ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಅಖಂಡಭಾರತವನ್ನು ಒಂದುಗೂಡಿಸುವ ಭಾಷೆ ಸಂಸ್ಕೃತ. ತಮಿಳುಭಾಷೆಯು ಸಾಕಷ್ಟು ಪ್ರಾಚೀನ ಭಾಷೆಯೆಂಬ ಅಭಿಪ್ರಾಯವೇನೋ ಇದೆ; ಆದರೆ ಗುಜರಾತಿನಲ್ಲೋ ಅಸ್ಸಾಮಿನಲ್ಲೋ ಕಾಶ್ಮೀರದಲ್ಲೋ ತಮಿಳುಕವಿಗಳು ಎಷ್ಟು ಮಂದಿಯಿದ್ದರು? - ಎಂದು ಕೇಳಿದರೆ ಬೆರಳೆಣಿಸುವಷ್ಟು ಸಹ ಇಲ್ಲವೆಂದೋ, ಯಾರೂ ಇದ್ದಂತಿಲ್ಲವೆಂದೋ ಉತ್ತರ ಬಂದರೆ ಆಶ್ಚರ್ಯಪಡಬೇಕಿಲ್ಲ. ಇದೇ ವಿಷಯವು ಕಾಶ್ಮೀರಿ-ತೆಲುಗು ಮುಂತಾದ ಭಾಷೆಗಳಿಗೂ ಅನ್ವಯಿಸುವುದು. ಭಾರತದ ಮೂಲೆಮೂಲೆಗಳಲ್ಲೂ ಒಂದೇ ಭಾರತೀಯಭಾಷೆಯಲ್ಲಿ ಸಾಹಿತ್ಯಸೃಷ್ಟಿಯೆಂದಾಗಿರುವುದೆಂದರೆ ಅದು ಸಂಸ್ಕೃತಭಾಷೆಯೊಂದರಲ್ಲೇ – ಎಂದರೆ ತಪ್ಪಾಗಲಾರದು.
ಇಂದು ಅತ್ಯವಶ್ಯವೆನಿಸುವ ಭಾರತದ ಸಮಗ್ರತೆ-ಏಕತೆಗಳಿಗೆ ಅತ್ಯಂತ ಉಪಕಾರಕವಾದದ್ದು ಸಂಸ್ಕೃತವೇ. ಭಾರತದ ಎಲ್ಲಾ ಭಾಷೆಗಳಿಗೂ ಸಮೃದ್ಧವಾದ ಶಬ್ದಭಂಡಾರವನ್ನಿತ್ತಿರುವ ಭಾಷೆ ಸಂಸ್ಕೃತವೊಂದೇ. ಬರೀ ಶಬ್ದಭಂಡಾರವೇನು? ಅತ್ತ ಕಾಗುಣಿತ-ವ್ಯಾಕರಣಗಳಿಗೆ ಒಂದು ಮಾದರಿಯನ್ನೂ, ಇತ್ತ ಸಾಹಿತ್ಯರಚನೆಗೆ ಅವಶ್ಯವೆನಿಸುವ ಕಥಾಸಾಮಗ್ರಿಯನ್ನೂ, ನಾನಾಶಾಸ್ತ್ರ-ತತ್ತ್ವಚಿಂತನಗಳಿಗೆ ಮೇಲ್ಪಂಕ್ತಿಯನ್ನೂ ಅಸಾಧಾರಣಪ್ರಮಾಣದಲ್ಲಿ ಒದಗಿಸಿರುವ ಭಾರತೀಯಭಾಷೆಯೆಂದರೆ ಸಂಸ್ಕೃತವೇ ಸರಿ.
ರಾಮ ಮತ್ತು ಕೃಷ್ಣ: ಕಲೆ-ಕಾವ್ಯಗಳಿಗೆ ಸ್ಫೂರ್ತಿ
ಮೊನ್ನೆಯಷ್ಟೇ ಅಯೋಧ್ಯೆಯಲ್ಲಿ "ರಾಮಲಲ್ಲಾ"ನ ಪ್ರಾಣಪ್ರತಿಷ್ಠೆಯಾಯಿತಷ್ಟೆ? ರಾಮನನ್ನು ಕುರಿತಾದ ಕಾವ್ಯಕೃತಿಗಳು ಭಾರತೀಯವಾದ ಯಾವ ಭಾಷೆಯಲ್ಲಿಲ್ಲ? ಬಹುತೇಕ ಭಾಷೆಗಳಲ್ಲಿಯ ಮೊಟ್ಟಮೊದಲ ಕಾವ್ಯಕೃತಿಯೇ ರಾಮಾಯಣ. ಅಯೋಧ್ಯೆಯ ರಾಮಮಂದಿರದ ನಿರ್ಮಾಣವು ಮೂರುಸಾವಿರವರ್ಷಗಳಿಗಿಂತಲೂ ಹೆಚ್ಚಿನದಷ್ಟು ಹಿಂದಿನದೆಂದು ಪುರಾತತ್ತ್ವಶಾಸ್ತ್ರದ (ಆರ್ಕಿಯಾಲಜಿ) ವಿಶೇಷಜ್ಞರು ಈಚೆಗೆ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆಯಷ್ಟೆ? ಅಂದಿನಿಂದಲೂ ಪ್ರತಿಶತಮಾನದಲ್ಲೂ ಭಾರತೀಯಭಾಷೆಗಳಲ್ಲಿ ಒಂದಲ್ಲದಿದ್ದರೆ ಮತ್ತೊಂದರಲ್ಲಿ ರಾಮಾಯಣವನ್ನು ಕುರಿತಾದ ಸಾಹಿತ್ಯದ ರಚನೆಯು ನಡೆಯುತ್ತಲೇ ಬಂದಿದೆ. ಸಂಸ್ಕೃತದಲ್ಲಂತೂ ಅನುಸ್ಯೂತವಾಗಿಯೇ ನಡೆದಿದೆ.
ಕೃಷ್ಣಾವತಾರವು ರಾಮಾವತಾರದ ನಂತರವೇ ಆದುದೆಂದಾದರೂ ಅದನ್ನು ಕುರಿತಾದ ಕಾವ್ಯ ರಚನೆಯೂ ಪರಿಮಾಣ-ಪರಿಣಾಮಗಳಲ್ಲಿ ಕಡಿಮೆಯೇನಿಲ್ಲ. ಮಹಾಭಾರತ-ಭಾಗವತಕಥೆಗಳನ್ನು ಕುರಿತಾದ ಕಾವ್ಯರಚನಾಪ್ರವಾಹಕ್ಕೆ ಹಲವು ಶತಮಾನಗಳಿಂದ ದೇಶದ ಹಲವು ಮೂಲೆಗಳಿಂದ ಧಾರೆಗಳು ಬಂದೇ ಇವೆ. ಬರೀ ಕಾವ್ಯರಚನೆ ಮಾತ್ರವಲ್ಲದೆ, ಶಿಲ್ಪ-ಗೀತ-ನರ್ತನಗಳೂ ರಾಮ-ಕೃಷ್ಣರ ಕಥೆಗಳನ್ನಾಧರಿಸಿ ವಿಪುಲವಾಗಿಯೇ ಸಂಪನ್ನವಾಗಿವೆ.
ಒಟ್ಟಿನಲ್ಲಿ ಇವರಿಬ್ಬರ ಕಥೆಯು ಕವಿಗಳಿಗೂ ಜನಸಾಮಾನ್ಯರಿಗೂ ಕಲಾವಂತರಿಗೂ ಅಚ್ಚುಮೆಚ್ಚಾದ ಕಥೆ. ಒಂಭತ್ತನೆಯ ಶತಕವಾದ ಮೇಲೆ ಬಂದಂತಹ ಲೀಲಾಶುಕನೆಂಬ ಭಕ್ತಕವಿಯೊಬ್ಬ ಬರೆದಿರುವ ಕೃಷ್ಣಕರ್ಣಾಮೃತವೆಂಬ ರಚನೆಯು ಕಿರಿದಾದರೂ ಭವ್ಯವಾದ ಒಂದು ಕೃತಿ.
ಖಂಡಕಾವ್ಯ - ಮುಕ್ತಕಕೃಷ್ಣಕರ್ಣಾಮೃತ - ೧ - ಕೃತಿಪರಿಚಯ
ಕೃಷ್ಣಕರ್ಣಾಮೃತವು ಒಂದು ಖಂಡಕಾವ್ಯ. ಖಂಡಕಾವ್ಯಕ್ಕೆ ಬೇರೆ ಉದಾಹರಣೆಗಳೆಂದರೆ ಕಾಲಿದಾಸನ ಮೇಘದೂತ, ಜಯದೇವನ ಗೀತಗೋವಿಂದ, ವೇದಾಂತದೇಶಿಕರ ಹಂಸಸಂದೇಶ, ಅಮರುಕನ ಅಮರುಶತಕ - ಇವುಗಳು. ಇಂತಹ ಖಂಡಕಾವ್ಯಗಳು ಲೆಕ್ಕವಿಲ್ಲದಷ್ಟಿವೆ! ಮಹಾಕಾವ್ಯದ ಕೆಲ ಅಂಶಗಳನ್ನೊಳಗೊಂಡಿರುವ ಕಾವ್ಯವೇ ಖಂಡಕಾವ್ಯ. ಮೇಘದೂತ-ಗೀತಗೋವಿಂದಗಳ ಪರಿಯೇ ಬೇರೆ; ಅಮರುಶತಕ-ಕೃಷ್ಣಕರ್ಣಾಮೃತಗಳ ಪರಿಯೇ ಬೇರೆ. ಮೊದಲನೆಯ ಬಗೆಯಲ್ಲಿ ಒಂದು ಕಥಾನಕವಿದೆ. ಎರಡನೆಯದರಲ್ಲಿ ಕೇವಲ ಮುಕ್ತಕಗಳಿವೆ.
ಮುಕ್ತಕವೆಂದರೆ ಬಿಡಿಪದ್ಯ. ಬಿಡಿಪದ್ಯಗಳೆಂದರೆ ಹಿಂದಿನ ಪದ್ಯಕ್ಕೂ ಮುಂದಿನ ಪದ್ಯಕ್ಕೂ ಸಂಬಂಧವಿರಲೇಬೇಕೆಂಬ ನಿಯಮವಿಲ್ಲ; ಅಂತಹ ಪದ್ಯಗಳ ಸ್ತೋಮವಿದು. ಮುಕ್ತಕಗಳಲ್ಲಿಯ ಪ್ರತಿಯೊಂದು ಪದ್ಯವೂ ಹೃದಯಗ್ರಾಹಿಯಾದ ಒಂದು ಭಾವವನ್ನು ಚಿಮ್ಮಿಸುವುದು. ಕೃಷ್ಣಕರ್ಣಾಮೃತದಲ್ಲಿಯ ಅನೇಕ ಪದ್ಯಗಳನ್ನು ರಸದ ಚಿಲುಮೆಗಳೆಂದೇ ಹೇಳಬಹುದು.
ಆನಂದವರ್ಧನನೆಂಬುವನು ಭಾರತೀಯ-ಸಾಹಿತ್ಯವಿಮರ್ಶೆಯ ಪರಂಪರೆಯಲ್ಲಿ ಮೇರುಪುರುಷ (ಎಂದರೆ ಅತ್ಯಂತ ಉನ್ನತನಾದವನು). ಆತನು ಅಮರುಕ-ಕವಿಯ ಅಮರುಶತಕವನ್ನು ಕುರಿತು ಪ್ರಶಂಸೆಯ ಮಾತನ್ನಾಡಿದ್ದಾನೆ. ಆತನು ಹೇಳುವುದು ಹೀಗೆ - ಅಮರುಕಕವಿಯ ಒಂದೊಂದು ಶ್ಲೋಕವೂ ನೂರು ಪ್ರಬಂಧಗಳಿಗೆ ಸಮ! - ಎಂದು. ಕೃಷ್ಣಕರ್ಣಾಮೃತದ ಶ್ಲೋಕಗಳಿಗೂ ಅಮರುಶತಕದ ಶ್ಲೋಕಗಳ ತೂಕವೇ!
ರಸ ಮತ್ತು ಆಸ್ವಾದ್ಯತೆ
ಪ್ರಬಂಧವೆಂದರೆ ವಿಸ್ತೃತವಾದ ಕೃತಿ. ಕೃತಿಯು ವಿಸ್ತೃತವಾಗಿದ್ದರೆ ರಸಪರಿಪೋಷಣವು ಸುಶಕವಾಗುವುದು. ಹಾಗೆಂದರೇನು? ಓದುಗರಲ್ಲಿ ರಸವುಕ್ಕಿಸುವುದೆನ್ನುವುದು ಸುಲಭವಾದ ಕೆಲಸವಲ್ಲ. ರಸಭರಿತವಾದ ಕಾವ್ಯವೆನಿಸಬೇಕಾದರೆ ರಸಕ್ಕೆ ಪುಷ್ಟಿಕೊಡುವ ಕಾರಣಸಾಮಗ್ರಿಯತ್ತ ಕವಿಯು ಗಮನಹರಿಸಬೇಕು. ಅದನ್ನು ನಿರೂಪಿಸಲು ಉಚಿತವಾದ (ಎಂದರೆ ಯೋಗ್ಯವಾದ) ಸಂನಿವೇಶಗಳನ್ನು ಕವಿಯು ಚಿತ್ರಿಸಬೇಕು. ಇದನ್ನೆಲ್ಲ ಒಂದೆರಡು ವಾಕ್ಯಗಳಲ್ಲಿ ಮಾಡಲಾದೀತೇ? ಆಗದು. ಎಂದೇ ರಸವತ್ತಾದ ಕಾವ್ಯವೆನಿಸಲು ಬೇಕಾದ ಹರಹಿಗಾಗಿ ಕಾವ್ಯದ ವಿಸ್ತರದ ಆವಶ್ಯಕತೆಯಿರುವುದು.
ಆದರೆ ಅಮರುಕ-ಲೀಲಾಶುಕ-ಕವಿಗಳ ಪ್ರತಿಭೆ ವಿಶೇಷವಾದದ್ದು. ಕಿರಿದಾದ ಗಾತ್ರದಲ್ಲಿ ಹಿರಿದಾದ ಭಾವದ ಹಿಡಿತ – ಎಂಬ ವಿಶೇಷ ಇಲ್ಲಿ ಎದ್ದು ಕಾಣುವಂತಹುದು. ಇದು ಹೇಗಿರುವುದೆಂದರೆ ಬೃಹತ್ತಾದ ಒಂದು ವನಸಂನಿವೇಶನವನ್ನು ಚಿಕ್ಕದೆನಿಸುವ ಫೋಟೋವಿನಲ್ಲಿ ಹಿಡಿಯುವ ಜಾಣ್ಮೆ. ಈಗಂತೂ ವಿಡಿಯೋಗಳೇ ಕಾಸಿಗೊಂದು ಕೊಸರಿಗೆರಡು - ಎನ್ನುವ ಸೌಕರ್ಯವಿದೆ; ಒಂದು ಒಳ್ಳೆಯ ಭಾವವನ್ನು ಉಕ್ಕಿಸುವ ಆಸ್ವಾದ್ಯಪ್ರಸಂಗವನ್ನು ವಿಡಿಯೋ ಮಾಡಿ ಹಂಚಿದರೆ ನೂರಾರೇನು ಸಾವಿರಾರು ಮಂದಿಯೇ ಅದನ್ನು ಆಸ್ವಾದಿಸುವಂತಾಗುತ್ತದೆ. ಎರಡು-ಮೂರು ನಿಮಿಷಗಳಲ್ಲೇ ಮನಮುಟ್ಟಿ ಕಣ್ಣೀರು ಮಿಡಿಸುವ ವಿಡಿಯೋಗಳಿರವೇ? ಅಷ್ಟೇ ಅಲ್ಲ. ಒಳ್ಳೆಯ ಆಸ್ವಾದವಿದ್ದಾಗ ಅದನ್ನೇ ಮತ್ತೆ ಮತ್ತೆ ಅವಲೋಕಿಸಿ ಚಪ್ಪರಿಸುವಂತಾಗುತ್ತದೆ. ತಾನು ಆಸ್ವಾದಿಸಿದುದಕ್ಕೆ ತೃಪ್ತಿಯಾಗದೆ ಮತ್ತೆ ನಾಲ್ಕಾರು ಮಂದಿಗೆ ಅದರ ಸವಿಯು ಸಿಗಲೆಂಬ ಹಂಬಲವುಂಟಾಗುತ್ತದೆ.
ಇಲ್ಲಿಯ ಶ್ಲೋಕವೊಂದೊಂದರಲ್ಲೂ ಕೃಷ್ಣಜೀವನದ ಸುಂದರ ಭಾವಚಿತ್ರಗಳು. ಅದು ಕೃಷ್ಣನ ಬಾಲ್ಯವೋ ಯೌವನವೋ ಆಗಿರಬಹುದು. ಅಲ್ಲಿಯ ರಸ್ಯಪ್ರಸಂಗಗಳನ್ನು ಅಕ್ಲಿಷ್ಟಶಬ್ದಗಳಲ್ಲಿ ಹೆಣೆಯುವ ಜಾಣ್ಮೆ, ಕವಿ ಲೀಲಾಶುಕನದು.
ಯಾರೀ ಲೀಲಾಶುಕ?
ಇಷ್ಟೆಲ್ಲ ಸ್ತುತಿಗೆ ಪಾತ್ರನಾಗುವ ಲೀಲಾಶುಕನ ದೇಶವಾವುದು, ಕಾಲವಾವುದು? - ಎಂಬ ಕುತೂಹಲ ಸಹಜವೇ. ನಮ್ಮ ದೇಶದ ಕವಿಗಳಾರೂ ತಮ್ಮ ದೇಶ-ಕಾಲಗಳ ಬಗ್ಗೆಯಿರಲಿ, ತಮ್ಮ ಬಗ್ಗೆಯೇ ಹೆಚ್ಚು ಹೇಳಿಕೊಂಡವರಲ್ಲ! ಕವಿವರೇಣ್ಯ-ಕಾಳಿದಾಸನ ಕಾಲವಾವುದು, ಊರಾವುದು - ನಾವೇನು ಬಲ್ಲೆವು? ಅಂತಸ್ಸಾಕ್ಷ್ಯ-ಬಹಿಸ್ಸಾಕ್ಷ್ಯಗಳನ್ನಿಟ್ಟುಕೊಂಡು ಹುಡುಕಿ ಹುಡುಕಿ ಈ ಊರಿರಬಹುದೋ ಆ ಕಾಲವಿರಬಹುದೋ - ಎಂಬ ಊಹೆಯಷ್ಟೆ ಶಕ್ಯ. ಕಾಳಿದಾಸನು ನಮ್ಮೂರವನೆಂದು ದೇಶದ ಬೇರೆಬೇರೆ ಭಾಗಗಳವರು ಹೆಮ್ಮೆಯಿಂದ ಹೇಳಿಕೊಳ್ಳುವರು: ಕಾಶ್ಮೀರ-ಬಂಗಾಳ-ಉಜ್ಜಯಿನೀ - ಎಲ್ಲ ಕಡೆಯವರೂ ತಮ್ಮವನೆನ್ನುವರು.
ಲೀಲಾಶುಕನ ಬಗ್ಗೆಯೂ ಹಾಗೆಯೇ. ಕೇರಳದವರು ತಮ್ಮ ಪ್ರಾಂತದವನೆನ್ನುತ್ತಾರೆ, ಬಂಗಾಳದವರೂ, ಒರಿಸ್ಸಾದವರೂ ತಮ್ಮವನೇ ಈ ಕೃಷ್ಣಭಕ್ತ-ವರಕವಿಯೆನ್ನುತ್ತಾರೆ. ಈತನ ಕಾಲವನ್ನಾದರೂ ಬಹಳ ಸ್ಥೂಲವಾಗಿ ಹೇಳಬಹುದಷ್ಟೆ. ಸುಮಾರಾಗಿ ಒಂಭತ್ತನೆಯ ಶತಮಾನದಿಂದ ಈಚಿನವನು - ಎಂದೆನ್ನಬಹುದು. ಈ ಬಗ್ಗೆ ದೀರ್ಘಚರ್ಚೆಮಾಡುವ ಅಗತ್ಯ ನಮಗೆ ಇಲ್ಲಿಲ್ಲ.
ದಿನಪತ್ರಿಕೆಯೊಂದರಲ್ಲಿ ಜನರು ಬಯಸುವುದು ರಸಮಯಪ್ರಸಂಗಗಳ ಸರಳನಿರೂಪಣೆಯನ್ನು. ಮುಂದಿನ ಸಂಚಿಕೆಯಿಂದ ಕೃಷ್ಣಕರ್ಣಾಮೃತದ ಆಯ್ದ ಕೆಲವು ರಮ್ಯಶ್ಲೋಕಗಳ ಆಸ್ವಾದನೆಯನ್ನು ಮಾಡೋಣವೇ?
ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 10/2/2024 ರಂದು ಪ್ರಕವಾಗಿದೆ.