Saturday, July 22, 2023

ನಿರ್ಲಿಪ್ತ ದೇಶಸೇವೆ (Nirlipta Deshaseve)

ಲೇಖಕರು : ರಾಜಗೋಪಾಲನ್ ಕೆ ಎಸ್

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನ ಪಟ್ಟಾಭಿಷೇಕಕ್ಕೆ ಸಕಲ ಸಿದ್ಧತೆಗಳೂ ನಡೆಯುತ್ತಿರುವಾಗ, ತಂದೆಯ ಮಾತನ್ನು ಪರಿಪಾಲಿಸುವುದಕ್ಕಾಗಿ ಶ್ರೀರಾಮನು ಕಾಡಿಗೇ ಹೋಗಬೇಕಾಗಿ ಬಂದಿತು. ಆದರೆ ಅವನ ಮನಸ್ಸಿನಲ್ಲಿ ಯಾವ ವಿಕಾರವೂ ಉಂಟಾಗಲಿಲ್ಲ. ಶ್ರೀರಾಮ ಅಧಿಕಾರಕ್ಕೆ ಅಂಟಿದವನೇ ಅಲ್ಲ. ಅವನಿಗಿದ್ದುದು ಒಂದೇ ಲಕ್ಷ್ಯ- ಧರ್ಮಪರಿಪಾಲನೆ.  ಭರತನಾದರೋ ಅಪ್ರಯತ್ನವಾಗಿ ರಾಜ್ಯವು ಕೈಗೆ ಬಂದರೂ ರಾಮನಂತಹವನಿಗೆ ರಾಜ್ಯ ಕೈತಪ್ಪಿ ಹೋಯಿತಲ್ಲ ಎಂದು  ಪರಿತಪಿಸುತ್ತಾನೆ. ಆತ ಕಿಂಚಿತ್ತೂ  ಅಧಿಕಾರಕ್ಕೆ ಅಂಟಿಕೊಂಡವನಲ್ಲ. ರಾಜ್ಯವನ್ನು ವಹಿಸಿಕೊಳ್ಳುವಂತೆ ರಾಮನಿರುವ ಕಾಡಿಗೇ ಹೋಗಿ ಬೇಡಿಕೊಳ್ಳುತ್ತಾನೆ. ಅವನ ಇಚ್ಛೆಯು ಕೈಗೂಡದಿರಲು ರಾಮನ ಪ್ರತಿನಿಧಿಯಾಗಿ ರಾಮನ ಪಾದುಕೆಗಳನ್ನು ತೆಗೆದುಕೊಂಡು ಅಯೋಧ್ಯೆಯ ಸಿಂಹಾಸನದಲ್ಲಿ ಇಟ್ಟು ತಾಪಸವೃತ್ತಿಯಲ್ಲಿ ಇದ್ದುಕೊಂಡೇ ರಾಜ್ಯವಾಳುತ್ತಾನೆ. 


ವನವಾಸ ಪೂರಯಿಸಿದ ಶ್ರೀರಾಮ, ಭರತ ಹೇಗಿದ್ದಾನೋ ಎಂಬ ಚಿಂತೆಯಿಂದಲೇ ಅಯೋಧ್ಯೆಗೆ ಹಿಂತಿರುಗಲು ತ್ವರೆ ಮಾಡುತ್ತಾನೆ. ಹನುಮಂತನಿಗೆ, ಮುಂದಾಗಿ ಹೋಗಿ, ಭರತನಿಗೆ ತಾನು ಬರುತ್ತಿರುವ ಸುದ್ದಿ ಮುಟ್ಟಿಸಲು ಹೇಳುತ್ತಾನೆ. ಇಲ್ಲಿ ರಾಮನಿಗಿದ್ದ ಮನಃಶಾಸ್ತ್ರದ ಜ್ಞಾನ ಬೆರಗು ಮೂಡಿಸುತ್ತದೆ. ಹನುಮಂತನನ್ನು ಕುರಿತು "ಭರತನಿಗೆ, ನಾನು ಬರುತ್ತಿರುವೆನು ಎಂದು ಹೇಳುವಾಗ ಅವನ ಮನದ ಇಂಗಿತವನ್ನು ತಿಳಿದುಕೊಳ್ಳಲು ಪ್ರಯತ್ನಿಸು. ಇಷ್ಟು ದೀರ್ಘಕಾಲ ರಾಜ್ಯವನ್ನು ಆಳಿದುದರ ಪರಿಣಾಮವಾಗಿ ತಾನೇ ರಾಜ್ಯಾಡಳಿತವನ್ನು ಮುಂದುವರೆಸುವ ಇಚ್ಛೆಯಿಂದ ಕೂಡಿದ್ದಾನೆಯೇ ಎಂದು ಅರಿತುಕೊಳ್ಳಲು ಪ್ರಯತ್ನಿಸು. ನಿನಗೆ ಹಾಗೇನಾದರೂ ಅನ್ನಿಸಿದರೆ ನನಗೆ ಬಂದು ಹೇಳು. ರಾಜ್ಯವನ್ನು ಭರತನಿಗೇ ಬಿಟ್ಟುಕೊಟ್ಟು ನಾನು ಕಾಡಿಗೆ ಹಿಂದಿರುಗಿ ತಪಶ್ಚರ್ಯೆಯಿಂದ ಕಾಲ ಕಳೆಯುವೆನು" ಎನ್ನುತ್ತಾನೆ. ಭರತನಾದರೋ ರಾಮ ಬರುವುದನ್ನೇ ನಿರೀಕ್ಷಿಸುತ್ತಾ ಅವನು ಬಂದೊಡನೆಯೇ "ರಾಮ , ನೀನು ನನ್ನ ಬಳಿ ನ್ಯಾಸವಾಗಿಟ್ಟಿದ್ದ ರಾಜ್ಯವನ್ನು ಹಿಂದಿರುಗಿಸಿದ್ದೇನೆ" ಎನ್ನುತ್ತಾನೆ. ಅಧಿಕಾರಕ್ಕೆ ಕಿಂಚಿತ್ತೂ ಅಂಟಿಕೊಳ್ಳದೆ  ಧರ್ಮವನ್ನು ಸಂರಕ್ಷಿಸುವ ವಿಷಯದಲ್ಲಿ ತಮ್ಮನನ್ನು ಮೀರಿಸಿದ ಅಣ್ಣ! ಅಣ್ಣನನ್ನು ಮೀರಿಸಿದ ತಮ್ಮ!


ಮಹಾಭಾರತದಲ್ಲಿಯೂ ಧರ್ಮಕ್ಕಾಗಿಯೇ ರಾಜ್ಯಾಪೇಕ್ಷೆಯಿಂದಿದ್ದವರ ಚಿತ್ರಣವನ್ನು ನೋಡಬಹುದು. ವನವಾಸ ಮತ್ತು ಅಜ್ಞಾತವಾಸಗಳನ್ನು ಪೂರಯಿಸಿದ ನಂತರ, ಮೊದಲಿನ ಒಪ್ಪಂದದಂತೆ, ಧರ್ಮರಾಜನಿಗೆ ರಾಜ್ಯವು ದಕ್ಕಬೇಕಾಗಿತ್ತು. ಆದರೂ ಯುದ್ಧವನ್ನು ತಪ್ಪಿಸುವ ಉದ್ದೇಶ ಅವನಿಗಿತ್ತು. ಹೀಗಾಗಿ ದುರ್ಯೋಧನನು ಕಡೆಯ ಪಕ್ಷ ಐದು ಗ್ರಾಮಗಳನ್ನು ಕೊಟ್ಟರೂ ಸಾಕೆಂದು ಧೃತರಾಷ್ಟ್ರನ ದೂತನಾಗಿ ಬಂದ ಸಂಜಯನಿಗೆ ಧರ್ಮರಾಜನು ಹೇಳುತ್ತಾನೆ. ನ್ಯಾಯವಾಗಿ ತನಗೆ ಬರಬೇಕಾಗಿದ್ದ ರಾಜ್ಯದ ಪಾಲಿನ ಸಂಕೇತವಾಗಿ ಐದು ಗ್ರಾಮಗಳನ್ನು ಕೇಳುವುದು ತನಗಿರುವ ರಾಜ್ಯದ ಹಕ್ಕನ್ನು ಸ್ಥಾಪಿಸುವುದು ಧರ್ಮವೇ ಆಗಿದೆ ಎಂಬ ಕಾರಣಕ್ಕಾಗಿಯೇ; ರಾಜ್ಯಲೋಭದಿಂದಲ್ಲ.  


ಶ್ರೀಕೃಷ್ಣನು ಯುದ್ಧಭೂಮಿಯಲ್ಲಿ ಅರ್ಜುನನಿಗೆ ಧರ್ಮಕ್ಕಾಗಿ ಯುದ್ಧ ಮಾಡುವುದು ಯುಕ್ತವೇ ಆಗಿದೆ ಎಂದು ಮನವರಿಕೆ ಮಾಡಿಕೊಡುತ್ತಾನೆ. 

ಹೀಗೆ ಸನಾತನಭಾರತದ ಮಹಾತ್ಮರ ವ್ಯವಹಾರದಲ್ಲಿ ಧರ್ಮವೇ ಕೇಂದ್ರವಾಗಿತ್ತು.


ಇಂದಿನ ರಾಜಕೀಯ ನಾಯಕರಿಗೆ ಇಂತಹ ಪ್ರಸಂಗಗಳನ್ನು ನಿತ್ಯ ಪಾರಾಯಣ ಮಾಡಬೇಕೆಂದು ವಿಧಿಸಬೇಕು. ದೇಶಸೇವೆಯೇ ನಮ್ಮ ಗುರಿ ಎನ್ನುತ್ತಾ ಕೈಮುಗಿದು ಪೋಸ್ ಕೊಡುವ (ವೇಷ ಕಟ್ಟುವ) ರಾಜಕೀಯ ಧುರೀಣರು  ಇಂತಹ ಪ್ರಸಂಗಗಳನ್ನು ಓದಿ ರಕ್ತಗತ ಮಾಡಿಕೊಳ್ಳಬೇಕು. ಅವರು ವರ್ಷಗಟ್ಟಲೇ ಪಕ್ಷದಲ್ಲಿರುವುದೂ ಅಧಿಕಾರಕ್ಕಾಗಿಯೇ. ಅದು ಪ್ರಾಪ್ತವಾದಾಗ ಪಕ್ಷಕ್ಕೆ ಅಂಟಿಕೊಂಡಿರುತ್ತಾರೆ. ಒಂದೊಮ್ಮೆ "ನೇಪಥ್ಯಕ್ಕೆ ಸರಿದು ದೇಶಸೇವೆ ಮಾಡಿ, ಪಕ್ಷದ ಇತರರಿಗೆ ಸ್ಥಾನ ಬಿಟ್ಟುಕೊಡಿ" ಎಂದು ಪಕ್ಷದ ವರಿಷ್ಠರು ಹೇಳಿಬಿಟ್ಟರೆ, ಅವರ ಗೋಳು ಹೇಳತೀರದು. ಪಕ್ಷನಿಷ್ಠೆ, ದೇಶಸೇವೆಯ ಪ್ರತಿಜ್ಞೆ -ಎಲ್ಲವನ್ನೂ ಗಾಳಿಗೆ ತೂರಿ, ಇಷ್ಟುಕಾಲ ತಾವು ನಿಂದಿಸುತ್ತಿದ್ದ ಪಕ್ಷಕ್ಕೇ ಹಾರಿಬಿಡುತ್ತಾರೆ. ಇವರಿಗಿರುವ ಒಂದೇ ಗುರಿ-ಸ್ವಾರ್ಥಸಾಧನೆ.


"ಕಣ್ಣಿನಲ್ಲಿ ಒಂದು ತೊಟ್ಟು ರಕ್ತ ಇರುವವರೆಗೂ ಬಿಡದೇ ಭಗವಂತನ ಸೇವೆ ಮಾಡಬೇಕು. ಗಂಧ ತೇಯುವಂತೆ ಅವನಿಗಾಗಿ ದೇಹವನ್ನು ತೇಯ್ದುಬಿಡಬೇಕು" ಎಂದು ಶ್ರೀರಂಗಮಹಾಗುರುಗಳು ಭಗವಂತನ ಸೇವೆಯನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಹೇಳುತ್ತಿದ್ದರು. ಭಗವಂತನ ಧರ್ಮವನ್ನು ದೇಶದಲ್ಲಿ ನೆಲೆಗೊಳಿಸಿದರೆ ಅದು ಈಶನ ಸೇವೆಯೂ ಹೌದು; ದೇಶಸೇವೆಯೂ ಹೌದು. ಇಂತಹ ದೇಶಸೇವೆ ಮಾಡಲು ಸುಭದ್ರ ಸಮಾಜ ಬೇಕು. ಅಂತಹ ಸಮಾಜರಚನೆಯಲ್ಲಿ ಪ್ರತಿ ನಾಗರಿಕನ ಕರ್ತವ್ಯವೂ ಇದೆ. 


ನಮ್ಮ ದೇಶದಲ್ಲಿ ಧರ್ಮದ ಬಗ್ಗೆ ಋಷಿಗಳಿಗಿದ್ದ ನಿಲುವು ಕಾಲಕ್ರಮದಲ್ಲಿ ಜಾರಿದ್ದರಿಂದಲೇ ದೇಶವು ಧರ್ಮಭ್ರಷ್ಟರ ಆಳ್ವಿಕೆಗೆ ಒಳಗಾಯಿತು. ದೇಶದಲ್ಲಿ ಧರ್ಮವನ್ನು ಉಳಿಸುವುದಕ್ಕಾಗಿ ನಿರ್ಲಿಪ್ತವಾಗಿದ್ದುಕೊಂಡೇ ದೇಶಸೇವೆಯನ್ನು ಮಾಡಬೇಕೆಂಬ ಸ್ಫೂರ್ತಿಯು ನಮಗೆ ಒದಗಿ ಬರಲಿ.


ಸೂಚನೆ : 22/7/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.