ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಭೀಮಸೇನನಿಗೂ ಜರಾಸಂಧನಿಗೂ ತೀವ್ರವಾದ ಯುದ್ಧವು ಆರಂಭವಾಯಿತಷ್ಟೆ? ಅವರಿಬ್ಬರ ಜಟ್ಟಿಕಾಳಗ ಅಲ್ಪಕಾಲದಲ್ಲಿ ಮುಗಿಯುವಂತಹುದಲ್ಲ. ಅವರ ಮಲ್ಲಯುದ್ಧವನ್ನು ಸಾಕಷ್ಟು ದೀರ್ಘವಾಗಿಯೇ ವ್ಯಾಸರು ಚಿತ್ರಿಸಿರುವರು.
ಬಾಹುಪಾಶ-ಚರಣಪಾಶಗಳೆಂಬ ಪಟ್ಟುಗಳನ್ನು ಹಾಕಿ ಒಬ್ಬರ ಪಾದದಿಂದ ಮತ್ತೊಬ್ಬರ ಶಿರಸ್ಸಿಗೆ ಹೊಡೆತವಿತ್ತರು. ಉರೋಹಸ್ತ-ಪೂರ್ಣಕುಂಭಗಳೆಂಬ ವರಸೆಗಳಿಂದಾಗಿ ಎದೆಗಳಿಗೆ ಗುದ್ದಿದರು. ಒಬ್ಬರ ಕೈಯನ್ನು ಮತ್ತೊಬ್ಬರು ಹಿಸುಕಿದರು. ಘೀಳಿಡುವ ಗಜಗಳಂತೆ ಅವರು ತೋರಿದರು.
ಬಹುಪ್ರಹಾರಗಳನ್ನು ಪರಸ್ಪರ ಮಾಡುತ್ತಾ ಗುಡುಗುವ ಮೋಡಗಳಂತೆ ಕಂಡರವರು. ಅಂಗೈಯಿಂದ ಒಬ್ಬರಿಗೊಬ್ಬರು ಚಚ್ಚಿದರು. ಸಿಂಹಗಳ ಹಾಗೆ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತಾ ಒಬ್ಬರನ್ನೊಬ್ಬರು ಎಳೆದಾಡಿ ಎಳೆದಾಡಿ ಕಾದಿದರು. ಒಬ್ಬರ ಅಂಗವನ್ನು ಮತ್ತೊಬ್ಬರು ಮರ್ದಿಸಿದರು. ತೋಳುಗಳಿಂದ ಒಬ್ಬರಿಗೊಬ್ಬರು ಬಾಹುಬಂಧವನ್ನು ಮಾಡಿದರು. ಒಬ್ಬರ ಹೊಟ್ಟೆಯನ್ನು ಮತ್ತೊಬ್ಬರು ತೋಳಿನಿಂದ ಬಳಸಿ ಅತ್ತಿಂದಿತ್ತ ತಳ್ಳಿಹಾಕಿದರು. ಒಬ್ಬರ ಸೊಂಟಕ್ಕೆ ಮತ್ತೊಬ್ಬರು ಕೈಹಾಕಿ ದೂರಕ್ಕೆ ಬಿಸಾಡುತ್ತಿದ್ದರು.
ಒಬ್ಬರ ಕೈಗೆ ಮತ್ತೊಬ್ಬರಿಕ್ಕುತ್ತಾ, ಗರ್ಜಿಸುವ ಗಜಗಳ ಹಾಗೆ ಅವರು ಕಂಡರು. ಬಾಹುಗಳೆಂಬ ಆಯುಧಗಳಿಂದ ಒಬ್ಬರಿಗೊಬ್ಬರು ಘಾತಮಾಡುತ್ತಾ ಘನಗಳ ಹಾಗೆ, ಎಂದರೆ ಮೋಡಗಳ ಹಾಗೆ, ಗುಡುಗಿದರು. ಒಬ್ಬರನ್ನೊಬ್ಬರು ಸೆಳೆದೆಳೆದಾಡುತ್ತಾ ಸಿಂಹಗಳ ಹಾಗೆ ಸೆಣಸಿದರು. ಎಲ್ಲ ಎಲ್ಲೆಗಳನ್ನೂ ಮೀರಿ ಪರಸ್ಪರ ಬಡಿದಾಡಿದರು. ಬಗೆ ಬಗೆಯ ಜಟ್ಟಿಪಟ್ಟುಗಳನ್ನು ಕಟ್ಟಿದರು.
ಅವರಿಬ್ಬರು ಹೀಗೆ ಯುದ್ಧ ಮಾಡುತ್ತಿರಲಾಗಿ, ಪುರವಾಸಿಗಳೆಲ್ಲ ಅಲ್ಲಿ ನೆರೆದರು. ಬ್ರಾಹ್ಮಣರು, ವೈಶ್ಯರು, ಕ್ಷತ್ರಿಯರು, ಶೂದ್ರರು, ಸ್ತ್ರೀಯರು, ವೃದ್ಧರು - ಇವರುಗಳೆಲ್ಲ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಸುತ್ತುಗಟ್ಟಿದರು. ಅವರಿಬ್ಬರ ಪಾರಸ್ಪರಿಕವಾದ ಆಘಾತಗಳು ಪರ್ವತ-ವಜ್ರಾಯುಧಗಳ ಢಿಕ್ಕಿಗಳಂತೆ ಕಂಡವು. ಹೋರಾಟದಲ್ಲಿ ಇಬ್ಬರಿಗೂ ಖುಷಿಯಿತ್ತು. ಇಬ್ಬರೂ ಬಲಶಾಲಿಗಳಾಗಿದ್ದು, ಒಬ್ಬರಲ್ಲಿಯ ದೋಷವನ್ನು ಬಳಸಿಕೊಳ್ಳಲು ಮತೊಬ್ಬರು ಎಳಸುತ್ತಿದ್ದರು. ಪರಸ್ಪರ ಜಯಾಪೇಕ್ಷೆ ಇಬ್ಬರಿಗೂ ಇದ್ದಿತು.
ಒಬ್ಬರನ್ನೊಬ್ಬರು ಹೊಡೆದಾಡುತ್ತಿರಲಾಗಿ ಅದು ವೃತ್ರ-ವಾಸವರ ಯುದ್ಧದಂತೆ ಕಂಡುಬಂದಿತು. ಅವರ ಪರಸ್ಪರ ಘರ್ಜನ-ತರ್ಜನಗಳು ಅಸಾಧಾರಣವಾಗಿದ್ದವು. ಬಂಡೆಗಳ ಘಟ್ಟನ-ಕಬ್ಬಿಣದ ಪರಿಘಗಳಿಂದ ಪರಸ್ಪರ ಘರ್ಷಣ ಮುಂತಾದುವು ಅಲ್ಲಿ ಘಟಿಸಿದುವು.
ಎಷ್ಟು ಕಾಲ ನಡೆಯಿತು, ಅವರ ಈ ಯುದ್ಧ? ಕಾರ್ತಿಕಮಾಸದ ಮೊದಲ ದಿನದಂದು ಆರಂಭವಾದ ಈ ಯುದ್ಧಕ್ಕೆ ಬಿಡುವೆಂಬುದೇ ಇರಲಿಲ್ಲ. ಹಗಲಿರುಳೂ ಯುದ್ಧ. ಆಹಾರವಿಲ್ಲದೇ ಯುದ್ಧ. ವಿಶ್ರಾಂತಿಯಿಲ್ಲದೇ ಯುದ್ಧ. ಹೀಗೆ ಮುಂದುವರೆಯಿತು, ಅವರಿಬ್ಬರ ಸಂಗರ.
ಪ್ರಥಮೆಯಂದು ಆರಂಭವಾದದ್ದು ತ್ರಯೋದಶಿಯವರೆಗೂ ಎಡೆಬಿಡದೆ ನಡೆಯಿತು. ಚತುರ್ದಶಿಯ ರಾತ್ರಿಯ ಹೊತ್ತಿಗೆ ಜರಾಸಂಧನು ದಣಿದುಹೋದನು. ಜರಾಸಂಧನು ಹಾಗೆ ದಣಿದಿರಲಾಗಿ, ಅದನ್ನು ಗಮನಿಸಿದ ಕೃಷ್ಣನು ಭೀಮನಿಗೆ ಅರ್ಥವಾಗುವ ಪರಿಯಲ್ಲಿ ಹೀಗೆ ನುಡಿದನು:
"ಶತ್ರುವು ಬಳಲಿಹೋಗಿದ್ದಲ್ಲಿ ಆತನಿಗೆ ಅಧಿಕವಾದ ಪೀಡೆಯುಂಟುಮಾಡುವುದು ತರವಲ್ಲ. ಪೂರ್ಣವಾಗಿ ಪೀಡಿಸಿದಲ್ಲಿ ಆತನ ಪ್ರಾಣವೇ ಹಾರಿಹೋದೀತು. ಆದ್ದರಿಂದ ರಾಜನಿಗೆ ಅತಿಯಾದ ಪೀಡೆಯುಂಟುಮಾಡದೆ ಆತನೊಂದಿಗೆ ಬಾಹುಯುದ್ಧವನ್ನು ಮುಂದುವರೆಸು" - ಎಂದನು.
ಶತ್ರುವೀರನನ್ನು ನಾಶಪಡಿಸಿಯೇ ತೀರುವ ಆ ಭೀಮನು, ಜರಾಸಂಧನು ಇದ್ದ ಆ ಅವಸ್ಥೆಯನ್ನು ಕಂಡು ಆತನನ್ನು ಕೊಲ್ಲುವ ನಿಶ್ಚಯವನ್ನು ಮಾಡಿದನು. ಅಪರಾಜಿತನೆನಿಸಿದ್ದ ಆ ಜರಾಸಂಧನನ್ನು ಜಯಿಸಲೋಸುಗ ಆಗ ಭೀಮನು ಉತ್ಕಟವಾದ ಕ್ರೋಧವನ್ನು ತಾಳಿದನು.
ಜರಾಸಂಧನನ್ನು ವಧಿಸಬೇಕೆಂಬ ಸಂಕಲ್ಪವು ಉಂಟಾದ ಭೀಮಸೇನನು, ಕೃಷ್ಣನನ್ನು ಕುರಿತು ಹೇಳಿದನು: "ಈ ಪಾಪಿ ಜರಾಸಂಧನು ಇಷ್ಟೇಟು ತಿಂದೂ ಇನ್ನೂ ಯುದ್ಧವಸ್ತ್ರವನ್ನು ಧರಿಸಿಯೇ ಯುದ್ಧಮಾಡುತ್ತಿರುವನು! ಇನ್ನು ಅವನನ್ನು ಪ್ರಾಣದೊಂದಿಗೆ ಉಳಿಸುವುದು ತರವಲ್ಲ."
ಸೂಚನೆ : 19/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.