Sunday, May 7, 2023

ವ್ಯಾಸ ವೀಕ್ಷಿತ - 37 ಅಸ್ತ್ರಕ್ಕೆ ಪ್ರತಿಯಾಗಿ ಅಶ್ವ; ಕಾಟ ಕೊಡಲು ಕಾರಣ (Vyaasa Vikshita - 37 Astrakke Pratiyagi Asva; Aska Kodalu Karana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯುಧಿಷ್ಠಿರನ ಮಾತಿನ ಮೇರೆಗೆ ಅರ್ಜುನನು ಆ ಗಂಧರ್ವನನ್ನು ಕ್ಷಮಿಸಿದನಷ್ಟೆ. ಆಗ ಆ ಗಂಧರ್ವನು, ತನಗಾದ ಪರಾಭವದಿಂದ ಕೆರಳುವ ಬದಲು, ಅರ್ಜುನನ ಸ್ನೇಹವನ್ನೇ ಬಯಸಿ ತನ್ನ ಮಾತನ್ನು ಹೀಗೆ ಮುಂದುವರಿಸಿದನು.

 

ಅಯ್ಯಾ ಅರ್ಜುನನೇ, ನಿನ್ನ ಸಹೋದರರಿಗೂ ನಿನಗೂ ಬೇರೆಬೇರೆಯಾಗಿ ನೂರು ನೂರು ಕುದುರೆಗಳನ್ನು ಕೊಡುವೆನು. ಆ ಅಶ್ವಗಳು ಗಂಧರ್ವಲೋಕದಲ್ಲಿ ಜನಿಸಿರತಕ್ಕವು; ದೇವತೆಗಳನ್ನೂ ಗಂಧರ್ವರನ್ನೂ ಹೊರತಕ್ಕವು; ಮನೋವೇಗದಲ್ಲಿ ಓಡತಕ್ಕವು. ಅವುಗಳ ರೂಪ ದಿವ್ಯವಾದುದು: ಸಣಕಲಾಗಿ ಕಾಣುತ್ತವೆಯಾದರೂ ಬಲಗುಂದವವು.

ಹಿಂದೆ ವೃತ್ರಸಂಹಾರಸಮರ್ಥವಾದ ವಜ್ರಾಯುಧವನ್ನು ಇಂದ್ರನಿಗಾಗಿ ನಿರ್ಮಿಸಲಾಯಿತಷ್ಟೆ. ಅದು ವೃತ್ರನ ಶಿರಸ್ಸಿನಲ್ಲಿ ಹತ್ತು ಹೋಳಾಗಿಯೂ ನೂರು ಹೋಳಾಗಿಯೂ ಸೀಳಿಕೊಂಡಿತು. ಆಮೇಲೆ ಅದನ್ನು ದೇವತೆಗಳು ಭಾಗಮಾಡಿದರು: ಆ ವಜ್ರದ ಚೂರುಗಳನ್ನು ಅವರು ಉಪಾಸಿಸುವರು! ಲೋಕದಲ್ಲಿ ಯಾವುದೇ ಕೀರ್ತಿಯಾಗಲಿ, ಐಶ್ವರ್ಯವಾಗಲಿ, ಅದು ವಜ್ರದ ಶರೀರವೆಂದೇ ಪರಿಗಣಿತವಾಗುತ್ತದೆ : ಬ್ರಾಹ್ಮಣನ ಹಸ್ತವೆಂದರೆ ಅದು ವಜ್ರವೇ; ಕ್ಷತ್ರದ ರಥವೂ ವಜ್ರಮಯವೆಂದೇ; ವೈಶ್ಯರು ಕೊಡುವ ದಾನವು ವಜ್ರದಂತೆಯೇ; ಇತರರು ಮಾಡುವ ಸೇವೆಯೂ ವಜ್ರವೇ. ಕ್ಷತ್ರಿಯರಥಕ್ಕೆ ಕಟ್ಟುವ ಕುದುರೆಗಳು ಅವಧ್ಯವೆನಿಸಿರುವುವು. ಏಕೆಂದರೆ ವಡವೆಯೆಂಬವಳಿಂದ ಜನಿಸಿದವು ಅವು. (ಸೂರ್ಯಪತ್ನಿಯು ಅಶ್ವರೂಪವನ್ನು ಧರಿಸಿದ್ದಾಗ ಜನಿಸಿದವಳು ವಡವೆ). ಬಲಶಾಲಿಗಳಾದ ಈ ಕುದುರೆಗಳು ಇಷ್ಟಬಂದ ವರ್ಣವನ್ನೂ ವೇಗವನ್ನೂ ಹೊಂದಬಲ್ಲವು; ಬಯಸಿದಾಗ ಉಪಸ್ಥಿತವಾಗಿಬಿಡಬಲ್ಲವು! ಹೀಗಿರುವ ಗಾಂಧರ್ವಾಶ್ವಗಳು ನಿನ್ನ ಅಪೇಕ್ಷೆಯನ್ನು ಪೂರೈಸತಕ್ಕವಾಗಿವೆ - ಎಂದನು.

ಅದಕ್ಕೆ ಅರ್ಜುನನು - "ನೀನು ಸಂತುಷ್ಟನಾಗಿರುವೆಯೆಂದೋ, ನಿನ್ನ ಪ್ರಾಣುವುಳಿಸಲಾಗಿದೆಯೆಂದೋ, ನನಗೆ ವಿದ್ಯಾರೂಪವಾದ ಧನವನ್ನೋ ಜ್ಞಾನವನ್ನೋ ನೀ ಕೊಡಬಯಸಿರುವೆ; ಆದರೆ ನಾನದನ್ನೇನೂ ಇಷ್ಟಪಡುವುದಿಲ್ಲ" ಎಂದನು.

 

ಅದಕ್ಕೆ ಗಂಧರ್ವನು, "ಅಯ್ಯಾ, ಮಹಾತ್ಮರೊಂದಿಗೆ ಸಂಗಮವೆಂಬುದೇ ಸಂತೋಷವನ್ನುಂಟುಮಾಡುವಂತಹುದು (ಸಂಯೋಗೋ ವೈ ಪ್ರೀತಿಕರೋ ಮಹತ್ಸು). ನೀನು ನನಗೆ ಜೀವಪ್ರದಾನವನ್ನು ಮಾಡಿರುವೆಯಲ್ಲವೆ? ಇದರಿಂದ ತುಷ್ಟನಾದ ನಾನು ನಿನಗೆ ವಿದ್ಯೆಯನ್ನು ಕೊಡುತ್ತೇನೆ. ನಿನಗದು ರುಚಿಸದಿದ್ದಲ್ಲಿ, ಇದೋ ಉತ್ತಮವಾದ ಆಗ್ನೇಯಾಸ್ತ್ರವನ್ನು ನಿನ್ನಿಂದ ನಾನು ಗ್ರಹಿಸುತ್ತೇನೆ; ಹಾಗೆ ಆದರಲ್ಲವೇ ಅರ್ಜುನನೇ, ಚಿರಕಾಲ ನಮ್ಮ ಮೈತ್ರಿಯು ಉಳಿಯತಕ್ಕದ್ದು? - ಎಂದನು.

 

ಆಗ ಅರ್ಜುನನು, "ಆಗಲಿ, ಅಸ್ತ್ರವನ್ನಿತ್ತು ಕುದುರೆಗಳನ್ನು ಪಡೆಯುವುದನ್ನೊಪ್ಪುವೆ. ನಮ್ಮ ಮೈತ್ರಿಯು ಚಿರಕಾಲವಿರಲಿ. ಮಿತ್ರ ಗಂಧರ್ವನೇ, ಆದರೆ ಈ ಪ್ರಶ್ನೆಗೆ ಉತ್ತರಕೊಡು: ಅದೇತಕ್ಕೆ ನಮಗೆ ನೀನು ತೊಂದರೆ ಕೊಟ್ಟೆ? ನಾವು ಎಷ್ಟಾದರೂ ಸಜ್ಜನರು, ವೇದಜ್ಞರು, ರಾತ್ರಿಯಲ್ಲಿ ಇಲ್ಲಿಗೆ ಬಂದವರು. ಆದರೂ ಹೀಗೇಕೆ? - ಎಂದನು.


ಅದಕ್ಕೆ ಗಂಧರ್ವನೆಂದನು: ಅದಕ್ಕೆ ಕಾರಣವುಂಟು. ತಮಗೀಗ ಅಗ್ನಿ-ಆಹುತಿಗಳೆಂಬುದಿಲ್ಲ, ಹೌದಲ್ಲವೇ? (ಅರ್ಥಾತ್, ವಿದ್ಯಾಭ್ಯಾಸವನ್ನು ಪೂರೈಸಿ ಸ್ನಾತಕರಾಗಿದ್ದಾರೆ; ಹೀಗೆ ಬ್ರಹ್ಮಚರ್ಯಾಶ್ರಮವನ್ನು ಮುಗಿಸಿಯೂ ಗೃಹಸ್ಥಾಶ್ರಮವನ್ನು ಇನ್ನೂ ಸ್ವೀಕರಿಸಿಲ್ಲ. ಎಂದರೆ, ಈಗ ಅನಾಶ್ರಮಿಗಳಾಗಿದ್ದಾರೆ; ಇದು ಧರ್ಮಯುಕ್ತವಲ್ಲವೆಂದು ಶಾಸ್ತ್ರವಿದೆ). ಹೋಗಲಿ, ವಿಪ್ರಪುರಃಸರರಾಗಿಯೂ ಬಂದಿಲ್ಲ. (ಕ್ಷತ್ರಿಯರು ತಮ್ಮ ಪುರೋಹಿತನನ್ನು ಮುಂದಿಟ್ಟುಕೊಂಡೇ ಸಾಗತಕ್ಕದ್ದು; ಹಿತೈಷಿಯಾದ ಆತನ ಮಾರ್ಗದರ್ಶನ ರಕ್ಷಕವಾದದ್ದು). ಈ ಕಾರಣಗಳಷ್ಟೇ ಅಲ್ಲ.


ಸೂಚನೆ : 7/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.