Monday, January 15, 2024

ಯಕ್ಷ ಪ್ರಶ್ನೆ 72 (Yaksha prashne 72)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 71 ಪುರುಷನು ಮೃತನಾಗುವುದು ಯಾವಾಗ ?

ಉತ್ತರ - ದರಿದ್ರನಾದಾಗ   

ಹುಟ್ಟಿನ ಅನಂತರ ಮರಣವೆಂಬುದು ಸಹಜ. ಆಗ ಹುಟ್ಟಿದವನು ಇರುವುದಿಲ್ಲ. ಆದರೆ ಯಕ್ಷನದ್ದು ಇಲ್ಲಿ ಒಂದು ವಿಚಿತ್ರವಾದ ಪ್ರಶ್ನೆ "ಜೀವಿಸುತ್ತಿದ್ದಾಗಲೇ ಮರಣವೆಂಬುದು ಯಾವಾಗ?" ಎಂಬುದು. ಜೀವಿಸುತ್ತಿರುವಾಗ ಮರಣವೆಂಬುದು ಹೇಗೆ ಸಾಧ್ಯ? ಎಂಬ ಸಂಶಯ ಬರದಿರದು. ಯುಧಿಷ್ಠಿರನು ಮಾರ್ಮಿಕವಾದ ಉತ್ತರವನ್ನು ನೀಡುತ್ತಾನೆ. ಜೀವಿಸುತ್ತಿರುವಾಗಲೇ ದಾರಿದ್ರ್ಯವು ಬಂದಲ್ಲಿ, ಆಗ, ಆತ ಜೀವಿಸುತ್ತಿದ್ದರೂ ಮೃತನಂತೆ ಆಗುತ್ತಾನೆ ಎಂದು. ಅಂದರೆ ಬಡತನವೆಂಬುದು ಮನುಷ್ಯನ ಜೀವಿತವನ್ನೇ ಅರ್ಥವಿಲ್ಲದಂತೆ ಮಾಡುತ್ತದೆ ಎಂದು. ಅದು ಹೇಗೆ? 

ಒಬ್ಬನಿಗೆ ಜೀವನದಲ್ಲಿ ಬಡತನವೆಂಬುದು ಹೇಗೆ ಬರುತ್ತದೆ? ಅದರ ಸ್ವರೂಪವೇನು? ಅದು ಮನುಷ್ಯನಿಗೆ ಒಕ್ಕರಿಸಿದರೆ ಹೇಗೆ ಅವನನ್ನು ಸಾಯಿಸುತ್ತದೆ? ಮರಣದ ಧರ್ಮವು ದಾರಿದ್ರ್ಯದಲ್ಲಿ ಹೇಗೆ ವ್ಯಕ್ತವಾಗುತ್ತದೆ ಎಂಬಿತ್ಯಾದಿ ವಿಚಾರಗಳು ಇಲ್ಲಿ ಪ್ರಸ್ತುತವಾಗಿವೆ. 

ಒಬ್ಬ ವ್ಯಕ್ತಿ ಚೆನ್ನಾಗಿ ಬದುಕನ್ನು ಸಾಗಿಸುತ್ತಿದ್ದಾನೆ ಎಂದರೆ ಅವನಿಗೆ ಅನೇಕ ಲಕ್ಷಣಗಳು ಇರುತ್ತವೆ. ಬಾಲ್ಯದಲ್ಲಿ ಚೆನ್ನಾಗಿ ವಿದ್ಯೆಯನ್ನು ಪಡೆದಿರಬೇಕು. ತಾನು ಅರ್ಜಿಸಿದ ವಿದ್ಯೆಯ ಬಲದ ಮೇಲೆ ವೃತ್ತಿ ಮಾಡಬೇಕು. ಅದರಿಂದ ಸಾಕಷ್ಟು ಧನವನ್ನು ಸಂಪಾದಿಸಬೇಕು. ಸಂಪಾದಿಸಿದ ಧನದಿಂದ ತಂದೆ, ತಾಯಿ, ಮಡದಿ, ಮಕ್ಕಳು, ಪರಿವಾರ, ತನ್ನನ್ನು ಆಶ್ರಯಿಸಿದವರು ಹೀಗೆ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು. ಮತ್ತು ಸಂಪಾದಿಸಿದ ಧನದಿಂದಲೇ ದಾನ, ಉಪಕಾರ, ಪೂಜೆ, ಯಾಗ ಮೊದಲಾದ ಸತ್ಕರ್ಮಗಳಿಂದ ಧರ್ಮವನ್ನೂ ಸಂಪಾದಿಸಬೇಕು. ಹೀಗೆ ಯೌವನದಲ್ಲಿ ಧರ್ಮವನ್ನು ಮತ್ತು ಧರ್ಮಕ್ಕೆ ಅವಿರೋಧವಾದ ಅರ್ಥ-ಕಾಮಗಳನ್ನು ಪಡೆಯುವುದರಿಂದ ಅವನ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ. ವಯಸ್ಸಿಗೆ ಸರಿಯಾದ ಕರ್ಮವನ್ನು ಮಾಡಿದಾಗ ಆ ವಯಸ್ಸು ಸಾರ್ಥಕ. ಇದೇ ಅರ್ಥವನ್ನು ಕೊಡುವ ಒಂದು ಒಳ್ಳೆಯ ಮಾತನ್ನು ಕಾಳಿದಾಸನು ರಘುವಂಶ ಕಾವ್ಯದಲ್ಲಿ ಹೀಗೆ ಹೇಳುತ್ತಾನೆ. " ಶೈಶವೇ ಅಭ್ಯಸ್ತವಿದ್ಯಾನಾಂ ಯೌವನೇ ವಿಷಯೈಷಿಣಾಮ್ । ವಾರ್ಧಕೇ ಮುನಿವೃತ್ತೀನಾಂ ಯೋಗೇನಾಂತೇ ಯನುತ್ಯಜಾಮ್ " ಎಂದು. ಇದೇ ಅರ್ಥವನ್ನು ಕೊಡುವ ಸುಭಾಷಿತವೂ ಹೀಗಿದೆ - " ಪ್ರಥಮೇನ ಅರ್ಜಿತಾ ವಿದ್ಯಾ ದ್ವಿತೀಯೇನ ಅರ್ಜಿತಂ ಧನಮ್ । ತೃತೀಯೇನ ತಪಸ್ತಪ್ತಂ ಚತುರ್ಥೇ ಕಿಂ ಕರಿಷ್ಯತಿ- ಬಾಲ್ಯದಲ್ಲಿ ವಿದ್ಯೆ, ಯೌವನದಲ್ಲಿ ಸಂಪತ್ತು, ವಾರ್ಧಕದಲ್ಲಿ ತಪಸ್ಸು ಕೊನೆಗಾಲದಲ್ಲಿ ಅನಾಯಾಸವಾದ ಮರಣ ಇವು ಉತ್ತಮ ಬದುಕಿನ ಲಕ್ಷಣ. ಇದೇ ವಿರುದ್ಧವಾದಾಗ ಅವನು ಬದುಕಿದ್ದೂ ಸತ್ತಂತೆ. ಪ್ರಥಮೇ ನ ಅರ್ಜಿತಾ ವಿದ್ಯಾ, ದ್ವಿತೀಯೇ ನ ಅರ್ಜಿತಂ ಧನಮ್ । ತೃತೀಯೇ ನ ತಪಸ್ತಪ್ತಂ ಚತುರ್ಥೇ ಕಿಂ ಕರಿಷ್ಯತಿ - ಬಾಲ್ಯದಲ್ಲಿ ವಿದ್ಯೆ ಪಡೆದಿಲ್ಲ, ಯೌವನದಲ್ಲಿ ಸಂಪತ್ತು ಸಂಪಾದಿಸಿಲ್ಲ,, ವಾರ್ಧಕದಲ್ಲಿ ತಪಸ್ಸು ಮೊದಲಿಲ್ಲ, ಕೊನೆಗಾಲದಲ್ಲಿ ಮರಣ ಖಂಡಿತಾ ಬರುತ್ತದೆ. ಆದರೆ ಆ ಮರಣಕ್ಕೆ ಏನಿದೆ ಅರ್ಥ? ಬಾಲ್ಯದಲ್ಲಿ ವಿದ್ಯೆಯಿಂದ ಆನಂದ, ಮಧ್ಯದಲ್ಲಿ ಸಂಪತ್ತಿನಿಂದ ಆನಂದ, ಅನಂತರ ತಪಸ್ಸಿನಲ್ಲಿ ಆನಂದ, ಕೊನೆಯಲ್ಲಿ ಆನಂದವೇ. ಹೀಗೆ ಹುಟ್ಟಿನಿಂದ ಆರಂಭಿಸಿ ಮರಣಪರ್ಯಂತ ಆನಂದಜೀವನವಾಗಬೇಕು. ಇದಕ್ಕೆ ವಿರುದ್ಧವಾದ ಜೀವನ ಮರಣ ಸದೃಶವಷ್ಟೆ!  

ಸೂಚನೆ : 14/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.