ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಮೋಹ ಕಳೆಯಿತು, ಸ್ಮರಣೆ ಒದಗಿತು
ಗೀತೆಯು ಕೃಷ್ಣ-ಅರ್ಜುನರ ಸಂವಾದದ ರೂಪದಲ್ಲಿದೆ - ಎಂಬುದನ್ನು ಎಲ್ಲರೂ ಬಲ್ಲರೇ. ಅವರಿಬ್ಬರಲ್ಲಿ ಅರ್ಜುನನು ಪ್ರಚ್ಛಕ - ಎಂದರೆ ಪ್ರಶ್ನೆಯನ್ನು ಕೇಳುವವನು. ಮತ್ತು ಕೃಷ್ಣನು ಬೋಧಕ - ಎಂದರೆ ಬೋಧವನ್ನು ಉಂಟುಮಾಡತಕ್ಕವನಷ್ಟೆ?
ಎರಡನೆಯ ಅಧ್ಯಾಯದ ಆರಂಭದಲ್ಲಿ ಕೃಷ್ಣನೇ ಪ್ರಶ್ನೆ ಕೇಳಿದನಲ್ಲವೇ - "ಎಲ್ಲಿಂದ ಬಂದೊದಗಿತಯ್ಯಾ ಅರ್ಜುನಾ, ನಿನಗೀ ಕಶ್ಮಲ? - ಅದೂ ಈ ವಿಷಮ-ಪರಿಸ್ಥಿತಿಯಲ್ಲಿ!" - ಎಂದು? ಉತ್ತರಕ್ಕೋಸ್ಕರವಾಗಿ ಕೇಳಿದ ಪ್ರಶ್ನೆಯಲ್ಲ ಅದು; ಅರ್ಜುನನ ಮನಃಸ್ಥಿತಿಗೆ ಮರುಗಿದ ಮನೋವೈದ್ಯನ ಮಾತದು.
ಕಶ್ಮಲ ಅಥವಾ ಕಲ್ಮಷವೆಂದರೆ ಕೊಳಕು. ದೈಹಿಕವಾದ ಕೊಳಕು ಮಾತ್ರವೇ ಕಶ್ಮಲವೇ? ಮನೋಬುದ್ಧಿಗಳ ಕೊಳಕೂ ಕಶ್ಮಲವೇ.
ಇನ್ನು ವಿಷಮವೆಂದರೆ ಇಕ್ಕಟ್ಟಿನ ಘಟ್ಟ: ಪಾಂಡವರಿಗೆ ಕೌರವರೆಸಗಿದ ವರ್ಷಗಟ್ಟಲೆಯ ಅಪಕಾರ-ಅಧರ್ಮಗಳು ತೀರ್ಮಾನವಾಗುವ ಮುಖ್ಯಘಟ್ಟ. ಪ್ರಾಣತ್ಯಾಗಕ್ಕೂ ಸಿದ್ಧರಾಗಿರುವ ಸಹಸ್ರಾರು ಮಂದಿಯ ಅಳಿವು-ಉಳಿವುಗಳ ಘಟ್ಟ. ಇಂತಹ ಘಟ್ಟದಲ್ಲಿರಬೇಕಾದದ್ದೇ ಕಾರ್ಯ-ಸ್ಪಷ್ಟತೆ, ಬುದ್ಧಿಯ ತಿಳಿ.
ತಿಳಿವಿನಿಂದ ಕೂಡಿದ ಅಳಕೆಯೇ ತಿಳಿವಳಕೆ - ಎಂಬ ನೂತನ-ಶಬ್ದವನ್ನೂ ಹಾಗೂ ಅದರ ಸುಂದರ-ವ್ಯುತ್ಪತ್ತಿಯನ್ನೂ ಶ್ರೀರಂಗಮಹಾಗುರುಗಳು ಕೊಟ್ಟಿದ್ದಾರೆ. ರೂಢಿಯಲ್ಲಿರುವ ಪದ ತಿಳುವಳಿಕೆ ಎಂಬುದು. ಆದರೆ ಅರಿವನ್ನು ಆಧರಿಸಿದ ಅಳತೆ - ಎಂಬ ಭಾವವೇ ಇಂತಹೆಡೆಗಳಲ್ಲಿ ಸುಸಂಗತವೆನಿಸುವುದರಿಂದ, ತಿಳುವಳಿಕೆ ಎಂಬುದಕ್ಕಿಂತ, ತಿಳಿವಳಕೆಯೆಂಬ ಪದವೇ ಹೆಚ್ಚು ಸಮಂಜಸ. ರೂಢವಾದ ಪದಗಳಿದ್ದರೂ ಅನ್ವರ್ಥವಾದ ಪದಗಳೇ ಭಾಷೆಗೆ ಭೂಷಣವೆನಿಸುವುದು. ಇರಲಿ.
ಅರ್ಜುನನಿಗೆ ಬಂದಿರುವ ಕಶ್ಮಲವೇನು? ಮತ್ತು ಅದು ಕಶ್ಮಲವೇ - ಎಂಬ ತೀರ್ಮಾನವು ಹೇಗೆ? - ಎಂಬುದನ್ನರಿತುಕೊಳ್ಳಬೇಕು. ಅದರ ಫಲದಿಂದಲೇ ಅದನ್ನು ಅಳೆದುಕೊಳ್ಳಬಹುದು - ಎಂಬ ಸೂಚನೆಯೂ ಕೃಷ್ಣನ ಮಾತಿನಲ್ಲೇ ಇದೆ.ಯಾವುದು ಅಕೀರ್ತಿಕರವೋ, ಎಂದರೆ ಅಪಕೀರ್ತಿಯನ್ನು ಉಂಟುಮಾಡುವುದೋ ಅದು ಕಶ್ಮಲವೇ ಸರಿ. ಯಾವುದು ಅಸ್ವರ್ಗ್ಯವೋ, ಎಂದರೆ ಸ್ವರ್ಗಪ್ರಾಪ್ತಿಗೆ ಯಾವುದು ಪ್ರತಿಕೂಲ(ವಿರುದ್ಧ)ವೋ, ಅದೂ ಕಶ್ಮಲವೇ.
ಕ್ಷತ್ರಿಯರಿಗೆ ಬೇಕಾದುದು ಇವೆರಡೇ. ಯುದ್ಧದಲ್ಲಿ ಜಯಸಿಕ್ಕರೊದಗುವ ಕೀರ್ತಿ, ಸತ್ತರೆ ವೀರಸ್ವರ್ಗ.
ಅರ್ಜುನನಿಗುಂಟಾಗಿರುವ ಚಿತ್ತಕಲ್ಮಷವು ಹೀಗೆ ಇಹಕ್ಕೂ ಪರಕ್ಕೂ ಘಾತಕವಾದದ್ದು, ಎಂದರೆ ಹೊಡೆತಕೊಡುವಂತಹುದು, ಹಾಳುಗೆಡವುವಂತಹುದು. ("ಘಾತುಕ"ವಲ್ಲ.) ಯಾವುದರಿಂದ ಇಹದಲ್ಲಿ ಅಭ್ಯುದಯವೂ ಪರದಲ್ಲಿ ನಿಃಶ್ರೇಯಸವೂ ಲಭಿಸುವುದೋ ಅದನ್ನೇ ಆರ್ಯರು ಮಾಡುವುದು. ಅದನ್ನೇ ಆರ್ಯಜುಷ್ಟವೆನ್ನುವುದು. ಇಹಪರಗಳಿಗೊದಗದ್ದು ಅನಾರ್ಯಜುಷ್ಟ. ಕರ್ತವ್ಯವನ್ನು ಮಾಡತಕ್ಕವನು ಆರ್ಯ; ಅಕಾರ್ಯವನ್ನು ಮಾಡದಿರುವವನು ಆರ್ಯ. ಎರಡಕ್ಕೂ ವಿರೋಧವಾಯಿತು ಅರ್ಜುನನ ನಡೆ.
ಇದು ಕಶ್ಮಲ - ಎಂಬುದನ್ನು ಮತ್ತೊಂದು ರೀತಿಯಿಂದಲೂ ಅರಿಯಬಹುದು. ಬುದ್ಧಿಯಲ್ಲಿ ಒಳ್ಳೆಯ ತಿಳಿವಳಕೆಯಿದ್ದಾಗ ಮನಸ್ಸು ಪ್ರಸನ್ನವಾಗಿರುವುದು. ಉತ್ಸಾಹವೂ ತುಂಬಿರುವುದು. ಆದರೆ ಈಗ ಅರ್ಜುನನಿಗೆ ಆಗಿರುವುದೇನು? ಕ್ಲೈಬ್ಯ-ಹೃದಯದೌರ್ಬಲ್ಯಗಳು. ಕ್ಲೈಬ್ಯವೆಂದರೆ ಷಂಡತನ. ರಣಾಂಗಣಸಂದರ್ಭದಲ್ಲಿ ಕ್ಲೈಬ್ಯವೆಂದರೆ ಹೇಡಿತನ.
ಇನ್ನು ಹೃದಯ-ದೌರ್ಬಲ್ಯವೆಂದರೇನು? ಅರ್ಜುನನೇ ಬಿಡಿಸಿ ಹೇಳಿಕೊಂಡುಬಿಟ್ಟಿದ್ದಾನೆ, ಅದನ್ನು: ನನ್ನ ಬಾಯೊಣಗುತ್ತಿದೆ. ಮೈ ನಡುಗುತ್ತಿದೆ. ಬಿಲ್ಲು ಜಾರುತ್ತಿದೆ. ಚರ್ಮ ಸುಡುತ್ತಿದೆ. ಬುದ್ಧಿಭ್ರಮಣೆಯಾದಂತಾಗುತ್ತಿದೆ - ಇತ್ಯಾದಿಯಾಗಿ.
ಶೂರ-ವೀರನೆನಿಸಿದ್ದ ಅರ್ಜುನನಿಗೆ ಜ್ವರ ಬಂದಿರುವುದು ಮೈಗೂ, ಮನೋಬುದ್ಧಿಗಳಿಗೂ.
ಈ ಹಿಂದೆಯೂ ಕೌರವರೊಂದಿಗೆ ಯುದ್ಧವನ್ನಾತ ಮಾಡಿರಲಿಲ್ಲವೇ? "ಇವರನ್ನೆಲ್ಲಾ ಕೊಲ್ಲಬಹುದೇ?" - ಎಂಬ ಪ್ರಶ್ನೆಯು ಆವಾಗಲೂ ಬರಬಹುದಾಗಿತ್ತಲ್ಲವೇ?
ಬುದ್ಧಿಗೆ ಮಂಕು ಕವಿದಾಗ ಹೀಗಾಗುವುದುಂಟು. ಇದನ್ನೇ ಮೋಹವೆನ್ನುವುದು. ಸತ್ತ್ವದಿಂದ ಹರ್ಷೋಲ್ಲಾಸಗಳೂ, ರಜಸ್ಸಿನಿಂದ ರಾಗ-ದ್ವೇಷಗಳೂ, ತಮಸ್ಸಿನಿಂದ ಮೋಹ-ಜಾಡ್ಯಗಳೂ ಉಂಟಾಗುವುವು. ಮೋಹವಾವರಿಸಿತೆಂದರೆ ಮುಖ್ಯೋದ್ದೇಶವೂ ಮರೆಯಾದಂತೆಯೇ.
ಮೋಹಕ್ಕೆ ಮದ್ದು ಅರಿವು. ಅದುವೇ ಸಾಂಖ್ಯಜ್ಞಾನ. ಮರೆವಿಗೆ ಮದ್ದು ಯೋಗವಿದ್ಯೆ. ಅರ್ಜುನನಿಗೆ ಅವೆರಡನ್ನೂ ಕೃಷ್ಣನುಂಟುಮಾಡಿದಾಗಲೇ ಆತನ ಬುದ್ಧಿಯು ಬೆಳಕಾಗುವುದು. ಚಿತ್ತದಲ್ಲಿ ಸ್ಫೂರ್ತಿಯುಕ್ಕುವುದು. ಆಗ ಆತ ಹೇಳಿದುದೇ "ನಷ್ಟೋ ಮೋಹಃ ಸ್ಮೃತಿರ್ಲಬ್ಧಾ" : ಮಂಕಳಿಯಿತು, ನೆನಪೊದಗಿತು – ಎಂದು.
ಶ್ರೀರಂಗಮಹಾಗುರುಗಳು ಹೇಳುವಂತೆ, "ಜ್ಞಾನರೂಪವಾದ ದಿವ್ಯದೃಷ್ಟಿಯನ್ನು ಕೃಷ್ಣನು ಅನುಗ್ರಹಿಸಿದಾಗಲೇ ಅರ್ಜುನನ ಮೋಹವು ಕಳೆದು ಗುಟ್ಟೊಡೆಯಿತು. ಜ್ಞಾನದೀಪದ ನೆನಪುಂಟಾಯಿತು. ಹೀಗಾದಾಗಲೇ ಸಂದೇಹಗಳು ಕಳೆದು, "ನಿನ್ನ ನಿರ್ದೇಶದಂತೆ ವರ್ತಿಸುತ್ತೇನೆ" - ಎಂದು ಅರ್ಜುನನು ಹೇಳುವುದು."
ಅರ್ಜುನನ ಮೋಹನಾಶ-ಸ್ಮೃತಿಪ್ರಾಪ್ತಿಗಳೆರಡಕ್ಕೂ ಶ್ರೀಕೃಷ್ಣಪ್ರಸಾದವೇ ಕಾರಣವಷ್ಟೆ? "ಗೀತೆಯ ಮೊದಲನೆಯ ಅಧ್ಯಾಯವು ವಿಷಾದಯೋಗವಾದರೆ, ಉಳಿದೆಲ್ಲ ಅಧ್ಯಾಯಗಳೂ ಪ್ರಸಾದಯೋಗವೇ!" - ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳಿರುವುದೂ ಅತ್ಯಂತ ಔಚಿತ್ಯಪೂರ್ಣವಾಗಿದೆಯಲ್ಲವೇ?
ಸೂಚನೆ: 30/3//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.