Sunday, June 9, 2024

ವ್ಯಾಸ ವೀಕ್ಷಿತ 91 ಸುಂದೋಪಸುಂದರ ತಪಸ್ಸು (Vyasa Vikshita 91 Sundopasundara Tapassu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ದೈತ್ಯರಾದ ಆ ಸುಂದ ಮತ್ತು ಉಪಸುಂದರು ಏಕನಿಶ್ಚಯರು, ಎಂದರೆ ಒಂದೇಬಗೆಯಾದ ತೀರ್ಮಾನವುಳ್ಳವರು. ಯಾವುದೇ ಕೆಲಸವೆಂದರೂಸಹಮತವುಳ್ಳವರು. ಇಬ್ಬರ ದುಃಖವೂ ಒಂದೇ, ಇಬ್ಬರ ಸುಖವೂ ಒಂದೇ. ಇಬ್ಬರೂಒಟ್ಟಿಗೇ ಇರುತ್ತಿದ್ದರು; ಊಟಮಾಡುವುದೂ ಒಟ್ಟಿಗೇ. ಮತ್ತೊಬ್ಬರೊಂದಿಗೆಮಾತನಾಡುವುದೆಂದರೂ ಒಬ್ಬರನ್ನು ಬಿಟ್ಟು ಮತ್ತೊಬ್ಬರಿಲ್ಲ. ಇವನಿಗೇನುಸಂತೋಷವೋ ಅದನ್ನು ಅವನು ಮಾಡುವನು; ಅವನಿಗೆ ಏನು ಸಂತೋಷವೋಅದನ್ನು ಇವನು ಮಾಡುವನು. ಇಬ್ಬರೂ ಪರಸ್ಪರ ಪ್ರಿಯಂವದರೂ ಆಗಿದ್ದರು. ಒಬ್ಬನಿಗೆ ಪ್ರಿಯವಾದ ರೀತಿಯಲ್ಲಿ ಮತ್ತೊಬ್ಬನು ಮಾತನಾಡುತ್ತಿದ್ದನು. ಅವರಶೀಲವೂ ಆಚಾರವೂ ಏಕಪ್ರಕಾರದಲ್ಲಿದ್ದವು. ಒಂದೇ ಜೀವವೇ ಎರಡುಶರೀರದಲ್ಲಿದೆಯೋ ಎಂಬಂತಿದ್ದರು. ಇಬ್ಬರೂ ಮಹಾಪರಾಕ್ರಮಿಗಳಾಗಿಯೇಬೆಳೆದುಬಿಟ್ಟರು.  

ಏಕನಿಶ್ಚಯವುಳ್ಳ ಅವರು ತ್ರೈಲೋಕ್ಯವಿಜಯಕ್ಕೆಂದು ಹೊರಟರು. ದೀಕ್ಷೆಯನ್ನುಪಡೆದು ವಿಂಧ್ಯಪರ್ವತಕ್ಕೆ ಹೋದರು. ಉಗ್ರವಾದ ತಪಸ್ಸನ್ನು ಮಾಡಿದರು. ಜಟಾವಲ್ಕಲಧಾರಿಗಳಾಗಿ ದೀರ್ಘಕಾಲ ತಪಸ್ಸು ಮಾಡಿದರು. ಹಸಿವು-ಬಾಯಾರಿಕೆಗಳಾದವು; ಆದರೂ ತಪಸ್ಸನ್ನು ಬಿಡಲಿಲ್ಲ. ಅವರ ಮೈಮೇಲೆಕೊಳೆಸೇರಿಕೊಂಡಿತು, ಆದರೂ ಕೇವಲ ವಾಯುಭಕ್ಷರಾಗಿ ತಪಸ್ಸುಮುಂದುವರೆಸಿದರು. ಕಾಲಿನ ಹೆಬ್ಬೆರಳಿನ ಮೇಲೆ ನಿಂತುಕೊಂಡು, ತೋಳುಗಳನ್ನುಮೇಲಕ್ಕೆ ಚಾಚಿ, ಕಣ್ಣೇ ಮಿಟುಕಿಸದೆ ವ್ರತಸ್ಥರಾಗಿ ದೀರ್ಘಕಾಲ ತಪಸ್ಸು ಮಾಡಿದರು. ಅಗ್ನಿಯಲ್ಲಿ ಸ್ವ-ದೇಹ-ಮಾಂಸವನ್ನೇ ಆಹುತಿಯಾಗಿ ಕೊಟ್ಟದ್ದೂ ಉಂಟು. ಅವರದೀರ್ಘ ತಪಸ್ಸಿನ ಪ್ರಭಾವದಿಂದ, ವಿಂಧ್ಯಪರ್ವತಕ್ಕೆ ತಾಪವು ತಗುಲಿತು; ವಿಂಧ್ಯದಿಂದಹೊಗೆಯುಕ್ಕಿತು: ಅದು ನೋಡಲು ಆಶ್ಚರ್ಯಕರವಾಗಿತ್ತು. 

ದೇವತೆಗಳಿಗೆ ಆಗ ಭಯವುಂಟಾಯಿತು, ಅವರಿಬ್ಬರ ತಪಸ್ಸನ್ನು ಕಂಡು. ಅವರತಪಸ್ಸಿಗೆ ವಿಘಾತವಾಗಬೇಕು, ಎಂದರೆ ಅಡ್ಡಿಯಾಗಬೇಕು, ಎಂದು ಉದ್ದೇಶಿಸಿ, ಅವರು ವಿಘ್ನಗಳನ್ನು ಉಂಟುಮಾಡಿದರು. ರತ್ನಗಳ ಆಸೆಯನ್ನೊಡ್ಡಿದರು, ಸ್ತ್ರೀಯರನ್ನು ಕಳುಹಿಸಿದರು. ಆದರೆ ಸುಮಹಾವ್ರತರಾಗಿದ್ದ ಅವರಿಬ್ಬರೂ ತಮ್ಮತಪಸ್ಸನ್ನು ಮಾತ್ರ ಭಂಗಗೊಳಿಸಲಿಲ್ಲ.

ಈ ದೈತ್ಯರು ಹಾಗೆ ಮಾಡಲು ದೇವತೆಗಳಿಂದ ಮಾಯಾಪ್ರಯೋಗ ನಡೆಯಿತು:ದೈತ್ಯರ ಸೋದರಿಯರು, ತಾಯಂದಿರು, ಪತ್ನಿಯರು, ಸ್ವಜನರು - ಇವರುಗಳನ್ನುಶೂಲಪಾಣಿಯಾದ ರಕ್ಕಸನೊಬ್ಬನು ಬೀಳಿಸುತ್ತಿದ್ದನು; ಅವರ ಆಭರಣ-ಕೇಶಪಾಶಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು; ಅವರ ವೇಷ-ಭೂಷಣಗಳುಭ್ರಂಶಗೊಂಡವು; ಅವರೆಲ್ಲರೂ ಇವರಿಬ್ಬರನ್ನೂ ಸಂಬೋಧಿಸಿ, ಕಾಪಾಡು ಕಾಪಾಡು - ಎಂದು ಕಿರುಚಿಕೊಂಡರು. ಆದರೆ ಇವರಿಬ್ಬರು ಮಾತ್ರ ತಮ್ಮ ವ್ರತವನ್ನುಭಂಗಗೊಳಿಸಲಿಲ್ಲ. ಮತ್ತು ಯಾವಾಗ ಇವರಿಬ್ಬರಲ್ಲೊಬ್ಬರು ಸಹಕ್ಷುಭಿತರಾಗಲಿಲ್ಲವೋ ಸಂಕಟಪಡಲಿಲ್ಲವೋ, ಆಗ ಆ ಸ್ತ್ರೀಯರೂ ಆ ಭೂತವೂ - ಎಲ್ಲವೂ ಅದೃಶ್ಯವಾದವು.

ಅಷ್ಟರಲ್ಲಿ ಆ ಇಬ್ಬರು ಮಹಾಸುರರಿದ್ದೆಡೆಗೆ ಸರ್ವಲೋಕಹಿತಕಾರಿಯಾದ ಸಾಕ್ಷಾತ್ಪಿತಾಮಹನೇ ಆಗಮಿಸಿದನು. ನಿಮಗೇನು ವರ ಬೇಕೆಂದು ಕೇಳಿದನು. ಪಿತಾಮಹನನ್ನು ಕಂಡ ಅವರಿಬ್ಬರೂ ಕೈಜೋಡಿಸಿ ನಿಂತರು. ಪ್ರಭುವನ್ನು ಕುರಿತುಇಬ್ಬರೂ ಹೇಳಿದರು: "ನಮ್ಮಿಬ್ಬರ ಈ ತಪಸ್ಸಿನಿಂದ ಪಿತಾಮಹನು ಸಂತುಷ್ಟನಾಗಿದ್ದರೆ, ನಾವಿಬ್ಬರೂ ಮಾಯಾವಿದರಾಗಬೇಕು, ಅಸ್ತ್ರಜ್ಞರಾಗಬೇಕು, ಬಲಶಾಲಿಗಳಾಗಬೇಕು, ಕಾಮರೂಪಿಗಳಾಗಬೇಕು; ಇಬ್ಬರೂ ಅಮರರಾಗಬೇಕು; ನಮ್ಮಿಬ್ಬರ ವಿಷಯದಲ್ಲಿನೀನು ಸಂತುಷ್ಟನಾಗಿದ್ದರೆ" - ಎಂದರು.

ಅದಕ್ಕೆ ಬ್ರಹ್ಮನು ಹೇಳಿದನು: ಅಮರತ್ವವೊಂದನ್ನು ಬಿಟ್ಟರೆ ತಾವು ಕೇಳಿದುದೆಲ್ಲಆಗುತ್ತದೆ. ಮೃತ್ಯುವಿಗೆ ಪ್ರತಿಯಾಗಿ ಹಾಗೂ ದೇವರೊಂದಿಗೆ ಸಮನೆನಿಸಲುಬೇರೊಂದು ವರವನ್ನು ಕೇಳಿರಿ - ಎಂದನು. 

ಸೂಚನೆ : 9/6/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.