ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಕೃಷ್ಣನ ಲೀಲಾಮಯವಾದ ಜೀವನದಲ್ಲಿ ಯಾವುದೋ ಒಂದು ಸಣ್ಣ ಘಟನೆಯನ್ನು ಹೇಳಿದಂತಾಗುವುದಷ್ಟೆ, ಒಂದು ಪುಟ್ಟ ಶ್ಲೋಕದಲ್ಲಿ? ಇಷ್ಟರಿಂದಲೇ ಏನಾದೀತು? - ಎಂಬ ಪ್ರಶ್ನೆ ಬರಬಹುದಲ್ಲವೇ? ಅದಕ್ಕೆ ತಕ್ಕ ಉತ್ತರವೇ ಇದೆ, ಪ್ರಕೃತಶ್ಲೋಕದಲ್ಲಿ. ನಮ್ಮ ಜೀವನವು ಹೇಗಿದೆಯೆಂದು ಕೇಳಿಕೊಂಡರೆ ಉತ್ತರ ದೊರೆಯುತ್ತದೆ!
ಏನು ಹಾಗೆಂದರೆ? ನಮ್ಮ ಜೀವನವೇ ಒಂದು ಪ್ರವಾಹವಲ್ಲವೆ? ಹೇಗೆ? ಅಲೆಅಲೆಯಾಗಿ ಬರುತ್ತವೆ, ಬಾಲ್ಯ-ಯೌವನ-ವಾರ್ಧಕ್ಯಗಳು – ಎಲ್ಲರ ಜೀವನದಲ್ಲಿಯೂ. ಈ ತರಂಗಗಳ ಪ್ರವಾಹವನ್ನಲ್ಲ, ಲೀಲಾಶುಕನು ಹೇಳುತ್ತಿರುವುದು: ನಮ್ಮ ಜನ್ಮ-ಜನ್ಮಾಂತರಗಳ ಪ್ರವಾಹವನ್ನು!
ನಮ್ಮ ಆಯುಸ್ಸು ಎಷ್ಟು? "ಶತಾಯುರ್ ವೈ ಪುರುಷಃ" - ನೂರು ವರ್ಷಗಳು. ಇದನ್ನು ಪುರುಷಾಯುಷ ಎನ್ನುತ್ತಾರೆ. (ಪುರುಷ ಎಂದರೆ ಗಂಡಸು ಎಂದರ್ಥವಲ್ಲ, ಇಲ್ಲಿ. ಪುರುಷಾರ್ಥ ಎನ್ನುವಾಗ ಹೇಗೋ ಹಾಗೆಯೇ: ಪುರುಷ ಎಂದರೆ ಜೀವ, ಮನುಷ್ಯ). ಆದ್ದರಿಂದ ಪುರುಷಾಯುಷವೆಂದರೆ ನಮ್ಮ ಒಂದು ಜೀವ-ಮಾನ - ಎಂದೇ ಅರ್ಥ.
ನಮ್ಮ ದೃಷ್ಟಿ ಸಂಕುಚಿತವಾದಾಗ ನಮಗೆ ಗೋಚರವಾಗುವುದು ಒಂದೇ ಆಯುರ್ಮಾನ. ಆದರೆ ವಿಶಾಲ-ದೃಷ್ಟಿಯುಳ್ಳವರಿಗೆ ಹಲವು ಜನ್ಮಗಳ ಲೆಕ್ಕವೇ ಸಿಕ್ಕೀತು: ನಾವು ಹುಟ್ಟುವುದಕ್ಕೆ ಮುಂಚೆ ಅದೆಷ್ಟು ಜನ್ಮಗಳಾದುವೋ? ನಮ್ಮ ಮರಣವಾದ ಮೇಲೆ ಅದೆಷ್ಟು ಜನ್ಮಗಳಿನ್ನೂ ಬಾಕಿಯಿದೆಯೋ? ನಮ್ಮ ಜೀವನವು ಚೆನ್ನಾಗಬೇಕೆಂದರೆ ನಮ್ಮ ದೃಷ್ಟಿಯು ವಿಶಾಲವಾಗಿರಬೇಕು.
ಅದಕ್ಕೇ ಲೀಲಾಶುಕ ಹೇಳುವುದು – ನಮ್ಮ ಪುರುಷಾಯುಷ-ಪ್ರವಾಹಗಳಿವೆಯಲ್ಲಾ, ಅವ(ಷ್ಟರ)ಲ್ಲಿ ಒಂದು ಕ್ಷಣದಷ್ಟಾದರೂ ಸರಿಯಾಗಿ ವಿನಿಯೋಗವಾದಲ್ಲಿ, ಅದನ್ನೇ ಗಣ್ಯವೆಂದು ನಾನು ಭಾವಿಸುತ್ತೇನೆ - ಎಂದು. "ಸರಿಯಾಗಿ ವಿನಿಯೋಗವಾಗುವುದು" ಎಂದರೇನು? ಆ ನೀಲ-ಬಾಲನ ನಿಜ-ಚರಿತ್ರವನ್ನು ಯಾವುದೇ ಬಗೆಯಿಂದಲಾದರೂ ಒಂದಿಷ್ಟಾದರೂ ಸ್ಮರಿಸುವುದು.
ನೀಲ-ಬಾಲನೆಂದರೆ ಮತ್ತಾರು, ನಮ್ಮ ಕೃಷ್ಣನೇ. ಆತನ ನಿಜ-ಚರಿತ್ರವೆಂದರೆ ಆತನದೇ ಜೀವನದ ಘಟಿತಗಳು. ಯಾವುವವು? ಕೃಷ್ಣನ ಹುಡುಗಾಟದ ದಿನಗಳನ್ನು ಬಿಟ್ಟು ಆತನು ಗೀತೋಪದೇಶ ಮಾಡುವಷ್ಟು "ಬೆಳೆದನಲ್ಲವೇ"? ಆವಾಗಿನದು, ಅಥವಾ ಆಮೇಲಿನದು - ಎಂದೆಲ್ಲಾ ಭ್ರಮಿಸಬೇಡಿ. ಏಕೆ? ಕೃಷ್ಣ-ಚರಿತವೆಂಬುದು ಬುದ್ಧ-ಚರಿತದಂತಲ್ಲ.
ಬುದ್ಧನು ಚಿಕ್ಕಂದಿನಲ್ಲಿ ಸಾವನ್ನೇ ಕಂಡಿರಲಿಲ್ಲ, ರೋಗದ ಬಗ್ಗೆ ಕೇಳಿರಲಿಲ್ಲ, ವಾರ್ಧಕ್ಯದ ಬಗ್ಗೆ ತಿಳಿದಿರಲಿಲ್ಲ. ಇವನ್ನೆಲ್ಲ ಒಂದೊಂದಾಗಿ ಕಂಡು, ಆಮೇಲೆ ಜಿಜ್ಞಾಸೆ ಬೆಳೆದು, ತಪಸ್ಸು ಮಾಡಿ, ಸಾಧನೆಗೈದು, ಸಿದ್ಧಿಯನ್ನು ಪಡೆದನಲ್ಲವೇ? ಆದರೆ ರಾಮನ ಕಥೆಯಾಗಲಿ ಕೃಷ್ಣನ ಕಥೆಯಾಗಲಿ, ಈ ಬಗೆಯ ಯಾವುದೇ ಸಂನಿವೇಶವೂ ದೊರೆಯದು. ರಾಮನಿನ್ನೂ ಬಾಲ್ಯದಲ್ಲಿದ್ದಾಗಲೇ ತಾಟಕೆಯನ್ನು ಸಂಹಾರ ಮಾಡಿದ; ಕೃಷ್ಣನು ಎಳೇ ಮಗುವಾಗಿದ್ದಾಗಲೇ ಪೂತನೆಯ ಸಂಹಾರವನ್ನು ಮಾಡಿದ. ಎಂದರೆ ಅಧರ್ಮಕ್ಕೆ ಪ್ರಹಾರವೆಸಗುತ್ತಲೇ ಜೀವನಾರಂಭ!
ತಾಟಕೆಯು ಬರುವ ಹೊತ್ತಿಗಾಗಲೇ ಶ್ರೀರಾಮನು ಬಿಲ್ವಿದ್ಯೆಯನ್ನು ಚೆನ್ನಾಗಿ ಕಲಿತಿರುವಷ್ಟು ದೊಡ್ಡವನಾಗಿದ್ದ; ತಾಟಕೆಯಾದರೂ ಯಜ್ಞವಿಘ್ನವೆಂಬ ದುಷ್ಕಾರ್ಯದಲ್ಲಿಯೇ ಪ್ರಕಟವಾಗಿಯೇ ತೊಡಗಿದ್ದವಳು. ಆಗಲೂ ವಿಶ್ವಾಮಿತ್ರರು ಪ್ರೇರಿಸಬೇಕಾಯಿತು. ಆದರೆ ಕೃಷ್ಣನಿನ್ನೂ ಪಾಲ್ಗೂಸು, ಪೂತನೆಯು ಬಂದಾಗ. ಅವಳಾದರೂ ಸುಂದರ-ನಾರಿಯಾಗಿ ಬಂದವಳು! ಪ್ರೀತಿಯುಕ್ಕಿ ಶಿಶುವಿಗೆ ಹಾಲ್ಕುಡಿಸಲೆಂಬಂತೆ ಬಂದವಳು. ಪ್ರೀತಿಯ ಸೋಗಿನಲ್ಲಿ ಬಂದಿತ್ತು, ಸಲ್ಲದ ದ್ವೇಷ; ಕೊಲ್ಲುವ ರೋಷ!
ಸುಂದರಿಯ ರೂಪದಲ್ಲಿ ರಕ್ಕಸಿಯೇ ವಕ್ಕರಿಸಿದ್ದಳು. ಧರ್ಮದ ಸುಂದರ-ಸೋಗಿನಲ್ಲಿ ಬರುವ ಆಧರ್ಮದ ಕರಾಳ-ಸ್ವರೂಪವು ಎಳಸಿನ ಕೃಷ್ಣನಿಗೂ ಅಗೋಚರವಾಗೇನೂ ಉಳಿದಿರಲಿಲ್ಲ. ಇವುಗಳೆಲ್ಲ ಈ ನೀಲ-ಬಾಲನ ನಿಜ-ಚರಿತ್ರಗಳೇ. ನಿಜವೆಂದರೆ ಆತನದೇ, ಆತನ ವಿಲಕ್ಷಣ-ಚರಿತ್ರಗಳೇ! ನಿಜವೆಂದರೆ ಕನ್ನಡದಲ್ಲಿಸುಳ್ಳಲ್ಲದ್ದು; ಸಂಸ್ಕೃತದಲ್ಲಿ "ತನ್ನ" ಎಂದರ್ಥ.
ಶ್ರೀಕೃಷ್ಣನ ಜೀವಿತ-ಕಾಲದ ಒಂದೊಂದು ಪುಟ್ಟ ಘಟನೆಗೂ ಕಥಾ-ದೃಷ್ಟಿಯಿಂದ ಮಹತ್ತ್ವವುಂಟು; ಅದನ್ನೂ ಮೀರಿಸಿದ ಗುಟ್ಟುಂಟು: ತಾತ್ತ್ವಿಕವಾದ ನೆಲೆಗಟ್ಟುಂಟು. ಅವು ಕೃಷ್ಣನಿಗೇ ವಿಶಿಷ್ಟವಾದವು. ಎಂದೇ ಅವನ್ನು ಆತನ ನಿಜ-ಚರಿತ್ರವೆಂದಿರುವುದು.
ಯಾವುದೇ ಬಗೆಯಲ್ಲಾಗಲಿ ಆತನ ಚರಿತ್ರವನ್ನು ನಾವು ಭಾವಿಸುವುದಾದಲ್ಲಿ, ಅದನ್ನು ಆಸ್ವಾದಿಸುವುದಾದಲ್ಲಿ, ಆ ಕ್ಷಣವೇ ಗಣ್ಯ - ಎನ್ನುತ್ತಾನೆ, ಲೀಲಾಶುಕ. ನ್ಯಾಯವಾಗಿ ಒಂದೊಂದು ಕಥೆಯನ್ನೂ ಅದರದರ ತತ್ತ್ವದ ವಿಮರ್ಶೆಯೊಂದಿಗೆ ಆಸ್ವಾದಿಸಬೇಕು; ಆಗಲೇ ಪೂರ್ಣ-ಫಲ-ಪ್ರಾಪ್ತಿಯಾಗುವುದು - ಎಂಬುದು ಸತ್ಯವೇ. ಆದರೂ, ಅದನ್ನು ಕೇವಲ-ಕಥೆಯೆಂದೋ, ಆದ್ಯಂತವಾಗಿ ತತ್ತ್ವವೆಂದೋ, ಅದೇನೋ ರಸಮಯ-ಸಂನಿವೇಶವೆಂದೋ - ಅದಾವುದೇ ಬಗೆಯಲ್ಲಿ ಆಂಶಿಕವಾಗಿ ಅಸ್ವಾದನೆ ಮಾಡಿದರೂ, ಮುಂದಕ್ಕೆ ಆತನ ಕೃಪೆಯೇ ಆವಶ್ಯಕವಾದ ಪೂರ್ಣತೆಯನ್ನು ತಂದುಕೊಡುವುದು.
ಹೀಗೆ ಶ್ರೀಕೃಷ್ಣ-ಜೀವಿತದ ಒಂದೊಂದು ಪ್ರಸಂಗವೂ ತಾರಕವಾದುದೆಂಬುದನ್ನು ಮನಗಾಣಬೇಕು.
ಶ್ಲೋಕ ಹೀಗಿದೆ:
ಏಷು ಪ್ರವಾಹೇಷು ಸ ಏವ ಮನ್ಯೇ
ಕ್ಷಣೋಽಪಿ ಗಣ್ಯಃ ಪುರುಷಾಯುಷೇಷು |
ಆಸ್ವಾದ್ಯತೇ ಯತ್ರ ಕಯಾಽಪಿ ವೃತ್ತ್ಯಾ
ನೀಲಸ್ಯ ಬಾಲಸ್ಯ ನಿಜಂ ಚರಿತ್ರಮ್ ||
ಮತ್ತೊಂದು ಪದ್ಯ.
ದೇವನೇ, ನಿನ್ನನ್ನು ಬೇಡಿಕೊಳ್ಳುತ್ತೇನೆ - ಎನ್ನುತ್ತಾನೆ ಲೀಲಾಶುಕ.
ಬೇಡಿಕೊಳ್ಳುವುದರಲ್ಲಿ ಉತ್ಕಟತೆಯಿದ್ದಾಗ, ಅಂಜಲಿ-ಬಂಧದೊಡನೆ, ಎಂದರೆ ಕೈಜೋಡಿಸಿ, ಬೇಡಿಕೊಳ್ಳುತ್ತೇವೆ; ಅತ್ಯುತ್ಕಟತೆಯಿದ್ದಾಗ ಮೂರ್ಧದ ಮೇಲೇ, ಎಂದರೆ ತಲೆಯ ಮೇಲೇ, ಅಂಜಲಿ-ಬಂಧ! ಹಾಗೆ ಮೂರ್ಧಾಂಜಲಿಯೊಂದಿಗೆ ಕೇಳಿಕೊಳ್ಳುವುದಾಗಿದೆ ಇಲ್ಲಿ.
ಅಷ್ಟೇ ಅಲ್ಲ. ದಟ್ಟ-ದಾರಿದ್ರ್ಯ ಎನ್ನುವಂತೆ ದಟ್ಟ-ದೈನ್ಯ ಎಂಬುದೂ ಉಂಟು. ನೀರಂಧ್ರ-ದೈನ್ಯವೆಂದರೂ ಅದೇ: ಒಂದು ಸಣ್ಣರಂಧ್ರಕ್ಕೂ ಆಸ್ಪದವಿಲ್ಲದಂತೆ ಒತ್ತಾಗಿರುವುದೇ ನೀರಂಧ್ರತೆ. ಅದುವೇ ಉನ್ನತವಾದಾಗ, ಎಂದರೆ ದೀನತೆಯು ಒತ್ತಾಗಿ ಒತ್ತರಿಸಿಕೊಂಡು ತಾರಕಕ್ಕೇರಿದಾಗ, ಬೇಡಿಕೊಳ್ಳುವಿಕೆಯೆಂಬುದು ಮನದೊಳಗಣ ಅನಿಸಿಕೆಯಾಗುಳಿಯದೆ ಮುಕ್ತ-ಕಂಠವಾಗಿ ಹರಿದು ಬಂದುಬಿಡುವುದು.
ತಾನು ಪ್ರಾರ್ಥಿಸುವ ಬಗೆಯನ್ನು ಹಾಗೂ ಅದರ ತೀವ್ರತೆಯನ್ನು, ಶ್ಲೋಕದ ಪೂರ್ವಾರ್ಧದಲ್ಲಿ ಹೇಳಿ, ತಾನು ಮಾಡುತ್ತಿರುವ ಪ್ರಾರ್ಥನೆಯೇನೆಂಬುದನ್ನು ಶ್ಲೋಕದ ಉತ್ತರಾರ್ಧದಲ್ಲಿ ಕವಿಯು ಹೇಳುತ್ತಾನೆ.
ಏನದು ಆತನ ಪ್ರಾರ್ಥನೆ? ದಯಾ-ಸಮುದ್ರನಾದ ದೇವನೇ, ನಿನ್ನ ಕಟಾಕ್ಷವನ್ನೊಮ್ಮೆ ನನ್ನ ಮೇಲೆ ಹರಿಸು - ಎಂಬುದು.
ಹೇಗೆ ಹರಿಸಬೇಕು? ದಾಕ್ಷಿಣ್ಯವೆಂದರೆ ಔದಾರ್ಯ; ಪ್ರಿಯನನ್ನೋ ಪ್ರಿಯೆಯನ್ನೋ ಅನುನಯಗೊಳಿಸುವುದನ್ನೇ ದಾಕ್ಷಿಣ್ಯವೆನ್ನುವುದು. ದಾಕ್ಷಿಣ್ಯವನ್ನೆಲ್ಲಾ ನನ್ನ ಮೇಲೆ ಹರಿಸು - ಎಂದು ಕೇಳಿಕೊಳ್ಳುತ್ತಿಲ್ಲ; ದಾಕ್ಷಿಣ್ಯ-ಲೇಶವಷ್ಟೇ ಸಾಕು. ಲೇಶವೆಂದರೆ ಅಂಶ. ಸಿಂಚನ-ನಿಷಿಂಚನಗಳೆಂದರೆ ಸಿಂಪಡಿಕೆ. ಅದರಿಂದೊಮ್ಮೆ ಸಿಂಪಡಿಸಿದರೂ ಸಾಕು - ಎನ್ನುತ್ತಾನೆ, ಕವಿ.
ಸಮುದ್ರವೆಂದರೆ ದ್ರವ-ರಾಶಿ. ಒಮ್ಮೆ ಸಿಂಪಡಿಸೆಂದರೆ ವ್ಯಯವಾಗುವುದು ಒಂದೆರಡು ಕಣಗಳಷ್ಟೇ. ದಯಾ-ಸಾಗರನಾದವನು ಕುಡಿ-ನೋಟದ ಬಿಂದುವಿನ ಸೇಚನವನ್ನು ಮಾಡಲಾರನೇ?
ಭಾಗ್ಯ-ಶಾಲಿಗಳ ಮೇಲೆ ನಿನ್ನ ಕರುಣಾ-ಪ್ರವಾಹವೇ ಹರಿಯುತ್ತಿರಬಹುದು. ಕೈಗಳನ್ನೆತ್ತಿ ನಾ ಕೇಳಿಕೊಳ್ಳುತ್ತಿರುವುದು ನಿನ್ನ ಕಣ್ಣಂಚಿನ ಕುಡಿನೋಟವೊಂದನ್ನಷ್ಟೇ - ಎನ್ನುತ್ತಾನೆ, ಲೀಲಾಶುಕ. ಬೇಡಿಕೊಳ್ಳುವಾಗಲೂ ಅದಕ್ಕೆ ತಕ್ಕ ಲೆಕ್ಕ-ತರ್ಕಗಳಿದ್ದರೆ ಎಂತಹ ಒಣಕಲೆದೆಯ ಒಡೆಯನೂ ಒಲ್ಲೆನೆನ್ನನಲ್ಲವೇ?
ನಿಬದ್ಧ-ಮೂರ್ಧಾಂಜಲಿರೇಷ ಯಾಚೇ/
ನೀರಂಧ್ರ-ದೈನ್ಯೋನ್ನತ-ಮುಕ್ತ-ಕಂಠಮ್ |
ದಯಾಂಬುಧೇ! ದೇವ! ಭವತ್-ಕಟಾಕ್ಷ-/
-ದಾಕ್ಷಿಣ್ಯ-ಲೇಶೇನ ಸಕೃನ್ನಿಷಿಂಚ ||
ಸೂಚನೆ : 11/10/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.