ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಧೇನುಪಾಲಕನು ಲೋಕಪಾಲಕನೇ!
ಕೃಷ್ಣನ ಸ್ವರೂಪವೆಂತಹುದು? ನಾವು ಹೇಳಲಾರೆವು - ಎನ್ನಿಸಿಬಿಟ್ಟಿದೆ, ಕವಿಗೆ. ಏಕೆ? ಆತನನ್ನು ಹತ್ತಿರದಿಂದಲೇ ನೋಡಿದವರುಂಟಲ್ಲವೇ? ಅವನೊಂದಿಗೋಡಾಡಿದವರೂ ಉಂಟಲ್ಲವೇ? ಅವರನ್ನೇ ಕೇಳಿದರಾಯಿತು. ಅವರಿಗೆ ಗೊತ್ತಿರುತ್ತದೆ, ಹೌದೇ. ಆದರೂ ಆತನನ್ನು ತಿಳಿದೂ ತಿಳಿಯೆವು! - ಎನ್ನುತ್ತಾನೆ, ಲೀಲಾಶುಕ. ಏಕೆ ಹಾಗೆ?
ಗೋಕುಲದಲ್ಲಲ್ಲವೆ ಕೃಷ್ಣನು ಇದ್ದದ್ದು? ಗೊಲ್ಲರೊಂದಿಗೆ ಆಡಿಕೊಂಡು ಬೆಳೆದ ಕೃಷ್ಣನು ಅವರು ಮಾಡುತ್ತಿದ್ದುದನ್ನೇ ಮಾಡುತ್ತಿದ್ದವನು. ಅವರು ದನ ಕಾಯುವವರು; ಈತನೂ ದನಗಳನ್ನು ಕಾಯ್ದವನೇ. ಎಂದೇ ಈತನು ಧೇನುಪಾಲಿ. ಧೇನುವೆಂದರೆ ಗೋವು, ಅವುಗಳ ಪಾಲಕ. ಹೀಗೆ ಕೃಷ್ಣನು ಗೋಪಾಲಕ, ಧೇನುಪಾಲಕ.
ಕೃಷ್ಣನೊಬ್ಬ ಗೊಲ್ಲ - ಎಂದಷ್ಟೇ ಭಾವಿಸಿದೆವೋ, ಕೆಟ್ಟೆವು. ಏಕೆ? ಇತ್ತ ಗೋ-ಪಾಲಕನಾದರೂ ಅತ್ತ ಲೋಕ-ಪಾಲಕನೂ ಹೌದು, ಆತ. ಆದರೆ ಆತನ ಪೂರ್ವ-ಸಂಕಲ್ಪವೊಂದುಂಟೆಲ್ಲ? ಅದರಂತೆ, ತನ್ನ ಪೂರ್ಣ-ಸ್ವರೂಪವನ್ನು ತೋರಿಸಿಕೊಂಡವನೇ ಅಲ್ಲ, ಯಾರಿಗೂ; ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಸುಕೃತಿಗಷ್ಟೆ ಅವನನ್ನರಿಯುವ ಭಾಗ್ಯ. ಮುಂದೆ ಬರುವ ಅರ್ಜುನನಿಗೂ ಬಹಳ ಕಾಲ ಜೊತೆಯಲ್ಲಿದ್ದರೂ ತಿಳಿಯಲೇ ಇಲ್ಲ, ಕೃಷ್ಣನಾರೆಂಬುದಾಗಿ.
ಹಾಗಾದರೆ ಆತನ ವಾಸ್ತವ-ಸ್ವರೂಪವೇನು? ಆತನು ಸಾಕ್ಷಾದ್ ಭಗವಂತನೆಂಬುದೇ. ಭಗವಂತನು ಮಾಡುವ ಕೆಲಸವೇನು? ಅರ್ಥಾತ್, ಆತನೊಬ್ಬನೇ ಮಾಡುವ ಕೆಲಸಗಳೇನು? ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳು. ಜಗತ್-ಸೃಷ್ಟಿಯೂ ಜಗತ್-ಸಂಹಾರವೂ ಬಹಳ ಹಿಂದೆ ಅಥವಾ ಬಹಳ ಮುಂದೆ - ಎಂಬ ಸುದೂರ-ಕಾಲದಲ್ಲಿ ಆಗತಕ್ಕವು. ಆದರೆ ಇವೆರಡರ ನಡುವಣ ಇರುವ ಸ್ಥಿತಿಯೆಂಬುದೇ ಆತನ ಕಾರ್ಯ. ಸ್ಥಿತಿಯೆಂದರೆ ನಾಶವಾಗದಂತೆ ಕಾಪಾಡುವುದು. ಹಾಳಾಗದಂತೆ ರಕ್ಷಿಸುವುದನ್ನೇ ಪಾಲಿಸುವುದೆನ್ನುವುದು. ಸ್ಥಿತಿಯು ವಿಷ್ಣುಕಾರ್ಯ. ಹೀಗೆ ಲೋಕ-ಪಾಲಿಯಾದವನು ಭಗವಂತ.
ಹೀಗೆ, ಯಾವಾತನನ್ನು ಕೇವಲ ಧೇನು-ಪಾಲಕನೆಂದುಕೊಂಡುಬಿಡುವೆವೋ ಆತನು ವಾಸ್ತವವಾಗಿ ಲೋಕ-ಪಾಲಕನೇ ಹೌದು. ಮೊದಲನೆಯದು ಬರಿಗಣ್ಣಿಗೇ ಕಾಣಬಹುದಾದ ಅಂಶ. ಎರಡನೆಯದು ಯೋಗಿಗಳಿಗೂ ಸು(ಲಭ)ವೇದ್ಯವಾಗದ ಅಂಶ. ಇದುವೇ ಭಗವಂತನ ಮಾಯೆ!
ಹಾಗೆಯೇ ಆತನು ರಾಧೆಯ ಸಂಗಡಿಗ. ರಾಧೆಯೆಂಬುದು ಅಸಾಧಾರಣವಾದ ಜೀವ. ಕೃಷ್ಣನಿಗಾಗಿ ಪ್ರಾಣವನ್ನೇ ಪಣವಿಟ್ಟ ಜೀವ. ಭಗವತ್ಪ್ರೀತಿಕರವಾದ ಗುಣಗಳನ್ನೆಲ್ಲ ಸಂಪಾದಿಸಿಕೊಂಡಿರುವ ಜೀವ. ರಾಧಾ-ತತ್ತ್ವವೆಂದರೇನೆಂಬುದನ್ನು ಶ್ರೀರಂಗಮಹಾಗುರುಗಳು ಬಿಡಿಸಿ ತೋರಿಸಿದ್ದರು: "ಯಾರ ಮನೋಧಾರೆಯು ಸದಾ ಭಗವಂತನತ್ತಲೇ ಹರಿಯುತ್ತಿರುವುದೋ ಅವಳೇ ರಾಧೆ. ಅರ್ಥಾತ್, ಧಾರಾ ಎನ್ನುವುದನ್ನೇ ರಾಧಾ ಎಂದಿರುವುದು."
ಯಾರು ಮನಸ್ಸನ್ನು ಸರ್ವದಾ ತಮ್ಮ ಲಕ್ಷ್ಯದತ್ತಲೇ ಹರಿಸುವರೋ, ಅವರು ತಮ್ಮ ಲಕ್ಷ್ಯವನ್ನು ಸಾಧಿಸಿಯೇ ಸಾಧಿಸುವುದರರೆಂಬುದರಲ್ಲಿ ಸಂಶಯವೇ ಇಲ್ಲ. ರಾಧಿಸುವುದೆಂದರೂ ಸಾಧಿಸುವುದೆಂದರೂ ಒಂದೇ. ರಾಧ್, ಸಾಧ್ - ಎಂಬೀ ಧಾತುಗಳಿಂದ ಬಂದವು. ಹೀಗಾಗಿ ಗುರಿಸಾಧಿಸತಕ್ಕವಳೇ ರಾಧೆ. ಅವಳ ಗುರಿಯಾದರೂ ಉನ್ನತ, ಉದಾತ್ತ.
ಅನೇಕ ಜೀವಗಳು ಭಗವಂತನಿಗೆ ಪ್ರಿಯವಾಗುವುದುಂಟು. ಅವುಗಳಲ್ಲೆಲ್ಲಾ ಪ್ರಿಯತಮವಾದ ಜೀವವೇ ರಾಧೆ. ಭಗವಂತನೊಬ್ಬನೇ ಪುರುಷನೆನ್ನುವಾಗ, ಜೀವಗಳಿಗೆ ಆತನನ್ನು ಕುರಿತಾಗಿ ಸ್ತ್ರೀ-ಭಾವವುಂಟಾಗುವುದರಲ್ಲಿ ಆಶ್ಚರ್ಯವಿಲ್ಲ. ಸ್ತ್ರೀ-ದೇಹವನ್ನು ಧರಿಸಿರುವ ಜೀವವು ತನ್ನ ಮೈಮನಸ್ಸುಗಳನ್ನು ಸಹಜವಾಗಿಯೇ ಭಗವಂತನಿಗೇ ಕೊಟ್ಟುಕೊಳ್ಳಬಲ್ಲದು.
ಭಗವಂತನೂ ತನಗೆ ಪ್ರಿಯವಾದ ಜೀವವು ಹಂಬಲಿಸುವ ಬಗ್ಗೆ ಹಾಗೆಯೇ ಸ್ಪಂದಿಸುವುದೂ ಉಂಟು: ಭಗವಂತನ ಅಂಗ-ಸಂಗಕ್ಕೇ ಹಂಬಲಿಸಿದ ಜೀವಗಳಿಗೆ ಅದನ್ನೇ ದಯಪಾಲಿಸುವನು. ಹೀಗಾಗಿ ರಾಧೆಯು ಆಶಿಸುವ ದೈಹಿಕ-ಸಂಪರ್ಕವನ್ನು ಅವಳಿಗಿಲ್ಲವೆನ್ನಲಾಗದು. ಅದನ್ನೇ ಇಲ್ಲಿ ರಾಧೆಯ ವಕ್ಷಸ್ಸಿನೆಡೆಯಲ್ಲಿ ಮಲಗುವವನವನೆಂದು ಕೃಷ್ಣನನ್ನು ಕುರಿತು ಹೇಳಿದೆ. ಅದು ಮೇಲ್ನೋಟಕ್ಕಷ್ಟೇ ದೈಹಿಕ-ಸುಖ.
ಆತನ ಅವತಾರಗಳಲ್ಲಿಯ ಲೀಲೆಯು ಬಗೆಬಗೆಯಾದುದು; ಆದರೆ ಆತನು ಸ್ವರೂಪತಃ ಶೇಷ-ಶಾಯಿ. ಆದಿಶೇಷನ ಮೇಲೆ ಪವಡಿಸುವ ಸಾಕ್ಷಾನ್ಮಹಾವಿಷ್ಣುವೇ.
ಹೀಗಾಗಿ ಮೇಲ್ನೋಟಕ್ಕೆ ರಾಧಾ-ಸಂಗದಲ್ಲಿ ಶಯಿಸುವವನಾದರೂ ವಾಸ್ತವವಾಗಿ ಶೇಷನ ಮೇಲೇ ಶಯಿಸುವವ.
ಹೀಗೆ ಹೊರನೋಟದಿಂದ ನೋಡಿದ ವರ್ತನೆಯು ಲೋಕಸಾಧಾರಣವೆಂಬಂತೆ ಕಂಡರೂ, ಒಳನೋಟದಿಂದ ಕಂಡದ್ದು ಲೋಕೋತ್ತರತೆಯನ್ನು ತೋರಿಸಿಕೊಡುವುದು. ಎಂದೇ, ಮೂಲತಃ ಆತನು ಜ್ಯೋತಿಃಸ್ವರೂಪನೆಂಬುದನ್ನು ಆರಂಭದಲ್ಲೇ ಜ್ಞಾಪಿಸುತ್ತಾ "ತೇಜಸ್ಸಿಗೆ ನಮಸ್ಕಾರ" ಎನ್ನುತ್ತಾನೆ.
ಯಾವ ತೇಜಸ್ಸಿನ ಮುಂದೆ ಸೂರ್ಯನ ತೇಜಸ್ಸೂ ಮಂಕಾಗುವುದೋ ಯಾವನನ್ನು "ಕೋಟಿಸೂರ್ಯ-ಸಮಪ್ರಭ"ನೆನ್ನಲಾಗುವುದೋ ಅವನನ್ನು ಮನಸ್ಸಿನಿಂದ ಅರಿಯುವವರಾರು, ಮಾತಿನಿಂದ ಬಣ್ಣಿಸುವವರಾರು?
ಈ ಶ್ಲೋಕದಲ್ಲಿ ಪಾಲಿನೇ-ಪಾಲಿನೇ, ಶಾಯಿನೇ-ಶಾಯಿನೇಗಳು ಎರಡೆರಡು ಬಾರಿ ಬಂದಿವೆ - ಶ್ಲೋಕದ ಪೂರ್ವಾರ್ಧ-ಉತ್ತರಾರ್ಧಗಳಲ್ಲಿ. ಇವುಗಳಲ್ಲಿ ಮೊದಲನೆಯ "ಪಾಲಿನೇ"ಯು ಲೌಕಿಕವನ್ನೂ ಎರಡನೆಯ "ಪಾಲಿನೇ"ಯು ಪಾರಮಾರ್ಥಿಕವನ್ನೂ ಹೇಳುತ್ತವೆ. ಹಾಗೆಯೇ ಮೊದಲನೆಯ "ಶಾಯಿನೇ"ಯು ಲೌಕಿಕವನ್ನೂ ಎರಡನೆಯ "ಶಾಯಿನೇ"ಯು ಪಾರಮಾರ್ಥಿಕವನ್ನೂ ಹೇಳುತ್ತವೆ.
ಭಗವಂತನು ಕೃಷ್ಣನಾಗಿ ಇಹಕ್ಕೆ ಅವತರಿಸಿ ಬಂದಾಗ ತೋರಿಕೊಂಡ ಬಗೆಯೇನು, ಸ್ವಸ್ಥಾನದಲ್ಲಿ ಸ್ಥಿತನಾಗಿದ್ದಾಗ ಇದ್ದಿರುವ ಬಗೆಯೇನು? - ಎಂಬುದನ್ನು ಚಿಕ್ಕಶ್ಲೋಕದಲ್ಲಿ ಚೊಕ್ಕದಾಗಿ ನಿರೂಪಿಸಿದ್ದಾನೆ, ಲೀಲಾಶುಕ!
ಶ್ಲೋಕ ಹೀಗಿದೆ:
ತೇಜಸೇಽಸ್ತು ನಮೋ ಧೇನು-ಪಾಲಿನೇ ಲೋಕ-ಪಾಲಿನೇ |
ಏನು ಅನುಸಂಧೇಯವೆಂದರೆ? ಯಾವುದು ಅನುಸಂಧಾನಕ್ಕೆ ಯೋಗ್ಯವೋ ಅದುವೇ ಅನುಸಂಧೇಯ. ಒಂದು ಉತ್ಕೃಷ್ಟ-ವಿಷಯಕ್ಕೆ ಮನಸ್ಸನ್ನು ಪದೇ ಪದೇ ಕೊಟ್ಟುಕೊಳ್ಳುವುದು, ಅದನ್ನೇ ಮತ್ತೆ ಮತ್ತೆ ಭಾವಿಸುವುದು. ಅನುಸಂಧಾನವೆನಿಸುತ್ತದೆ. ನಾಲ್ಕು ವಿಶೇಷಣಗಳಿಂದ ಅನುಸಂಧೇಯವನ್ನು ಹೇಳುತ್ತಾನೆ, ಕವಿ.
ಮೊದಲನೆಯದಾಗಿ ಅದರ ಹೆಸರು. ಅದು "ನರಹರಿ"ಯೆಂಬುದಾಗಿ. ನರಹರಿಯೆಂದರೆ ನರಸಿಂಹ. ಅದುವೇ ಅದರ ಅಭಿಧಾನ. ಅಭಿಧಾನದಿಂದ ಗೊತ್ತಾಗಬೇಕಾದದ್ದು ಅಭಿಧೇಯ. ಅಭಿಧಾನವು ಪದ; ಅಭಿಧೇಯವು ಅರ್ಥ. ಹೀಗೆ ಅದು ನರಹರಿ-ಪದ-ಅಭಿಧೇಯ.
ನರಸಿಂಹನ ಹೆಸರು ಹೇಳುತ್ತಲೇ ಆತನ ಅನುಗ್ರಹಕ್ಕೆ ಪಾತ್ರನಾದ ಪ್ರಹ್ಲಾದನ ಸ್ಮರಣೆಯುಕ್ಕುವುದಲ್ಲವೇ? ತಂದೆಯಿಂದಲೇ ಅದೆಷ್ಟೆಷ್ಟು ಕಷ್ಟಗಳಿಗೆ ತುತ್ತಾದರೂ ಪ್ರಹ್ಲಾದನ ಭಾಗ್ಯವೆಂದರೆ ಸಾಕ್ಷಾನ್ನರಸಿಂಹನೇ. ಮಹಾಭಾಗ್ಯಕ್ಕಾಗಿ ಮಹಾಕ್ಲೇಶವೂ ಸಹ್ಯವೇ. ಭಾಗ್ಯವೇ ಭಾಗಧೇಯವಾದ್ದರಿಂದ ನೃಸಿಂಹನು ಪ್ರಹ್ಲಾದ-ಭಾಗಧೇಯನೇ ಸರಿ.
ಈತನನ್ನು ಹುಡುಕುವುದೆಲ್ಲಿ? ಸಿಂಹಗಳು ಗುಹೆಯಲ್ಲಿ ವಾಸಿಸುತ್ತವೆಯಲ್ಲವೇ? ಈ ನರಸಿಂಹನು ಗೋಚರನಾಗುವುದು ಮಹಾಗುಹೆಯಲ್ಲಿ. ಯಾವುದದು? ನಿಗಮಾಂತ ಎಂಬುದು. ನಿಗಮವೆಂದರೆ ವೇದಗಳು. ನಿಗಮಾಂತವೆಂದರೆ ವೇದಾಂತ. ವೇದಗಳ ಕೊನೆಯಲ್ಲಿ ಬರತಕ್ಕ ಭಾಗವೇ ವೇದಾಂತ, ಅರ್ಥಾತ್ ಉಪನಿಷತ್ತು. ವೇದಗಳು ಪ್ರಧಾನವಾಗಿ ಕರ್ಮಕಾಂಡವೆನಿಸಿದರೆ, ಉಪನಿಷತ್ತುಗಳು ಜ್ಞಾನಕಾಂಡ. ಜ್ಞಾನಸ್ವರೂಪನಾದವನನ್ನು ಜ್ಞಾನಕಾಂಡದಲ್ಲಿ ತಾನೆ ಹುಡುಕುವುದು? ಉಪನಿಷತ್ತುಗಳ ಒಳಗೇ ಪ್ರತಿಪಾದ್ಯನಾದವನನ್ನು ಅಂತರಾಧೇಯವೆಂದಿದೆ (ಅಂತರ್-ಆಧೇಯ).
ಕೊನೆಯದಾಗಿ, ಇದು ವಿಬುಧ-ವಿಧೇಯ. ಎಂದರೆ ದೇವತೆಗಳು ಇದಕ್ಕೆ ವಿಧೇಯರಾಗಿರುವರು, ಅರ್ಥಾತ್ ತಗ್ಗಿಬಗ್ಗಿ ಇರುವರು. ವಿಬುಧರೆಂದರೆ ವಿದ್ವಾಂಸರೂ ಹೌದು: ಇಬ್ಬರೂ ವಿಶೇಷವಾದ ಅರಿವುಳ್ಳವರಲ್ಲವೇ? ವಿದ್ವಾಂಸರೆನಿಸಿಕೊಂಡವರಿಗೂ ಇದು ವಿಧೇಯ, ಎಂದರೆ ವಿಹಿತವಾದದ್ದು.
ನಿಗಮಾಂತ-ಮಹಾ-ಗುಹಾಂತರಾಧೇಯಂ |
ನರಹರಿ-ಪದಾಭಿಧೇಯಂ
ವಿಬುಧ-ವಿಧೇಯಂ ಮಮಾನುಸಂಧೇಯಂ ||
ಸೂಚನೆ : 2/11/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.