ್ಜನಪುರುಷರ ಎಂಟು ಲಕ್ಷಣಗಳನ್ನು ಹೇಳಲಾಗಿದೆ. ಅದರಲ್ಲಿ ಔದಾರ್ಯ ಎಂಬ ಗುಣವನ್ನು ಎತ್ತಿ ಹೇಳಲಾಗಿದೆ. ಅಂದರೆ ಈ ಗುಣವು ಸತ್ತ್ವಗುಣದ ಪ್ರತೀಕವಾದದ್ದು. ಯಾರಲ್ಲಿ ಸತ್ತ್ವಗಣ ಇರುತ್ತದೆಯೋ, ಅವರಲ್ಲಿ ಉದಾರತೆ ಇರುತ್ತದೆ. ಅಥವಾ ಉದಾರತೆ ಎಂಬುದು ಸತ್ತ್ವಗುಣದಿಂದಲೇ ಜಾಗೃತವಾಗುತ್ತದೆ ಎಂಬ ಅರ್ಥವೂ ಸತ್ಯವಾದದ್ದು. ಒಟ್ಟರೆ ಇಂತಹ ಸತ್ಪುರುಷನು ಉದಾರತಾ ಎಂಬ ಗುಣದಿಂದ ಪ್ರಶಂಸೆಗೆ ಅರ್ಹನಾಗುತ್ತಾನೆ.

ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮನುಷ್ಯತ್ಮು ಮುಮುಕ್ಷುತ್ವ -ಮಹಾಪುರುಷ ಸಹವಾಸ (Manusyatmu Mumuksutva -Mahapurusa Sahavasa)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)

                            


ದುರ್ಲಭಂ ತ್ರಯಮೇವೈತತ್ ದೇವಾನುಗ್ರಹಹೇತುಕಮ್|

ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ ||

ಪಡೆಯಲು ಬಹಳ ಕಷ್ಟವಾಗಿದ್ದು, ಭಗವಂತನ ಅನುಗ್ರಹವೊಂದರಿಂದಲೇ ದೊರಕುವ ಮೂರು ಭಾಗ್ಯಗಳು- ಮನುಷ್ಯತ್ವ, ಮೋಕ್ಷದ ಅಪೇಕ್ಷೆ ಮತ್ತು ಮಹಾಪುರುಷರ ಆಶ್ರಯ. ಇದು ಜ್ಞಾನಿಶ್ರೇಷ್ಠರಾದ ಶಂಕರ ಭಗವತ್ಪಾದರ "ವಿವೇಕ ಚೂಡಾಮಣಿ" ಗ್ರಂಥದ ಮಾತು. ಏಕೆ ಈ ಮೂರು ವಿಷಯಗಳನ್ನು ಇಷ್ಟೊಂದು ದುರ್ಲಭ ಎಂದೂ, ಬಹಳ ಪ್ರಧಾನವೆಂದೂ ಭಾವಿಸಲಾಗಿದೆ?

ಮನುಷ್ಯತ್ವ

ನಾವೆಲ್ಲರೂ ಮನುಷ್ಯರೇ. ಎಂದಮೇಲೆ ಇದರ ಬಗ್ಗೆ ವಿಚಾರ ಮಾಡುವುದೇನಿದೆ ಎನಿಸಬಹುದು. ಮತ್ವಾ ಸೀವ್ಯತೇ ಇತಿ ಮನುಷ್ಯಃ ಎಂಬುದು ಮನುಷ್ಯ ಪದದ ಅರ್ಥ. ಎಲ್ಲಾ ವಿಷಯದಲ್ಲಿಯೂ ಅರಿತು ಹೆಜ್ಜೆ ಇಡುವವನು. ಮನುಷ್ಯ ಎಂದಿದ್ದಾರೆ. ಅರಿವಿನ ವ್ಯಾಪ್ತಿ ಮನುಷ್ಯನಿಗೆ ಇದ್ದಷ್ಟು ಇತರ ಪ್ರಾಣಿಗಳಿಗೆ ಇಲ್ಲ. ಅವು ನಿಸರ್ಗ ನೇಮಿಸಿದಂತೆ ತಮ್ಮ ಇರುವಿಕೆಗೆ ಬೇಕಾದಷ್ಟು ಅರಿವನ್ನು ಮಾತ್ರ ಹೊಂದಿರುತ್ತವೆ. ಆದರೆ ಮನುಷ್ಯ ಹಾಗಲ್ಲ. ಅವನು ತನ್ನ ದೇಹದ ಒಳಿತು ಕೆಡುಕುಗಳ ಬಗ್ಗೆ, ಹೊರಗಿನ ಲೋಕದ ಹಿತ, ಅಹಿತಗಳ ಬಗ್ಗೆ, ವ್ಯಾಪಕವಾಗಿ ಆಲೋಚಿಸಬಲ್ಲ. ಅದರಲ್ಲೇನಾದರೂ ಏರುಪೇರಾದರೆ ಸರಿಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆಯೂ ಚಿಂತನೆ ನಡೆಸಬಲ್ಲ. ಒಂದು ಆಡು, ಅದು ಸೃಷ್ಟಿಯಾದಂದಿನಿಂದ ಹೆಚ್ಚು ವ್ಯತ್ಯಾಸವೇನೂ ಇಲ್ಲದೇ ಹಾಗೆಯೇ ಇದೆ. ಅದೇ ಹುಲ್ಲನ್ನು ತಿನ್ನುತ್ತದೆ,ಅದೇ ರೀತಿಯ ಜೀವನ ಮಾಡುತ್ತದೆ . ಆದರೆ ಮನುಷ್ಯನ ಪ್ರಗತಿಗೆ ಎಣೆಯೇ ಇಲ್ಲ. ಅವನ ವ್ಯಾಪಕವಾದ ನೋಟವೇ ಅವನ ಜೀವನದಲ್ಲಿ ಅನೇಕ ಪರಿಷ್ಕಾರಗಳನ್ನು ತಂದಿದೆ. ಜೀವನಕ್ರಮದಲ್ಲಿ ಪರಿವರ್ತನೆಯನ್ನು ಕಾಣಬಹುದು. ಐವತ್ತು ವರ್ಷಗಳ ಹಿಂದಿದ್ದ ಜೀವನಕ್ರಮ ಈಗಿಲ್ಲ.ಅವನ ಜೀವನ ನಿರ್ವಹಣೆಗೆ ಅನುಕೂಲಕರವಾದ ಅಸಂಖ್ಯ ವಸ್ತುಗಳ, ಉಪಕರಣಗಳ ಆವಿಷ್ಕಾರ ಮನುಷ್ಯನಿಂದ ನಡೆದಿದೆ.ಇವೆಲ್ಲವೂ ಅವನ ಅರಿವಿನ ವ್ಯಾಪ್ತಿಗೆ ಸಾಕ್ಷಿಗಳೇ. ಆದರೆ ಆಚಾರ್ಯರು ಹೇಳುತ್ತಿರುವ ಮನುಷ್ಯತ್ವ ಇಷ್ಟೇ ಅಲ್ಲ. ಅರಿತು ಹೆಜ್ಜೆ ಇಡುವವನು ಎಂದಾಗ ಕೇವಲ ಸ್ಥೂಲ ಪ್ರಪಂಚಕ್ಕೆ ಮಾತ್ರ ಆ ಅರಿವು ಸೀಮಿತವಾಗಿಲ್ಲ. ಸ್ಥೂಲದ ಹಿಂದೆ ಈ ಸ್ಥೂಲ ಪ್ರಪಂಚಕ್ಕೂ ಆಧಾರವಾಗಿರುವ ಸೂಕ್ಷ್ಮ ಪ್ರಪಂಚವೊಂದುಂಟು. ಅಲ್ಲಿಂದಲೇ ಶಕ್ತಿಯು ಹರಿದು ಸ್ಥೂಲ ಪ್ರಪಂಚಕ್ಕೂ ಕಾರಣವಾಗಿರುವುದು. ಅದೊಂದು ಪ್ರಕಾಶಮಯವಾದ ದೇವತೆಗಳ ಸಾಮ್ರಾಜ್ಯ.ಹೊರಗಣ್ಣಿಗೆ ಕಾಣದು. ಅದನ್ನು ಅರಿಯಲು ತಪಸ್ಸಿನ ಕಣ್ಣು ಬೇಕಾಗುತ್ತದೆ. ಅಂತಹ ತಪಸ್ಸನ್ನು ಆಚರಿಸಿ ಆ ಅರಿವನ್ನೂ ಪಡೆಯುವುದು ಮನುಷ್ಯನಿಂದ ಮಾತ್ರ ಸಾಧ್ಯ. ಅಂತಹ ಅರಿವೂ ಇದ್ದಾಗ ಅವನು ಮನುಷ್ಯ. ಈ ಸೂಕ್ಷ್ಮ ಪ್ರಪಂಚಕ್ಕೂ ಹಿಂದೆ ಎಲ್ಲಕ್ಕೂ ಮೂಲವಾಗಿ ಬೆಳಗುತ್ತಿರುವ "ಪರ " ಎನ್ನುವ ಪ್ರಪಂಚವುಂಟು. ಅದೇ ಎಲ್ಲಾ ಆನಂದದ ಮೂಲ. "ಜೀವನ ವೃಕ್ಷಕ್ಕೆ ಮೂಲವುಂಟು. ಆ ಮೂಲವೇ ವಿದ್ಯಾಮೂಲವಾದ ಶರೀರವನ್ನು ಹೊಂದಿರುವ ಆ ಜ್ಯೋತಿಯಾಗಿದೆಯಪ್ಪಾ" ಎಂಬ ಶ್ರೀರಂಗ ಮಹಾಗುರುಗಳ ಮಾತೂ ಇಲ್ಲಿ ಸ್ಮರಣೀಯ. ವಿಶ್ವವೆಲ್ಲವೂ ಆ ಮೂಲ ಶಕ್ತಿಯಿಂದಲೇ ನಡೆಯುತ್ತಿರುವುದು ಎಂಬ ಅರಿವನ್ನೂ ಮನುಷ್ಯನು ಗುರುವಿನ ಅನುಗ್ರಹದಿಂದ , ತನ್ನ ಸಾಧನೆಯಿಂದ ಪಡೆಯಬಹುದು. ಹೀಗೆ ಮೂರೂ ಕ್ಷೇತ್ರಗಳಲ್ಲಿ ಅರಿತು ಹೆಜ್ಜೆಗಳನ್ನು ಇಟ್ಟು ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವುದೇ ಜ್ಞಾನಿಗಳು ಹೇಳಿದ ಮನುಷ್ಯತ್ವ.

ಮುಮುಕ್ಷುತ್ವ -:

ಮುಮುಕ್ಷುತ್ವ - ಹಾಗೆಂದರೇನು? ಜೀವನದಲ್ಲಿ ಬಿಡುಗಡೆಯನ್ನು ಹೊಂದುವ ಆಸೆ. ಮೋಕ್ಷದ ಅಪೇಕ್ಷೆ. ಬಂಧನದಲ್ಲಿರುವುದನ್ನು ಯಾರೂ ಬಯಸುವುದಿಲ್ಲ. ಬೀಜವು ವೃಕ್ಷವಾಗತೊಡಗಿದಾಗ ಒಂದು ದೃಷ್ಟಿಯಿಂದ ವೃಕ್ಷದಲ್ಲಿ ಬಂಧಿಯಾಗಿರುತ್ತದೆ. ತನ್ನ ಕ್ರಮಬದ್ಧವಾದ ವಿಕಾಸದೊಡನೆ ಪುನಃ ಬೀಜವಾದಾಗಲೇ ಅದಕ್ಕೆ ಮುಕ್ತಿ. ಹಾಗಾಗಲೆಂದೇ ಅದರ ಮುಂದಿನ ನಡೆಯೆಲ್ಲವೂ.ಹಾಗೆಯೇ ನಾವೆಲ್ಲರೂ ಆ ಮಹಾ ಚೈತನ್ಯದ ಕಿಡಿಗಳಾಗಿ, ಜೀವವಾಗಿ ಈ ಶರೀರದೊಳಗೆ ಬಂಧಿಯಾಗಿದ್ದೇವೆ. ನಮ್ಮ ನಡೆಯೆಲ್ಲವೂ ಮತ್ತೆ ಆ ಮಹಾ ಚೈತನ್ಯದಲ್ಲಿ ಒಂದಾಗಿ ಮುಕ್ತರಾಗುವ ಉದ್ದೇಶದಿಂದ ಕೂಡಿದ್ದಾಗ ಅದು ಜೀವದ ಸಹಜ ನಡೆ. ಎಲ್ಲರೂ ಬಯಸಬೇಕಾದ ನಡೆಯೆಂದು ಹಾಗೆ ವ್ಯವಸ್ಥಿತವಾಗಿ ಬದುಕಿದ ಈ ದೇಶದ ಜ್ಞಾನಿಗಳ ಮಾತು. ಮೋಕ್ಷವೆಂದರೆ ಚೇತನನ ತವರುಮನೆ ಎಂದು ಮಾರ್ಮಿಕವಾಗಿ ಪೂಜ್ಯ ರಾಮಭದ್ರಾಚಾರ್ಯರು ತಮ್ಮ " ತತ್ವಾರ್ಥ ಸಾಹಸ್ರೀ ಎಂಬ ಗ್ರಂಥದಲ್ಲಿ ಕೊಂಡಾಡಿದ್ದಾರೆ. ಮಾನವ ದೇಹದ ರಚನೆಯಲ್ಲಿಯೇ ಮುಮುಕ್ಷುತ್ವ ವನ್ನು ಹೊಂದುವ ವ್ಯವಸ್ಥೆ ಇದೆ ಎಂದು ಈ ದೇಹದಲ್ಲಿ ಅದನ್ನು ಅನುಭವಿಸಿ ಸುಖಿಸಿದವರ ಮಾತು. ಇತರ ಪ್ರಾಣಿಗಳ ದೇಹದಲ್ಲಿ ಆ ವ್ಯವಸ್ಥೆ ಇಲ್ಲ. ಅವು ನಿಸರ್ಗವಿಟ್ಟಂತೆ ಇರುತ್ತವೆ ಅಷ್ಟೇ. ಆದರೆ ಮನುಷ್ಯನಿಗೆ ತನ್ನ ಬಿಡುಗಡೆಗಾಗಿ ಪ್ರಯತ್ನಿಸುವ ಅವಕಾಶ ಉಂಟು. ಈ ದೇಹ ರಚನೆಯಲ್ಲಿ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತಗಳೆಂಬ ಅಂತಃಕರಣ ಚತುಷ್ಟಯಗಳುಂಟು. ಅವೆಲ್ಲವೂ ತನ್ನ ಸಹಜವಾದ ಆನಂದದ ಸ್ವರೂಪವನ್ನು ತಪಸ್ಯೆಯಿಂದ ಚಿಂತಿಸಬಲ್ಲವು. ಸಾಧನೆಯಿಂದ ಆ ಒಳ ಅನುಭವವನ್ನು ಗಳಿಸಬಲ್ಲವು. ಅಂತಹ ಅಪೇಕ್ಷೆ ಹುಟ್ಟಬೇಕು ಅಷ್ಟೇ. ಅದನ್ನೇ ಆಚಾರ್ಯರು ಭಗವಂತನ ಅನುಗ್ರಹದಿಂದಲೇ ಸಾಧ್ಯ ಎಂದಿರುವುದು. ಅವನ ಅನುಗ್ರಹಕ್ಕಾಗಿ ಹಾತೊರೆಯುವ ಮನಸ್ಸನ್ನು ಬೆಳೆಸಿಕೊಳ್ಳುವುದೇ ನಮ್ಮ ಸಾಧನೆಯಾಗಬೇಕಿದೆ.

ಮಹಾತ್ಮರ ಸಹವಾಸ

ಇನ್ನೊಂದು ಮಹಾಪುರುಷರ ಸಹವಾಸ. ಇದೊಂದು ಇದ್ದರೆ ಮೇಲಿನ ಎರಡೂ ಭಾಗ್ಯಗಳು ಲಭಿಸಿದಂತೆಯೇ. ಜೀವನದಲ್ಲಿ ಮಹತ್ತಾದುದು ಎಂದರೆ ಈ ಜೀವನ ಮೂಲದಲ್ಲಿ ಬೆಳಗುತ್ತಿರುವ ಭಗವಂತನ ಅರಿವು, ಸಾಕ್ಷಾತ್ಕಾರ. ಅದರಿಂದ ಒದಗುವ ನೆಮ್ಮದಿಗಾಗಿಯೇ ಎಲ್ಲಾ ಸಾಧಕರದ್ದೂ ಸಾಧನೆ. ಅಂತಹ ಮಹತ್ತಾದುದನ್ನು ಪಡೆದುಕೊಂಡವರೇ ಮಹಾತ್ಮರು, ಮಹಾ ಪುರುಷರು. ಕೇವಲ ಭೌತಿಕ ವಿಷಯಗಳನ್ನು ಸಾಧನೆ ಮಾಡಿದವರಲ್ಲ. ಅಂತಹ ಗುರುಜನರ ಮಾರ್ಗದರ್ಶನವೇ ನಮ್ಮನ್ನು ನಿಜವಾದ ಮನುಷ್ಯರನ್ನಾಗಿ ಮಾಡುತ್ತದೆ, ನಮಗೆ ಮುಮುಕ್ಷುತ್ವದ ಅಪೇಕ್ಷೆಯನ್ನೂ ಉಂಟುಮಾಡುತ್ತದೆ. ಹೇಗೆ ನಮಗೆ ಸಂಗೀತ ಜ್ಞಾನವಿಲ್ಲದಿದ್ದರೂ ಒಂದು ಸಂಗೀತ ಕಚೇರಿಯಲ್ಲಿ ಕುಳಿತಾಗ ಅಷ್ಟು ಸಮಯ ನಮಗೆ ಸರಿಯಾಗಿ ತಾಳ ಹಾಕಲು ಬರುವಂತೆ, ಸಹವಾಸವೆನ್ನುವುದು ಅವರಲ್ಲಿನ ಸದ್ವಸ್ತುವನ್ನು ಬಯಸುವ, ಅದಕ್ಕಾಗಿ ಜೀವನದಲ್ಲಿ ಸಾಧನೆಮಾಡುವ ಮನಸ್ಸು ಹುಟ್ಟುವಂತೆ ಮಾಡುತ್ತದೆ.

ಹೀಗೆ ಮನುಷ್ಯತ್ವ, ಮುಮುಕ್ಷುತ್ವ ಮತ್ತು ಮಹಾಪುರುಷರ ಸಹವಾಸಕ್ಕಾಗಿ ಅನವರತವೂ ಆ ಸರ್ವೇಶ್ವರನನ್ನು ಪ್ರಾರ್ಥಿಸೋಣ. ಅವನ ಕರುಣೆ ನಮ್ಮನ್ನು ಕಾಪಾಡಲಿ ಎಂದು ಅವನಲ್ಲಿ ಅಂಗಲಾಚೋಣ.

ಸೂಚನೆ : 4/4/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕೃಷ್ಣಕರ್ಣಾಮೃತ 99 ಕೊಳಲಿನುಲಿ ಕದಲಿಸಲಿ ಒಳಮುಳುಗಿದ ಚಿತ್ತವನು! (Krishakarnamrta 99)


ಲೇಖಕರು :
 ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)




ಜೀವನದಲ್ಲಿ ಎಷ್ಟೆಷ್ಟೋ ಮಹತ್ತಾದ ಸಾಧನೆಗಳನ್ನು ಮಾಡಿರುವವರ ಬಗ್ಗೆ ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಆದರೆ ಎಲ್ಲದಕ್ಕಿಂತಲೂ ಕಷ್ಟವೆನಿಸಬಹುದಾದ ಸಾಧನೆಯೆಂದರೆ ಯಾವುದು, ಹಾಗೂ ಅದನ್ನು ಸಾಧಿಸಿದವರು ಯಾರು? - ಎಂಬ ಪ್ರಶ್ನೆಗಳಿಗೆ ಉತ್ತರವು ಸುಲಭವಲ್ಲ.                        

ಆದರೂ ಒಂದು ರೀತಿಯಲ್ಲಿ ಉತ್ತರವು ಕಷ್ಟವೂ ಅಲ್ಲ. ಏಕೆ? ಎಲ್ಲರಿಗೂ ಕಷ್ಟವೆನಿಸುವ, ಎಂತಹ ಧೀಮಂತರಿಗೂ ಅಸಾಧ್ಯವೆಂದೇ ತೋರುವ, ಒಂದು ಕಾರ್ಯವಿದೆ. ಅಲ್ಲಿ ಎಲ್ಲರೂ ಸೋಲುವವರೇ, ಹೆಚ್ಚು ಕಡಿಮೆ. 

ಯಾವುದು ಅಂತಹ ಘನವಾದ ಕಾರ್ಯ? ಹಿಮಾಲಯದ ಶಿಖರಕ್ಕೇರುವುದೇ? ಕಡಲ ಅಡಿಯನ್ನು ಕೆರೆಯುವುದೇ? ಅನ್ಯ-ಗ್ರಹದಲ್ಲಿ ಅಲೆಯುವುದೇ?

ಇದಾವುದೂ ಅಲ್ಲ. ಇರುವಲ್ಲೇ ಸುಮ್ಮನೆ ಕುಳಿತುಕೊಳ್ಳುವುದು! ಸುಮ್ಮನೆಯೆಂದರೂ ಸುಮ್ಮನೆಯಲ್ಲ: ಹಾಗೆ ಕುಳಿತು ಧ್ಯಾನದಲ್ಲಿ ಆಳವಾಗಿ ಮುಳುಗುವುದು; ಅದರಲ್ಲೇ ಮೈಮರೆತು ಅದರ ತುತ್ತತುದಿಯಾದ ಸಮಾಧಿ-ಸ್ಥಿತಿಯ ಎತ್ತರಕ್ಕೆ ಹತ್ತುವುದು! ಮತ್ತು ಆ ಸಮಾಧಿಗೆ ಭಂಗವಿಲ್ಲದಂತೆ ಅಲ್ಲೇ ಕೆಲಕಾಲ ನೆಲೆಗೊಂಡಿರುವುದು. ಇವನ್ನು ಸುಲಭವೆನ್ನುವವರಾರು?

ವಸ್ತು-ಸ್ಥಿತಿ ಹಾಗಿರಲು, ಲೀಲಾಶುಕನು ವಿಚಿತ್ರವಾದ ವರವೊಂದನ್ನು ಬಯಸುತ್ತಿದ್ದಾನೆ: ದೇವಾ, ನನಗೆಂದು ಸಮಾಧಿ-ಭಂಗವಾದೀತು? - ಎಂದು ಆಶಿಸುತ್ತಿದ್ದಾನೆ! 

ಅಯ್ಯೋ, ಹೀಗೆ ಬಯಸುವುದೇನು ಯುಕ್ತವೇ? ಅಷ್ಟು ಕಷ್ಟಪಟ್ಟು ಸಂಪಾದಿಸಿದುದನ್ನು ಕೆಡಿಸಿಕೊಳ್ಳಲು ವಿವೇಕವುಳ್ಳವರು ಯಾರಾದರೂ ಅಪೇಕ್ಷಿಸಿಯಾರೆ?

ಅಷ್ಟೇ ಅಲ್ಲ. ಸಮಾಧಿ-ವಿಘ್ನವು ಹೇಗಾದರೆ ತನಗಿಷ್ಟವೆಂದು ಸಹ ಸೂಚಿಸುತ್ತಿದ್ದಾನೆ! "ದೇವಾ, ನೀನು ಕಾಣಿಸಿಕೊಳ್ಳಬೇಕು, ನಿನ್ನ ವೇಣು-ಧ್ವನಿಯು ರಣಿಸಬೇಕು, ಹಾಗಾಗಿ ಸಮಾಧಿ-ಭಂಗವಾಗಬೇಕು" - ಎನ್ನುತ್ತಿದ್ದಾನೆ!

ಕೃಷ್ಣನು ಹೇಗೆ ತೋರಬೇಕಂತೆ? ಆತನ ಕೊಳಲಿನ ರವವು ಹೇಗಿರಬೇಕಂತೆ? – ಇವೆರಡನ್ನೂ ಸ್ಪಷ್ಟಪಡಿಸುತ್ತಿದ್ದಾನೆ, ಕವಿ. ನೀನು ನನ್ನೆದುರಿಗೆ ಅವತೀರ್ಣನಾಗಬೇಕು, ಎಂದರೆ ಅವತರಿಸಬೇಕು. ಅರ್ಥಾತ್, ಪ್ರಕಟಿಸಿಕೊಳ್ಳಬೇಕು. ಚಂದ್ರನ ತೇಜಸ್ಸಿನೊಂದಿಗೆ ತೋರಬೇಕು. ಯಾವ ಚಂದ್ರ? ಪ್ರಸನ್ನನಾದ ಚಂದ್ರನಂತಿರುವ ನಿನ್ನ ಮುಖವೇ ತೇಜಸ್ವಿಯಲ್ಲವೇ? ಲೋಕದಲ್ಲಿ ನಾವು ಕಾಣುವ ಚಂದ್ರ ಕಲಂಕಿತ. ಆದರೆ ಕೃಷ್ಣನ ಮುಖ ಪ್ರಸನ್ನವಾದುದು, ಎಂದರೆ ತಿಳಿಯಾದುದು, ಕಳಂಕ-ರಹಿತವಾದುದು. ಚಂದ್ರನನ್ನು ಮೃಗಾಂಕ, ಶಶಾಂಕ - ಎನ್ನುವರಲ್ಲವೇ? ಆ ಕುರುಹುಗಳೇ ಲೌಕಿಕ-ಚಂದ್ರನ ಸೊಬಗಿಗೆ ಒಂದಿಷ್ಟು ಕಳಂಕದಂತೆ. ಆದ್ದರಿಂದ ಹಾಗೆ ಬೇಡ. ನಿನ್ನ ಮುಖವೇ ಇನ್ನೂ ಚೆನ್ನಿರುವ ಚಂದ್ರ.

ಹಿಂದೊಮ್ಮೆ ದರ್ಶನಕೊಟ್ಟಾಗಿತ್ತಲ್ಲವೆ? – ಎಂದರೆ, ಹೌದು, ಆದರೂ ಮತ್ತೆ ಬೇಕು - ಎಂಬ ಬಿನ್ನಹ. ಏಕೆ? ಕೃಷ್ಣನು ಎಷ್ಟಾದರೂ ದಯಾ-ಸಮುದ್ರನಲ್ಲವೇ? ಬರೀ ಸಮುದ್ರವಲ್ಲ, ದಯೆಯ ಮಹಾಂಬುಧಿಯೇ ಅವನು. ಚಂದ್ರನ ತೇಜಸ್ಸಿನೊಂದಿಗೆ ಅವತರಿಸಿ ಬರುವ ಸಮುದ್ರ! 

ಸಮಾಧಿ-ಸ್ಥಿತಿಯಲ್ಲಿ ಕುಳಿತವರು ಕಣ್ಣುಮುಚ್ಚಿರುತ್ತಾರಲ್ಲವೇ? ಅಂತಹವರೆದುರಿಗೆ ತಾ ಬಂದು ನಿಂತರೂ ಅವರಿಗೆ ಗೊತ್ತಾಗುವುದು ಹೇಗೆ? ಅದಕ್ಕೇ ಹೇಳುತ್ತಿರುವುದು - ನಿನ್ನ ಲೀಲಾ-ವೇಣುವಿನೊಂದಿಗೆ ಬಾ. ಅದರ ರವಾಮೃತ ಅಥವಾ ನಾದ-ಪೀಯೂಷವು ನನ್ನ ಸಮಾಧಿಯನ್ನು ತಾನಾಗಿ ಕದಲಿಸುವುದು - ಎಂದು. ಆ ವಿಲಾಸಮಯವಾದ ವೇಣುವೇ ಲೀಲಾ-ಮುರಲಿ. ಅದರ ನಾದವೇ ಅಮೃತ.

ದಯಾ-ಸಮುದ್ರವೆಂಬುದು ಅತ್ಯಂತ ಅಪೇಕ್ಷಿತ. ಮುಖ-ಚಂದ್ರನೋ ಪರಮಾಹ್ಲಾದಕ. ನಾದಾಮೃತವಂತೂ ಅತಿಶಯವಾಗಿ ಆಸ್ವಾದ್ಯ. ಇವೆಲ್ಲ ಎದುರಿಗೆ ತೋರುವುದಾದರೆ, ಆಗ ಸಮಾಧಿಗೆ ಭಂಗವಾದರೆ ಚಿಂತೆಯೇ ಇಲ್ಲ. ಏಕೆ? ಸಮಾಧಿ-ಸ್ಥಿತಿಯನ್ನು ಏರಿದವನಿಗೆ ದೊರೆಯಬೇಕಾದದ್ದೇನು? ಅಮೃತವೇ ಅಲ್ಲವೇ? ಇಲ್ಲಿ ದೊರೆಯುತ್ತಿರುವುದೂ ಅದೇ ಎಂದಾಯಿತಲ್ಲ! ಈ ಬಗೆಯಲ್ಲಿ ಸಮಾಧಿ-ಭಂಗವೆಂಬುದಾಗುವುದಾದರೆ ಒಳ ಅನುಭವಕ್ಕೂ ಹೊರ ಅನುಭವಕ್ಕೂ ಭೇದವೆಲ್ಲಿ ಬಂದೀತು?

ಕಣ್ಣಿಗೂ ಕಿವಿಗೂ ಸುಲಭವಾಗಿ ಹೀಗೆ ಅಮೃತಾನುಭವವಾಗುವುದಾದರೆ, ನಿರಂತರ-ಧ್ಯಾನಕ್ಕಾಗಿ ಆಂತರಂಗಿಕ-ಶ್ರಮವನ್ನು ಪಡುತ್ತಲೇ ಇರುವುದೇತಕ್ಕೆ? ಎಂದೇ ಲೀಲಾಶುಕನು ಹೀಗೆ ಹಾತೊರೆಯುವುದು. ಅಂತಹ ಅನುಭವಕ್ಕಾಗಿಯೇ ಆ ಬಗೆಯ ಸಮಾಧಿ-ಭಂಗವು ನನಗೆ ಅದೆಂದು ದೊರೆಯುವುದೋ - ಎಂದು ಹಂಬಲಿಸುತ್ತಿದ್ದಾನೆ, ಭಕ್ತಕವಿ.

ಪುನಃ ಪ್ರಸನ್ನೇನ ಮುಖೇಂದು-ತೇಜಸಾ/

ಪುರೋವತೀರ್ಣಸ್ಯ ಕೃಪಾ-ಮಹಾಂಬುಧೇಃ |

ತದೇವ ಲೀಲಾ-ಮುರಲೀ-ರವಾಮೃತಂ

ಸಮಾಧಿ-ವಿಘ್ನಾಯ ಕದಾ ನು ಮೇ ಭವೇತ್?! || 

***

ಮತ್ತೊಂದು ಶ್ಲೋಕ.

ಆ ತರುಣನ ಹೆಸರನ್ನು ಹೇಳುತ್ತೇವೆ - ಎನ್ನುತ್ತಾನೆ, ಲೀಲಾಶುಕ. ಆ ತರುಣನು ಮತ್ತಾರು? ಸಾಕ್ಷಾತ್ ಕೃಷ್ಣನೇ. ಅವನ ಹೆಸರನ್ನು ಹೇಳುವುದರಲ್ಲೇ ಲೀಲಾಶುಕನಿಗೆ ಒಂದು ಸಂತೋಷ.

ಎಂತಹ ತರುಣನವನು? ತನ್ನ ಕಿವಿಯಂಚಿನಿಂದ ಏನನ್ನೋ ಕೇಳಿಸಿಕೊಳ್ಳುತ್ತಿರುವವನು. ಏನನ್ನು? ವ್ರಜ-ಸುಂದರಿಯರ ಅನುಲಾಪಗಳನ್ನು. ಅನುಲಾಪವೆಂದರೆ ಮತ್ತೆ ಮತ್ತೆ ಹೇಳುತ್ತಿರುವುದು. ಗೊಲ್ಲತಿಯರು ಪದೇ ಪದೇ ಹೇಳಿಕೊಳ್ಳುತ್ತಿರುವುದನ್ನು ಕೇಳುತ್ತಿದ್ದಾನೆ. ಅದೂ ಅರ್ಧಮರ್ಧವಾಗಿ ಅವರು ಹೇಳುತ್ತಿರುವುದನ್ನು.

ಯಾವುದನ್ನು ಅವರು ಹಾಗೆ ಉಚ್ಚರಿಸುತ್ತಿರುವುದು? ತಮ್ಮದೇ "ಅಕೃತ್ರಿಮವಾದ ಸರಸ್ವತಿ"ಗಳನ್ನು.  ಹಾಗೆಂದರೆ, "ಕಪಟವಿಲ್ಲದ ನುಡಿಗಳನ್ನು" ಎಂದರ್ಥ. ಶುದ್ಧವಾದ ಹೃದಯದಿಂದ ಹೊಮ್ಮಿದ ಮಾತಲ್ಲವೇ ಅದು? ಎಂದೇ ಸದ್ಭಾವನೆಯನ್ನು ಅದು ಹೊತ್ತಿರುತ್ತದೆ. 

ನಿಷ್ಕಪಟವಾದ ನುಡಿಯು ಎಂದಿಗೂ ಸರಲವಾದುದು, ಎಂದೇ ಸೊಗಸಾದುದೂ. ಅದನ್ನು ಮತ್ತೆ ಮತ್ತೆ ನುಡಿದರೂ, ಅರ್ಧಮರ್ಧವಾಗಿ ಹೇಳಿದರೂ ಕೃತ್ರಿಮವಲ್ಲದ ಆ ಪ್ರೀತಿಯ ಮಾತಿಗೆ ಎಂದಿಗೂ ಬೆಲೆಯುಂಟೇ. ಎಳೆಯ ಮಕ್ಕಳ ಮಾತೂ ಹಾಗೆಯೇ ಇರುವುದಲ್ಲವೇ? ಅವುಗಳ ಮಾತು ಅಸ್ಪಷ್ಟವಿರಬಹುದು, ತೊದಲಿರಬಹುದು. ಅಪೂರ್ಣ-ವಾಕ್ಯವೇ ಇರಬಹುದು, ಹೇಳಲೆಳಸಿ ಮಧ್ಯಕ್ಕೇ ನಿಂತು ಅಪೂರ್ಣವೂ ಆಗಿರಬಹುದು. ಏನೇ ಆದರೂ, ಮುಗ್ಧಹೃದಯದ ಮುದ್ದುನುಡಿಗಳಲ್ಲೇ ಸವಿಯಿರುವುದು. 

ಪ್ರೇಮವೇನಾದರೂ ಕಪಟ - ಎಂಬುದು ಗೊತ್ತಾಗಿಹೋದಲ್ಲಿ, ಮಾತಿನಲ್ಲಿ ನವಿರಿದ್ದರೂ ಅದರಲ್ಲಿ ರುಚಿಯುಳಿದೀತೇ? ಬದಲಾಗಿ, ಕಾಪಟ್ಯದಿಂದಾಗಿ ಕೆರಳಿದ ಕೋಪದ ನುಡಿಯೇ ಹೊಮ್ಮೀತು!

ಎಂದೇ ಕೃಷ್ಣನು "ಆರ್ದ್ರಾಶಯದಿಂದ" ಕೇಳಿಸಿಕೊಳ್ಳುತ್ತಾನೆ. ಹಾಗೆಂದರೆ "ಸರಸ-ಹೃದಯದಿಂದ, ಆಸ್ವಾದನೆಯೊಂದಿಗೆ" - ಎಂಬ ಅರ್ಥ. ಎಂದೇ ಅದು ಬರೀ ಕೇಳಿಸಿಕೊಳ್ಳುವುದಲ್ಲ. ಅದನ್ನು ಸಂಭಾವಿಸುತ್ತಿದ್ದಾನೆ, ಎಂದರೆ ಬೆಲೆಗೊಟ್ಟು, ಆದರವಿಟ್ಟು, ಆಲಿಸುತ್ತಿದ್ದಾನೆ - ಎಂದರ್ಥ.

ಈ ಶ್ಲೋಕದ ತಾತ್ಪರ್ಯವೆಂದರೆ, ಭಗವಂತನು ಭಾಷೆಗಿಂತಲೂ ಭಾವಕ್ಕೆ ಹೆಚ್ಚು ಮನಸ್ಸು ಕೊಡುವನು - ಎಂಬುದು. ಇದನ್ನೇ "ಭಾವಗ್ರಾಹೀ ಜನಾರ್ದನಃ" ಎನ್ನುವರು. 

ಆತನ ನಡೆಯನ್ನು ನೋಡಿ: ಹಳ್ಳಿಯ ಹೆಣ್ಣುಗಳೆಂದು ತಿರಸ್ಕಾರವಿಲ್ಲ. ಭಾಷೆಯು ಸುಪರಿಷ್ಕೃತವಲ್ಲವೆಂದು ಕಡೆಗಾಣಿಸುವುದಲ್ಲ. ಪೌನರುಕ್ತ್ಯವಿದೆಯೆಂದು ಅಪಹಸಿಸುವುದಲ್ಲ. ಶುದ್ಧಹೃದಯದಿಂದ ಹೊಮ್ಮಿದ ನುಡಿಗೆ ಒಡನೆಯೇ ಮನ್ನಣೆ ನೀಡುವ ಸಹೃದಯ-ತರುಣನಿವನು. 

ಎಂದೇ, ಹೇಳಿದರೆ ಅಂತಹವನ ಹೆಸರನ್ನೇ ಹೇಳಬೇಕಲ್ಲವೆ? 

ಶ್ಲೋಕದ ಮೊದಲೆರಡು ಪಾದಗಳಲ್ಲಿ ಗೊಲ್ಲತಿಯರ ನುಡಿಯ ಪರಿ; ಮೂರನೆಯದರಲ್ಲಿ ಅದನ್ನು ಕೃಷ್ಣನು ಆಲಿಸುವ ಬಗೆ; ಹಾಗೂ ಕೊನೆಯದರಲ್ಲಿ ಕವಿಯ ಪ್ರತಿಕ್ರಿಯೆಗಳು ಮೂಡಿವೆ. 

ಶ್ಲೋಕ ಹೀಗಿದೆ:

ಅರ್ಧಾನುಲಾಪಾನ್ ವ್ರಜಸುಂದರೀಣಾಂ /

ಅಕೃತ್ರಿಮಾಣಾಂ ಚ ಸರಸ್ವತೀನಾಂ |

ಆರ್ದ್ರಾಶಯೇನ ಶ್ರವಣಾಂಚಲೇನ /

ಸಂಭಾವಯಂತಂ ತರುಣಂ ಗೃಣೀಮ || 

ಸೂಚನೆ :4/4/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.