Sunday, August 25, 2024

ಕೃಷ್ಣಕರ್ಣಾಮೃತ - 28 ವ್ರಜನಾರೀ-ಪರಿವೃತವಾದ ಬ್ರಹ್ಮವೆಮ್ಮನು ಪೊರೆಯಲಿ (Krishnakarnamrta -28 Vrajanari-parivritavada Brahmavemmanu Poreyali)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ರಮಣಿಯರಿಂದ ಸುತ್ತುವರಿದ ಶ್ರೀಕೃಷ್ಣನ ರಮಣೀಯತೆಯನ್ನು ಬಣ್ಣಿಸುವ ಒಂದು ಶ್ಲೋಕ ಕೃಷ್ಣಕರ್ಣಾಮೃತದಲ್ಲಿದೆ.

ಕೃಷ್ಣನು ಅಶರಣರಿಗೆ ಶರಣ. ಏನು ಹಾಗೆಂದರೆ? ಶರಣ -ಎಂಬ ಪದಕ್ಕೆ ಎರಡು ಅರ್ಥ: ಒಂದು ಮನೆಯೆಂಬುದು, ಇನ್ನೊಂದು ರಕ್ಷಕ ಎಂಬುದು. ಎರಡೂ ಅನ್ವಯವಾಗುವುದೇ ಕೃಷ್ಣನಿಗೆ. ನೆಲೆಯಿಲ್ಲದವರಿಗೆ ಆತನೇ ನೆಲೆ. ಪರಂಧಾಮನೆಂದು ಕೃಷ್ಣನನ್ನು ಕರೆಯುವುದುಂಟಲ್ಲವೇ? ಧಾಮವೆಂದರೆ ಎಡೆ. ಪ್ರಕೃತಿಯೆಂಬ ವನದಲ್ಲಿ ಸಿಲುಕಿಕೊಂಡವರಿಗೆ, ಎಂದರೆ ಕಾಡುಪಾಲಾದವರಿಗೆ, ಭವ್ಯವಾದ ಭವನವೆಂದರೆ ಆತನೇ. ಪ್ರಕೃತಿಯ ಪಾಶದಲ್ಲಿ ಬಿದ್ದು ನರಳುತ್ತಿರುವ ಜೀವರಿಗೆ ಕಾಪಾಡುವವರು ಮತ್ತಾರೂ ಇಲ್ಲದಿರಲು ರಕ್ಷಿಸಲು ಬಂದವನೇ ಶ್ರೀಕೃಷ್ಣ. ಹೀಗ್ ಅ-ನಿಕೇತನರ ಸು-ನಿಕೇತನ ಕೃಷ್ಣ (ನಿಕೇತನವೆಂದರೆ ಮನೆ). ಅ-ರಕ್ಷಿತರ ಸು-ರಕ್ಷಕ ಕೃಷ್ಣ. ಹೀಗೆ ಎರಡೂ ಅರ್ಥಗಳ ಅನ್ವಯ ಇಲ್ಲಿದೆ.

ರಕ್ಷಕನಾಗಿ ಬಂದವನಾದರೂ ಕ್ರೂರ-ದೃಷ್ಟಿಯವನಾದರೆ ಅದೇನು ಹಿತ? ಕೃಷ್ಣನು ಹಾಗಲ್ಲ. ಆತನು ಕಮಲ-ನೇತ್ರ, ಕಮಲಗಳನ್ನು ಹೋಲುವ ಕಣ್ಣುಳ್ಳವನು. ಕಮಲವೆಂದರೂ ಅದೇನು ಛಳಿಗಾಲದ ಕಮಲವೇ? ಶಿಶಿರದ ಕಮಲವೆಂದರೆ ಬಾಡಿದ ನಲಿನ, ಛಳಿಗೆ ತತ್ತರಿಸಿದ ಅಂಬುಜ, ಮುದುಡಿದ ಪದ್ಮ. ಅಂಬುಜದ ಸೊಗಸು ಕಾಣುವುದು ಶರದೃತುವಿನಲ್ಲಿ. ಶರತ್-ಸಮಯದ ಪಂಕಜವನ್ನೇ ಶಾರದಾಂಭೋಜವೆನ್ನುವುದು. ಶಾರದವೆಂದರೆ ಶರತ್ಕಾಲಕ್ಕೆ ಸಂಬಂಧಪಟ್ಟದ್ದು.

ಕೃಷ್ಣನನ್ನು ನೀಲಮೇಘ-ವರ್ಣನೆನ್ನುತ್ತೇವೆ. ಆತನೀಗ ಧರಿಸಿರುವುದೂ ನೀಲ-ವೇಷವನ್ನೇ. ಆದರೂ ರಮಣೀಯನೇ ಆತ. ಏಕೆ? ಆತ ಧರಿಸಿರುವ ಆ ವೇಷವಾದರೂ ಮಧುರಿಮೆಯಿಂದ ಕೂಡಿದೆ. ಮಧುರವಾಗಿರುವಿಕೆಯನ್ನೇ ಮಧುರಿಮವೆನ್ನುವುದು.

ಆ ಮಧುರ-ಭಾವಕ್ಕೆ ಮಿತಿಯೇ ಇಲ್ಲ. ಮಿತಿಯೆಂದರೂ ಅವಧಿಯೆಂದರೂ ಒಂದೇ. ಎಂದೇ ಆತನ ನೀಲವೇಷದ ಮಾಧುರ್ಯ ನಿರವಧಿಯಾದುದು. ಸುವೇಷ-ಧಾರಣ ಮಾಡಿರುವವರು ಸು-ರಮ್ಯವಾಗಿಯೇ ತೋರುವರು. ಮಧುರ-ವೇಷವು ಮಧುರ-ರೂಪಕ್ಕೆ ಕಳೆಕಟ್ಟುವುದೇ ಸರಿ. ಸುಂದರಾಂಗನ ಸುತ್ತ ಸುಂದರಿಯರು ಸೇರುವುದರಲ್ಲಿ ಅಚ್ಚರಿಯೇನು? ವ್ರಜ-ಯುವತಿಯರು, ಎಂದರೆ ನಂದ-ಗೋಕುಲದ ಸುಂದರಿಯರು, ಬಂದಿರುವರು. ದಾಸರೂ ಹೇಳಿಲ್ಲವೇ, "ಸುಂದರಾಂಗದ ಸುಂದರೀಯರ ಹಿಂದು ಮುಂದೆಯಲಿ" ಎಂದು, "ಪಿಳ್ಳಂಗೋವಿಯ ಚೆಲ್ವಕೃಷ್ಣನ" - ಎಂಬ ಹಾಡಿನಲ್ಲಿ?

 ನಾರಿಯರ ಅಂದವೆದ್ದುಕಾಣುವುದು, ಅವರ ಅಂದವಾದ ಲೋಚನಗಳಿಂದ, ಅಂಬುಜವೆಂಬಂತಿರುವ ನೇತ್ರಗಳಿಂದ. ಲೀಲಾಶುಕನ ಸೂಕ್ಷ್ಮದೃಷ್ಟಿಯನ್ನು ನೋಡಿ! ಆ ಗೋಕುಲದ ನಾರಿಯರ ಕಣ್ಣುಗಳಲ್ಲೇ ಸ್ಮೇರತೆ ಇತ್ತಂತೆ. ಸ್ಮೇರತೆಯೆಂದರೆ ನಗುವಿನ ಎಳೆ. ನಗು-ಮುಖವೆಂಬುದು ಬಾಯಿಯಲ್ಲಿ, ಬಾಯ ಬಳಿಯಲ್ಲಿ, ತೋರುವುದನ್ನು ಬಲ್ಲೆವು. ಆದರೆ ಈ ಸುಂದರ ಗೋಪಿಯರ ಕಣ್ಣಲ್ಲೇ ನಗು ಸೂಸುತ್ತಿದೆ! ಅಲ್ಲಿಗೆ ಅದು ಕೃಷ್ಣನೊಂದಿಗೆ ಅವರಿಗಿರುವ ಸಲಿಗೆಯನ್ನು ಸೂಚಿಸುವುದಲ್ಲವೆ?

ಅದಲ್ಲ, ಕಾರಣ. ಆ ಗೋಪಿಕೆಯರು ಸ್ಮರನ ಶರಗಳಿಂದಾಗಿ, ಎಂದರೆ ಮನ್ಮಥನ ಬಾಣಗಳಿಂದಾಗಿ, ಪರತಂತ್ರರಾಗಿಹೋಗಿದ್ದಾರೆ! ಸ್ವತಂತ್ರರಲ್ಲದವರು ಪರತಂತ್ರರು. ಮದನನ ಶರಗಳಿಗೆ ತುತ್ತಾದ ಅವರು ಪರವಶರಾಗಿದ್ದಾರೆ. ಅಲ್ಲಿಗೆ ಕಾಮಬಾಣವು ಆಡಿಸಿದಂತೆ ಆಡುತ್ತಿದ್ದಾರೆ. ಅತಿಕಾಮವು ಮಾರಕವಾದರೂ ಭಗವಂತನತ್ತ ಹರಿದ ಕಾಮವು ತಾರಕ. ಆನಂದರೂಪಿಯಾದ ಆತನ ಸನಿಹದಲ್ಲಿ ಸೂಸುವ ಸಂತಸ ಅವರ ನಯನಗಳಲ್ಲೂ ಬಿಂಬಿತವಾಗಿದೆ!

ಯಾವನೋ ಪರ-ಪುರುಷನತ್ತ ಹರಿದ ಕಾಮವಲ್ಲ, ಗೋಪಿಯರದು; ಪರಮ-ಪುರುಷನತ್ತ ಹರಿದದ್ದು ಅದು. ಪರ-ಪುರುಷ-ಗತವಾದ ಪ್ರೇಮವೂ ಪಾತಕವೇ; ಪರಮ-ಪುರುಷ-ಗತವಾದ ಕಾಮವೂ ತಾರಕವೇ! ಎಂದೇ ಗೋಪಿಯರ ಮಂದೆಯು ಸುತ್ತುವರಿದದ್ದು ಯಾವನೋ ಹಳ್ಳಿಯ ಚೆಲುವನನ್ನಲ್ಲ. ಸಾಕ್ಷಾದ್ ಬ್ರಹ್ಮವನ್ನೇ. ಆ ಬ್ರಹ್ಮವು ನಮ್ಮನ್ನು ಕಾಪಾಡಲಿ - ಎಂದು ಶ್ಲೋಕವನ್ನು ಮುಗಿಸುತ್ತಾನೆ ಲೀಲಾಶುಕ.

 ಶ್ಲೋಕ ಹೀಗಿದೆ:

ಶರಣಂ ಅ-ಶರಣಾನಾಂ ಶಾರದಾಂಭೋಜ-ನೇತ್ರಂ

ನಿರವಧಿ-ಮಧುರಿಮ್ಣಾ ನೀಲ-ವೇಷೇಣ ರಮ್ಯಮ್ |

ಸ್ಮರ-ಶರ-ಪರತಂತ್ರ-ಸ್ಮೇರ-ನೇತ್ರಾಂಬುಜಾಭಿಃ

ವ್ರಜ-ಯುವತಿಭಿಃ ಅವ್ಯಾದ್ ಬ್ರಹ್ಮ ಸಂವೇಷ್ಟಿತಂ ನಃ ||

ಸುಲಕ್ಷಣ-ಚರಣಗಳಿಗೆ ಪ್ರಣಾಮಗಳು!

ವಿಭುವಿನ ಚರಣಗಳಿಗೆ ನಮಸ್ಕಾರ - ಎನ್ನುತ್ತಾನೆ ಲೀಲಾಶುಕ, ಈ ಶ್ಲೋಕದಲ್ಲಿ. ನಮ್ಮಲ್ಲಿ ಗುರುಹಿರಿಯರಿಗೆ, ಅದರಲ್ಲೂ ತಂದೆತಾಯಿಯರಿಗೆ ಪಾದಮುಟ್ಟಿ ನಮಸ್ಕರಿಸುವ ಕ್ರಮವಿದೆಯಲ್ಲವೇ? ಇಂದಿನ ಶ್ರೀಲಂಕಾದಿಂದ ಕಾಶ್ಮೀರ-ನೇಪಾಳಗಳವರೆಗೆ - ನೇಪಾಳವೇನು, ಟಿಬೆಟ್ಟಿನವರೆಗೆ, ಟಿಬೆಟ್ಟೇನು ಮಾನಸ-ಸರೋವರದವರೆಗೆ ಈ ಕ್ರಮ ಸರ್ವತ್ರ ಲಭ್ಯವಾದದ್ದೇ. ಇತ್ತ ಗುಜರಾತಿನಿಂದ ಬರ್ಮಾದವರೆಗೆ (ಇಂದಿನ ಮ್ಯಾನ್ಮಾರ್), ಅಥವಾ ಇನ್ನೂ ಇಂಡೋನೇಷಿಯದ ಪರ್ಯಂತವೂ ಈ ಕ್ರಮವಿದೆ. ವಾಸ್ತವವಾಗಿ ಪಶ್ಚಿಮ-ಪಂಜಾಬ (ಎಂದರೆ ಇಂದಿನ ಪಾಕಿಸ್ತಾನ), ಹಾಗೂ ಗಾಂಧಾರ (ಎಂದರೆ ಅಫ಼ಘಾನಿಸ್ತಾನದ ಕಂದಹಾರ್) - ಇವುಗಳ ಆಚೆಗೂ ಹಿಂದೆ ಈ ಕ್ರಮವಿತ್ತೇ ಸರಿ. ಎಂದೇ, "ವಂದೇ ಗುರೂಣಾಂ ಚರಣಾರವಿಂದೇ" ಎಂದೇ ನಾವು ಹೇಳುವುದುಂಟು. ರಾಮನ ಪಾದವೇನು, ಪಾದುಕೆಗೇ ಪ್ರಭಾವವುಂಟು; ಕೃಷ್ಣನ ಪಾದವೇನು, ಪಾದ-ಧೂಳಿಗೇ ಪಾವನತೆಯುಂಟು!


ಇರಲಿ, ಶ್ರೀಕೃಷ್ಣನ ಪಾದಗಳಿಗೆ ವಂದನೆಯೆನ್ನುವ ಕವಿ ಅದಕ್ಕೇನಾದರೂ ಕಾರಣವನ್ನು ಕೊಟ್ಟಿದ್ದಾನೋ? - ಎಂಬುದನ್ನು ನೋಡಬೇಕಲ್ಲವೇ? ಕವಿಗಳು ಸದಾ ಕಾರಣಗಳನ್ನು ಪಟ್ಟಿಮಾಡುತ್ತ ಹೋಗಬೇಕೆಂಬ ನಿಯಮವೇನೂ ಇಲ್ಲ. ತಾವು ಚಿತ್ರಿಸುವ ವಸ್ತುವಿಗೆ ಏನೋ ವಿಶೇಷಣವನ್ನು, ಏನೋ ವರ್ಣನವನ್ನು ಕೊಟ್ಟರೂ ಸಾಕು; ಅವುಗಳೊಳಗೇ ಕಾರಣವಡಗಿರುವುದು ಗೋಚರವಾಗುತ್ತದೆ. ಯಾವುದೋ ಒಂದು ವಿಶೇಷವಾದ ಭಾವವನ್ನು ಅಡಗಿಸಿಕೊಂಡಿರುವ ವಿಶೇಷಣಕ್ಕೆ ಸಾಭಿಪ್ರಾಯ-ವಿಶೇಷಣವೆನ್ನುತ್ತಾರೆ. ತದನುಸಾರಿಯಾಗಿದೆ ಇಲ್ಲಿಯ ಚಿತ್ರಣ. ಗುಣ-ವಾಚಕವಾದ ಮಾತೊಂದು; ಕ್ರಿಯಾ-ವಾಚಕವಾದ ಮಾತೊಂದು  ಇವಿಲ್ಲಿವೆ. ಯಾರಾದರೂ ಸಿಕ್ಕಾಪಟ್ಟೆ ಮಾತಾಡುವವರಾದರೆ ಅವರನ್ನು ವಾಚಾಳಿಯೆನ್ನುತ್ತೇವಲ್ಲವೇ? ಇದರ ಸಂಸ್ಕೃತಮೂಲವೆಂದರೆ ವಾಚಾಲವೆಂಬುದು. ವಾಚಾಲ-ವಾಚಾಟ  ಎಂಬೆರಡು ನಿಂದಾ-ಪದಗಳಿವೆ. ಅತಿಯಾಗಿ ಮಾತಾಡುವವ "ವಾಚಾಲ"; ಅತಿನಿಂದ್ಯವಾಗಿ ಮಾತಾಡುವವ "ವಾಚಾಟ". ಪ್ರಕೃತ, ಕೃಷ್ಣನ ಚರಣವನ್ನು ವಾಚಾಲವೆಂದಿದೆ! ಬೈಗುಳವೆಂದೇ ತೋರುವ ಈ ಪದಕ್ಕೆ ಬೈಗುಳವಲ್ಲದ ಬಳಕೆಯೂ ವಿಶೇಷ-ಪ್ರಸಂಗಗಳಲ್ಲುಂಟು.

ಕಾಲೇನು ಮಾತಾಡುವುದೇ? ಹೌದು: ತನ್ನ ನೂಪುರದ ಮೂಲಕ! ಹೆಜ್ಜೆಯಿಡುವಾಗ ಗೆಜ್ಜೆಯು ಸದ್ದು ಮಾಡದೇ?: ಇದುವೇ ಚರಣದ "ವಾಚಾಲತೆ". ಅದರಲ್ಲೂ ಮಣಿ-ಖಚಿತವಾದ ನೂಪುರವಾಗಿದ್ದರಂತೂ ಸದ್ದಿಗಿನ್ನಷ್ಟು ಇಂಬೇ: ನಡೆದಾಗ ನೂಪುರಗಳು ನಾದಗೈಯವೇ? ಅಂತೂ ಹೀಗೆ "ಮಣಿ-ನೂಪುರ-ವಾಚಾಲ"ವಾದದ್ದು ಈ ವಿಭುವಿನ ಚರಣ. ಕಣ್ಣು-ಕಿವಿಗಳಿಗೆ ಗೋಚರವಾಗುವ ಈ ಅಂಶವು ಸೊಗಸೇ. ಆದರೆ ಅದಕ್ಕಿಂತಲೂ ಸೊಗಸೆಂದರೆ, ಆ ಚರಣಗಳ ನಡೆಯಿಂದಾದ ಪರಿಣಾಮ.

ಸೂಚನೆ : 24/08/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ