ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ರೈವತಕೋತ್ಸವವು ಸಂಭ್ರಮದಿಂದ ನೆರವೇರುತ್ತಿದೆಯಷ್ಟೆ. ಬಹಳ ವಿಚಿತ್ರವೂ ಕೌತೂಹಲ-ಭರಿತವೂ ಮಹಾದ್ಭುತವೂ ಆದ ಆ ಉತ್ಸವದಲ್ಲಿ ಪಾರ್ಥನೂ ವಾಸುದೇವನೂ ಜೊತೆಜೊತೆಯಾಗಿಯೇ ಎಲ್ಲೆಡೆ ಸುತ್ತಾಡಿದರು. ಹಾಗೆ ಸುತ್ತಾಡುತ್ತಿದ್ದಾಗ ವಸುದೇವ-ಪುತ್ರಿಯೂ ಸುಂದರಿಯೂ ಅಲಂಕಾರಮಾಡಿಕೊಂಡಿದ್ದವಳೂ ಆದ ಸುಭದ್ರೆಯನ್ನು ಕಂಡರು.
ಅವಳನ್ನು ನೋಡುತ್ತಲೇ ಅರ್ಜುನನಿಗೆ ಅವಳ ಬಗ್ಗೆ ಆಸೆಯುಂಟಾಯಿತು. ಅವಳತ್ತಲೇ ಅರ್ಜುನನ ದೃಷ್ಟಿ ನೆಟ್ಟಿತ್ತು. ಅದನ್ನು ಶ್ರೀಕೃಷ್ಣನು ಗಮನಿಸಿಕೊಂಡನು. ಹಾಸ್ಯಮಾಡುವವನಂತೆ ಅರ್ಜುನನನ್ನು ಕುರಿತು ಅವನು ಹೇಳಿದನು: ಇದೇನು, ವನಚರನ ಮನಸ್ಸು ಕಾಮದಿಂದ ಮಥನಗೊಂಡಿರುವುದಲ್ಲಾ? ಅರ್ಜುನಾ, ಈಕೆ ನನ್ನ ಮತ್ತು ಸಾರಣನ ಸೋದರಿ. ಇವಳ ಹೆಸರು ಸುಭದ್ರಾ. ನನ್ನ ತಂದೆಯ ಪ್ರೀತಿಯ ಮಗಳಿವಳು. ಅವಳನ್ನು ವಿವಾಹವಾಗುವ ಮನಸ್ಸಿದ್ದರೆ ಹೇಳು, ನಾನೇ ತಂದೆಗೆ ಹೇಳುತ್ತೇನೆ" ಎಂದನು.
ಅದಕ್ಕೆ ಅರ್ಜುನನು ಹೇಳಿದನು: ಈಕೆಯು ವಸುದೇವನ ಮಗಳು, ವಾಸುದೇವನ ಸೋದರಿ, ಮೇಲಾಗಿ ರೂಪಸಂಪನ್ನೆ: ಇಂತಹ ಈಕೆ ಯಾರನ್ನು ತಾನೆ ಮೋಹಿಸಳು? ಈ ವಾರ್ಷ್ಣೇಯಿಯು, ಎಂದರೆ ವೃಷ್ಣಿವಂಶದ ಕುಮಾರಿಯು, ನಿನ್ನ ಸೋದರಿಯಾಗಿದ್ದು ನನ್ನ ರಾಣಿಯಾಗುವುದಾದಲ್ಲಿ ನನಗೆ ಸಮಸ್ತ-ಕಲ್ಯಾಣವೂ ಲಭಿಸಿದಂತೆಯೇ ಸರಿ. ಈಕೆಯನ್ನು ಪಡೆಯುವುದು ಹೇಗೆ - ಎಂಬುದನ್ನು ಹೇಳು, ಜನಾರ್ದನ. ಮನುಷ್ಯನಿಂದ ಅದು ಸಾಧ್ಯವಾಗುವುದಾದಲ್ಲಿ ಅದಕ್ಕಾಗಿ ಸರ್ವ-ಪ್ರಯತ್ನವನ್ನೂ ನಾನು ಮಾಡುವೆನು - ಎಂದು.
ಆಗ ವಾಸುದೇವನು ಹೇಳಿದನು: ನರಶ್ರೇಷ್ಠನೇ, ಕ್ಷತ್ರಿಯರಲ್ಲಿ ವಿವಾಹವೆಂದರೆ ಸ್ವಯಂವರವೇ ಸರಿ. ಅದರೆ ಅದರಲ್ಲಿ ಸಂಶಯಕ್ಕೆ ಆಸ್ಪದವಿದೆ. ಏಕೆಂದರೆ ಸ್ತ್ರೀ-ಸ್ವಭಾವವೆಂಬುದೇ ಅನಿಶ್ಚಿತವಾದದ್ದು. ಬಲಾತ್ಕಾರದಿಂದ ಒಯ್ಯುವುದು ಸಹ ಕ್ಷತ್ರಿಯರ ವಿಷಯದಲ್ಲಿ ಪ್ರಶಸ್ತವಾದದ್ದೇ. ಅದು ಶೂರರಿಗೆ ಶೋಭಾವಹ. ಹೀಗೆಂಬುದಾಗಿ ಧರ್ಮಜ್ಞರು ಅರಿತಿರುವರು. ಆದುದರಿಂದ ಅರ್ಜುನನೇ, ನನ್ನ ತಂಗಿಯನ್ನು ಅವಳ ಸ್ವಯಂವರದಲ್ಲಿ ನೀನು ಬಲಾತ್ಕಾರದಿಂದ ಅಪಹರಣ ಮಾಡು. ಸ್ವಯಂವರದಲ್ಲಿ ಇವಳು ಏನನ್ನು ಮಾಡಿಯಾಳೆಂದು ಬಲ್ಲವರಾರು? - ಎಂದನು.
ಆ ಬಳಿಕ, ಇನ್ನು ಮುಂದಕ್ಕೆ ಏನು ಮಾಡಬೇಕೆಂಬುದನ್ನು ಅರ್ಜುನನೂ ಕೃಷ್ಣನೂ ನಿಶ್ಚಯಿಸಿಕೊಂಡರು. ಹಾಗೂ ಇಂದ್ರಪ್ರಸ್ಥದಲ್ಲಿದ್ದ ಧರ್ಮರಾಜನಲ್ಲಿಗೆ ಶೀಘ್ರ-ಗಾಮಿಗಳಾದ ಆಳುಗಳನ್ನು ಕಳುಹಿಸಿದರು. ಅತ್ತ ಯುಧಿಷ್ಠಿರನೂ ಸಹ ಈ ವಿಷಯಕ್ಕೆ ತನ್ನ ಅನುಮತಿಯನ್ನು ಸೂಚಿಸಿದನು.
ಯುಧಿಷ್ಠಿರನ ಆಜ್ಞೆಯು ದೊರೆತ ಬಳಿಕ ಅರ್ಜುನನು ಅರಿತುಕೊಂಡನು: ಕನ್ಯೆಯು - ಎಂದರೆ ಸುಭದ್ರೆಯು - ರೈವತಕ ಪರ್ವತಕ್ಕೆ ಹೋಗಿರುವಳೆಂಬುದಾಗಿ. ತನ್ನ ಇತಿ-ಕೃತ್ಯತೆಯನ್ನು, ಎಂದರೆ ತಾನೇನನ್ನು ಮಾಡಬೇಕೆಂದಿದ್ದೇನೆಂಬುದನ್ನ್ ಕೃಷ್ಣನಿಗೆ ತಿಳಿಸಿದನು. ಆತನ ಅನುಮತಿಯನ್ನು ಪಡೆದುಕೊಂಡನು. ಆತನ ಅಭಿಪ್ರಾಯವನ್ನೂ ಅರಿತುಕೊಂಡವನಾಗಿ ಅಲ್ಲಿಂದ ಹೊರಟುಬಂದನು.
ಬೇಟೆಯ ನೆಪದಲ್ಲಿ ಅರ್ಜುನನು ಹೊರಹೊರಟನು. ಆತನ ಸಿದ್ಧತೆಗಳೇನು! ಚಿನ್ನದ ರಥವನ್ನು ವಿಧ್ಯುಕ್ತವಾಗಿ ಸಜ್ಜಾಗಿಸಿದೆ. ಶೈಬ್ಯ, ಸುಗ್ರೀವಗಳೆಂಬ ಕುದುರೆಗಳನ್ನು ರಥಕ್ಕೆ ಜೋಡಿಸಿದೆ. ಕಿರುಗಂಟೆಗಳನ್ನು ಅವಕ್ಕೆ ಕಟ್ಟ್ತಲಾಗಿದೆ. ರಥದೊಳಗೆ ಸರ್ವಶಸ್ತ್ರಗಳೂ ಇವೆ. ಆ ರಥವು ಮೋಡಗಳ ಗುಡುಗಿನ ಹಾಗೆ ಧ್ವನಿ ಮಾಡುವಂತಹುದು. ಜ್ವಲಿಸುವ ಅಗ್ನಿಯ ಹಾಗೆ ಪ್ರಕಾಶಿಸುವಂತಹುದು. ಅಂತೂ ಶತ್ರುಗಳ ಹರ್ಷಕ್ಕೆ ಹೊಡೆತಕೊಡುವಂತಹುದು.
ಇವಲ್ಲದೆ ಅರ್ಜುನನು ಸಂನದ್ಧನೂ ಆಗಿದ್ದನು. ಕವಚಿಯೂ ಖಡ್ಗಿಯೂ ಆಗಿದ್ದನು. ಎಂದರೆ ಕವಚವನ್ನೂ ಖಡ್ಗವನ್ನೂ ಧರಿಸಿದ್ದನು.