'ಪ್ರದೋಷ' ಎಂಬ ಪದವು 'ದೋಷ'ದಿಂದ ಕೂಡಿದೆ. ದೋಷವೆಂದರೆ ಕೆಟ್ಟದ್ದು. ತ್ಯಾಜ್ಯವಾದದ್ದು, ಹೇಯವಾದುದು, ಅದರಲ್ಲೂ ಪ್ರದೋಷವೆಂದರೆ ಪ್ರ- ಎಂಬ ಉಪಸರ್ಗವು ಬಹಳ ಕೆಟ್ಟದ್ದು - ದೋಷಯುಕ್ತವಾದದ್ದು ಎಂಬ ಅರ್ಥವನ್ನು ಕೊಡುತ್ತದೆ. ಇಂತಹ ದೋಷವನ್ನೂ ಇಷ್ಟಪಡುವಂತಹ ಒಂದು ದೇವತೆಯಿದೆಯೇ? ಹಾಗಾದರೆ ಅದು ಹೇಗೆ ಸಾಧ್ಯ? ಎಲ್ಲಾ ಕಡೆಗೂ ನಾವು ಕೇಳಿದ್ದು ಗುಣವನ್ನು ಇಷ್ಟಪಡುತ್ತಾರೆ ಅಂತ. ಆದರೆ ದೋಷವನ್ನೂ ಇಷ್ಟಪಡುವ ದೇವರಿದ್ದಾರೆ ಎಂದು ಕೇಳಿದರೆ ಆಶ್ಚರ್ಯವೂ ವಿಚಿತ್ರವೂ ಆಗುತ್ತದೆ. ಮನುಷ್ಯ ಅಥವಾ ಯಾವುದಾದರೂ ಪ್ರಾಣಿ, ಪಶು, ಪಕ್ಷಿಗಳು ದೋಷವನ್ನು ಅಂದರೆ ಕೆಟ್ಟದ್ದನ್ನು ಬಯಸುವುದನ್ನು ನೋಡುದ್ದೇವೆ. ಆದರೆ ಒಂದು ದೇವತೆಯಾಗಿ ಇಂತಹ ಅತ್ಯಂತ ದೊಷಯುಕ್ತವಾದುದನ್ನು ಇಷ್ಟಪಡುವುದೆಂದರೇನು?
ಒಬ್ಬರಿಗೆ ಹೇಯವಾದುದು ಇನ್ನೊಬ್ಬರಿಗೆ ಉಪಾದೇಯವಾಗಬಹುದು ಎಂಬುದೂ ನಿಸರ್ಗದಲ್ಲೇ ಇರುವ ಸಹಜತೆ. ಕೆಲವೊಮ್ಮೆ ಹೇಯವಾದುದ್ದು ಪೂಜ್ಯವೂ ಆಗುವುದುಂಟು. ಉದಾಹರೆಣೆಗೆ ಹಸುವಿನ ಸಗಣಿ ಅದರ ತ್ಯಾಜ್ಯ. ಆದರೆ ಅದು ನಮಗೆ ಪೂಜ್ಯ. ನಮ್ಮನ್ನು ಪವಿತ್ರಗೊಳಿಸುವ ಒಂದು ಉತ್ತಮ ಪದಾರ್ಥ. ಅಂತೆಯೇ ಒಂದರ ಮಲ ಇನ್ನೊಂದಕ್ಕೆ ಇಷ್ಟವಾಗುವುದನ್ನೂ ನೋಡಿದ್ದೇವೆ. ಅಂದರೆ ನಮಗೆ ತಿಳಿಯುವುದು ಇಷ್ಟೇ; 'ಲೋಕದಲ್ಲಿ ಕೆಟ್ಟದ್ದು ಎಂಬುದೇ ಇಲ್ಲ' ಎಂದು. ಕೆಟ್ಟದ್ದು ಎಂಬುದು ಸಾರ್ವಕಾಲಿಕವಲ್ಲ. ಅಥವಾ ಸಾರ್ವತ್ರಿಕವಾದುದಲ್ಲ. 'ಇದು ಕೆಟ್ಟದ್ದು, ಇದು ಒಳ್ಳೆಯದು' ಎಂದು ಯಾವುದನ್ನೂ ಪ್ರತ್ಯೇಕಿಸಲು ಸಾಧ್ಯವಿಲ್ಲ. ಅದು ಯಾವಾಗ ? ಯಾರಿಗೆ ? ಹೇಗೆ? ಎಂಬುದರ ಮೇಲೆ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ವಿಭಾಗವಿದೆ ಎಂಬುದನ್ನು ಮಾತ್ರ ನಾವು ಕೊಟ್ಟಕೊನೆಯಲ್ಲಿ ಗ್ರಹಿಸಬೇಕಾದ ಸಂಗತಿ. ಹಾಗಾದರೆ ಪ್ರದೋಷವೆಂದರೇನು? ಅದು ದೋಷಯುಕ್ತವಾದದ್ದಾದರೂ, ಪೂಜ್ಯ ಹೇಗೆ? ಅದರಲ್ಲೂ ತ್ರಿಮೂರ್ತಿಯರಲ್ಲಿ ಒಬ್ಬನಾದ ಪರಶಿವನಿಗೆ ಇಷ್ಟವಾದುದು ಯಾವ ಕಾರಣಕ್ಕೆ? ಎಂಬ ವಿಷಯದ ಬಗ್ಗೆ ನಾವಿಲ್ಲಿ ಪರಾಮರ್ಶಿಸೋಣ.
'ಪ್ರದೋಷೋ ರಜನೀಮುಖಮ್' ಎಂದು ಅಮರಕೋಶ ಎಂಬ ಸಂಸ್ಕೃತದ ಕೋಶಗ್ರಂಥದಲ್ಲಿ ರಾತ್ರಿಯು ಆರಂಭವಾಗುವ ಕಾಲವೆಂಬ ಅರ್ಥವನ್ನು ಕೊಡಲಾಗಿದೆ. ಸೂರ್ಯಾಸ್ತವಾದ ಸಮಯದಿಂದ ಆರಂಭಿಸಿ ಸುಮಾರು ಎರಡು ಘಳಿಗೆ ಅಂದರೆ ಒಂದುವರೆ ಗಂಟೆಯ ಕಾಲಮಾನವನ್ನು 'ಪ್ರದೋಷ' ಎಂದು ಕರೆಯಲಾಗಿದೆ. ದೋಷವು ಆರಂಭವಾಗುವ ಸಮಯ ಎಂದು ಪ್ರದೋಷ ಶಬ್ದಕ್ಕೆ ಅರ್ಥ. ಸೂರ್ಯ ಅಸ್ತವಾದ ಮೇಲೆ ಎಲ್ಲೆಡೆ ಕತ್ತಲು ಆವರಿಸುತ್ತದೆ. ಆ ಕಾಲದಲ್ಲಿ ಯಾವ ಪದಾರ್ಥವೂ ಕಣ್ಣಿಗೆ ಕಾಣದಂತಾಗುತ್ತದೆ. ಹಾಗಾಗಿ ಇದನ್ನು ಪ್ರದೋಷ ಎಂದು ಕರೆದಿದ್ದಾರೆ. ಈ ಕಾಲದಲ್ಲಿ ತಮಸ್ಸು ಆವರಿಸುತ್ತದೆ. ಕಾಲದಲ್ಲಿ ಪ್ರಧಾನವಾಗಿ ಮೂರು ವಿಭಾಗವಿದೆ. ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು. ಬೆಳಗಿನ ಸೂರ್ಯ ಉದಯಕ್ಕಿಂತ ಎರಡು ಗಂಟೆ ಮೊದಲು; ಅಂದರೆ ಬ್ರಾಹ್ಮೀಮುಹೂರ್ತವನ್ನು ಮತ್ತು ಪ್ರಾತಃಸಂಧ್ಯಾ, ಮಧ್ಯಾಹ್ನಸಂಧ್ಯಾ, ಸಾಯಂಸಂಧ್ಯಾ ಮತ್ತು ನಡುರಾತ್ರಿ ಸಂಧ್ಯಾ ಸಮಯವನ್ನು ಸಾತ್ತ್ವಿಕಕಾಲವೆಂದು ಕರೆಯುತ್ತಾರೆ. ಉಳಿದ ಹಗಲಿನ ಸಮಯವನ್ನು ರಾಜಸಿಕ ಕಾಲ ಎಂದು ಪರಿಗಣಿಸಿದ್ದಾರೆ. ಅಂತೆಯೇ ಸೂರ್ಯಾಸ್ತದಿಂದ ಹಿಡಿದು ಮಾರನೆ ದಿನದ ಬ್ರಾಹ್ಮೀಮುಹೂರ್ತದ ವರೆಗಿನ ಸಮಯವನ್ನು ತಾಮಸಿಕಕಾಲ ಎಂದು ಗುರುತಿಸಲಾಗಿದೆ. ಸತ್ತ್ವ-ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳ ಪ್ರಾಧಾನ್ಯವನ್ನು ತಿಳಿಯುವ ಕಾಲವೆಂದರ್ಥ. ಹೇಗೆ ಕಾಲವು ಈ ಮೂರು ಗುಣಗಳಿಂದ ಕೂಡಿದೆಯೋ, ಅಂತೆಯೇ ಈ ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಕ್ಕೆ ಕಾರಣವೂ ಇದೇ ಮೂರು ಗುಣಗಳಿಂದ ಎಂದು ಶಾಸ್ತ್ರಗಳು ಸಾರುತ್ತವೆ. ಈ ಮೂರೂ ಗುಣಗಳಲ್ಲಿ ರಜಸ್ಸಿಗೆ ಬ್ರಹ್ಮನು, ಸತ್ತ್ವಕ್ಕೆ ವಿಷ್ಣುವು ಮತ್ತು ಪರಶಿವನು ತಮಸ್ಸಿಗೆ ಅಧಿದೇವತೆಯಾಗಿದ್ದಾರೆ. ಇವರ ಕಾರಣದಿಂದಲೇ ಈ ಪ್ರಪಂಚದ ಪ್ರತಿಯೊಂದು ಕಾರ್ಯವೂ ನಡೆದುಕೊಂಡು ಬರುತ್ತಾ ಇದೆ. ಈ ಮೂರು ಗುಣಗಳಲ್ಲಿ ತಮಸ್ಸೂ ಒಂದು ಗುಣವಾಗಿದೆ. ತಮಸ್ಸು ಗುಣವೂ ಹೌದು, ದೋಷವೂ ಹೌದು. ಈ ಮೂರು ಗುಣಗಳ ವ್ಯಾಪಾರವಿಲ್ಲದೇ ಅಂದರೆ ಈ ಮೂರು ದೇವತೆಗಳ ಅನುಗ್ರಹವಿಲ್ಲದೇ ಯಾವ ಕಾರ್ಯವೂ ನಡೆಯುವುದಿಲ್ಲ. ಹುಟ್ಟು ಮತ್ತು ನಾಶ ಇವೆರಡರ ಮಧ್ಯೆ ಸ್ಥಿತಿ ಇದೆ. ಹುಟ್ಟಿಗೆ ರಜಸ್ಸು ಕಾರಣವಾದರೆ, ನಾಶಕ್ಕೆ ತಮಸ್ಸು ಕಾರಣ. ಚಟುವಟಿಕೆಗೆ ರಜಸ್ಸು ಕಾರಣವಾದರೆ, ವಿಶ್ರಾಂತಿಗೆ ತಮಸ್ಸು ಕಾರಣ. ಆರಂಭಕ್ಕೆ ರಜಸ್ಸು ಕಾರಣವಾದರೆ, ಅಂತ್ಯಕ್ಕೆ ತಮಸ್ಸು ಕಾರಣ. ಒಂದು ಪದಾರ್ಥ ನಿರ್ಮಾಣವಾಗಬೇಕಾದರೆ ತಮಸ್ಸು ಎಂಬ ಗುಣವೂ ಬೇಕೇಬೇಕು. ಇಷ್ಟು ವಿಷಯವನ್ನು ಭದ್ರವಾಗಿ ಧರಿಸಿದಾಗ ಮುಂದಿನ ವಿಷಯ ಅರ್ಥವಾಗಲು ಸಾಧ್ಯ.
ಶಿವನನ್ನು ಆರಾಧಿಸಲು, ಅವನನ್ನು ಪ್ರಸನ್ನಗೊಳಿಸಲು ತಮಸ್ಸು ಪ್ರಧಾನವಾದ ಅಂದರೆ ರಾತ್ರಿಯ ಕಾಲ ಅತ್ಯಂತ ಪ್ರಶಸ್ತ. ಹಾಗಾಗಿ ಪ್ರತಿ ಮಾಸದ ಶುಕ್ಲ ಮತ್ತು ಕೃಷ್ಣಪಕ್ಷದ ತ್ರಯೋದಶಿಯ ಕೊನೆಯ ಭಾಗವನ್ನು ಪ್ರದೋಷ ಎನ್ನಲಾಗಿದೆ. ಪ್ರತಿದಿನವೂ ರಾತ್ರಿಯ ಆರಂಭವಿದ್ದರೂ, ಕೃಷ್ಣಪಕ್ಷದ ಚತುರ್ದಶಿಯಂದು ಚಂದ್ರನ ಬೆಳಕು ಬಹಳ ಕ್ಷೀಣವಾಗಿರುತ್ತದೆ. ಇಂತಹ ಬೆಳಕು ಕ್ಷೀಣವಾದ ಪ್ರತಿ ಮಾಸದ ಕೃಷ್ಣ ಚತುರ್ದಶಿಯನ್ನು 'ಮಾಸಶಿವರಾತ್ರಿ' ಎಂದು ಕರೆದು ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಯನ್ನು 'ಮಹಾಶಿವರಾತ್ರಿ' ಎಂದು ಶಿವನ ಪೂಜೆಗೆ ಶ್ರೇಷ್ಠವಾದ ದಿನವೆಂದು ಪರಿಗಣಿಸಿದ್ದಾರೆ. ಸಕಾಲ-ಸುಕಾಲದಲ್ಲಿ ಮಾಡಿದ ಕಾರ್ಯಕ್ಕೆ ವಿಶೇಷಫಲವಲ್ಲವೇ! ಈ ದಿನ ಪರಶಿವನಿಗೆ ಪ್ರೀತಿದಾಯಕವಾದ ದಿನ. ಅದರಲ್ಲೂ ಪ್ರದೋಷವೆಂಬುದು ಬಹಳ ಪ್ರಿಯವಾದುದು. ಹಾಗಾಗಿ ಅಂದೇ ಪರಶಿವನ ಪೂಜೆಯನ್ನು ಮಾಡುವ ಸಂಪ್ರದಾಯವು ಬಂದಿದೆ..
ಸೂಚನೆ : 13/1/2024 ರಂದು ಈ ಲೇಖನವು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.