Friday, July 5, 2024

ವಿವಾಹದಪೂರ್ವದಲ್ಲಿ ಮಾಡುವ ‘ಕಾಶೀಯಾತ್ರೆ’ ಯ ವಿಶೇಷತೆ (Vivahadapurvadalli Maduva Kasiyatreya Visheshate)

ಗುರುಕುಲದಲ್ಲಿ ವೇದ ಮತ್ತು ಅದರ ಮರ್ಮವನ್ನು ಅರಿತು, ಅಂತರಂಗದಲ್ಲಿ ಭಗಂವಂತನನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲ ಒಬ್ಬ ಋಷಿತುಲ್ಯನಾದ ವರನು ವಿವಾಹಕ್ಕೆ ಮುಂದಾಗುತ್ತಾನೆ. ವಿವಾಹದ ಅನೇಕ ಘಟ್ಟಗಳಲ್ಲಿ ಕಾಶೀಯಾತ್ರೆಯ ಒಂದು ಸಂದರ್ಭ. ಇಲ್ಲಿ ವರನು ಕಾಶಿಗೆ ಹೋಗುತ್ತಾನೆ. ಆಗ ಒಬ್ಬ ಕನ್ಯಾಜನಕನು ಅವನನ್ನು ತಡೆಯುತ್ತಾನೆ. 'ನೀನು ಒಬ್ಬನೇ ಹೋಗುವುದು ಬೇಡ. ನನ್ನ ಮಗಳನ್ನು ವಿವಾಹ ಮಾಡಿಕೊಂಡು ಸಭಾರ್ಯನಾಗಿ ಕಾಶಿಗೆ ಹೋಗಿ ನನ್ನ ಮಗಳನ್ನು ಉದ್ಧರಿಸು' ಎಂದು ಆ ಹುಡುಗನನ್ನು ತಡೆದು ತನ್ನ ಕನ್ಯೆಯನ್ನು ಅವನಿಗೆ ಧಾರೆ ಎರೆದು ಕೊಡುವ ಪದ್ಧತಿ ಇದೆ. ಇಲ್ಲಿ ಕಾಶೀ ಎಂದರೆ ನಾವು ಹೊರಗಡೆ ಕಾಣುವ ಒಂದು ಪವಿತ್ರ ಕ್ಷೇತ್ರ ಮಾತ್ರವಲ್ಲ. ಯಾವ ಭ್ರೂಮಧ್ಯಸ್ಥಾನವನ್ನು 'ಕಾಶೀ' ಎಂದು ಕರೆಯುತ್ತಾರೋ ಅಂತಹ ಕಾಶಿಯಲ್ಲಿರುವ ವಿಶ್ವನಾಥನನ್ನು ದರ್ಶನ ಮಾಡಿದ ವರನು ತನ್ನ ವಿದ್ಯಾಬಲದಿಂದ ತಾನು ತನ್ನ ಯಾವ ಜೀವನದ ಪರಾಕಾಷ್ಠೆಯನ್ನು ತಲುಪಿರುತ್ತಾನೋ ಅಂತಹ ಸ್ನಾತಕನಿಗೆ ಕನ್ಯೆಯನ್ನು ಉದ್ವಹಿಸಿ ಅವಳಿಗೂ ಕಾಶಿಯನ್ನು-ವಿಶ್ವನಾಥನನ್ನು ತೋರಿಸು ಎಂದು ಕೇಳಿಕೊಳ್ಳುವ ಒಂದು ವಿಧಾನ. ಇದೂ ಕೂಡಾ ಯಾವುದೋ ಕಾಲಘಟ್ಟದ ವಿಷಯ. ಇತ್ತೀಚಿನ ದಿನಗಳಲ್ಲಿ ಈ ಕಾಶಿಯಾತ್ರೆಯನ್ನು ನಾಟಕದಲ್ಲಿ ಒಂದು ಅಂಕವನ್ನು ತೋರಿಸುವಂತೆ ಮಾಡಿ ತೋರಿಸುವ ಪರಿ ಬಂದಿದೆ.


ಒಂದು ಕಾಲದಲ್ಲಿ ಭಾರತದಲ್ಲಿ ವೇದವೆಂಬುದು ಯಾವ ಅರ್ಥ ಮತ್ತು ಗಾಂಭೀರ್ಯದಿಂದ ಕೂಡಿತ್ತೋ ಅದು ಇಂದು ಕೇವಲ ಚೇಷ್ಟೆಯಾಗಿ, ಸ್ವಾರ್ಥಕ್ಕಾಗಿ, ಅಥವ ಕೇವಲ ಧನಾಕಾಂಕ್ಷೆಗೆ ಸೀಮಿತವಾಗಿ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಈ ವೇದದಿಂದಾಗಿಯೇ ನಮ್ಮ ದೇಶ 'ಭಾರತ' (ಭಾ-ಬೆಳಕು, ರತ-ತಲ್ಲೀನರಾದವರು) ಎಂದು ಅನ್ನಿಸಿಕೊಂಡಿದೆ. ಭಾರತದ ಋಷಿಮಹರ್ಷಿಗಳು ವೇದಕ್ಕಾಗಿ ತಮ್ಮ ಜೀವನವನ್ನು ಧಾರೆ ಎರೆದರು. ಅದರಿಂದಲೇ ತಮ್ಮ ಜೀವನದ ಸಾರ್ಥಕತೆಯನ್ನು ಕಂಡುಂಡರು. ತಾವು ಈ ವೇದವಿದ್ಯೆಯಿಂದ ಯಾವ ಪರಮಾನಂದವನ್ನು ಕಂಡರೋ ಅದನ್ನು ತಾವು ಮಾತ್ರ ಅನುಭವಿಸದೇ ಲೋಕಕಾರುಣ್ಯದಿಂದ ಹಾಗೇ ನಮಗೆ ಉಣಿಸಿದರು. ಈ ಪರಂಪರೆ 'ಗುರುಕುಲ' ಎಂಬ ಶಿಸ್ತುಬದ್ಧವಾದ ಶಿಕ್ಷಣದಿಂದ ಇತ್ತೀಚಿನ ದಿನಗಳ ವರೆಗೆ ಮುನ್ನಡೆ ಇಟ್ಟುಕೊಂಡು ಬಂದಿತ್ತು. ಒಂದು ಕಾಲದವರೆಗೆ ಈ ವೇದಾಧ್ಯಯನಪರಂಪರೆ ಅತ್ಯಂತ ಉಚ್ಛ್ರಾಯಸ್ಥಿತಿಯಲ್ಲಿತ್ತು. ಅಧಿಕಾರಿಯಾದವನು ವೇದಾಧ್ಯಯನವನ್ನು ಮಾಡುವುದು ತನ್ನ ಕರ್ತವ್ಯವೆಂದು ಭಾವಿಸಿದ್ದ. "ನಿಷ್ಕಾರಣಃ ಷಡಂಗೋ ವೇದೋ ಅಧ್ಯೇತವ್ಯೋ ಜ್ಞೇಯಶ್ಚ" ಎಂಬಂತೆ ಯಾವುದೇ ಲೌಕಿಕಕಾಮನೆಗಳ ಪೂರ್ತಿಗಾಗಿ ವೇದಾಧ್ಯಯನವನ್ನು ಮಾಡದೇ ವೇದವನ್ನು ಮರ್ಮಸಹಿತ ತಿಳಿದುಕೊಳ್ಳಬೇಕೆಂಬ ಏಕೈಕಧ್ಯೇಯದಿಂದ ಪ್ರತಿಯೊಬ್ಬ ಅಧಿಕಾರಿಯೂ ಪ್ರವೃತ್ತನಾಗುತ್ತಿದ್ದ. ಎಂತಹ ಮೌಲ್ಯಯುತವಾದ ವಸ್ತುವೂ ಎರಡು ಕಾರಣಗಳಿಂದ ಕ್ರಮೇಣ ಮರೆಯಾಗುವ ಸಂದರ್ಭ ಇದೆ. ಒಂದು ಅಧಿಕಾರಿಯಾದವನು ಅದನ್ನು ಬಳಸದಿದ್ದಾಗ, ಮತ್ತು ಅನಧಿಕಾರಿಯಾದವನು ಅದನ್ನು ಬಳಸಿದಾಗ. ವೇದಗಳಲ್ಲೆವೂ ಇಂದು ಕ್ಷೀಣಿಸಿ, ಬರಡಾಗಿ, ಸಾರವನ್ನು ಕಳೆದುಕೊಂಡ ಶುಷ್ಕವೃಕ್ಷವಾಗಿ ನಮ್ಮೆದುರಿಗೆ ಕೆಲವು ಮಾತ್ರ ನಿಂತಿವೆ. ಇನ್ನು ಎಷ್ಟೋ ಬಿದ್ದು ಪ್ರಕೃತಿಯಲ್ಲಿ ಲೀನವಾಗಿವೆ. ಯಾವುವು ನಮ್ಮೆದುರಿಗೆ ಒಣಕಲಾಗಿ ಸಾರವನ್ನು ಕಳೆದುಕೊಂಡಿವೆಯೋ ಅವುಗಳಿಗೆ ಜೀವವನ್ನು ತುಂಬುವ ಕಾರ್ಯ ಮೊದಲಾಗಬೇಕು. ಅನಂತರದಲ್ಲಿ ಯಾವೆಲ್ಲಾ ವೇದಗಳು ಈ ಸೃಷ್ಟಿಯಲ್ಲಿ ಅಡಗಿವೆಯೋ ಅವುಗಳನ್ನು ಮೇಲಕ್ಕೆತ್ತುವ ಕಾರ್ಯ ಆರಂಭವಾಗಬೇಕು. ಆದರೆ ಇದು ಕೆರೆಯ ಊಳೆತ್ತುವ ಕಾರ್ಯದಷ್ಟು ಸುಲಭಸಾದ್ಯವಲ್ಲ. ಇದಕ್ಕೆ ಬೇಕು ಕಾರ್ಯದಲ್ಲಿ ಏಕಾಗ್ರತೆ, ನಿಷ್ಠೆ. ನಮ್ಮ ಪೂರ್ವಿಕರು ವೇದಗಳನ್ನು ಸಂರಕ್ಷಿಸಲು ಹೇಗೆಲ್ಲ ಪಣತೊಟ್ಟರೋ  ಅದಕ್ಕಿಂತಲೂ ಹೆಚ್ಚು ಪರಿಶ್ರಮ ಇಂದು ಬೇಕಾಗಿದೆ. ಹಿಂದೊಮ್ಮೆ ಈ ಕಾರಣಕ್ಕಾಗಿಯೇ ವಿಶ್ವದ ಜನರನ್ನು ಭಾರತ ಆಕರ್ಷಿಸುತ್ತಿತ್ತು. ಆದರೆ ಇಂದಿನ ಜನಾಂಗ ಇವುಗಳನ್ನೆಲ್ಲ ಮರೆತು ಭಾರತವನ್ನು ಬಿಟ್ಟು ಬೇರೆ ಕಡೆ ಸುಖದ ತಾಣಕ್ಕಾಗಿ ಪರಿತಪಿಸುತ್ತಿದೆ. ಆದರೆ ನಿಜವಾದ ಸುಖ ಭಾರತೀಯ ವಿದ್ಯೆ ಕಲೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಾಧ್ಯ. 


ಇಂತಹ ವೇದ ಮತ್ತು ಅದರ ಶಾಖೆಗಳನ್ನು ಆಮೂಲಾಗ್ರವಾಗಿ ಅಧ್ಯಯನವನ್ನು ಮಾಡಿ ಅದರ ತತ್ತ್ವವನ್ನು ತಿಳಿದವನು ಮಾತ್ರ ಅಧ್ಯಯನಸಂಪನ್ನ ಎನಿಸಿಕೊಳ್ಳುತ್ತಾನೆ. ಅವನು ಶ್ರೇಷ್ಠನೂ, ಜ್ಞಾನಿಯೂ, ಅಗ್ರಗಣ್ಯನೂ ಮತ್ತು ವರನೂ ಆಗಿರುತ್ತಾನೆ. ವರ ಎಂಬ ಪದಕ್ಕೆ ಶ್ರೇಷ್ಠ ಎಂಬ ಅರ್ಥ ಈ ಬಗೆಯ ಅಧ್ಯಯನ ಸಂಪತ್ತಿನಿಂದ ಅನ್ವಿತವಾಗುತ್ತದೆ. ಆತನು ಮಾತ್ರ ತನ್ನ ಮುಂದಿನ ಗೃಹಸ್ಥಜೀವನದ ಭವ್ಯವಾದ ಭವಿತವ್ಯವನ್ನು ಕಾಣಲು ಸಾಧ್ಯ.


ಸೂಚನೆ: 4/07/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.