Sunday, August 4, 2024

ವ್ಯಾಸ ವೀಕ್ಷಿತ 100 ಅರ್ಜುನನ ವನವಾಸ-ಸಂಕಲ್ಪ, ವನ-ಯಾನ (Vyasa Vikshita 100 Arjunana Vanavasa-sankalpa, Vana-yaana)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಹೀಗೆ ಯಶಸ್ಸನ್ನು ಸಂಪಾದಿಸಿ ನಗರಕ್ಕೆ ಹಿಂದಿರುಗಿದನು. ಹಿರಿಯರಿಗೆಲ್ಲಾ ಅಭಿವಾದನಮಾಡಿದನು. ಎಲ್ಲರ ಅಭಿನಂದನೆಗೆ ಪಾತ್ರನಾದನು.


ಇಷ್ಟಾದ ಮೇಲೆ ಧರ್ಮರಾಜನನ್ನು ಕುರಿತು ಹೇಳಿದನು: "ಪ್ರಭುವೇ, ನಾನು ನಿಯಮೋಲ್ಲಂಘನೆ ಮಾಡಿದ್ದೇನೆ. ನಿನ್ನ ಏಕಾಂತದಲ್ಲಿ ನಿನ್ನನ್ನು ಕಂಡೆನಾಗಿ, ತನ್ನಿಮಿತ್ತ ನಾನು ವನವಾಸಕ್ಕೆ ಹೋಗುತ್ತೇನೆ. ನಮ್ಮ ಒಪ್ಪಂದವಿದ್ದದ್ದು ಹಾಗೆ ತಾನೆ?" - ಎಂದು.


ಅಪ್ರಿಯವಾದ ಈ ವಾಕ್ಯವನ್ನು ಅರ್ಜುನನು ಹೇಳಲಾಗಿ, "ಇದೇಕೆ ಹೀಗೆ ಮಾಡುತ್ತಿರುವೆ?" - ಎಂದು ಶೋಕಾರ್ತನಾಗಿ ಯುಧಿಷ್ಠಿರನು ಕೇಳಿದನು. ಮತ್ತು ಹೀಗೆ ಹೇಳಿದನು:


"ಅನಘನಾದ ಅರ್ಜುನನೇ (ಅನಘನೆಂದರೆ ಪಾಪರಹಿತ), ನನ್ನ ಮಾತನ್ನು ನೀನು ಆದರಿಸುವುದಾದರೆ ನಾನು ಹೇಳುವುದನ್ನು ಕೇಳು: ನಾನಿದ್ದಲ್ಲಿಗೆ ನೀನು ಬಂದೆಯಲ್ಲಾ, ನನಗದು ಪ್ರಿಯವೇ. ಅದೆಲ್ಲಕ್ಕೂ ನನ್ನ ಅನುಮತಿಯಿರುವುದು. ಆ ಕಾರಣ, ನನ್ನ ಹೃದಯದಲ್ಲಿ ಯಾವುದೇ ನೋವಿಲ್ಲ.


ಹಿರಿಯನು ಪತ್ನಿಯೊಂದಿಗಿರುವಾಗ ಕಿರಿಯನ ಪ್ರವೇಶವೆಂಬುದು ಅಪರಾಧವಾಗಲಾರದು. ಕಿರಿಯನು ಹಾಗಿರುವಾಗ ಹಿರಿಯನು ಪ್ರವೇಶಮಾಡಿದರೆ ಅದು ಹಿರಿಯನ ವ್ರತಕ್ಕೆ ಲೋಪವಾಗುವುದು.


ಆದ್ದರಿಂದ ನನ್ನ ಮಾತನ್ನು ಕೇಳು. ವನವಾಸದ ಚಿಂತೆಯನ್ನು ಬಿಡು. ನಿನ್ನಿಂದ ಧರ್ಮಲೋಪವಾಗಿಲ್ಲ. ನೀನು ನನಗೆ ಅಪಚಾರವನ್ನು ಮಾಡಿಲ್ಲ" - ಎಂದನು.


ಅದಕ್ಕೆ ಅರ್ಜುನನು ಹೇಳಿದನು:


"ನೀನೇ ಹೇಳಿದ್ದೆಯಲ್ಲವೇ - ನ ವ್ಯಾಜೇನ ಚರೇದ್ ಧರ್ಮಂ - ಎಂದರೆ ಧರ್ಮಾಚರಣೆಯನ್ನು ನೆಪಮಾತ್ರಕ್ಕೆಂಬಂತೆ ಮಾಡಕೂಡದು - ಎಂಬುದಾಗಿ? ಎಂದೇ ನಾನು ವಚನ-ಭ್ರಷ್ಟನಾಗಬಯಸುವುದಿಲ್ಲ. ನನ್ನ ಆಯುಧಗಳ ಮೇಲೆ ಆಣೆ."


ಅಂತೂ ಹೀಗೆ ರಾಜನ ಅನುಮತಿಯನ್ನು ಪಡೆದವನಾಗಿ, ವನವಾಸದ ದೀಕ್ಷೆ ತಳೆದು, ಹನ್ನೆರಡು ವರ್ಷಗಳ ಕಾಲ ಕಾಡಿನಲ್ಲಿ ವಾಸಕ್ಕೆಂದು ಅರ್ಜುನನು ಹೊರಡುವುದಾಯಿತು.


ಕುರು-ವಂಶಕ್ಕೇ ಕೀರ್ತಿತರುವಂತಹ ಆ ಅರ್ಜುನನು ಹೀಗೆ ಹೊರಟಿರಲು, ವೇದ-ಪಾರಂಗತರಾದ ಬ್ರಾಹ್ಮಣರನೇಕರು ಆತನನ್ನು ಹಿಂಬಾಲಿಸಿದರು. ಅವರಲ್ಲಿ ವೇದ-ವೇದಾಂಗಗಳನ್ನು ಬಲ್ಲ ವಿದ್ವಾಂಸರಿದ್ದರು; ಹಾಗೆಯೇ ಅಧ್ಯಾತ್ಮ-ಚಿಂತಕರು, ಭಿಕ್ಷಾಮಾತ್ರ-ಜೀವಿಗಳು, ಭಗವದ್-ಭಕ್ತರು, ಪುರಾಣ-ಜ್ಞರಾದ ಸೂತರು, ಕಥಕರು - ಎಂದರೆ ಕಥಾ-ವಾಚಕರು, ಶ್ರಮಣರು - ಎಂದರೆ ಸಂನ್ಯಾಸಿಗಳು, ವಾನಪ್ರಸ್ಥರು, ಮತ್ತು ದಿವ್ಯವಾದ ಆಖ್ಯಾನಗಳನು ಮಧುರವಾಗಿ ಪಠಿಸಬಲ್ಲ ದ್ವಿಜರು - ಇವರೆಲ್ಲರೂ ಇದ್ದರು.


ಇವರುಗಳನ್ನೂ ಇನ್ನೂ ಅನೇಕರನ್ನೂ ತನ್ನ ಜೊತೆಗಾರರನ್ನಾಗಿ ಹೊಂದಿ, ಮಧುರ-ಭಾಷಿಗಳಿಂದ ಸುತ್ತುವರೆಯಲ್ಪಟ್ಟವನಾಗಿ, ಅರ್ಜುನನು ನಡೆದನು - ಮರುತ್ತುಗಳೊಂದಿಗೆ ಎಂದರೆ ದೇವತೆಗಳೊಂದಿಗೆ ಇಂದ್ರನು ಹೇಗೋ ಹಾಗೆ.


ದಾರಿಯಲ್ಲಿ ಆತನು ಕಂಡ ಪ್ರದೇಶಗಳು ಹಲವು: ರಮಣೀಯವೂ ವಿಚಿತ್ರವೂ ಆದ ಕಾಡುಗಳು, ಸರಸ್ಸುಗಳು, ನದಿಗಳು, ಸಾಗರಗಳು, ದೇಶಗಳು, ಹಾಗೂ ಪುಣ್ಯ-ತೀರ್ಥಗಳು. ಆಮೇಲೆ ಗಂಗಾ-ದ್ವಾರವನ್ನು - ಎಂದರೆ ಹರಿ-ದ್ವಾರವನ್ನು - ತಲುಪಿದ ಬಳಿಕ, ಅಲ್ಲಿ ಡೇರೆಹೂಡಿದನು.


ಅಲ್ಲೊಂದು ಅದ್ಭುತವು ನಡೆಯಿತು. ಅರ್ಜುನನೂ ಆ ಬ್ರಾಹ್ಮಣರೂ ಅಲ್ಲಿ ನಿವೇಶಗೊಂಡಿರಲು, ಆ ವಿಪ್ರರು ಅನೇಕ-ಸ್ಥಲಗಳಲ್ಲಿ ಅಗ್ನಿ-ಹೋತ್ರಕ್ಕಾಗಿ ಅಗ್ನಿಯನ್ನು ಉಂಟುಮಾಡಿಕೊಂಡರು. ಹಾಗೆ ತಮ್ಮ ತಮ್ಮ ಅಗ್ನಿಗಳನ್ನು ಪ್ರಜ್ವಲಿಸುವಂತೆ ಮಾಡಿಕೊಂಡು, ಪುಷ್ಪಾರ್ಪಣೆಯನ್ನೂ ಮಾಡಿದರು, ಕೃತ-ಸ್ನಾನರೂ, ಸಂಯಮಿಗಳೂ ಆಗಿದ್ದ ಆ ಸನ್ಮಾರ್ಗಸ್ಥ ಬ್ರಾಹ್ಮಣರು. ಆ ಮಹಾತ್ಮರಿಂದಾಗಿ ಗಂಗಾದ್ವಾರವು ಅತೀವವಾಗಿಯೇ ಬೆಳಗಿತು.


ಸೂಚನೆ : 4/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.