ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ವಾಲ್ಮೀಕಿರಾಮಾಯಣದ ಒಂದು ಕಿರಿದಾದ ಪ್ರಸಂಗದಲ್ಲೂ ಹಿರಿದಾದ ಪಾಠವೊಂದನ್ನು ನಾವು ಕಲಿಯಬಹುದು.
ಶ್ರೀರಾಮಚಂದ್ರನು ವನವಾಸಕ್ಕೆ ತೆರಳುವಾಗ ದುಃಖಿತ-ಜನತೆಯೂ ಆತನನ್ನು ಹಿಂಬಾಲಿಸಿತಷ್ಟೆ. ಚಿರಕಾಲ ದುಃಖಿಸುವುದು ತರವಲ್ಲವೆಂಬ ತಿಳಿವಳಿಕೆಯಿತ್ತು ಪ್ರಜೆಗಳನ್ನು ಬೀಳ್ಕೊಟ್ಟ ರಾಮನು, ಶೃಂಗಬೇರಪುರದ ಕಡೆಗೆ ಸಾಗುತ್ತಾ ಗಂಗಾ-ಸೌಂದರ್ಯ-ವೈಭವಗಳನ್ನೂ ಆಸ್ವಾದಿಸಿದನು. ಹೊತ್ತಾಗುತ್ತಾ ಬಂದಿತ್ತಾಗಿ, ಬೃಹತ್ತಾದ ಇಂಗುದೀ-ವೃಕ್ಷವೊಂದನ್ನು ಕಂಡು, "ಇಂದಿಲ್ಲಿಯೇ ತಂಗೋಣ"ವೆಂದು ಸುಮಂತ್ರನಿಗೆ ಸೂಚಿಸಿದನು.
ಶೃಂಗಬೇರಪುರಕ್ಕೆ ಒಡೆಯನೆಂದರೆ ನಿಷಾದ-ರಾಜನಾದ ಗುಹ. ತನ್ನ ರಾಜ್ಯಕ್ಕೆ ಪುರುಷ-ಶ್ರೇಷ್ಠನಾದ ರಾಮನು ಬಂದಿರುವನೆಂಬುದು ಆತನಿಗೆ ತಿಳಿದುಬಂದಿತು.
ಶ್ರೇಷ್ಠರಾದವರು ಬಂದಾಗ ಅವರಿಗೆ ಶ್ರೇಷ್ಠವಾದ ಆದರಾತಿಥ್ಯಗಳೇ ಯುಕ್ತವಷ್ಟೆ. ಎಂದೇ ರಾಜ್ಯದ ವೃದ್ಧರು, ಅಮಾತ್ಯರು ಮುಂತಾದ ಹಿರಿಯರೊಂದಿಗೆ ರಾಮನತ್ತ ನಡೆದ, ಗುಹ. ರಾಮನಿಗವನು ಪ್ರಾಣಸಮ. ಪ್ರಿಯಮಿತ್ರನು ಆಗಮಿಸಿದನೆಂದರೆ ನಾವೂ ಮುಂದೆ ಹೋಗಿ ಆತನನ್ನು ಸ್ವಾಗತಿಸುತ್ತೇವಲ್ಲವೇ? ಎಂದೇ ರಾಮನೂ ತಾನೂ ಮುಂದೆ ಹೋಗಿ ಆತನನ್ನಾದರಿಸಿದನು.
ರಾಮನನ್ನು ಕಂಡ ಗುಹನಿಗೆ ಒಂದಿಷ್ಟು ದುಃಖವೂ ಆಯಿತು. ಏಕೆ? ರಾಮನು ವನವಾಸಿ-ತಪಸ್ವಿಗಳಿಗೆ ಸಲ್ಲತಕ್ಕ ವಲ್ಕಲವನ್ನುಟ್ಟಿದ್ದಾನೆ! ರಾಜಕುಮಾರನೆಂದರೆ ವೇಷ-ಪೋಷಾಕುಗಳು ಹೇಗಿರುತ್ತವೆ! ಏನೋ ಘಟಿಸಿರಬೇಕು - ಎಂಬ ಚಿಂತನವು ಗುಹನ ಮನಸ್ಸಿನಲ್ಲಿ ಕ್ಷಣಕಾಲ ಹಾದುಹೋಗಿರಬಹುದು; ಸೂಕ್ಷ್ಮವಾದ ವಿಷಯವಿದೆಂದುಕೊಂಡು, ಗುಹನು ಆ ಬಗ್ಗೆ ಮಾತನಾಡಹೋಗುವುದಿಲ್ಲ. ಹಾಗಾದರೆ ಏನೆಂದನು? ಏನು ಮಾಡಿದನು? - ಎಂಬುದೇ ಇಲ್ಲಿ ಗಮನಿಸಿಕೊಳ್ಳಬೇಕಾದ ವಿಷಯ.
"ನನ್ನೀ ರಾಜ್ಯವು ನಿನಗೆ ಅಯೋಧ್ಯೆಯಂತೆಯೇ. ನಿನಗಾವ ಸೇವೆಯನ್ನು ಮಾಡಲಿ?" ಎಂದು ತನ್ನ ಭಾಗ್ಯವನ್ನು ಚಿತ್ರಿಸುತ್ತಾ, ಪ್ರಶಸ್ತವಾದ ಭಕ್ಷ್ಯ-ಭೋಜ್ಯ-ಪೇಯ-ಲೇಹ್ಯಗಳುಳ್ಳ ಭೋಜನಕ್ಕೆ ವ್ಯವಸ್ಥೆ, ಶಯನ-ವ್ಯವಸ್ಥೆಗಳನ್ನು ಮಾಡಿದನು. ಇವೆಲ್ಲದರ ಜೊತೆಗೆ, ರಾಮನ ವಾಜಿಗಳಿಗೂ, ಎಂದರೆ ಕುದುರೆಗಳಿಗೂ, ಖಾದ್ಯವು ಸಿದ್ಧವಾಗಿರುವುದನ್ನು ಸೂಚಿಸಿದನು.
ತಾನು ವಲ್ಕಲವನ್ನು ಧರಿಸಿರುವುದೂ ಫಲಮೂಲಗಳನ್ನು ಮಾತ್ರ ಸ್ವೀಕರಿಸುವುದೂ ತಾನು ವ್ರತಸ್ಥನಾದ್ದರಿಂದಲೇ - ಎಂದು ಹೇಳಿ, ತನ್ನ ಅಶ್ವಗಳಿಗೆ ಆಹಾರವನ್ನು ಕೊಡೆನ್ನುತ್ತಾನೆ, ರಾಮ (ಅಶ್ವಾನಾಂ ಖಾದನೇನಾರ್ಥೀ). ತನ್ನ ತಂದೆಗೆ ಪ್ರಿಯವಾಗಿದ್ದ ಕುದುರೆಗಳಿವು - ಎಂದು ಹೇಳಿ, ಇವಕ್ಕೆ ತೃಪ್ತಿಯಾದರೆ ತನಗೂ ತೃಪ್ತಿಯೆನ್ನುತ್ತಾನೆ. ಗುಹನೂ ಅಂತೆಯೇ ಮಾಡುತ್ತಾನೆ.
ಇಲ್ಲಿಯ ಈ ಕಿರುಪ್ರಸಂಗವು ಇಡೀ ರಾಮಾಯಣದ ತಂತ್ರಕ್ಕೇ ಕನ್ನಡಿಹಿಡಿಯುತ್ತದೆಯೆನ್ನಬಹುದು. ಕುದುರೆಗೆ ಆಹಾರವೀಯುವುದು ರಾಮಾಯಣದ ರಚನಿಕೆಯನ್ನು ಹೇಗೆ ತೋರಿಸೀತು?
ಶ್ರೀರಂಗಮಹಾಗುರುಗಳಿತ್ತಿರುವ ಸೂತ್ರವೊಂದು ಇಲ್ಲಿ ದಿಗ್ದರ್ಶಕವಾಗಿದೆ: "ಬಂದ ಅತಿಥಿಗೆ ಆಹಾರ, ಆತನ ಕುದುರೆಗಳಿಗೂ ಆಹಾರ - ಎನ್ನುವಂತೆ, ಜೀವಿಗೂ ಆತನ ಇಂದ್ರಿಯಗಳಿಗೂ ಸಲ್ಲುವ ಆಹಾರವನ್ನಿತ್ತಿದ್ದಾರೆ, ವಾಲ್ಮೀಕಿಗಳು." ಏನು ಹಾಗೆಂದರೆ? ಇಲ್ಲಡಗಿರುವ ರೂಪಕವನ್ನು ಗ್ರಹಿಸಿದವರಿಗೆ ತತ್ತ್ವವು ಗೋಚರವಾಗುತ್ತದೆ. ಕಠೋಪನಿಷತ್ತು ತೋರಿಸುವ ರಥ-ರೂಪಕದಂತೆ, ಶರೀರ-ಇಂದ್ರಿಯಗಳೇ ರಥ-ಕುದುರೆಗಳು; ಮನೋ-ಬುದ್ಧಿಗಳು ಲಗಾಮು-ಸಾರಥಿಗಳು; ಆತ್ಮನೇ ರಥಿ.
ಕುದುರೆಗಳು ಸುಮ್ಮನೆ ಕೂರವು. ಅವುಗಳಿಗೆ ಸಂಚಾರ ಬೇಕೇ ಬೇಕು. ಇಲ್ಲದಿದ್ದಲ್ಲಿ ಅವಕ್ಕೆ ಬೇಗನೇ ಮುಪ್ಪು ಆವರಿಸಿಬಿಡುವುದು. ಇಂದ್ರಿಯಗಳೂ ಹಾಗೆಯೇ. ಇಂದ್ರಿಯಗಳನ್ನು ಸುಮ್ಮನೆ ಕುಳಿತುಕೊಳ್ಳಿ - ಎನ್ನಲಾಗುವುದೇ? ನಿದ್ರಾವಸ್ಥೆಯೊಂದನ್ನು ಬಿಟ್ಟರೆ ಸದಾ ಕಾರ್ಯ-ರಾಶಿಯಲ್ಲಿ ಮುಳುಗಿರತಕ್ಕವು, ಅವು. ಅದು ಅವುಗಳ ಸಹಜ-ಪ್ರವೃತ್ತಿ. ಹೋಗಬಾರದೆಡೆಗೆ ಅವುಗಳು ಹೋಗದಿರಲು ಲಗಾಮು ಬೇಕು, ಸರಿಯೇ; ಆದರೆ ಅವನ್ನು ಉಪವಾಸ ಕೆಡವುವಂತಿಲ್ಲ. ಹೊಟ್ಟೆಗೆ ಹಾಕದಿದ್ದರೆ ಹೇಗೆ ನಾವು ವಿಲವಿಲ ಒದ್ದಾಡುವಂತಾಗುತ್ತದೋ ಹಾಗೆಯೇ ಇಲ್ಲೂ. ಚಟುವಟಿಕೆಯಿಂದಿರಲೇ ಸದಾ ಇಷ್ಟಪಡುವಂತಹವರಿಗೆ ಕಷ್ಟದ ಅನಶನವನ್ನು ಹೇರಿ ಚಡಪಡಿಕೆ-ಸಿಡಿಮಿಡಿಗಳಾಗುವಂತೆ ಮಾಡುವಂತಿಲ್ಲ.
ದೇಹ-ಇಂದ್ರಿಯ-ಮನಸ್ಸು-ಬುದ್ಧಿ - ಇವುಗಳಿಗೆ ಆಹಾರ ಕೊಡುವುದು ಸರಿಯೇ; ಹಾಗೆಯೇ ಜೀವಿಗೂ ಆಹಾರವು ಬೇಕು; ಆತ್ಮನಿಗೆ ಸಲ್ಲುವ ಆಹಾರವೇ ಅಧ್ಯಾತ್ಮ. ವಾಲ್ಮೀಕಿ-ರಾಮಾಯಣದಲ್ಲಿ ಇಂದ್ರಿಯ-ತೃಪ್ತಿಯನ್ನುಂಟುಮಾಡುವ ಅಂಶಗಳೂ ಇವೆ. ಕೃತಿಯ ಪಾಠ್ಯ-ಗೇಯಗಳಲ್ಲಿಯ ಮಧುರತೆಯೆಂಬುದು ನಾಲಿಗೆ-ಕಿವಿಗಳಿಗೊದಗುವ ಸಂತೋಷವನ್ನು ಹೇಳುತ್ತದೆ. ಮನೋ-ಹೃದಯಗಳಿಗೆ ಹ್ಲಾದವನ್ನುಂಟುಮಾಡುವ ಪರಿಯಲ್ಲೂ ಕಾವ್ಯ-ರಚನೆಯಾಗಿದೆ. ಶಬ್ದಾಲಂಕಾರ-ಅರ್ಥಾಲಂಕಾರಮಯವಾದ ಭಾಷೆಯೇ ರಂಜಕವಾಗಿದೆ. ಭಾವ-ರಸಗಳ ವಿಲಾಸವಿದೆ. ತತ್ತ್ವಮಯವಾದ ಕಥೆಯು ಮನೋಬುದ್ಧಿಗಳಿಗೆ ಆಳವಾದ ಸ್ತರದಲ್ಲಿ ರೋಚಕವಾಗಿದ್ದು ತುಷ್ಟಿಪ್ರದವಾಗಿದೆ. ಇದಲ್ಲದೆ, ಶಾಂತರಸಕ್ಕೆ ಪೋಷಕವಾದ ಸಂನಿವೇಶ-ವಿಶೇಷಗಳಿಂದ ಆತ್ಮ-ಸಂತೋಷವೂ ಲಭ್ಯವಾಗಿದೆ.
ಹೀಗೆ ರಾಮನಿಗಷ್ಟೇ ಆಹಾರ, ಕುದುರೆಗಳಿಗಿಲ್ಲ - ಎಂದು ಮಾಡದೆ, ಕುದುರೆಗಳಿಗೂ ಆಹಾರ, ಅವುಗಳ ಮೇಲೆ ಬಂದವರಿಗೂ ಆಹಾರ - ಎನ್ನುವಂತೆ, ಇಂದ್ರಿಯ-ಇಂದ್ರಿಯಾತೀತಗಳೆರಡರ ಸಮಾರಾಧನೆಯನ್ನೂ ಮಾಡಿಕೊಡುವ ಕಾವ್ಯವಾಗಿ ಗೋಚರವಾಗುತ್ತದೆ, ರಾಮಾಯಣ.