ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಭಾರತವು ಸರ್ವರೀತಿಗಳಿಂದಲೂ ಸಮೃದ್ಧವಾದ ದೇಶವಾಗಿದ್ದುದೇ ಮೊಘಲರ ಹಾಗೂ ಯೂರೊಪೀಯರ ಕಣ್ಣನ್ನು ಕುಕ್ಕಿದ್ದು; ಅವರ ಹೊಟ್ಟೆಕಿಚ್ಚನ್ನು ಕೆರಳಿಸಿದ್ದು. ನಮ್ಮ ಮೃದುಧೋರಣೆಯೇ ಅವರು ನಮ್ಮನ್ನು ಲೂಟಿಮಾಡಲು ಇಂಬುಕೊಟ್ಟದ್ದು.
ವೇದಗಳಲ್ಲೂ ರಾಮಾಯಣ-ಮಹಾಭಾರತಗಳಲ್ಲೂ ಪುರಾಣಕಥೆಗಳಲ್ಲೂ ಚಿತ್ರಿಸಿರುವುದೇನನ್ನು? ಬಿಡಿಸಿ ಹೇಳಿರುವುದೇನನ್ನು? ಆಸುರಸ್ವಭಾವವನ್ನು ಬಿಡದೇ ಧ್ವಂಸಮಾಡುವುದನ್ನೇ ಅಲ್ಲವೆ? ಅದನ್ನು ಮರೆತಂದೇ ನಮ್ಮ ಅವನತಿ ಆರಂಭವಾಯಿತು. ಹೊರಗಿನಿಂದ ಬಂದ ಈ ನೀಚರು ನಮ್ಮನ್ನು ಕೊನೆಗೆ ದಾಸ್ಯಕ್ಕೆ ತಳ್ಳಿದರು. ಇಲ್ಲಿಯ ಮಂದಿಯನ್ನು ಕ್ರೂರವಾಗಿ ಅಮಾನುಷವಾಗಿ ನಡೆಸಿಕೊಂಡರು. ಕಾಫಿರರೆಂದು ಹೀದನ್-ಗಳೆಂದು ನಮ್ಮನ್ನು ತುಚ್ಛೀಕರಿಸುವ ಅವರ ಮತೀಯ ಭಾವನೆಗಳೂ ಇಲ್ಲಿ ಕಡಿಮೆ ಪಾತ್ರ ವಹಿಸಿಲ್ಲ.
ಏನೇ ಆದರೂ, ಮತ್ತೊಬ್ಬರಿಗೆ ದಾಸರಾಗಿರುವುದನ್ನು ಯಾರು ತಾನೆ ಇಷ್ಟಪಟ್ಟಾರು? ದಾಸ್ಯವು ಮಾತ್ರ ಬೇಡವೇ ಬೇಡ - ಎಂದುಕೊಳ್ಳುತ್ತೇವೆ. ಸ್ವತಂತ್ರರಾಗಿರುವುದೇ ಎಲ್ಲರ ಸಹಜ ಅಪೇಕ್ಷೆ.
ಆದರೊಂದು ಪ್ರಶ್ನೆ. ನಮ್ಮಲ್ಲಿ ಶರಣಪರಂಪರೆ, ದಾಸಪರಂಪರೆ - ಇವುಗಳು ಬಂದದ್ದು ಹೇಗೆ? ಹೆಸರಿನಲ್ಲೂ ದಾಸ ಎಂದು ಸೇರಿಸಿಕೊಳ್ಳಬೇಕೇ? ಪುರಂದರದಾಸ, ಕನಕದಾಸ - ಇವರುಗಳಿಗೆ ದಾಸ್ಯವೇ ರುಚಿಸಿತೇ? - ಎಂಬ ಪ್ರಶ್ನೆ ಬರುವುದುಂಟು.
ತನ್ನನ್ನು ದಾಸನೆಂದು ಗುರುತಿಸಿಕೊಳ್ಳುವ ಈ ಗುಲಾಮಗಿರಿ ಬಂದದ್ದೇಕೆ? ಅಪ್ಪ-ಅಮ್ಮಂದಿರೇ ಹಾಗೆ ಹೆಸರಿಟ್ಟುಬಿಟ್ಟಿದ್ದರೆ ಅದಕ್ಕಿನ್ನೇನೂ ಮಾಡಲಾಗದ್ದು ಇದ್ದೀತು. ಆದರೆ ನವ-ನಾಮಕರಣವನ್ನು ಮಾಡಿಕೊಂಡು ದಾಸ ಎಂದು ಕರೆದುಕೊಳ್ಳುವುದು ಯಾವ ತೆರನ ದಾಸ್ಯ?! - ಎಂದೆನಿಸುವುದಿಲ್ಲವೇ?
ಮುಸ್ಲಿಮರು ನಮ್ಮ ದೇಶದ ಮೇಲೆ ದಾಳಿ ಮಾಡಿದ ನಂತರವೇ ಆರಂಭವಾದದ್ದು, ನಮ್ಮ ದಾಸ್ಯವನ್ನೇ ಹೆಚ್ಚಿಸುವಂತೆ ಹೇಳಿಕೊಳ್ಳುವ ಈ ಹೀನಪದ್ಧತಿ. ಅದನ್ನೇ ಭಗವಂತನನ್ನು ಕುರಿತಾಗಿ ಹೇಳಲೂ ಆರಂಭಿಸಿದವು ನಮ್ಮ ಭಕ್ತಿಪಂಥಗಳು. "ತವ ದಾಸೋsಹಂ" - ಎಂದು ಹಾಡುಕಟ್ಟುವುದು, "ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ" ಎನ್ನುವುದು. ಈ ಪ್ರವೃತ್ತಿಗಳು ಬೆಳೆದದ್ದೇ ಮುಸ್ಲಿಮರ ಆಕ್ರಮಣವಾದ ಬಳಿಕ - ಎನ್ನುವ ಇತಿಹಾಸಕಾರರೂ ಇಲ್ಲದಿಲ್ಲ.
ಆದರೆ ಇವೆಲ್ಲ ಅರ್ಥವಿಲ್ಲದ ಮಾತುಗಳು, ವಾಸ್ತವವಾಗಿ. ಏಕೆ? ರಾಮಯಣದಲ್ಲೇ ಹನುಮಂತನೇ ತನ್ನನ್ನು ರಾಮನ ದಾಸನೆಂದು ಘೋಷಿಸಿಕೊಂಡೇ ಲಂಕಾ-ಧ್ವಂಸ-ಕಾರ್ಯವನ್ನು ಮುಂದುವರೆಸಿದನಲ್ಲವೇ?
ಹನುಮಂತನಿರಲಿ, ಲಕ್ಷ್ಮಣನೇ ತಾನು ರಾಮನ ದಾಸನೆಂದು ಪರಿಚಯ ಮಾಡಿಕೊಳ್ಳುತ್ತಾನೆ. ಆದರೆ ರಾಮನೇ ಲಕ್ಷ್ಮಣನನ್ನು ಎಂದಾದರೂ ನೀನು ನನ್ನ ದಾಸನೆಂದು ಮೂದಲಿಸಿದ್ದನೇ, ಜಬರದಸ್ತು ಮಾಡಿದ್ದನೇ? - ಎಂಬ ಪ್ರಶ್ನೆಗಳೂ ಬರುವುವಲ್ಲವೇ? ರಾಮನೇ ಹಾಗೆ ವರ್ತಿಸಿಲ್ಲವೆಂದ ಮೇಲೆ ಲಕ್ಷ್ಮಣನೇ ಹಾಗೇಕೆ ಹೇಳಿಕೊಂಡ, ಹನುಮಂತನೊಂದಿಗೆ ಪ್ರಥಮ–ಪರಿಚಯವಾದಾಗ? - ಎಂಬ ಪ್ರಶ್ನೆ ಯುಕ್ತವಾದುದೇ.
ವಾಸ್ತವವಾಗಿ, ದಾಸ-ದಾಸ್ಯ ಎಂಬ ಪದಗಳು ನಮ್ಮ ಪರಂಪರೆಯಲ್ಲಿ ಬಂದ ಬಗೆಯೇ ಬೇರೆ. ಅದನ್ನು ಇಂಗ್ಲೀಷಿನ ಸ್ಲೇವ್ (slave) ಎಂಬ ಪದಕ್ಕೆ ಸಮಾನಾರ್ಥಕವೆಂದು ಭಾವಿಸಿರುವುದರಲ್ಲೇ ಮಹಾದೋಷವಾಗಿರುವುದು. ಗ್ರೀಕರ ಪುರಾತನ ದಾಖಲೆಗಳಲ್ಲೇ ಭಾರತದಲ್ಲಿ slavery ಎಂಬುದೇ ಇದ್ದಂತಿಲ್ಲವೆಂಬ ಮಾತಿದೆ. ದಾಸೀ-ಪುತ್ರನಿಗೆ ಸಲ್ಲುವ ಆಸ್ತಿಯ ಪಾಲಿನ ವಿಷಯ ಮನುಸ್ಮೃತಿಯಲ್ಲಿದೆ! ಈ ವಿಷಯವತ್ತ ಇರಲಿ.
ಲಕ್ಷ್ಮಣನು ಕಾರಣವನ್ನು ಕೊಡದೆ ಈ ಮಾತನ್ನು ಹೇಳಿಲ್ಲ. "(ರಾಮನ) ಗುಣಗಳಿಂದಾಗಿ (ಆತನಲ್ಲಿ) ದಾಸ್ಯವನ್ನು ಹೊಂದಿದ್ದೇನೆ" ಎಂದಾತ ಹೇಳಿಕೊಳ್ಳುತ್ತಾನೆ. (ಗುಣೈರ್ ದಾಸ್ಯಮ್ ಉಪಾಗತಃ). ಅಲ್ಲಿಗೆ ಹಿರಿಯಣ್ಣನಾದ ರಾಮ ತನ್ನ ತಮ್ಮನೆಂದು ಲಘುವಾಗಿ ನೋಡುತ್ತಿಲ್ಲ. ಅಹಾ ರಾಮನ ಗುಣಗಳು ಎಂತಹವು! ಎಂದು ಅಚ್ಚರಿಗೊಂಡು, ಅವಕ್ಕೆ ಮಾರುಹೋಗಿ, ಲಕ್ಷ್ಮಣನು ಸ್ವತಃ ದಾಸ್ಯವನ್ನು ಸ್ವೀಕರಿಸಿದ್ದಾನೆ! ರಾಮನು ಕೃತಜ್ಞ, ಬಹುಜ್ಞ, ಸರ್ವಭೂತಹಿತೈಷಿ - ಎಂದೇ ಆತನಲ್ಲಿ ನನಗೆ ಸಂತೋಷ-ಪೂರ್ವವಾದ ಕಿಂಕರ-ಭಾವ, ಕೈಂಕರ್ಯದ ಧನ್ಯತೆ - ಎನ್ನುತ್ತಾನೆ, ಲಕ್ಷ್ಮಣ.
ಮತ್ತೊಂದರ್ಥದಲ್ಲಿ ನಾವೆಲ್ಲರೂ ದಾಸರೇ. ನಮ್ಮ ಇಂದ್ರಿಯಗಳಿಗೇ ನಾವು ದಾಸರಾಗಿಲ್ಲವೇ? ಅಲ್ಲದೆ, ಒಳ್ಳೆಯ ಅರ್ಥದಲ್ಲಿಯೂ ದಾಸ್ಯ-ವೃತ್ತಿಯೆಂಬುದುಂಟು. ಮನಸ್ಸು ಹೇಳಿದಂತೆ ಇಂದ್ರಿಯಗಳು ಆಡುವುದು ದಾಸ್ಯವಲ್ಲವೇ? ಮಿದುಳು ಹೇಳಿದಂತೆ ಇಡೀ ಶರೀರವು ಕೇಳುವುದು ದಾಸ್ಯವಲ್ಲವೇ? "ದೊಡ್ಡ ಬದುಕು ಒಂದಿದ್ದು, ಅದರಂತೆ ಉಳಿದವು ಆಡುವಂತಿದ್ದಲ್ಲಿ, ಅಂತಹ ದಾಸ್ಯವು ಅವಶ್ಯವೇ" - ಎನ್ನುವ ಶ್ರೀರಂಗಮಹಾಗುರುಗಳ ಮಾತು ಮನನೀಯವಾಗಿದೆ.
ಧರ್ಮವೇ ಮೈತಾಳಿಬಂದಂತಿದ್ದ ರಾಮನಿಗೆ ಗುಣಗಳಿಗೆ ಮನಸೋತು, ಸಂತೋಷದಿಂದ ದಾಸ್ಯವನ್ನು ಅಂಗೀಕರಿಸಿರುವ ಲಕ್ಷ್ಮಣನ ಆದರ್ಶವು ಹಿರಿದಾದುದಲ್ಲವೇ? ನಮಗೂ ದಾರಿದೀಪವಲ್ಲವೇ?
ಸೂಚನೆ: 22/06/2024 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.