ಕಾರುಣ್ಯ-ಕರ್ಬುರಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಈ ಶ್ಲೋಕದಲ್ಲಿ ಶ್ರೀಕೃಷ್ಣನನ್ನೇ ಚಂದ್ರನನ್ನಾಗಿಸಿದ್ದಾನೆ, ಲೀಲಾಶುಕ. ಕೃಷ್ಣನು ಚಂದ್ರನಂತೆ – ಎಂಬ ಬರೀ ಹೋಲಿಕೆಯಾದರೆ ಅದು ಉಪಮಾಲಂಕಾರ. ಕೃಷ್ಣನು ಚಂದ್ರನೇ - ಎಂದು ಸಮೀಕರಿಸಿದಾಗ ಅದು ರೂಪಕಾಲಂಕಾರ. ಇಲ್ಲಿ ರೂಪಕವಿದೆ. ಆ ಕೃಷ್ಣ-ಚಂದ್ರನಲ್ಲಿ ಒಂದು ಬೇಡಿಕೆಯನ್ನಿಟ್ಟಿದ್ದಾನೆ, ಕವಿ. ಏನದು? ನನ್ನ ಲೋಚನವನ್ನು ಶಿಶಿರೀಕರಿಸು - ಎಂದರೆ ನನ್ನ ಕಣ್ಣನ್ನು ತಂಪಾಗಿಸು - ಎಂದು
ಇಲ್ಲಿಯ ಕೃಷ್ಣ-ಚಂದ್ರ "ಶ್ರೀ"-ಯುಕ್ತನಾದವನು. ಏನು ಹಾಗೆಂದರೆ? ತಿಂಗಳಲ್ಲಿ ಎರಡು ಪಕ್ಷಗಳಿರುತ್ತವೆಯಷ್ಟೆ. ಶುಕ್ಲ-ಪಕ್ಷದಲ್ಲಿ ಪಾಡ್ಯದಿಂದ ಆರಂಭಿಸಿ ಹುಣ್ಣಿಮೆಯವರೆಗೆ ದಿನಕ್ಕೊಂದರಂತೆ ಕಲೆಗಳ ವೃದ್ಧಿಯಾಗುತ್ತದೆ, ಚಂದ್ರನಲ್ಲಿ. ಹದಿನೈದು ದಿನಗಳು ಹೀಗೆ ಕಲಾ-ವೃದ್ಧಿ. ಆಮೇಲೆ ಕೃಷ್ಣ-ಪಕ್ಷದಲ್ಲಿ, ಹದಿನೈದು ದಿನಗಳು ಕಲಾ-ಕ್ಷಯ, ಅಮಾವಾಸ್ಯೆಯವರೆಗೆ. ಕ್ಷಯವೆಂದರೆ ಕ್ಷೀಣವಾಗುವುದು. ಹೀಗೆ ಏರಿಳಿತಗಳುಳ್ಳ ಕಲೆಗಳು ಹದಿನೈದು. ಇವಲ್ಲದೆ, ಹದಿನಾರನೆಯ ಕಲೆಯೊಂದಿದ್ದು, ಅದು ಶಿವ-ಶಿರಸ್ಸಿನಲ್ಲಿದೆ. ಹೀಗೆ ಹದಿನಾರು ಕಲೆಗಳು, ಚಂದ್ರನಿಗೆ. ಆದರೆ ಶ್ರೀಕೃಷ್ಣನೆಂಬ ಚಂದ್ರನಲ್ಲಿರುವ ಕಲೆಗಳು ಅಸಂಖ್ಯವೇ ಸರಿ. ಹೀಗೆ ಲೋಕದ ಚಂದ್ರನಿಗಿಂತ ಮಿಗಿಲು ಶ್ರೀಕೃಷ್ಣಚಂದ್ರ. ಇದಲ್ಲದೆ, ಜಿಂಕೆ ಅಥವಾ ಮೊಲದ ಹಾಗೆ ತೋರುವ ಗುರುತೊಂದು ಲೋಕದ ಚಂದ್ರನಲ್ಲುಂಟು; ಅದನ್ನು ಕಲಂಕವೆನ್ನುತ್ತಾರೆ. ಆದರೆ ಶ್ರೀಕೃಷ್ಣಚಂದ್ರನು ಕಲಂಕ-ರಹಿತನಾದ ಚಂದ್ರ. ಇದು ಮತ್ತೊಂದು ಹಿರಿಮೆ.
ನನ್ನ ಕಣ್ಣನ್ನು ತಂಪಾಗಿಸು - ಎಂದರೆ "ಒಂದೇ ಕಣ್ಣನ್ನೇ?" – ಎಂದು ಕೇಳುವವರಿರಬಹುದು, ಅಲ್ಲಿಯ ಏಕವಚನದ ಬಗೆಗೆ. ಆದರಿದು "ಜಾತ್ಯೇಕವಚನ": ಒಂದು ಸಮೂಹವನ್ನು ಕುರಿತು ಹೇಳುವುದನ್ನು ಸೂಚಕವಾಗಿ ಒಂದು ವ್ಯಕ್ತಿಯನ್ನು ಕುರಿತಷ್ಟೆ ಹೇಳಿ ಮುಗಿಸುವುದಿದು.
"ನಾಯಿ ಬೊಗಳುತ್ತದೆ" - ಎಂದು ಏಕವಚನದಲ್ಲಿ ಹೇಳಿದರೂ, ಅದು ಎಲ್ಲ ನಾಯಿಗಳಿಗೂ ಅನ್ವಯಿಸುವುದೇ. ಅರ್ಥಾತ್, ನಾಯಿಯೆಂಬ ಜಾತಿಗೇ ಅನ್ವಯಿಸತಕ್ಕ ವಿಷಯವದು. ಜಾತಿಯೆಂದರೆ ಹುಟ್ಟು. ಹಾಗೆಯೇ "ಕಣ್ಣನ್ನು" ಎಂದು ಹೇಳಿರುವುದಾದರೂ "ಎರಡೂ ಕಣ್ಣುಗಳನ್ನೂ" ಎಂಬ ಅರ್ಥವೇ ಉದ್ದಿಷ್ಟ. ನನ್ನೆರಡು ಕಣ್ಣುಗಳನ್ನೂ ತಂಪಾಗಿಸಲೆಂಬುದು ತಾತ್ಪರ್ಯ. ಕಣ್ಣುಗಳಿಗೆಂದೂ ಚಂದ್ರನ ಕಿರಣಗಳೇ ಹಿತ; ಸೂರ್ಯನವಲ್ಲ. ಸೂರ್ಯನನ್ನು ನೇರಾಗಿ ಈಕ್ಷಿಸುವುದಿರಲಿ, ಕನ್ನಡಿಯಲ್ಲಿ ನೋಡುವುದೂ ಕಣ್ಣಿಗೆ ನೋವುಂಟುಮಾಡುವುದೇ. ಕನ್ನಡಿಯಲ್ಲಿರಲಿ, ನೀರಿನಲ್ಲಿಯ ಸೂರ್ಯ-ಪ್ರತಿಬಿಂಬವನ್ನು ನೋಡುವುದೂ ಸುಖಕರವೇನಲ್ಲ.
ಆದರೆ ಚಂದ್ರನನ್ನು ಎಷ್ಟು ಹೊತ್ತು ಬೇಕಾದರೂ ನೋಡುತ್ತಿರಬಹುದು. ಸೂರ್ಯ-ಕಿರಣಗಳಲ್ಲಿ ತೋರುವ ತಾಪವು ಚಂದ್ರ-ಕಿರಣಗಳಲ್ಲಿ ತೋರದು. ಬದಲಾಗಿ ತಂಪಾಗಿಯೇ ತೋರುವವನು, ಚಂದ್ರ. ಸೂರ್ಯನನ್ನು ತಿಗ್ಮಾಂಶು - ಎಂದರೆ ತೀಕ್ಷ್ಣವಾದ ಕಿರಣಗಳುಳ್ಳವನು - ಎಂದರೆ, ಚಂದ್ರನನ್ನು ಹಿಮಾಂಶು, ಸುಧಾಂಶು, ಶುಭ್ರಾಂಶು – ಎನ್ನುವರು. ಹಿಮದಂತೆ ತಂಪಾದ ಕಿರಣಗಳುಳ್ಳವನು, ಅಮೃತ-ಕಿರಣಗಳುಳ್ಳವನು - ಎಂಬ ಭಾವ. ತಂಪಾಗಿರುವವನೇ ತಂಪಾಗಿಸುವನು. ಎಂದೇ ಈ ಶ್ಲೋಕದಲ್ಲಿ ಶಿಶಿರೀಕರಿಸೆಂದು ಕೇಳಿಕೊಂಡಿರುವುದು. ಶಿಶಿರ-ಋತುವೆಂದರೆ ಛಳಿಗಾಲ. ಆದುದರಿಂದ ಶೀತಲೀಕರಿಸುವ, ಹಿತವಾಗಿ ತಂಪಾಗಿಸುವ, ಪ್ರಾರ್ಥನೆಯೇ ಇಲ್ಲಿದೆ. ಕಣ್ಣನ್ನು ತಂಪಾಗಿಸುವುದು ಹೇಗೆ? ಮೂರು ಅಂಶಗಳಿಂದ. ಶ್ಲೋಕದ ಮೊದಲು ಮೂರು ಪಾದಗಳಲ್ಲಿ ಆ ಮೂರಂಶಗಳನ್ನು ಕವಿಯು ನಿರೂಪಿಸುತ್ತಾನೆ. ಆತನ ಕಟಾಕ್ಷ, ಶೈಶವ, ವಿಭ್ರಮ - ಇವೇ ಆ ಮೂರು. ಏನು ಇವುಗಳ ವಿಶೇಷ? ಕಟಾಕ್ಷ-ನಿರೀಕ್ಷಣವೆಂದರೆ ಕಣ್ಣೋಟವನ್ನು ಬೀರುವಿಕೆ. ಅದರ ವಿಶೇಷವೇನೆಂದರೆ ಅದು ಕಾರುಣ್ಯ-ಕರ್ಬುರವಾದದ್ದು. ಕರ್ಬುರವೆಂದರೆ ಮಿಶ್ರಿತ.
ಬೇರೆ ಬೇರೆ ರಸಗಳಿಗೆ ಬೇರೆ ಬೇರೆ ವರ್ಣಗಳುಂಟೆಂದೂ ಕರುಣರಸಕ್ಕೆ ಸಂಮಿಶ್ರ-ವರ್ಣವೆಂದೂ ಒಂದು ಲೆಕ್ಕವಿದೆ. ಕರುಣವೆಂದರೂ ಕಾರುಣ್ಯವೆಂದರೂ ಒಂದೇ. ಎಂದೇ ಕಾರುಣ್ಯ-ಕರ್ಬುರವೆಂದಿರುವುದು. ಕೃಷ್ಣನ ಕಣ್ಣೋಟದಲ್ಲಿ ಪ್ರೀತಿಯೂ ಇದೆ. ಕಾರುಣ್ಯ-ಮಿಶ್ರಿತವಾದ ಪ್ರೀತಿಯ ಸೊಗಸೇ ಬೇರೆ. ಅಂತಹ ಕಟಾಕ್ಷದೊಂದಿಗೆ ಆತನು ಬೀರುವ ನೋಟವೇ ನಿರೀಕ್ಷಣ ಅಥವಾ ಅವಲೋಕನ. ಇದು ನನ್ನ ಲೋಚನಕ್ಕೆ ಶಿಶಿರತೆಯನ್ನುಂಟುಮಾಡಿಸುವುದು. ಎರಡನೆಯದು ಆತನ ಶೈಶವ-ವೈಭವ, ಎಂದರೆ ಎಳಸಿನ ಸೊಗಸು. ಎಳಸೆಂದರೆ ತೀರ ಎಳಸಲ್ಲ. ತೀರ ಎಳಸಾದರೆ ಪರಾವಲಂಬಿಯಾದ ಎಳೆತನವಾಗಿಬಿಡುತ್ತದೆ. ಬದಲಾಗಿ ಅದು ತಾರುಣ್ಯ-ಸಂವಲಿತವಾಗಿರಬೇಕು. ಎಂದರೆ ತರುಣತೆಯ ಸಂಗಮವುಳ್ಳದ್ದಾಗಿರಬೇಕು. ಸುರೂಪವುಳ್ಳಂತಹವರಿಗೆ ಬಾಲ್ಯ-ಯೌವನ-ವಾರ್ಧಕ್ಯಗಳಲ್ಲಿ ಒಂದೊಂದರಲ್ಲೂ ಒಂದೊಂದು ಬಗೆಯ ಸೊಬಗಿರುವುದು; ಆದರೂ ಶೈಶವ-ತಾರುಣ್ಯಗಳ ಸಂಗಮದ ಸೊಗಸೇ ಸೊಗಸು. ವಲನ/ಸಂವಲನಗಳಿಗೆ ತಿರುವು ಎಂದರ್ಥ. ತಾರುಣ್ಯದತ್ತ ತಿರುಗಿರುವ ಶೈಶವದ ವೈಭವವೇ ಹೃದ್ಯವಾದುದು. ಶೈಶವದಲ್ಲಿ ಚಾಪಲ್ಯವು ಹೆಚ್ಚು. ತಾರುಣ್ಯದಲ್ಲಿ ಗಾಂಭೀರ್ಯವು ಹೆಜ್ಜೆಯಿಡಲಾರಂಭಿಸಿರುತ್ತದೆ. ಆದ್ದರಿಂದ ತಾರುಣ್ಯ-ಸಂವಲಿತ-ಶೈಶವದಲ್ಲಿ ಚಾಪಲ್ಯವಿನ್ನೂ ಕಳೆದಿಲ್ಲವಾಗಿದ್ದು, ಗಾಂಭೀರ್ಯದ ಕಿಂಚಿದವತಾರವಿರುತ್ತದೆ. ಇವೆರಡರ ಸಂಗಮವು ಹೃದಯಂಗಮವಾದುದು, ಕಣ್ಣುಗಳಿಗೆ ತಂಪನ್ನುಂಟುಮಾಡುವಂತಹುದು.
ಇನ್ನು ಮೂರನೆಯದು. ಅದಂತೂ ಮತ್ತೂ ವಿಶಿಷ್ಟವಾದುದು. ಅದು ಆತನ ಅದ್ಭುತ-ವಿಭ್ರಮ, ಅರ್ಥಾತ್ ಆಶ್ಚರ್ಯ-ವಿಲಾಸಗಳು. ಅವೇನು ಒಂದೇ ಎರಡೇ? ಸಮ-ವಯಸ್ಕರಿರಲಿ, ಬೆಳೆದವರು ಸಹ ಊಹಿಸಲಾರದ ಮಹಾ-ಕೃತ್ಯಗಳು, ಅವೂ ಅನಾಯಾಸದಿಂದಲೇ ಸಾಧಿಸಿರತಕ್ಕವು! ಇವು ಮೂರೂ ಭುವನಕ್ಕೇ ಪೋಷಣವನ್ನೀಯುವಂತಹವು. ಪೋಷಣವನ್ನು ಎಲ್ಲೋ ಒಂದಿಷ್ಟು ಯಾವಾಗಲೋ ಒಂದಿಷ್ಟು ಉಂಟುಮಾಡುವುದಲ್ಲ. 'ಆ' ಎಂದರೆ "ಎಲ್ಲೆಡೆಯಿಂದಲೂ", ಎಲ್ಲ ಬಗೆಯಿಂದಲೂ. ಗೀತೆಯಲ್ಲಿ ಕೃಷ್ಣನು ಹೇಳುವುದೂ, "ರಸಸ್ವರೂಪನಾದ ಚಂದ್ರನಾಗಿ ಎಲ್ಲಾ ಓಷಧಿಗಳನ್ನೂ ನಾನು ಪೋಷಿಸುತ್ತೇನೆ" ಎಂಬುದಾಗಿ. ಅನೇಕ-ಪ್ರಾಣಿಗಳು ಸಸ್ಯಗಳನ್ನು ಆಹಾರವಾಗಿ ಸೇವಿಸುತ್ತವೆ; ಇತರ ಪ್ರಾಣಿಗಳು ಅವನ್ನು ಆಹಾರವಾಗಿ ಸೇವಿಸುತ್ತವೆ; ಮನುಷ್ಯರೂ ಸಹ ಸಸ್ಯಗಳನ್ನು ಆಹಾರವಾಗಿ ಸೇವಿಸುತ್ತಾರೆ; ಅಥವಾ, ಕೊನೆಯ ಪಕ್ಷ, ಸಸ್ಯಗಳನ್ನು ಸೇವಿಸುವ ಪ್ರಾಣಿಗಳನ್ನು (ಅಥವಾ ಅಂತಹವನ್ನೇ ತಿನ್ನುವ ಪ್ರಾಣಿಗಳನ್ನು) ತಿನ್ನುತ್ತಾರೆ. ಹೀಗಾಗಿ ಸಸ್ಯಗಳಿಗಿತ್ತ ಪೋಷಣೆಯು ಪಾರಂಪರಿಕವಾಗಿ ಭೂಮಿಯ ಇತರೆಲ್ಲ ಜೀವಿಗಳಿಗೂ ಸಲ್ಲುವುದು.
ಹೀಗೆ ಕೃಷ್ಣನೇ ತನ್ನ ಚಂದ್ರ-ಸ್ವರೂಪದಿಂದ ಜೀವಿಗಳ ಪೋಷಣೆಯನ್ನು ಮಾಡುವುದಾಗಿ ಹೇಳಿದ್ದಾನೆ. ಧಾರಕನಾಗಿಯೂ, ಪೋಷಕನಾಗಿಯೂ, ಪಾಚಕನಾಗಿಯೂ ಭಗವಂತನೇ ಜೀವಿಗಳ ಪರಿಪಾಲನವನ್ನು ಮಾಡತಕ್ಕವನು. ಸೂರ್ಯನಾಗಿ ಧಾರಕ; ಚಂದ್ರನಾಗಿ ಪೋಷಕ; ಅಗ್ನಿಯಾಗಿ ಪಾಚಕ. ತಂಪಿನ ಗುಟುಕನ್ನಿತ್ತು ಜೀವಿಗಳೆಲ್ಲವುಗಳ ಪೋಷಣ-ಕಾರಕನು ಚಂದ್ರ. ನಮ್ಮ ಕಣ್ಣುಗಳೂ ಶಾಂತಿಗಾಗಿ ತಂಪಾದ ದೃಶ್ಯಗಳನ್ನು ಬಯಸುತ್ತವೆ; ಮನಸ್ಸು ತಂಪಾಗಿದ್ದಾಗ ತಂಪಾದ ದೃಶ್ಯಗಳನ್ನು ಆಸ್ವಾದಿಸ್ತುತವೆ. ಅಂತಹ ಜೀವ-ಪೋಷಕವಾದ ತಂಪನ್ನು ಭಗವಂತನು ಚಂದ್ರನ ಮೂಲಕ ಜಾಗತಿಕವಾಗಿ ತನ್ನ ಕಟಾಕ್ಷವಿಶೇಷ-ಸುರೂಪವಿಶೇಷ-ವಿಲಾಸವಿಶೇಷ - ಇವುಗಳಿಂದ ಆವತಾರಿಕವಾಗಿ ನೀಡುವನು. ಹೀಗೆ ಭಗವಂತನ ದೇಹ-ದೃಷ್ಟಿ-ಚೇಷ್ಟೆಗಳಿಂದಾಗುವ ಪುಷ್ಟಿಯನ್ನೂ, ಅದು ಕೊಡುವ ತುಷ್ಟಿಯನ್ನೂ, ಒಟ್ಟಿನಲ್ಲಿ ಕಣ್ಣಿಗಾಗುವ ಹಬ್ಬವನ್ನೂ ಭಾವಿಸಿಕೊಳ್ಳುತ್ತಿದ್ದಾನೆ, ಕವಿ ಈ ಪದ್ಯದಲ್ಲಿ:
ಕಾರುಣ್ಯ-ಕರ್ಬುರ-ಕಟಾಕ್ಷ-ನಿರೀಕ್ಷಣೇನ/
ತಾರುಣ್ಯ-ಸಂವಲಿತ-ಶೈಶವ-ವೈಭವೇನ |
ಆಪುಷ್ಣತಾ ಭುವನಂ ಅದ್ಭುತ-ವಿಭ್ರಮೇಣ/
ಶ್ರೀ-ಕೃಷ್ಣ-ಚಂದ್ರ! ಶಿಶಿರೀಕುರು ಲೋಚನಂ ಮೇ ||
ಶ್ಲೋಕದ ಮೊದಲೆರಡು ಪಾದಗಳಲ್ಲಿಯ ಪ್ರಥಮ-ಪದಗಳಲ್ಲಿ ಕಾರುಣ್ಯ/ತಾರುಣ್ಯ-ವೆಂಬ ಅನುಪ್ರಾಸ; ಹಾಗೆಯೇ ಕೊನೆಯೆರಡು ಪಾದಗಳ ಆಪುಷ್ಣ/ಶ್ರೀಕೃಷ್ಣ-ಗಳಲ್ಲಿಯೂ. ಹಾಗೆಯೇ ಕಟಾಕ್ಷ-ನಿರೀಕ್ಷ/ಶೈಶವ-ವೈಭವಗಳಲ್ಲೂ ಅನುಪ್ರಾಸವಿದೆ.
ಸೂಚನೆ : 1/03/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.