Monday, October 7, 2024

ವ್ಯಾಸ ವೀಕ್ಷಿತ 106 ಪ್ರಭಾಸ-ಕ್ಷೇತ್ರದಲ್ಲಿ ಅರ್ಜುನ – ರೈವತಕೋತ್ಸವಾರಂಭ (Vyaasa Vikshita 106 Prabhasa-kshetradalli Arjuna – Raivatakotsavarambha)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಶ್ರೀಕೃಷ್ಣ ಹಾಗೂ ಅರ್ಜುನರ  ಪುನರ್ಮಿಲನವಾಯಿತಷ್ಟೆ.

ಶುಭವಾದ ಶಯನದಲ್ಲಿ ಮಲಗಿದ್ದ, ಆ ಮಹಾಬಾಹುವಾದ ಅರ್ಜುನ. ತಾನು ಕಂಡ ತೀರ್ಥಗಳು, ಕುಂಡಗಳು, ಪರ್ವತಗಳು, ನದಿಗಳು ಹಾಗೂ ವನಗಳು - ಇವುಗಳ ಬಗ್ಗೆ ಆತನು ಶ್ರೀಕೃಷ್ಣನಿಗೆ ಹೇಳಿದನು. ಹೀಗೆ ದೀರ್ಘವಾಗಿ ಮಾತನ್ನಾಡುತ್ತಲಿರುವಾಗಲೇ ಸ್ವರ್ಗ-ಸದೃಶವಾದ ಆ ಶಯ್ಯೆಯ ಮೇಲೆ ಅರ್ಜುನನಿಗೆ ನಿದ್ರೆ ಹತ್ತಿತು.

ಬೆಳಗ್ಗೆಯ ಹೊತ್ತಿಗೆ ಮಧುರ-ಗೀತ, ವೀಣಾ-ಶಬ್ದಗಳು ಹಾಗೂ ಮಂಗಳ-ಸ್ತುತಿಗಳು - ಇವುಗಳ ಧ್ವನಿಯನ್ನು ಕೇಳುತ್ತಲೇ ಆತನು ಎಚ್ಚರಗೊಂಡದ್ದು. ಶಯ್ಯೆಯಿಂದೆದ್ದು, ಆವಶ್ಯಕವಾದ ಕಾರ್ಯಗಳನ್ನು ಪೂರೈಸಿ, ಶ್ರೀಕೃಷ್ಣನಿಂದ ಅಭಿನಂದಿಸಲ್ಪಟ್ಟು, ಕಾಂಚನ-ರಥವನ್ನೇರಿ, ದ್ವಾರಕೆಯತ್ತ ಸಾಗಿದನು.

ಈ ಕುಂತೀ-ಪುತ್ರನಿಗೆ ಸ್ವಾಗತವನ್ನು ಹೇಳಲೆಂದು ಇಡೀ ದ್ವಾರಕೆಯೇ ಅಲಂಕೃತವಾಗಿತ್ತು - ಮನೆಮನೆಯ ತೋಟಗಳ ಪರ್ಯಂತವೂ ಅಲಂಕೃತವಾಗಿತ್ತು. ಕೌಂತೇಯನನ್ನು ಕಾಣಬೇಕೆಂಬ ಹಂಬಲಿಕೆಯಿಂದ ನೂರಾರು ಸಾವಿರಾರು ಸಂಖ್ಯೆಯಲ್ಲಿ ರಾಜ-ಮಾರ್ಗಕ್ಕೆ ಆಗಮಿಸಿದರು, ದ್ವಾರಕಾ-ವಾಸಿಗಳಾದ ಜನರು. ಎಲ್ಲೆಲ್ಲಿ ನಿಂತು ಅರ್ಜುನನನ್ನು ಚೆನ್ನಾಗಿ ನೋಡಲು ಸಾಧ್ಯವಾಗುತ್ತದೋ ಅಲ್ಲೆಲ್ಲಾ ಸಾವಿರಾರು ನೂರಾರು ಸಂಖ್ಯೆಗಳಲ್ಲಿ ನಾರಿಯರು ಮಾತ್ರವಲ್ಲದೆ ಭೋಜ-ವೃಷ್ಣಿ-ಅಂಧಕವಂಶಗಳ ಪುರುಷರೂ ನೆರೆದಿದ್ದರು. ಭೋಜ-ವೃಷ್ಣಿ-ಅಂಧಕ-ವಂಶಗಳ ರಾಜಕುಮಾರರೆಲ್ಲರಿಂದಲೂ ಅರ್ಜುನನಿಗೆ ಸತ್ಕಾರವಾಯಿತು. ಸತ್ಕಾರಹೊಂದಿದ ಅರ್ಜುನನು, ಅವರಲ್ಲಿ ಅಭಿವಾದ್ಯರಾದ ಹಿರಿಯರಿಗೆ, ಎಂದರೆ ಅಭಿವಾದನಕ್ಕೆ ಯೋಗ್ಯರಾದವರಿಗೆ, ಅಭಿವಾದನವನ್ನು ಮಾಡಿದನು. ಹಾಗೂ ಎಲ್ಲರ ಸ್ವಾಗತಕ್ಕೆ ಪಾತ್ರನಾದನು.

ಯದು-ವಂಶದ ರಾಜಕುಮಾರರೆಲ್ಲರೂ ಎಲ್ಲೆಡೆಯಿಂದ ಆತನನ್ನು ಸತ್ಕರಿಸಿದರು. ಅವಕ್ಕೆ ಪ್ರತಿಸ್ಪಂದಿಸುತ್ತಾ ಸಮಾನ-ವಯಸ್ಕರಾದವರೆಲ್ಲರನ್ನೂ ಮತ್ತೆ ಮತ್ತೆ ಆಲಿಂಗಿಸಿಕೊಂಡನು, ಅರ್ಜುನ. ಬಗೆಬಗೆಯ ರತ್ನಗಳಿಂದಲೂ, ಭೋಜ್ಯಗಳಿಂದಲೂ ತುಂಬಿದ್ದ ಶ್ರೀಕೃಷ್ಣನ ಭವ್ಯ-ಭವನದಲ್ಲಿ ಆತನೊಂದಿಗೆ ಹಲವು ರಾತ್ರಿಗಳ ಕಾಲ ವಾಸ ಮಾಡಿದನು.

ಕೆಲದಿನಗಳು ಕಳೆದವು. ಆ ರೈವತಕ-ಪರ್ವತದಲ್ಲಿ ವೃಷ್ಣಿ-ವಂಶ ಹಾಗೂ ಅಂಧಕ-ವಂಶಗಳ ಮಂದಿಯ ಉತ್ಸವವೊಂದು ಜರುಗಿತು. ಆ ಎಡೆಯಲ್ಲಿ ಭೋಜ-ವೃಷ್ಣಿ-ಅಂಧಕ-ವಂಶಗಳ ವೀರರು ಆ ಉತ್ಸವ-ಸಂದರ್ಭದಲ್ಲಿ ಸಹಸ್ರಾರು ಮಂದಿ ಬ್ರಾಹ್ಮಣರಿಗೆ ನಾನಾ-ದಾನಗಳನ್ನು ಕೊಟ್ಟರು. ಆ ಪರ್ವತದ ಸುತ್ತಲೂ ಪ್ರಾಸಾದಗಳಿಂದಲೂ, ಎಂದರೆ ರತ್ನ-ಖಚಿತವಾದ ಭವ್ಯವಾದ ಬಂಗಲೆಗಳಿಂದಲೂ, ಕಲ್ಪ-ವೃಕ್ಷಗಳಿಂದಲೂ ಆ ಪ್ರದೇಶವು ಶೋಭೆಗೊಂಡಿತ್ತು.

ವಾದ್ಯಗಳಲ್ಲಿ ನಿಪುಣರಾದವರು ಅಲ್ಲಿ ನಾನಾ ವಾದ್ಯಗಳನ್ನು ನುಡಿಸಿದರು. ಹಾಗೂ ಗಾಯನರು, ಎಂದರೆ ಹಾಡುವವರು, ಹಾಡುಗಳನ್ನು ಹಾಡಿದರು, ಹಾಗೂ ನರ್ತಕರು ನರ್ತನಗಳನ್ನು ಮಾಡಿದರು. ವೃಷ್ಣಿ-ವಂಶದ ಮಹಾ-ಬಲಶಾಲಿಗಳಾದ ರಾಜಕುಮಾರರೂ ಸಹ, ಸ್ವರ್ಣಾಲಂಕಾರಗಳಿಂದ ಶೋಭಿತವಾದ ವಾಹನಗಳಲ್ಲಿ ಕುಳಿತವರಾಗಿ ಎಲ್ಲೆಡೆ ಸಂಚರಿಸುತ್ತಿದ್ದರು. ತಮ್ಮ ನಾರಿಯರು ಹಾಗೂ ಸೇವಕರುಗಳೊಂದಿಗೆ ನೂರಾರು ಸಾವಿರಾರು ಸಂಖ್ಯೆಯಲ್ಲಿ ಕಾಲ್ನಡಿಗೆಯಲ್ಲಿ ಸಹ ಜನತೆಯು ಬಂದಿತು.

ಆಮೇಲೆ ರೇವತೀಸಹಿತನಾಗಿ ಹರ್ಷೋನ್ಮತ್ತನಾದ ಬಲರಾಮನು ಅಲ್ಲಿಗೆ ಬಂದನು. ಗಂಧರ್ವರು (ಎಂದರೆ ಗಾಯಕರು) ಆತನನ್ನು ಅನುಸರಿಸಿ ಬಂದಿದ್ದರು. ಅಷ್ಟರಲ್ಲೇ ವೃಷ್ಣಿಗಳ ಅರಸೂ ಪ್ರತಾಪ-ಶಾಲಿಯೂ ಆದ ಉಗ್ರಸೇನನೂ, ಗಂಧರ್ವರೊಂದಿಗೂ ಸ್ತ್ರೀ-ಸಹಸ್ರದೊಂದಿಗೂ ಅಲ್ಲಿಗೆ ಆಗಮಿಸಿದನು. ರೌಕ್ಮಿಣೇಯ - ಎಂದರೆ ಪ್ರದ್ಯುಮ್ನ, ಹಾಗೂ ಸಾಂಬ - ಇವರಿಬ್ಬರೂ ದಿವ್ಯವಾದ ಮಾಲೆಗಳನ್ನೂ ದಿವ್ಯವಾದ ವಸ್ತ್ರಗಳನ್ನೂ ಧರಿಸಿದವರಾಗಿ ಹರ್ಷೋದ್ರೇಕದಿಂದ ಅಲ್ಲಿ ದೇವತೆಗಳ ಹಾಗೆ ವಿಹರಿಸಿದರು.

ಅಕ್ರೂರ, ಸಾರಣ, ಗದ, ಮುಂತಾದ ಹಲವು ಅರಸರು ಸ್ತ್ರೀಯರಿಂದಲೂ ಗಾಯಕರಿಂದಲೂ ಸುತ್ತುವರೆಯಲ್ಪಟ್ಟಿದ್ದರು. ರೈವತಕ ಪರ್ವತದ ಉತ್ಸವಕ್ಕೆ ಒಳ್ಳೆಯ ಶೋಭೆಯನ್ನು ತಂದರು.

ಸೂಚನೆ : 6/10/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.