ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಇದೋ ಬರುತ್ತಿದ್ದಾನೆ ಶ್ರೀರಾಮಚಂದ್ರ, ತನ್ನ ನೂತನಗೃಹಪ್ರವೇಶಕ್ಕಾಗಿ! ಇಡೀ ದೇಶವೇ ಸಂಭ್ರಮಗೊಳುತ್ತಿದೆ, ಶ್ರೀರಾಮಚಂದ್ರನ ಸ್ವಾಗತಕ್ಕಾಗಿ! ಹಳ್ಳಿಹಳ್ಳಿಗಳಿಂದಲೂ ಇಟ್ಟಿಗೆಗಳು ಹೋಗಿದ್ದುವಲ್ಲವೇ ರಾಮಮಂದಿರನಿರ್ಮಾಣಕ್ಕಾಗಿ?
ರಾವಣಸಂಹಾರವಾದ ಬಳಿಕ ಸೀತಾ-ಲಕ್ಷ್ಮಣಾದಿಗಳೊಂದಿಗೆ ರಾಮನು ಬಂದ ದಿನವೇ ದೀಪಾವಳಿ - ಎಂಬ ಪ್ರಥೆಯಿದೆ. ಇದೋ ಈ ಬಾರಿಯ ಶ್ರೀರಾಮಜನ್ಮಭೂಮಿ-ತೀರ್ಥಕ್ಷೇತ್ರದ ಪ್ರವೇಶೋತ್ಸವವನ್ನು ಇಡೀ ದೇಶವೇ ದೀಪಾವಳಿಯೆಂಬಂತೆ ಆಚರಿಸಲಿದೆ!
ಹತ್ತಾರು ಶತಮಾನಗಳಿಂದಲೂ ದೇಶದ ಜನತೆಗೆ ಪ್ರಾಣಪ್ರಿಯನೆನಿಸಿದ್ದವನು ಶ್ರೀರಾಮ; ಆತನ ಪ್ರಾಣಪ್ರತಿಷ್ಠೆಯು ವಿಜೃಂಭಣೆಯಿಂದ ನೆರವೇರಲಿದೆ -
ಇದೋ ಬರಲಿರುವ ಉತ್ತರಾಯಣದ ಆರಂಭದ ಒಂದು ವಾರದಲ್ಲಿ; ಉತ್ತರಪ್ರದೇಶವೆಂಬ ಉತ್ತಮಪ್ರದೇಶದಲ್ಲಿಯ ಅಯೋಧ್ಯಾನಗರಿಯಲ್ಲಿ.
ಇದು ರಾಮನ ಆಗಮನವಲ್ಲ, ರಾಮನ ಪುನರಾಗಮನ! "ಕಾದಿರುವಳು ಶಬರಿ ರಾಮ ಬರುವನೆಂದು" ಎಂಬ ವಿ. ಸೀತಾರಾಮಯ್ಯನವರ ಪುಟ್ಟಪದ್ಯವನ್ನು ಯಾರು ಕೇಳಿಲ್ಲ? ಹಾಗೆ ಕಾದಿದೆ ಜನತೆ, ರಾಮನು "ತನ್ನ ಪೂಜೆಗೊಳುವನೆಂದು". ರಾಮನು ಸೀತಾಸಮೇತನಾಗಿ ಹಿಂದಿರುಗಿದುದು ಹದಿನಾಲ್ಕುವರ್ಷಗಳ ವನವಾಸವಾದ ಮೇಲೆ; ನಮ್ಮೀ ರಾಮನು ಈಗ ಬರುತ್ತಿರುವುದು ಐನೂರು ವರ್ಷಗಳ ಕಾಲ ಅದಕ್ಕಾಗಿ ನಮ್ಮವರ ಅನವರತ ಸೆಣಸಾಟವಾದ ಮೇಲೆ.
ಕಾಲ್ನಡಿಗೆಯಲ್ಲಿ ಹೋದ ರಾಮ ವಿಮಾನವೇರಿ ಬಂದನಲ್ಲವೆ? ದುಷ್ಟ ಮುಘಲರಿಂದ ನಿಷ್ಕಾಸಿತನಾದ (ಎಂದರೆ ಹೊರದೂಡಲ್ಪಟ್ಟ) ರಾಮ ಈಗ ವಿಜೃಂಭಣೆಯಿಂದ ಆಗಮಿಸುತ್ತಿದ್ದಾನೆ.
ರಾಮನ ಹೋಗುವಿಕೆ, ಬರುವಿಕೆಗಳೇ ರಾಮನ 'ಅಯನ'ಗಳು. ಸಂಸ್ಕೃತದಲ್ಲಿ ಅಯನವೆಂದರೆ ಗತಿ, ಗಮನ, ನಡೆ (ಅಯ ಗತೌ ಎಂದೇ ಧಾತು). ಹೋಗುವಿಕೆಯೂ ಬರುವಿಕೆಯೂ ಗತಿಗಳೇ. ಹೋಗುವಿಕೆಯನ್ನು "ಗಮನ"ವೆನ್ನುತ್ತೇವೆ; ಬರುವಿಕೆಯನ್ನು "ಆಗಮನ"ವೆಂದು; (ಹಿಂದಿರುಗುವಿಕೆಯನ್ನು "ಪ್ರತ್ಯಾಗಮನ"ವೆಂದು).
ಅಯನವೆಂದರೆ ನಡೆ. ನಡೆಯೆಂದರೆ ನಡತೆಯೇ ಸರಿ. ಹೀಗಾಗಿ ರಾಮನ ಅಯನವೇ ರಾಮಾಯಣ. ವಾಸ್ತವವಾಗಿ, ರಾಮಾಯನ - ರಾಮಾಯಣ - ಎಂಬ ಎರಡು ಪದಗಳಿವೆ. ಎರಡೂ ಸರಿ, ಆದರೆ ಅರ್ಥಗಳು ಬೇರೆಬೇರೆ. ಮೊದಲನೆಯದಕ್ಕೆ ರಾಮ ನಡೆದ ಹಾದಿ, ಅಥವಾ ರಾಮನ ಚಲಿತ ಅಥವಾ ಚರಿತ - ಎಂಬರ್ಥ. ಎರಡನೆಯದರ ಅರ್ಥ, ರಾಮನ ನಡೆಯನ್ನು ಚಿತ್ರಿಸುವ ಕೃತಿ – ಎಂದು. ಅದೊಂದು ಹೆಸರೆಂದಾದಾಗ ನಕಾರದ ಬದಲು ಣಕಾರ: ರಾಮಾಯನದ ಬದಲು ರಾಮಾಯಣ.
ಎಲ್ಲರೂ ನಡೆಯುತ್ತಾರೆ, ರಾಮನೂ ನಡೆದಾಡಿದನು; ಅದರಲ್ಲೇನು ವಿಶೇಷ? - ಎಂಬ ಪ್ರಶ್ನೆ ಸಹಜವೇ. ಅದು ಅತ್ಯಂತವಿಶೇಷವೆಂಬ ಕಾರಣದಿಂದಲೇ ಮಹರ್ಷಿಗಳೊಬ್ಬರು ಅದನ್ನು ಕುರಿತಾದ ಒಂದು ಮಹಾಕಾವ್ಯವನ್ನೇ ಬರೆದರು. ಅದರಲ್ಲಿರುವುದು ಹತ್ತಾರು ಶ್ಲೋಕಗಳಲ್ಲ, ನೂರಾರೂ ಅಲ್ಲ, ಸಾವಿರಾರು! ಒಟ್ಟು ಇಪ್ಪತ್ತನಾಲ್ಕುಸಾವಿರ ಶ್ಲೋಕಗಳಿಂದಾದ ಕಾವ್ಯವದು!
ರಾಮನು ಅರಮನೆಯಿಂದ ಕಾಡಿಗೆ ಹೋದದ್ದು, ವನವಾಸಾನಂತರ ಅರಮನೆಗೆ ಹಿಂದಿರುಗಿದುದು – ಇವನ್ನೊಳಗೊಂಡಿದೆ, ರಾಮಾಯಣ. ಅಷ್ಟೇ ಅಲ್ಲ. ದಿವಿಯೆಂಬ ತನ್ನ ಮೂಲಸ್ಥಾನದಿಂದ ಭುವಿಗೆ ಇಳಿದು ಬಂದದ್ದು; ಭುವಿಯಿಂದ ಮತ್ತೆ ದಿವಿಗೆ ಹಿಂದಿರುಗಿದುದು – ಇವನ್ನೂ ಒಳಗೊಂಡಿದೆ ರಾಮಾಯಣ! ವಾಸ್ತವವಾಗಿ ಇದುವೇ ರಾಮಾಯಣ!
ಹೋದದ್ದೇಕೆ, ಬಂದದ್ದೇಕೆ? ಇಳಿದುಬಂದದ್ದೇಕೆ, ಹಿಂದಿರುಗಿದ್ದೇಕೆ? - ಎಂಬ ಏಕೆಗಳಿಗೆ ಉತ್ತರ ಸಿಗದಿದ್ದರೆ ರಾಮಾಯಣದ ಸ್ವಾರಸ್ಯವೇ ಗೋಚರವಾಗದು. ಶ್ರೀರಂಗಮಹಾಗುರುಗಳ ಈ ಮಾತು ರಾಮನ ಈ ಅಯನಗಳ ಸಾರವನ್ನು ಸಂಗ್ರಹವಾಗಿ ಚಿತ್ರಿಸುತ್ತದೆ: "ದಿವಿಯ ಪುರುಷನು ಭುವಿಯ ಪೆಣ್ಣೊಡನೆ ವಿವಾಹಮಾಡಿಕೊಂಡು, ಭುವಿಯ ಜನರಿಗೆ ಆದರ್ಶವನ್ನು ತೋರಿಸಿದನು. ನರನಾಗಿ ಅವತರಿಸಿ, ನರರೊಡನೆ ಬೆರೆತು, ಅವರನ್ನು ತನ್ನ ಪರಮಪದಕ್ಕೆ ಕರೆದುಕೊಂಡುಹೋದನು." ಹೀಗಾಗಿ, ಪರಮಪದಕ್ಕೆ ದಾರಿತೋರುವ ಪವಿತ್ರಗ್ರಂಥವಿದಾಯಿತು.
ಪವಿತ್ರವೆಂದರೆ ಎಷ್ಟು ಪವಿತ್ರ? ರಾಮಾಯಣವನ್ನು "ವೇದಸಮಂ ಪವಿತ್ರಂ" ಎನ್ನುವರು. ಲವಕುಶರು ರಾಮಾಯಣವನ್ನು ರಾಮನೆದುರಿಗೇ ಅರಮನೆಯಲ್ಲಿ ಗಾನಮಾಡಿದರಲ್ಲವೇ? (ರಾಮಾಯಣದ ಆರಂಭದಲ್ಲೇ - ೪ನೇ ಸರ್ಗದಲ್ಲಿದು ಚಿತ್ರಿತವಾಗಿದೆ). ಎಲ್ಲರಿಗೂ ಕಿವಿಗೂ ಹೃದಯಕ್ಕೂ ಹ್ಲಾದವನ್ನು ಉಂಟುಮಾಡಿತು, ಆ ಗಾನ. ಆ ಗಾನದಲ್ಲಿ ಚಿತ್ರಿಸಿರುವುದು ರಾಮನ "ಮಹಾನುಭಾವಂ ಚರಿತಂ"! (ಎಂದರೆ ಮಹಾಪ್ರಭಾವವನ್ನು ಹೊಂದಿರುವ ರಾಮಚರಿತ). ಮಹಾಪ್ರಭಾವವೆಂದರೆ ಎಷ್ಟು? ಇಷ್ಟು: ಅದನ್ನಾಲಿಸಿದ ರಾಮನೇ, "ಇದು ನನಗೂ ಭೂತಿಯನ್ನುಂಟುಮಾಡುವಂತಹುದು" ಎಂದನಂತೆ! "ಮಮಾಪಿ ತದ್ಭೂತಿಕರಂ". ಭೂತಿಯೆಂದರೆ ಇಹ-ಪರ-ಶ್ರೇಯಸ್ಸು: ಎಲ್ಲರಿಗೂ ಬೇಕಾದದ್ದೇ ಅದು!
ಅಲ್ಲಿಗೆ, ರಾಮಾಯಣವೂ ಬೇಕು, ಅಲ್ಲಿಯ ರಾಮನೂ ಬೇಕು, ಆತನಿಗಾಗಿ ಒಂದು ಆಲಯವೂ ಬೇಕು! ಜೀವಗಳು ನಲಿಯಬೇಕು!
ಸೂಚನೆ : 7/1/2024 ರಂದು ಈ ಲೇಖನವು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.