Sunday, October 27, 2024

ಕೃಷ್ಣಕರ್ಣಾಮೃತ 36 ಗಾಬರಿ ತರಿಸಿದ ಕೃಷ್ಣನ ಕನಸು (Krishakarnamrta 36 Gabari Tarisida Krishnana Kanasu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

 

ನಮಗೆಲ್ಲರಿಗೂ ಎಚ್ಚರ-ಕನಸು-ನಿದ್ದೆಗಳೆಂಬ ಮೂರು ಅವಸ್ಥೆಗಳು ಸಾಧಾರಣವಾಗಿ ಇರುವುವಷ್ಟೆ. ಇವನ್ನೇ ಜಾಗ್ರತ್-ಸ್ವಪ್ನ-ಸುಷುಪ್ತಿಗಳೆಂದು ಕರೆಯುವುದು. ಇವುಗಳಲ್ಲಿ ಕನಸೆಂಬುದು ಕುತೂಹಲಕ್ಕೆ ವಿಷಯವೇ ಸರಿ. ಕಳೆದ ಶತಮಾನದ ಆದಿಯಲ್ಲಿ ಸಿಗ್ಮಂಡ್ ಫ್ರಾಯ್ಡ್ (1856-1939) ಎಂಬ ಮನೋ-ವಿಶ್ಲೇಷಕನು ಸ್ವಪ್ನಗಳನ್ನು ವ್ಯಾಖ್ಯಾನಿಸಲು ಮಾಡಿದ ಪ್ರಯತ್ನಗಳು ಪ್ರಸಿದ್ಧವಾಗಿವೆಯಾದರೂ, ಅವಲ್ಲಿಯ ಎಲ್ಲಾ ಅಂಶಗಳೂ ಆತನ ಶಿಷ್ಯರಿಗೇ ಒಪ್ಪಲು ಯೋಗ್ಯವಾಗಲಿಲ್ಲ.

ಅದೇನೇ ಇರಲಿ, ನಮ್ಮ ಸುಪ್ತ-ಪ್ರಜ್ಞೆಯಲ್ಲಿ ಅಡಗಿರುವ ಎಷ್ಟೋ ವಿಷಯಗಳು ಕನಸಿನಲ್ಲಿ ತೋರುವುವೆಂಬುದನ್ನು ಆತನು ಹೇಳಿದ್ದನು. ಭಾರತೀಯ-ಚಿಂತನ-ಸರಣಿಯನ್ನು ಅರಿತವರಿಗೆ, ಯೋಗ-ವಿದ್ಯೆಯ ಶಾಸ್ತ್ರ-ಭಾಗವನ್ನು ತಿಳಿದವರಿಗೆ, ಈತನು ಹೇಳಿರುವುದರಲ್ಲಿ ಹೊಸ ವಿಷಯವೇನಿದೆ? ಚಿತ್ತದ ನಾನಾ-ಸ್ಥಿತಿಗಳನ್ನು ಕುರಿತಾದ ಶೋಧನೆಯನ್ನು ನಮ್ಮವರು ಶತಮಾನಗಳೇನು, ಹಲವು ಸಹಸ್ರಮಾನಗಳ ಹಿಂದೆಯೇ ಮಾಡಿದ್ದರು.

ಈಚೆಗೆ ಮನೋವಿಜ್ಞಾನದಲ್ಲಿ ಅತ್ಯಂತವಾಗಿ ಹೆಸರು ಮಾಡಿರುವವನು ಕೆನ್ ವಿಲ್ಬರ್ (1949-    ) ಎಂಬಾತ. ಈತನೂ ಭಾರತೀಯ-ಮನೋವಿಜ್ಞಾನವನ್ನೂ, ವಿಶೇಷವಾಗಿ ಅರೋಬಿಂದೋ ಅವರ ಚಿಂತನ-ಧಾರೆಯನ್ನೂ, ಮೈಗೂಡಿಸಿಕೊಂಡವನು. ಆದರೆ ಎರವಲುಪಡೆದ ಈ ಅಂಶಗಳನ್ನು ಬಹಿರಂಗಪಡಿಸದೆ, ಇವೆಲ್ಲಾ ತನ್ನದೇ ಶೋಧನೆಗಳೆಂಬಂತೆ ತೋರಿಸಿಕೊಳ್ಳುವ ಮಾಮೂಲಿ ಪಾಶ್ಚಾತ್ತ್ಯರ ಮೋಸದ ಹಾದಿಯನ್ನು ಹಿಡಿದಿದ್ದಾನೆ.

 ನಮ್ಮ ಬಾಲ್ಯದಲ್ಲಾದ ಅನುಭವಗಳ ಪರಿಣಾಮ-ವಿಶೇಷಗಳು ನಾವು ದೊಡ್ಡವರಾದ ಮೇಲೂ ಜ್ಞಾತಾಜ್ಞಾತವಾಗಿ ಕಾಣಿಸಿಕೊಳ್ಳುವುದನ್ನು/ಕಾಡುವುದನ್ನು ಆಧುನಿಕ-ಮನೋ-ವಿಜ್ಞಾನವನ್ನು ಬಲ್ಲವರು ತಿಳಿಯಪಡಿಸುತ್ತಾರೆ. ಆದರೆ ನಮ್ಮ ಶಾಸ್ತ್ರಗಳಲ್ಲಿ ಜನ್ಮಾಂತರೀಯ ಅನುಭವಗಳು ಕೆಲಸಮಾಡುವ ಬಗೆಯನ್ನೂ ಗಮನಿಸದೆ ಬಿಟ್ಟಿಲ್ಲ.  ಇದನ್ನೆಲ್ಲಾ ಕರಾರುವಾಕ್ಕಾಗಿ ತಿಳಿದು ತಿಳಿಸಿಕೊಡುವ ವಿಶೇಷಜ್ಞರು ಇಂದು ಅಲಭ್ಯರಾಗಿದ್ದಾರೆಂಬುದು, ಇಂದಿನವರ ಸಾಧನೆಯು ಸಾಲದೆಂಬುದನ್ನು ಹೇಳುತ್ತದೆ, ಅಷ್ಟೆ; ವಿದ್ಯೆಯ ಪ್ರೌಢಿಮೆಯನ್ನೇ ಅದು ಅಲ್ಲಗಳೆಯಲಾರದು.

ಒಂದು ವಿದ್ಯೆ ಅಥವಾ ಶಾಸ್ತ್ರದ ಎಷ್ಟೋ ಅಂಶಗಳು ಪ್ರಾಚುರ್ಯಪಡೆದು, ಕಾವ್ಯಗಳಲ್ಲಿ ಸಹ ಕೆಲವೊಮ್ಮೆ ಪ್ರತಿಫಲಿತವಾಗುವುದುಂಟು. ಸ್ವಪ್ನಕ್ಕೆ ಸಂಬಂಧಿಸಿದಂತೆ ಜನ್ಮಾಂತರದ ವಿಷಯವೊಂದು ತೋರಿಗೊಳ್ಳುವ ಒಂದೆರಡು ಶ್ಲೋಕಗಳು ಲೀಲಾಶುಕನ ಶ್ರೀಕೃಷ್ಣಕರ್ಣಾಮೃತದಲ್ಲಿವೆ. ಅಂತಹೊಂದು ಸಂನಿವೇಶವಿಲ್ಲಿದೆ.

ಕೃಷ್ಣನಿನ್ನೂ ಶಿಶು; ಆದರೆ ಮಾತು ಕಲಿತಿರುವ ಶಿಶು. ಮಕ್ಕಳು ಕೆಲವೊಮ್ಮೆ ಕನಸಿನಲ್ಲಿ ಕನವರಿಸಿಕೊಳ್ಳುವುದುಂಟಷ್ಟೆ. ಹಾಗಿಲ್ಲಿ ಈ ಶಿಶುವು ಪೂರ್ವ-ಜನ್ಮದ ಪ್ರಸಂಗವೊಂದನ್ನು ನೆನಪಿಸಿಕೊಂಡುದನ್ನು ಕವಿಯು ನಿರೂಪಿಸಿದ್ದಾನೆ.

ಶಿವನಾಗಲಿ ಬ್ರಹ್ಮನಾಗಲಿ ಕೃಷ್ಣನ - ಎಂದರೆ ಭಗವಂತನಾದ ವಿಷ್ಣುವಿನ - ಸ್ನೇಹಿತರೇ ಅಲ್ಲವೆ? ಈ ಮೂವರೂ ಸೇರಿ ಸಹಕರಿಸಿ ತಾನೆ ಸೃಷ್ಟಿ-ಸ್ಥಿತಿ-ಲಯಗಳು? ಹಾಗೆಯೇ ಷಣ್ಮುಖನೋ ಇಂದ್ರನೋ ಕುಬೇರನೋ ವಿಷ್ಣುವಿನ ವಿಷಯದಲ್ಲಿ ಭಕ್ತಿ-ಗೌರವಗಳನ್ನು ಹೊಂದಿರುವವರೇ ಅಲ್ಲವೇ? ಅವರೆಲ್ಲರ ಸ್ಮರಣೆ, ಪ್ರಾಯಃ ಅವರೆಲ್ಲರೊಂದಿಗೆ ಕಲೆತು ಅದೇನೋ ಸಂಭಾಷಣೆ ಮಾಡಿದ ನೆನಪು, ಕೃಷ್ಣನನ್ನು ಕನಸಿನಲ್ಲಿ ಕಾಡಿದೆ; ಕಂಡದ್ದೇ ಕನವರಿಕೆಯಾಗಿ ಮೂಡಿದೆ.

ಕನಸಿನಲ್ಲಿ ಅವರೊಡನೆ ಮಾತನಾಡಿದ್ದೇನು? ಅವರೆಲ್ಲರಿಗೂ ಸ್ವಾಗತಮಾಡಿ ಕುಶಲವನ್ನು ವಿಚಾರಿಸಿದುದೆಷ್ಟೋ ಅಷ್ಟೆ. ಅಷ್ಟರೊಳಗೆ ಕನಸೇ ಮುಗಿದಿರುವಂತಿದೆ, ಮಾತೂ ಕೊನೆಗೊಂಡಿದೆ.

ಯಾವ ಮಾತುಗಳನ್ನಾಡಿದ, ಕೃಷ್ಣ? "ಶಂಭುವೇ, ಸ್ವಾಗತ" - ಎಂದ. "ಪದ್ಮಾಸನನೇ, ಇತ್ತ ಎಡಗಡೆ ಕುಳಿತುಕೊಳ್ಳುವುದಾಗಲಿ" - ಎಂದ. ಪದ್ಮಾಸನನೆಂದರೆ ಸೃಷ್ಟಿಕರ್ತನಾದ ಬ್ರಹ್ಮಾ. ಇನ್ನು ಸುಬ್ರಹ್ಮಣ್ಯನನ್ನು ಕುರಿತು ಕುಶಲ ಪ್ರಶ್ನೆ: "ಕ್ರೌಂಚಾರಿಯೇ, ಕುಶಲವೇ?" - ಎಂದು. ಕ್ರೌಂಚವೆಂಬ ಪರ್ವತವನ್ನು ಸೀಳಿದುದರಿಂದ ಸ್ಕಂದನಿಗೆ ಕ್ರೌಂಚಾರಿಯೆಂಬ ನಾಮಧೇಯವೂ ಉಂಟು. ಇಂದ್ರನನ್ನು ಕುರಿತು, "ಸುರ-ಪತಿಯೇ, ಕುಶಲವೇ? - ಎಂದು ಕೇಳಿದ. ಅಸುರರ ಬಾಧೆಯು ಆಗಾಗ ಬರುತ್ತಿದ್ದು, ಇಂದ್ರನೊಂದಿಷ್ಟು ಕಂಗೆಡುತ್ತಿರುವವನಲ್ಲವೇ? ಅದಕ್ಕೇ ಈ ಪ್ರಶ್ನೆ. ಇನ್ನು ಕುಬೇರ. ಆತನ ವ್ಯವಹಾರ ಶಿವನೊಂದಿಗೇ ಹೆಚ್ಚೆಂದು ತೋರುತ್ತದೆ. (ಎಂದೇ ಆತನಿಗೆ ತ್ರ್ಯಂಬಕ-ಸಖ ಎಂಬ ಹೆಸರೇ ಇದೆ.) ಹೀಗಾಗಿ, ಆತನು ಮಿಕ್ಕವರು ಬರುತ್ತಿರುವಷ್ಟು ಬಾರಿ ಬರದ ಕಾರಣ, ಆತನನ್ನು "ಏನು ಕುಬೇರಾ, (ಬಹಳ ಕಾಲದಿಂದ) ಕಂಡೇ ಇಲ್ಲವಲ್ಲ?" ಎಂದ. ವಿತ್ತಕ್ಕೆ, ಎಂದರೆ ಧನಕ್ಕೆ, ಒಡೆಯನಾದ್ದರಿಂದ ಕುಬೇರನನ್ನು ವಿತ್ತೇಶನೆನ್ನುವುದು.

ಮಧು ಮತ್ತೆ ಕೈಟಭ - ಎಂದು ಇಬ್ಬರು ಅಸುರರು. ವಿಷ್ಣುವು ಅವರನ್ನು ಸಂಹಾರಮಾಡಿದನಾದ್ದರಿಂದ ಆತನಿಗೆ ಮಧುಸೂದನ, ಕೈಟಭಾರಿ - ಎಂದೆಲ್ಲ ಹೆಸರಿದೆ. ಕೈಟಭನನ್ನು ಸೋಲಿಸಿದವನು ಕೈಟಭ-ಜಿತ್. ಈ ಪದವನ್ನೇ ಕೃಷ್ಣನಿಗೆ ಬಳಸಿದೆ, ಈ ಶ್ಲೋಕದಲ್ಲಿ.

ಈ ಕೈಟಭಾರಿಯು ಕನಸಿನಲ್ಲಿ ಹಾಗೆಲ್ಲಾ ಕನವರಿಸಿದುದು ಆತನಿಗೇನೋ ಸಹಜವಾಗಿರಬಹುದು. ಆದರೆ ತಾಯಿ ಯಶೋದೆಯ ಕಥೆಯೇನು? ಅವಳಿಗೇನು ಗೊತ್ತು, ಶ್ರೀಕೃಷ್ಣನ ಪೂರ್ವಜನ್ಮದ ವೃತ್ತಾಂತಗಳು?

ಎಂದೇ ಅವಳು ಗಾಬರಿಗೊಂಡಳು, ಕೃಷ್ಣನ ಮಾತುಗಳನ್ನು ಕೇಳಿ. "ಮಗುವೇ, ಅದೇನೇನೋ ಬಡಬಡಿಸುತ್ತಿರುವೆಯಲ್ಲಾ!" ಎಂದು ಆತಂಕಗೊಳ್ಳುತ್ತಾ ಧೂಧೂಕಾರವನ್ನು ಮಾಡಿದಳಂತೆ, ಆಕೆ!

ಏನು "ಧೂಧೂಕಾರ"ವೆಂದರೆ? "ಧೂ" "ಧೂ" ಎಂದು ಹೇಳುವುದೇ ಧೂಧೂಕಾರ. ನಮ್ಮ ಮಗುವಿಗೆ ಅದೇನೋ ಕೆಟ್ಟಕನಸು ಬಂದಿರಬೇಕೆಂದೋ ದೃಷ್ಟಿಯಾಗಿದೆಯೆಂದೋ ಭಾವಿಸಿದಾಗ, ನಾವು ಕೆಲವು ಉದ್ಗಾರಗಳನ್ನೋ ಆಚರಣೆಗಳನ್ನೋ ಮಾಡುವುದುಂಟಲ್ಲವೇ? ಹಂಚಿಕಡ್ಡಿಯನ್ನು ಉರಿಸಿ ಅದು ಚಟಪಟಾ - ಎಂದು ಹೆಚ್ಚಾಗಿ ಸಿಡಿದರೆ "ಆಹಾ, ಅದೆಷ್ಟೊಂದು ದೃಷ್ಟಿಯಾಗಿತ್ತು!" - ಎಂದುಕೊಳ್ಳುತ್ತೇವಲ್ಲವೆ? ಹಾಗೆಯೇ ಈ ಧೂಧೂಕಾರವೂ!


ಬರಬಾರದ ಮಾತೇನಾದರೂ ಬಾಯಲ್ಲಿ ಬಂದೇಬಿಟ್ಟರೆ, ಒಡನೆಯೇ ಬರುವ/ಬರಬೇಕಾದ ಮಾತೆಂದರೆ – ಎಂದರೆ ನಮ್ಮ ಭಾಷೆಯು ಪಾಶ್ಚಾತ್ತ್ಯ-ಸಂಪರ್ಕದಿಂದಾಗಿ ಕುಲಗೆಡುವ ಮುನ್ನ ಸಹಜವಾಗಿಯೇ ಬರುತ್ತಿದ್ದ ಮಾತೆಂದರೆ -  "ಶಾಂತಂ ಪಾಪಮ್!" "ಶಾಂತಂ ಪಾಪಮ್!" – ಎಂಬುದು. ಏನು ಹಾಗೆಂದರೆ? ಕೆಟ್ಟದ್ದನ್ನು ಹೇಳಿಬಿಟ್ಟಿದ್ದರಿಂದಾಗಿ ಪಾಪವಂಟುವುದಲ್ಲವೇ? ಆ ಪಾಪವು ಶಮನಹೊಂದಲಿ! – ಎಂದು ಹಾರೈಸುವ ಮಾತೇ "ಶಾಂತಂ ಪಾಪಮ್"; (ಇದೇ ಅರ್ಥದಲ್ಲೇ "ಅಬ್ರಹ್ಮಣ್ಯಂ" ಎಂಬ ಪ್ರಯೋಗವೂ ಇದೆ.)

ಕನ್ನಡದಲ್ಲಿ ಎರಡೆರಡು ಬಾರಿ  "ಬಿಡ್ತೂ ಅನ್ನು!" "ಬಿಡ್ತೂ ಅನ್ನು!" – ಎಂದು ಹೇಳುತ್ತೇವಲ್ಲವೇ?  ಏನಿದು? ಸಂಸ್ಕೃತದಲ್ಲಿ ಧೂನನ ಎಂದರೆ ಕೊಡವಿಕೊಳ್ಳುವುದು. ಧೂತ ಎಂದರೆ ಒದರಿರುವುದು. ಧೂ-ಧೂ ಎಂದು ಎರಡು ಬಾರಿ ಹೇಳುವುದೂ ಪಾಪವನ್ನು ಒದರಿಕೊಳ್ಳುವ ಪರಿಯೇ; ಪಾಪವು ಬಿಟ್ಟಿತು - ಎಂದು ಬಗೆಯುವ ಬಗೆಯೇ.

ಕೃಷ್ಣನಿಗೆ ರಕ್ಷೆಯಾಗಲೆಂದು ಯಶೋದೆಯ ಬಾಯಿಂದ ಬಂದಿತಲ್ಲವೇ ಧೂಧೂಕಾರ? ಆ ಧೂಧೂಕೃತವು ನಮ್ಮನ್ನು ಪೊರೆಯಲಿ - ಎನ್ನುತ್ತಾನೆ, ಲೀಲಾಶುಕ!

ಚಿಕ್ಕಶಿಶುವಾದರೂ ನಮ್ಮ ಪಾಲಿಗೆ ಕೃಷ್ಣನು ಸಾಕ್ಷಾದ್ ಭಗವಂತನೇ; ಭಗವಂತನೇ ಆದರೂ ಯಶೋದೆಯ ಪಾಲಿಗೆ ಆತನು ಮುದ್ದಿನ ಮಗುವೇ: ಕಣ್ಣಲ್ಲಿ ಕಣ್ಣಿಟ್ಟು ಕಾಪಿಟ್ಟುಕೊಳ್ಳಬೇಕಾದ ಕಣ್ಮಣಿ ಕೂಸೇ ಕೃಷ್ಣ!

ಕೃಷ್ಣನ ಜೀವನದ ಅದೆಷ್ಟು ಘಟ್ಟಗಳ ಗುಟ್ಟಾದ ಫೋಟೋಗಳನ್ನು ಹೀಗೆ ಸೆರೆಹಿಡಿದಿಟ್ಟಿದ್ದನೋ ಲೀಲಾಶುಕ!

ಶ್ಲೋಕವಿದು:

"ಶಂಭೋ! ಸ್ವಾಗತಮ್" 

"ಆಸ್ಯತಾಮ್, ಇತ ಇತೋ ವಾಮೇನ ಪದ್ಮಾಸನ!"/

"ಕ್ರೌಂಚಾರೇ, ಕುಶಲಂ?" 

"ಸುಖಂ ಸುರಪತೇ?" 

"ವಿತ್ತೇಶ! ನೋ ದೃಶ್ಯಸೇ?" |

ಇತ್ಥಂ ಸ್ವಪ್ನ-ಗತಸ್ಯ ಕೈಟಭಜಿತಃ ಶ್ರುತ್ವಾ ಯಶೋದಾ ಗಿರಃ/

"ಕಿಂ ಕಿಂ ಬಾಲಕ ಜಲ್ಪಸೀ!"ತಿ ರಚಿತಂ ಧೂಧೂಕೃತಂ ಪಾತು ನಃ ||

ಸೂಚನೆ : 27/10/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.