ಲೇಖಕರು : ರಾಜಗೋಪಾಲನ್ ಕೆ ಎಸ್
(ಪ್ರತಿಕ್ರಿಯಿಸಿರಿ lekhana@ayvm.in)
ಇದೊಂದು ಮಹಾಭಾರತದ ಸ್ವಾರಸ್ಯ ಪ್ರಸಂಗ. ಪಾಂಡವರು ಅರಣ್ಯವಾಸದ ಸಮಯದಲ್ಲಿ ಕೆಲಕಾಲ ದ್ವೈತವನದಲ್ಲಿ ಇರುವುದನ್ನು ಅರಿತ ದುರ್ಯೋಧನಾದಿಗಳು ಪಾಂಡವರ ಹೊಟ್ಟೆ ಉರಿಸಲೆಂದೇ ಅವರಿರುವ ಎಡೆಗೆ ಸಕಲ ವೈಭವಗಳೊಡನೆ ಆಗಮಿಸುತ್ತಾರೆ. ಕೌರವರ ಕಡೆಯವರು ಅಲ್ಲೊಂದು ಕ್ರೀಡಾಸ್ಥಾನವನ್ನು ಸಿದ್ಧಪಡಿಸುವುದಕ್ಕೆ ಹೋದಾಗ, ಈ ಮೊದಲೇ ಅಲ್ಲಿ ಬೀಡುಬಿಟ್ಟಿದ್ದ ಗಂಧರ್ವರು ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಗಂಧರ್ವರಿಗೂ ಕೌರವರಿಗೂ ನಡೆದ ಯುದ್ಧದಲ್ಲಿ ದುರ್ಯೋಧನಾದಿಗಳು ಬಂಧಿತರಾಗುತ್ತಾರೆ. ಆಗ ಕೌರವರ ಕಡೆಯವರು ಧರ್ಮರಾಜನಲ್ಲಿಗೆ ಬಂದು ತಮ್ಮ ರಾಜನನ್ನು ಬಿಡಿಸಿಕೊಡಬೇಕೆಂದು ಆರ್ತರಾಗಿ ಬೇಡುತ್ತಾರೆ. ಆಗ ಭೀಮನು, "ಬಿಸಿಲು, ಮಳೆ ಗಾಳಿಗಳಿಗೆ ಸಿಕ್ಕು ನವೆಯುತ್ತಿದ್ದ ನಮ್ಮನ್ನು ಆ ಕೌರವನು ನೋಡಿ ಹೊಟ್ಟೆ ತಣ್ಣಗೆ ಮಾಡಿಕೊಳ್ಳಬೇಕೆಂದು ಬಂದ; ಅವನಿಗೆ ತಕ್ಕ ಶಾಸ್ತಿಯಾಯಿತು" ಎನ್ನುತ್ತಾನೆ. ಧರ್ಮರಾಜನಾದರೋ "ದಾಯಾದಿಗಳಿಗೆ ಜಗಳ ಬರುವುದೂ ಹೋಗುವುದೂ ಸಹಜವೇ. ಆದರೆ ಬಾಂಧವ್ಯ ಹೋಗುತ್ತದೆಯೇ? ದಾಯಾದಿಗಳಾದ ನಮ್ಮಲ್ಲಿ ಪರಸ್ಪರ ವಿರೋಧ ಬಂದಾಗ ನಾವೈವರೇ ಒಂದು; ಅವರು ನೂರು ಮಂದಿಯೇ ಎನ್ನುವುದು ಸರಿ. ಆದರೆ ಶತ್ರುಗಳು ನಮ್ಮೆಲ್ಲರನ್ನೂ ಆಕ್ರಮಿಸಿದಾಗ, ನಾವೆಲ್ಲ ನೂರೈವರು ಮಂದಿಯೂ ಒಂದೇ" ಎನ್ನುತ್ತಾನೆ. ಭೀಮಾರ್ಜುನಾದಿಗಳು ಗಂಧರ್ವರೊಡನೆ ಸೆಣಸಿ ಮೇಲ್ಗೈ ಸಾಧಿಸುತ್ತಾರೆ. ಮೇಲೂ ಗಂಧರ್ವರಾಜ ಚಿತ್ರಸೇನನು ಅರ್ಜುನನ ಮಿತ್ರನೂ ಹೌದು. ಹೀಗಾಗಿ ಗಂಧರ್ವರಿಂದ ದುರ್ಯೋಧನಾದಿಗಳು ಬಿಡುಗಡೆಗೊಂಡು ಎಲ್ಲರೂ ಧರ್ಮರಾಜನ ಬಳಿಗೆ ಬರುತ್ತಾರೆ. ಧರ್ಮರಾಜನು ಗಂಧರ್ವರನ್ನು ಉಪಚರಿಸಿ, ದುರ್ಯೋಧನನನ್ನು ಕುರಿತು "ಇಂತಹ ಸಾಹಸಕ್ಕೆ ಕೈ ಹಾಕಬೇಡಪ್ಪ; ಮನಸ್ಸನ್ನು ಕಹಿ ಮಾಡಿಕೊಳ್ಳದೆ ಹಿಂತಿರುಗಿ ಹೋಗಪ್ಪ" ಎನ್ನುತ್ತಾನೆ.
"ಯಾರಾದರೂ ಬಂಧುಗಳು ಕಷ್ಟದಲ್ಲಿದ್ದಾಗ ಅವರು ನಮಗೆ ತೊಂದರೆ ಕೊಟ್ಟವರೇ ಆಗಿದ್ದರೂ ದ್ವೇಷ ಸಾಧಿಸಬಾರದು. ಕೈಲಾದ ಸಹಾಯ ಮಾಡಬೇಕು. ಅವರವರ ಕರ್ಮ ಅವರವರಿಗೆ ಎಂದು ಬಿಟ್ಟುಬಿಡಬೇಕು" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. (ಸಹಾಯ ಮಾಡುವುದರಿಂದ ಆಪತ್ಕಾಲವೇ ಎದುರಾಗುವುದಾದಲ್ಲಿ ಎಚ್ಚರಿಕೆ ಅಗತ್ಯ)
ಭಾರತದ ಮೇಲೆ ವಿದೇಶೀ ಆಕ್ರಮಣಗಳೆಷ್ಟೋ ಆದವು. ಕೆಲವೊಮ್ಮೆ ವಿಷ್ಣು ದೇವಾಲಯಗಳನ್ನು ಧ್ವಂಸಗೊಳಿಸಲು ಆಕ್ರಮಣಕಾರರು ಬಂದಾಗ ಶಿವ ಭಕ್ತರು ಪ್ರತಿಭಟಿಸದೆ ಸುಮ್ಮನಿದ್ದುಬಿಟ್ಟಿರುವುದೂ ಉಂಟು. ಶಿವ ದೇವಾಲಯಗಳು ಆಕ್ರಮಣಕ್ಕೊಳಗಾದಾಗ 'ವೀರ' ವಿಷ್ಣುಭಕ್ತರು ಸಹಾಯಹಸ್ತವನ್ನು ನೀಡದೆ ಕೈಕಟ್ಟಿ ಕುಳಿತದ್ದೂ ಉಂಟು. ಇಂತಹ ವರ್ತನೆಯಿಂದಾಗಿ ದೇಶಕ್ಕೆ ಆದ ಆಘಾತಕಾರಿ ಪರಿಣಾಮ ಸರ್ವ ವಿದಿತವೇ. ನಮ್ಮಲ್ಲಿ ಮತಭೇದಗಳೇನೇ ಇದ್ದರೂ, ವಿದೇಶೀ ಆಕ್ರಮಣಕಾರರು ಬಂದಾಗ ಮತಭೇದವನ್ನು ಬದಿಗೊತ್ತಿ ಒಗ್ಗಟ್ಟಾಗಿ ಹೋರಾಡಿದ್ದರೆ ನಮ್ಮ ದೇಶ ಇಂದಿನ ದುಃಸ್ಥಿತಿಗೆ ತಲುಪುತ್ತಿರಲಿಲ್ಲ. ವಿದೇಶೀ ಆಕ್ರಮಣಕಾರರ ಬಗ್ಗೆಯೂ ಹಾಗೂ ನಮ್ಮ ದೇಶದಲ್ಲಿಯೇ ಇರುವ ಅವರ ಮಾನಸ ಪುತ್ರರ ಬಗ್ಗೆಯೂ ನಾವು ಎಚ್ಚರಿಕೆ ವಹಿಸದಿದ್ದಲ್ಲಿ ನಮ್ಮ ದೇಶ ಇನ್ನೂ ಹೀನಾಯ ಸ್ಥಿತಿಯನ್ನು ತಲುಪುವುದು ಶತಸ್ಸಿದ್ಧವೇ ಸರಿ. ಅನ್ನ ನೀಡುವ ದಣಿಗೆ ಋಣಿಯಾಗಿರಬೇಕೆಂಬ ಏಕಮಾತ್ರ ಸಣ್ಣ ಧರ್ಮಕ್ಕೆ ಕಟ್ಟುಬಿದ್ದು, ಹೊಟ್ಟೆಪಾಡಿಗಾಗಿ ವಿದೇಶೀ ಆಕ್ರಮಣಕಾರರ ಸೈನಿಕರಾಗಿದ್ದ ನಮ್ಮವರು ದೇಶಹಿತವೆಂಬ ದೊಡ್ಡಧರ್ಮವನ್ನು ಅಲಕ್ಷಿಸಿದ್ದರಿಂದ ನಮ್ಮ ಸಂಸ್ಕೃತಿಗೆ ಬಿದ್ದ ಏಟು ಅಷ್ಟಿಷ್ಟಲ್ಲ. ಎರಡು ಧರ್ಮಗಳ ಮಧ್ಯೆ ರಕ್ಷಣೀಯವಾದದ್ದು ದೊಡ್ಡಧರ್ಮವೇ. ಅದನ್ನು ಸಾಧಿಸಲು ಸಣ್ಣ ಧರ್ಮವನ್ನು ಬಲಿ ಕೊಟ್ಟರೂ ಅದು ಧರ್ಮಲೋಪವಾಗದು.
ನಮ್ಮ ದೇಶದ ರಾಮಾಯಣ, ಮಹಾಭಾರತ, ಪುರಾಣಗಳಲ್ಲಿ ದೊಡ್ಡ ಧರ್ಮವನ್ನು ಉಳಿಸಿಕೊಳ್ಳುವುದಕ್ಕಾಗಿ ಸಣ್ಣ ಧರ್ಮವನ್ನು ತ್ಯಾಗ ಮಾಡಿದ್ದರ ದೃಷ್ಟಾಂತಗಳು ಕಾಣಸಿಗುತ್ತವೆ. ರಾಷ್ಟ್ರದ ಹಿತಕ್ಕಾಗಿ ದುರ್ಯೋಧನನನ್ನು ತ್ಯಜಿಸುವುದೇ ಸೂಕ್ತವೆಂದು ಧೃತರಾಷ್ಟ್ರನಿಗೆ ವಿದುರನು ತಿಳಿಹೇಳುತ್ತಾನೆ. "ಕುಲದ ಹಿತಕ್ಕಾಗಿ ಒಬ್ಬನನ್ನು ತ್ಯಜಿಸಬೇಕಾದಲ್ಲಿ ಅದು ಸರಿಯಾದದ್ದೇ; ಗ್ರಾಮದ ಒಳಿತಿಗಾಗಿ ಒಂದು ಕುಲವನ್ನೇ ತ್ಯಜಿಸಬೇಕಾಗಿ ಬಂದರೆ ಅದೂ ಸರಿಯೇ. ಒಂದು ಜನಪದದ ಹಿತದೃಷ್ಟಿಯಿಂದ ಒಂದು ಗ್ರಾಮವನ್ನೇ ತ್ಯಜಿಸಬೇಕಾಗಿ ಬಂದಲ್ಲಿ ಅದೂ ಸರಿಯಾದ ಕ್ರಮವೇ. ಪರಮಾತ್ಮ ಸಾಕ್ಷಾತ್ಕಾರಕ್ಕಾಗಿ ಅಖಂಡ ಭೂಮಂಡಲವನ್ನೇ (ಒಬ್ಬ ರಾಜನಾದವನು) ತ್ಯಜಿಸಬೇಕಾಗಿ ಬಂದಲ್ಲಿ ಅದೂ ಸೂಕ್ತವೇ" ಎನ್ನುತ್ತಾನೆ ವಿದುರ (ತ್ಯಜೇದೇಕಂ ಕುಲಸ್ಯಾರ್ಥೇ, ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ I ಗ್ರಾಮಂ ಜನಪದಸ್ಯಾರ್ಥೇ ಹ್ಯಾತ್ಮಾರ್ಥೇ ಪೃಥಿವೀಂ ತ್ಯಜೇತ್II)
ಸೂರ್ಯವಂಶದ ಸಗರಚಕ್ರವರ್ತಿಗೆ ಮಗನಾದ ಅಸಮಂಜಸನು ಆಟವಾಡುತ್ತಿದ್ದ ಬಾಲಕರನ್ನು ಸರಯೂ ನದಿಗೆ ತಳ್ಳುತ್ತಿದ್ದನು. ಪ್ರಜೆಗಳ ಗೋಳನ್ನು ನೋಡಿ ಸಗರನು ಅಸಮಂಜಸನನ್ನು ರಾಜ್ಯಬಾಹಿರನನ್ನಾಗಿ ಮಾಡುವನೆಂಬ ವೃತ್ತಾಂತವು ರಾಮಾಯಣದಲ್ಲಿ ಬರುತ್ತದೆ.
ಧರ್ಮಸೂಕ್ಷ್ಮಗಳನ್ನು ಬಿಡಿಸಿಕೊಟ್ಟ ಋಷಿಗಳ ಹಾದಿಯಲ್ಲಿ ಸಾಗುತ್ತಾ ದೇಶದ ಹಿತವೆಂಬ ದೊಡ್ಡ ಧರ್ಮವನ್ನು ಉಳಿಸಿಕೊಳ್ಳೋಣ. ಅದಕ್ಕೆ ಅಡ್ಡಿಬರುವ ಸಣ್ಣ ಧರ್ಮಗಳನ್ನು ಪಕ್ಕಕ್ಕಿಡೋಣ.
ಸೂಚನೆ: 22/7/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.