Friday, July 5, 2024

ಯುದ್ಧವಿಲ್ಲದ ಅ-ಯೋಧ್ಯೆಯೆಲ್ಲಿದೆ ? (Yuddhavillada A-Yodhyeyellide?)

ಮೋಕ್ಷದಾಯಿನಿಯಾಗಿ  ಪ್ರಸಿದ್ಧಿಪಡೆದಿರುವ ಏಳು ತೀರ್ಥ ಕ್ಷೇತ್ರಗಳಲ್ಲಿ, ಅಯೋಧ್ಯೆಯು ವಿಷ್ಣುವಿನ ಆದಿಪುರಿ.  ಸ್ಕಾಂದ ಪುರಾಣವು ಕೊಂಡಾಡುವ, ಪವಿತ್ರವಾದ ಶ್ರೀರಾಮನ ಜನ್ಮಸ್ಥಳ. ಮೋಕ್ಷವೇನೆಂದು ಅರಿಯದಿದ್ದರೂ ತೀರ್ಥಯಾತ್ರೆಯನ್ನಂತು  ಮಾಡಿ, ಶ್ರೀರಾಮನ ಪ್ರತಿಷ್ಠಿತ ಮೂರ್ತಿಯನ್ನು ದರ್ಶನಮಾಡಿ ಧನ್ಯರಾಗಬೇಕೆಂಬುದು ನಮ್ಮ ಸಂಸ್ಕೃತಿಯಲ್ಲಿರುವ  ಧೃಡವಾದ ನಂಬಿಕೆ. ಈ ನಂಬಿಕೆಗಳನ್ನು ಕುರಿತು ಆಧುನಿಕ ವಿಜ್ಞಾನದಿಂದ  ಶಿಕ್ಷಿತವಾಗಿರುವ ಬುದ್ಧಿಗಳಿಗೆ ಪ್ರಶ್ನೆಗಳು ಏಳದಿಲ್ಲ. ಮೂರ್ತಿಯನ್ನು ಚಿತ್ರಿಸಿದವರಾರು? ಅವರು ಶ್ರೀರಾಮನನ್ನು  ದರ್ಶನ ಮಾಡಿದವರೇ? ಕಲಿಯುಗದಲ್ಲಿ ತ್ರೇತಾಯುಗದ ರಾಮನನ್ನು ನೋಡಲು ಸಾಧ್ಯವೇ? ದರ್ಶನ ಮಾಡಿದವರೆಲ್ಲರಿಗೂ ಮೋಕ್ಷ ಕಟ್ಟಿಟ್ಟಬುತ್ತಿಯೇ? ಇತ್ಯಾದಿ

ತುಲಸೀದಾಸ್, ಭದ್ರಾಚಲ ರಾಮದಾಸ್, ತ್ಯಾಗರಾಜಾದಿ ಸಂತರು,  ನರೋತ್ತಮನಾಗಿ ಅವತರಿಸಿದ ರಾಮನನ್ನು, ಕಲಿಯುಗದಲ್ಲಿಯೂ ದರ್ಶನ ಮಾಡಿದವರು! ಹೇಗೆ ಸಾಧ್ಯ?  ಎಂದರೆ, ತ್ಯಾಗರಾಜರೇ 'ಕನುಗೊನುಸೌಖ್ಯಮು' ಎಂಬ  ಕೃತಿಯಲ್ಲಿ ಹೇಳುವಂತೆ – "ರಾಮನ ದರ್ಶನವಾಗಬೇಕಾದರೆ ಭಗವದನುಗ್ರಹದಿಂದ ಮಾತ್ರವೇ ಸಾಧ್ಯ". ತೊಂಬತ್ತಾರು ಕೋಟಿ ರಾಮ ನಾಮವನ್ನು ಜಪಿಸಿ, ಪ್ರತಿ ಕೋಟಿಯ ಜಪಕ್ಕೂ ಶ್ರೀರಾಮನ ದರ್ಶನವನ್ನು ಪಡೆಯುತ್ತಿದ್ದರು.  ರಾಮದರ್ಶನ ಮಾಡಲು ಅಯೋಧ್ಯೆಗೆ ಹೊರಟ ಭಕ್ತರನ್ನು ಕುರಿತು 'ನಡಚಿ ನಡಚಿ' ಎಂಬ  ಕೃತಿಯಲ್ಲಿ ಹಾಡುತ್ತಾರೆ (ಆದಿಯಲ್ಲಿ  ಕಾಲು ನಡಿಗೆಯಲ್ಲಿಯೇ ಯಾತ್ರೆ ಮಾಡಲಾಗುತ್ತಿತ್ತು) -"ಅಯೋಧ್ಯಾ  ನಗರಕ್ಕೆ ನಡೆದು ನಡೆದು, ಎಲ್ಲಿ ಹುಡುಕಿದರೂ  ರಾಮನು ಕಾಣಲಿಲ್ಲ.  ಯೋಗ ಶಾಸ್ತ್ರ  ತಳಿಸುವಂತೆ, ಕಣ್ಣುಗಳನ್ನು ಭ್ರೂ ಮಧ್ಯಕ್ಕೆ ಕೇಂದ್ರೀಕರಿಸಿ, ಕಟ್ಟೆಯಂತೆ  ಕುಳಿತು, ಜಪಮಾಲೆ ಹಿಡಿದು, ಆತ್ಮಾರಾಮನಲ್ಲಿ ಒಂದಾಗಲು ಹೊರಟ ಸಾಧಕರಿಗೂ ರಾಮ ಕಾಣಲಿಲ್ಲ".  ಪ್ರವೃತ್ತಿ-ನಿವೃತ್ತಿ ಮಾರ್ಗಗಳೆರಡರಲ್ಲೂ  ದಾರಿತಪ್ಪಿದ ಭಕ್ತರಿಗೆ ಮಾರ್ಗದರ್ಶನ– "ಹುಟ್ಟು ಸಾವಿಲ್ಲದ ಅವನ ನಿಜವಾದ ವಾಸಸ್ಥಳವನ್ನು ತಿಳಿಯಬೇಕು".

ಹುಟ್ಟು ಸಾವು ಇಲ್ಲದ ಸ್ಥಳವೆಲ್ಲಿದೆ?

ಅಥರ್ವವೇದವು ಹೇಳುವಂತೆ  - ಅಷ್ಟ ಚಕ್ರ(ಶಕ್ತಿಕೇಂದ್ರಗಳು), ನವ ದ್ವಾರಗಳಿಂದ  ಕೂಡಿರುವ ಈ ಮಾನವ ದೇಹವೆಂಬ ಪುರದಲ್ಲಿರುವ ಅ-ಯೋಧ್ಯಾ  ಸ್ಥಾನದಲ್ಲಿ ಆತ್ಮನು ವಾಸಿಸುತ್ತಾನೆ. ಅ-ಯೋಧ್ಯಾ  ಎಂದರೆ ಯುದ್ಧದಿಂದ ಗೆಲ್ಲಲಾಗದ ಸ್ಥಾನ. ಯಾವ ಯುದ್ಧ? 

 ಸೃಷ್ಟಿಯ ವಿಕಾಸದಲ್ಲಿ,  ಭಗವಂತನ ಮೂಲ ರೂಪದ ಮೂರು ಸ್ವರೂಪಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳು, ಮೊದಲ ಹೆಜ್ಜೆಗಳು. ಈ ಶಕ್ತಿಗಳು ದೇಹ ಪ್ರಕೃತಿಯಲ್ಲಿ ಕ್ರಮವಾಗಿ ರಜಸ್ಸು, ಸತ್ವ ಹಾಗೂ ತಮೋಗುಣಗಳಾಗಿ ವಿಕಾಸ ಗೊಳ್ಳುತ್ತವೆ. ನಮ್ಮ ಇಹ-ಪರ ಜೀವನಗಳಿಗೆ ಆಶ್ರಯ. ಈ ಮೂವರ ಪೋಟಿಯ ಕಾರಣ ತ್ರಿಗುಣಗಳಲ್ಲಿ ನಿರಂತರ ಯುದ್ಧವೇ! ಭಗವಂತನು ತನ್ನನ್ನು ಮರೆಸಿಕೊಂಡು, ನಮ್ಮನ್ನು ಪ್ರಕೃತಿಯೊಂದಿಗೆ ಕಟ್ಟಿಹಾಕಿರುವ ಪಾಶವೇ ಈ  ತ್ರಿಗುಣಗಳು. ತಮೋಗುಣವಿಲ್ಲದೆ ನಿದ್ರೆಬಾರದು,  ರಜೋ ಗುಣವಿಲದೇ ಚಟುವಟಿಕೆಗಳಾಗದು. ಚಟುವಟಿಕೆ-ನಿದ್ರೆ ನಿತ್ಯಜೀವನಕ್ಕೆ ಅನಿವಾರ್ಯ. ಈ ಅಂಟುಗಳಿಲ್ಲದ, ತ್ರಿಗುಣಾತೀತವಾದ, ಯುದ್ಧವಿಲ್ಲದ  ಸ್ಥಳವೇ  ಹುಟ್ಟು-ಸಾವು ಇಲ್ಲದ ಭಗವಂತನ ಪರಮಪದ ಸ್ಥಾನ. ಅಲ್ಲಿಗೆ ತಲುಪಲು ಅತ್ಯವಶ್ಯಕವಾದದು ಸತ್ವಗುಣವೊಂದೇ.

ತ್ಯಾಗರಾಜರ  ಕೃತಿಗಳ ಅಂತರಾಳವನ್ನು  ಅಳೆಯಬಲ್ಲವರಾಗಿದ್ದ   ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು – "ತ್ರಿಗುಣಗಳ ತೆರೆಯನ್ನು ತೆರೆದಾಗ ತಾನೇ ಭಗವಂತನ ದರ್ಶನವಾಗುತ್ತೆ. ಅದಕ್ಕಾಗಿಯೇ ದೇವಾಲಯಗಳಲ್ಲಿ ಭಗವಂತನ ಪ್ರತಿನಿಧಿಯಾದ ಅರ್ಚಕನು ದೇವರ ಮುಂದೆ ಹಾಕಿರುವ ಮೂರು ಬಣ್ಣದ ತೆರೆಯನ್ನು  ತೆರೆದು, ದೇವತಾಮೂರ್ತಿಯ ದರ್ಶನವನ್ನು ಮಾಡಿಸುವ ಸಂಪ್ರದಾಯ ಬಂದಿದೆ" ಎಂದು. 

ರಾಮ ದರ್ಶನದತ್ತ ..

ತ್ರಿಗುಣಾತ್ಮಕವಾದ ಪ್ರಕೃತಿಯಿಂದ ಮುಕ್ತರಾಗಿ ಒಳನಗರವಾದ ಅ-ಯೋಧ್ಯೆಯನ್ನು ಭಾರತದ  ಮಹರ್ಷಿಗಳು  ಧ್ಯಾನದಿಂದ ಮುಟ್ಟಿದರು. ಅಂತರಂಗದಲ್ಲಿ ದೇವತೆಗಳನ್ನು, ತ್ರಿಮೂರ್ತಿಗಳನ್ನು  ಅವರವರ ಕ್ಷೇತ್ರಗಳಲ್ಲಿ ದರ್ಶನ ಮಾಡಿದರು.  ಯುದ್ಧದ ಮಾತಿಲ್ಲದ, ಹೃದಯಗಹ್ವರದ ಅ-ಯೋಧ್ಯೆಯಲ್ಲಿ , ಆತ್ಮಾರಾಮನ್ನು ದರ್ಶನಮಾಡಿದರು. ಭಾರತಮಾತೆಯ ಹೃದಯ ಸ್ಥಾನದಲ್ಲಿರುವ ಹೊರನಗರಕ್ಕೆ ಅದೇ ಹೆಸರನ್ನಿಟ್ಟು, ಅಂತರ್ದರ್ಶನದ ಪ್ರತಿನಿಧಿಯಾಗಿ ಗುರುತಿಸಿದರು. ದೇವಾಲಯದ ಮೂರ್ತಿಯನ್ನೂ ವಿಧಿವತ್ತಾಗಿ ಸ್ಥಾಪಿಸಿ, ಪೂಜಾ ಕ್ರಮವನ್ನೂ ವಿಧಿಸಿದರು. ಅಂತೆಯೇ ಸಂತರು ಗಾನ ಮಾಡಿದ ಕೃತಿಗಳೂ ಅಂತರ್ದರ್ಶನದ ಹೊರಗಿನ ರೂಪಗಳೇ.

 ಪೂಜೆ, ಧ್ಯಾನ, ನಾಮಸಂಕೀರ್ತನೆ ಇತ್ಯಾದಿ ಆತ್ಮಕಲ್ಯಾಣಕ್ಕಾಗಿ ಬೇಕಾದ ಶಾಸ್ತ್ರ ಸಂಪ್ರದಾಯಗಳೆಲ್ಲವೂ ಒಟ್ಟುಗೂಡಿರುವ ಜಾಗವೇ ದೇವಾಲಯ. ದೇವತಾಮೂರ್ತಿಯ ದರ್ಶನ ಭಗವದನುಗ್ರಹವನ್ನು ಕೂಡಿಕೊಳ್ಳುವ ಸಾಂಪ್ರದಾಯಿಕ ವಿಧಿ. ಎಲ್ಲರಿಗೂ ಅಧಿಕಾರವಿರುವ. ಭಕ್ತಿಮಾರ್ಗವನ್ನಪ್ಪಿದರೆ, ಪ್ರಕೃತಿಯ ಪರಿಷ್ಕರಣದಿಂದ ಅಂತರಂಗದ ಮೋಕ್ಷಮಾರ್ಗ ತೆರೆಯುವುದೆಂಬುದೇ ಸಂತರ ಒಟ್ಟಾರೆ ಅಭಿಪ್ರಾಯ. (ರಾಮಲಲ್ಲನ) ಬಾಲರಾಮನ ದರ್ಶನಕ್ಕಾಗಿ ಪಾದಬೆಳೆಸೋಣ. ಕ್ಯಾಮರ ಚಿತ್ರವನ್ನು ಹಿಡಿಯುವಂತೆ, ದೇವತಾಮೂರ್ತಿಯ ಚಿತ್ರವನ್ನು ಮನಸ್ಸಿನಲ್ಲಿ ಶುಭಾವಲಂಬನೆಯಾಗಿ ನಿಲ್ಲಿಸಿಕೊಂಡು, ಸಾತ್ವಿಕಗುಣವನ್ನು ಅನುಗ್ರಹಿಸುವಂತೆ ಪ್ರಾರ್ಥಿಸೋಣ.

ಸೂಚನೆ: 4/07/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.