Sunday, July 7, 2024

ವ್ಯಾಸ ವೀಕ್ಷಿತ 94 ಎಲ್ಲರ ಕಣ್ಮನ ಸೆಳೆದ ತಿಲೋತ್ತಮೆ (Vyasa Vikshita 94 Ellara Kanmana Seleda Tilottame)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಸುಂದೋಪಸುಂದರೆಂಬ ಅಸುರರನ್ನು ನಿಗ್ರಹಿಸಲು ಸನ್ನಾಹವಾಗಿದೆ. ಅದಕ್ಕಾಗಿ ಅತ್ಯಂತಸುಂದರಿಯಾದ ನಾರಿಯನ್ನು ಸೃಷ್ಟಿಸಲಾಯಿತು. ಎಲ್ಲರ ಕಣ್ಣುಗಳನ್ನೂ ಮನಸ್ಸುಗಳನ್ನೂ ಸೆಳೆದಳು ಅವಳು. ರತ್ನಗಳಲ್ಲಿಯ ಎಳ್ಳೆಷ್ಟೆಳ್ಳಷ್ಟು ಅಂಶಗಳನ್ನೂ ಬಿಡದೆ ತೆಗೆದುಕೊಂಡು ಆಕೆಯು ನಿರ್ಮಿತಳಾದಳಲ್ಲವೆ? ಅದೇ ಕಾರಣಕ್ಕಾಗಿ ಬ್ರಹ್ಮನು ಆಕೆಗೆ ತಿಲೋತ್ತಮಾ ಎಂದೇ ಹೆಸರಿಟ್ಟನು. ತಿಲವೆಂದರೆ ಎಳ್ಳು.


ಹೀಗೆ ನಿರ್ಮಿತಳಾದ ಆಕೆಯು ಬ್ರಹ್ಮನಿಗೆ ನಮಸ್ಕಾರವನ್ನು ಮಾಡಿದಳು. ಕೈಜೋಡಿಸಿ, ಹೀಗೆ ಕೇಳಿಕೊಂಡಳು: "ಪ್ರಜಾಪತಿಯೇ, ಯಾವ ಕಾರಣಕ್ಕಾಗಿ ನಾನು ಈಗ ಇಲ್ಲಿ ಸೃಷ್ಟಳಾಗಿದ್ದೇನೆ?"


ಅದಕ್ಕೆ ಪಿತಾಮಹನು, "ಓ ತಿಲೋತ್ತಮೇ! ಸುಂದ ಮತ್ತು ಉಪಸುಂದ - ಎಂಬ ಅಸುರರಿಬ್ಬರು ಇರುವರಲ್ಲವೇ? ಅವರಲ್ಲಿಗೆ ನೀನು ಹೋಗು - ಅತ್ಯಂತ ಕಮನೀಯವಾದ ರೂಪದೊಂದಿಗೆ. ಹಾಗೂ ಅವರಿಗೆ ಪ್ರಲೋಭನವನ್ನುಂಟುಮಾಡಿಬಿಡು" ಎಂದನು.


ಕಥೆಯನ್ನು ಮುಂದುವರೆಸುತ್ತ ನಾರದರು ಹೇಳಿದರು. "ಹಾಗೆಯೇ ಆಗಲಿ" ಎಂದು ಅವಳು ಹೇಳಿದಳು. ಬ್ರಹ್ಮನಿಗೆ ನಮಸ್ಕರಿಸಿದಳು. ದೇವತಾ-ಮಂಡಲಕ್ಕೆ ಪ್ರದಕ್ಷಿಣೆ ಮಾಡಿದಳು. ಬ್ರಹ್ಮನ ದಕ್ಷಿಣ-ಭಾಗಕ್ಕೆ ಪೂರ್ವಾಭಿಮುಖನಾಗಿ ಮಹೇಶ್ವರನು ಕುಳಿತಿದ್ದನು. ಉತ್ತರ-ಭಾಗಕ್ಕೆ ದೇವತೆಗಳು ಇದ್ದರು. ಋಷಿಗಳಂತೂ ಸುತ್ತಲೂ ಇದ್ದರು. ದೇವತಾ-ಮಂಡಲಕ್ಕೆ ಪ್ರದಕ್ಷಿಣೆಯನ್ನು ಅವಳು ಮಾಡುತ್ತಿರಲು, ಇಂದ್ರನೂ ಶಿವನೂ ಸ್ವಸ್ಥಾನದಲ್ಲಿ ಸ್ಥಿರವಾಗಿ ಕುಳಿತಿದ್ದರು. ಆದರೆ ಅವಳು ಯಾವಾಗ ದಕ್ಷಿಣಭಾಗಕ್ಕೆ ಬಂದಳೋ, ಆಗ ಅವಳನ್ನು ನೋಡಲೆಂದು ಶಂಕರನ ದಕ್ಷಿಣ-ಭಾಗದಲ್ಲಿ ಕಮಲದಂತಿರುವ ಕಣ್ಣುಳ್ಳ ಮುಖವೊಂದು ಪ್ರಕಟವಾಯಿತು. ಅವಳು ಹಿಂಭಾಗಕ್ಕೆ ಬರುತ್ತಿದ್ದಂತೆ ಪಶ್ಚಿಮ-ಮುಖವು ಪ್ರಕಟವಾಯಿತು. ಅವಳು ಉತ್ತರಕ್ಕೆ ಬಂದಂತೆ ಉತ್ತರದಲ್ಲೊಂದು ಮುಖವು ಪ್ರಕಟವಾಯಿತು. ಇಂದ್ರನಿಗಂತೂ ಹಿಂದೆ, ಪಕ್ಕಗಳಲ್ಲಿ, ಹಾಗೂ ಎದುರಿಗೆ - ಎಲ್ಲೆಡೆ ಸಾವಿರ ಕಣ್ಣುಗಳು - ಅಂಚಿನಲ್ಲಿ ಕೆಂಪಡರಿದ ಕಣ್ಣುಗಳು ಉಂಟಾಗಿಬಿಟ್ಟವು!  ಶಂಕರನಿಗೆ ನಾಲ್ಕು ಮುಖಗಳೆಂದೂ, ಇಂದ್ರನಿಗೆ ಸಹಸ್ರ-ನೇತ್ರಗಳೆಂದೂ ಆದದ್ದು ಹೀಗೆ. ಎತ್ತೆತ್ತ ತಿಲೋತ್ತಮೆಯು ಹೆಜ್ಜೆಯಿಟ್ಟಳೋ ಅತ್ತತ್ತ ತಿರುಗಿತು ದೇವತೆಗಳ ಹಾಗೂ ಮಹರ್ಷಿಗಳ ಮುಖಗಳು! ಬ್ರಹ್ಮದೇವನೊಬ್ಬನನ್ನು ಬಿಟ್ಟರೆ ಅಲ್ಲಿದ್ದ ಮಹಾನುಭಾವರೆಲ್ಲರ ದೃಷ್ಟಿಯೂ ಅವಳ ಶರೀರದ ಮೇಲೇ ನೆಟ್ಟಿತು - ಅವಳ ರೂಪ-ಸಂಪತ್ತಿನಿಂದಾಗಿ. ಅವಳು ಅತ್ತ ಸಾಗಲು, ಸೃಷ್ಟಿ-ಕರ್ತನಾದ ಬ್ರಹ್ಮನು ಸರ್ವ-ದೇವತೆಗಳನ್ನೂ ಋಷಿ-ಸ್ತೋಮವನ್ನೂ ಸ್ವ-ಸ್ವ-ಧಾಮಗಳಿಗೆ ಕಳುಹಿಸಿಕೊಟ್ಟನು.


ಕಥೆಯನ್ನು ಮುಂದುವರೆಸುತ್ತಾ ನಾರದರು ಹೇಳಿದರು: ಭೂಮಿಯನ್ನು ಗೆದ್ದು, ಶತ್ರುಗಳೇ ಇಲ್ಲವೆಂದಾಗಿರಲು, ವ್ಯಥಾ-ರಹಿತರಾದ ಆ ಇಬ್ಬರು ದೈತ್ಯರು ಮೂರೂ ಲೋಕಗಳನ್ನು ಸಂಪೂರ್ಣವಾಗಿ ವಶಕ್ಕೆ ತಂದುಕೊಂಡವರಾಗಿ ಕೃತ-ಕೃತ್ಯರಾಗಿದ್ದರು. ದೇವತೆಗಳು, ಗಂಧರ್ವರು, ಯಕ್ಷರು, ನಾಗರು, ಮನುಷ್ಯರು, ರಾಕ್ಷಸರು - ಇವರುಗಳ ರತ್ನಗಳನ್ನೆಲ್ಲವನ್ನೂ ಕಿತ್ತುಕೊಂಡು ಮಹಾ-ಹರ್ಷವನ್ನು ಅವರಿಬ್ಬರು ಹೊಂದಿದ್ದರು. ಅವರಿಗೆ ಪ್ರತಿಷೇಧಮಾಡಲು, ಎಂದರೆ ಅಡ್ಡ ಹಾಕಲು, ಎಲ್ಲೂ ಯಾರೂ ಇಲ್ಲವೆಂದಾಗಿಹೋಯಿತಲ್ಲವೇ? ಎಂದೇ ಮಾಡಲಿಕ್ಕೂ ಇನ್ನೇನೂ ಅವರಿಗೆ ಉಳಿದಿರಲಿಲ್ಲವಾಯಿತು. ದೇವತೆಗಳ ಹಾಗೆ ವಿಹರಿಸುತ್ತಿರುವುದೆಷ್ಟೋ ಅಷ್ಟೇ ಉಳಿಯಿತು. ಸುಂದರ-ನಾರಿಯರೇನು, ಮನೋಹರ-ಮಾಲೆಗಳೇನು, ಸುಗಂಧ-ದ್ರವ್ಯಗಳೇನು, ಅತಿ-ಪುಷ್ಕಲವಾದ, ಎಂದರೆ ತುಂಬಿ ತುಂಬಿ ಬಂದ, ಭಕ್ಷ್ಯ-ಭೋಜ್ಯಗಳೇನು, ಬಗೆಬಗೆಯಾದ ಹೃದ್ಯವಾದ ಪೇಯಗಳೇನು - ಇವೆಲ್ಲದರಿಂದಲೂ ಮಹಾ-ಸಂತೋಷವನ್ನೇ ಅವರಿಬ್ಬರೂ ಅನುಭವಿಸಿದರು. ಅಂತಃಪುರಗಳ ಕಾಡುಗಳಲ್ಲೂ ಉದ್ಯಾನಗಳಲ್ಲೂ, ಪರ್ವತಗಳಲ್ಲೂ, ವನಗಳಲ್ಲೂ - ಇಷ್ಟಬಂದೆಡೆಗಳಲ್ಲೆಲ್ಲಾ ಅಮರರ ಹಾಗೆ ವಿಹರಿಸಿದರು.


ಸೂಚನೆ : 7/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.